ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup 2023: AUS vs PAK- ಡೇವಿಡ್ ವಾರ್ನರ್–ಮಾರ್ಷ್ ಅಬ್ಬರಕ್ಕೆ ಜಯ

ಪಾಕಿಸ್ತಾನ ಎದುರು ಗೆದ್ದ ಆಸ್ಟ್ರೇಲಿಯಾ: ಶಹೀನ್‌ಗೆ ಐದು ವಿಕೆಟ್
Published 20 ಅಕ್ಟೋಬರ್ 2023, 19:48 IST
Last Updated 20 ಅಕ್ಟೋಬರ್ 2023, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ಯಾಚ್‌ಗಳು ಮ್ಯಾಚ್ ಗೆಲ್ಲಿಸುತ್ತವೆ’ ಎಂಬ ಹಳೆಯ ಗಾದೆ ಶುಕ್ರವಾರ ಮತ್ತೊಮ್ಮೆ ನಿಜವಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವಕಪ್ ಪಂದ್ಯದ ಐದನೇ ಓವರ್‌ನಲ್ಲಿ ಪಾಕಿಸ್ತಾನ ತಂಡದ ಉಸ್ಮಾನ್ ಮೀರ್ ನೆಲಕ್ಕೆ ಚೆಲ್ಲಿದ ಕ್ಯಾಚ್‌ನಿಂದಾಗಿ ರನ್‌ಗಳ ಹೊಳೆಯೇ ಹರಿಯಿತು. ಜೀವದಾನ ಪಡೆದ ಡೇವಿಡ್ ವಾರ್ನರ್ ಅಬ್ಬರದ ಶತಕ ಬಾರಿಸಿದರು.  ಮಿಚೆಲ್ ಮಾರ್ಷ್ ಅವರೊಂದಿಗೆ ದ್ವಿಶತಕದ ಜೊತೆಯಾಟವನ್ನೂ ಆಡಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು 62 ರನ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ಪಾಕ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಫ್ಲ್ಯಾಟ್ ಪಿಚ್ ಮೇಲೆ ವಿಜೃಂಭಿಸಿದ ವಾರ್ನರ್ (162; 124ಎ, 4X14, 6X9) ಮತ್ತು ಮಾರ್ಷ್ (121; 108ಎ, 4X10, 6X9) ಅವರ ಶತಕಗಳಿಂದಾಗಿ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 367 ರನ್‌ ಗಳಿಸಿತು. ಅದಕ್ಕುತ್ತರವಾಗಿ ಪಾಕ್ ತಂಡಕ್ಕೆ 45.3 ಓವರ್‌ಗಳಲ್ಲಿ 305 ರನ್‌ಗಳಿಸಲಷ್ಟೇ ಸಾಧ್ಯವಾಯಿತು.

ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಶಹೀನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ವಾರ್ನರ್ ಅವರ ಕ್ಯಾಚ್ ಅನ್ನು ಫೀಲ್ಡರ್ ಉಸ್ಮಾನ್ ಮೀರ್  ಕೈಚೆಲ್ಲಿದರು.  ಇದು ವಾರ್ನರ್‌ಗೆ ವರದಾನವಾಯಿತು.  ಕೇವಲ 85 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಮೇಲಕ್ಕೆ ಜಿಗಿದು ಗಾಳಿ ಗುದ್ದಿ ಸಂಭ್ರಮಿಸಿದ ಅವರು ‘ಪುಷ್ಪ‘ ಚಿತ್ರದ ಅಲ್ಲು ಅರ್ಜುನ್ ಅವರ ಶೈಲಿಯನ್ನು ತೋರಿಸಿದರು.

ನಂತರದ ಎಸೆತದಲ್ಲಿ ಮಾರ್ಷ್ ಕೂಡ ಶತಕ ಗಳಿಸಿದರು. ಅವರು 101 ಎಸೆತಗಳಲ್ಲಿ ಶತಕ ದಾಟಿದರು. ಅದರಲ್ಲಿ 10 ಬೌಂಡರಿಗಳಿದ್ದವು. ಇಬ್ಬರೂ ತಲಾ ಆರು ಸಿಕ್ಸರ್ ಹೊಡೆದರು. ಆಸ್ಟ್ರೇಲಿಯಾ ತಂಡವು ಇನಿಂಗ್ಸ್‌ನಲ್ಲಿ ಒಟ್ಟು 19 ಸಿಕ್ಸರ್‌ಗಳು ದಾಖಲಾದವು.  

ಅಡ್ಡಿಯಾದ ಶಹೀನ್

ಪಾಕ್ ತಂಡದ ವೇಗಿ ಶಹೀನ್ ಅಫ್ರಿದಿ (54ಕ್ಕೆ5) ತಡವಾಗಿ  ಯಶಸ್ಸು ಗಳಿಸಿದರು. ಆದರೆ ಆಸ್ಟ್ರೇಲಿಯಾ ತಂಡವು ನಾಲ್ಕನೂರು ರನ್‌ಗಳ ಮೊತ್ತ ದಾಟದಂತೆ ತಡೆದರು.  ವಾರ್ನರ್ ಮತ್ತು ಮಾರ್ಷ್ ಮೊದಲ ವಿಕೆಟ್ ಜೊತೆಯಾಟದಲ್ಲಿ 259 ರನ್‌ ಸೇರಿಸಿ ಗಟ್ಟಿ ಬುನಾದಿ ಹಾಕಿದರು. ಇದರಿಂದಾಗಿ ತಂಡವು 400 ರನ್‌ಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ಗಳಿಸುವ ಸಾಧ್ಯತೆ ಇತ್ತು. 34ನೇ ಓವರ್‌ನಲ್ಲಿ ಮಾರ್ಷ್ ವಿಕೆಟ್ ಗಳಿಸುವ ಮೂಲಕ ಜೊತೆಯಾಟ ಮುರಿದ ವೇಗಿ ಶಹೀನ್ ಅಫ್ರಿದಿ ಪಾಕ್ ತಂಡಕ್ಕೆ ತುಸು ಸಮಾಧಾನ ತಂದರು. 

ಮಾರ್ಷ್‌ ನಂತರ ಬಂದ ಯಾವ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡಲಿಲ್ಲ. ವಾರ್ನರ್‌ ಕ್ರೀಸ್‌ನಲ್ಲಿರುವವರೆಗೆ ರನ್‌ಗಳು ಹರಿದವು. ಅವರು 43ನೇ ಓವರ್ ನಲ್ಲಿ ಹ್ಯಾರಿಸ್ ಬೌಲಿಂಗ್‌ನಲ್ಲಿ ಶದಾಬ್ ಖಾನ್‌ಗೆ ಕ್ಯಾಚಿತ್ತರು.  

ಗುರಿ ಬೆನ್ನಟ್ಟಿದ ಪಾಕ್ ತಂಡಕ್ಕೂ ಉತ್ತಮ ಆರಂಭ ದೊರೆಯಿತು. ಅರ್ಧಶತಕ ಬಾರಿಸಿದ ಶಫಿಕ್ ಮತ್ತು ಇಮಾಮ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 134 ರನ್‌ ಗಳಿಸಿದರು. ಅದರೆ ಮೊಹಮ್ಮದ್ ರಿಜ್ವಾನ್ ಎಂದಿನಂತೆ ಹೋರಾಟ ಮಾಡಿದರು. 46 ರನ್‌ ಗಳಿಸಿದರು. ಸೌದ್ ಶಕೀಲ್ 30 ರನ್‌ ಗಳಿಸಿದರು. ಆದರೆ ಉಳಿದ ಬ್ಯಾಟರ್‌ಗಳಿಗೆ ಹೋರಾಟ ಸಾಧ್ಯವಾಗಲಿಲ್ಲ.

ಪಾಕ್‌ ಆಟಗಾರರಿಗೂ ಜೀವದಾನಗಳು ಲಭಿಸಿದ್ದವು. 12ನೇ ಓವರ್‌ನಲ್ಲಿ ಶಫೀಕ್ ಅವರ ಕ್ಯಾಚ್‌ ಅನ್ನು ಪಡೆಯುವಲ್ಲಿ ಸೀನ್ ಅಬಾಟ್ ಲೋಪವೆಸಗಿ ‘ಸಿಕ್ಸರ್‘ ಕಾಣಿಕೆ ಕೊಟ್ಟರು. 18ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಇಮಾಮ್ ಕೊಟ್ಟ ಕ್ಯಾಚ್ ಅನ್ನು ಕಮಿನ್ಸ್ ಬಿಟ್ಟರು. ಆದರೆ ಈ ಅವಕಾಶಗಳನ್ನು ಬ್ಯಾಟರ್‌ಗಳು ಬಳಸಿಕೊಳ್ಳಲಿಲ್ಲ.

ಸಂಕ್ಷಿಪ್ತ ಸ್ಕೋರು

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 367 (ಡೇವಿಡ್ ವಾರ್ನರ್ 163, ಮಿಚೆಲ್ ಮಾರ್ಷ್ 121, ಮಾರ್ಕಸ್ ಸ್ಟೋಯಿನಿಸ್ 21, ಜೋಷ್ ಇಂಗ್ಲಿಸ್ 13, ಶಾಹೀನ್ ಆಫ್ರಿದಿ 54ಕ್ಕೆ5, ಹ್ಯಾರಿಸ್ ರವೂಫ್ 83ಕ್ಕೆ3, ಉಸ್ಮಾನ್ ಮೀರ್ 82ಕ್ಕೆ1) ಪಾಕಿಸ್ತಾನ: 45.3 ಓವರ್‌ಗಳಲ್ಲಿ 305 (ಅಬ್ದುಲ್ಲಾ ಶಫೀಕ್ 64, ಇಮಾಮ್ ಉಲ್ ಹಕ್ 70, ಮೊಹಮ್ಮದ್ ರಿಜ್ವಾನ್ 46, ಸೌದ್ ಶಕೀಲ್ 30, ಇಫ್ತಿಕಾರ್ ಅಹಮದ್ 26, ಪ್ಯಾಟ್ ಕಮಿನ್ಸ್ 62ಕ್ಕೆ2, ಆ್ಯಡಂ ಜಂಪಾ 53ಕ್ಕೆ4, ಮಾರ್ಕಸ್ ಸ್ಟೊಯಿನಿಸ್ 40ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 62 ರನ್‌ ಜಯ. ಎರಡು ಅಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT