ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಿಂದ ಗಡೀಪಾರು ಆಗಿರುವ ಅಫ್ಗನ್ ಜನರಿಗೆ ಪಂದ್ಯಶ್ರೇಷ್ಠ ಅರ್ಪಿಸಿದ ಜದ್ರಾನ್

Published 24 ಅಕ್ಟೋಬರ್ 2023, 5:58 IST
Last Updated 24 ಅಕ್ಟೋಬರ್ 2023, 5:58 IST
ಅಕ್ಷರ ಗಾತ್ರ

ಚೆನ್ನೈ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಅಫ್ಗಾನಿಸ್ತಾನ ಗೆಲುವು ದಾಖಲಿಸಿದೆ.

ಈ ಐತಿಹಾಸಿಕ ಗೆಲುವನ್ನು ಪಾಕಿಸ್ತಾನದಿಂದ ಗಡೀಪಾರು ಆಗಿರುವ ನಿರಾಶ್ರಿತರಿಗೆ ಅರ್ಪಿಸುವುದಾಗಿ ಅಫ್ಗಾನಿಸ್ತಾನದ ಬ್ಯಾಟರ್ ಇಬ್ರಾಹಿಂ ಜದ್ರಾನ್ ಹೇಳಿದ್ದಾರೆ.

87 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದ ಜದ್ರಾನ್, ಅಫ್ಗನ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬಳಿಕ ಮಾತನಾಡಿದ ಅವರು, ನನಗಾಗಿ ಮತ್ತು ನನ್ನ ದೇಶಕ್ಕಾಗಿ ತುಂಬಾ ಸಂತೋಷಪಡುತ್ತೇನೆ. ಪಾಕಿಸ್ತಾನದಿಂದ ಅಫ್ಗಾನಿಸ್ತಾನಕ್ಕೆ ಹಿಂತಿರುಗಿದವರಿಗಾಗಿ ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ದಾಖಲೆಗಳಿಲ್ಲದ ಅಫ್ಗನ್‌ನ ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡಲು ಪಾಕಿಸ್ತಾನ ಗಡುವು ಘೋಷಿಸಿದೆ. ಇಲ್ಲಿಯವರೆಗೆ 51 ಸಾವಿರಕ್ಕೂ ಹೆಚ್ಚು ಜನರನ್ನು ಗಡೀಪಾರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಫ್ಗನ್‌ಗೆ ಐತಿಹಾಸಿಕ ಗೆಲುವು...

ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಫ್ಗಾನಿಸ್ತಾನ ಎಂಟು ವಿಕೆಟ್‌ಗಳ ಐತಿಹಾಸಿಕ ಗೆಲುವು ದಾಖಲಿಸಿತು. ಪಾಕಿಸ್ತಾನ ಒಡ್ಡಿದ 282 ರನ್ ಗುರಿಯನ್ನು ಬೆನ್ನಟ್ಟಿದ ಅಫ್ಗಾನಿಸ್ತಾನ 49 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪಂದ್ಯ ಗೆಲುವಿನ ಬಳಿಕ ಅಫ್ಗನ್ ಆಟಗಾರರು ಸಂಭ್ರಮಿಸಿದರು. ಮೈದಾನ ಸುತ್ತಿ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ಇಬ್ರಾಹೀಂ ಜದ್ರಾನ್ 87, ರಹಮತ್ ಶಾ ಔಟಾಗದೆ 77, ರಹಮನುಲ್ಲಾ ಗುರ್ಬಾಜ್ 65 ಮತ್ತು ನಾಯಕ ಹಶ್‌ಮತುಲ್ಲಾ ಶಾಹೀದಿ 48 ರನ್ ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಮತ್ತೊಂದೆಡೆ 74 ರನ್ ಗಳಿಸಿದ ಪಾಕಿಸ್ತಾನದ ನಾಯಕ ಬಾಬರ್ ಆಜಂ ಹೋರಾಟ ವ್ಯರ್ಥವೆನಿಸಿತು.

ಇದೇ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧವೂ ಅಫ್ಗಾನಿಸ್ತಾನ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT