ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Cup | ಲಂಕಾಗೆ ಮುಖಭಂಗ, ಅಫ್ಗಾನಿಸ್ತಾನ ಸೆಮಿಫೈನಲ್ ಪ್ರವೇಶ ಸಾಧ್ಯತೆ ಜೀವಂತ

Published 30 ಅಕ್ಟೋಬರ್ 2023, 8:13 IST
Last Updated 30 ಅಕ್ಟೋಬರ್ 2023, 8:13 IST
ಅಕ್ಷರ ಗಾತ್ರ

ಪುಣೆ: ಅಫ್ಗಾನಿಸ್ತಾನ ತಂಡದವರು ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿ ಅಭಿಮಾನಿಗಳ ಮನಗೆದ್ದರು.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ಆಲ್‌ರೌಂಡ್‌ ಆಟವಾಡಿದ ಅಫ್ಗನ್‌, ಏಳು ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ ಪಾಯಿಂಟ್‌ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು.

ಹಷ್ಮತ್‌ಉಲ್ಲಾ ಶಾಹಿದಿ ಬಳಗವು ಟೂರ್ನಿಯಲ್ಲಿ ಮೂರನೇ ಗೆಲುವಿನೊಂದಿಗೆ ಸೆಮಿಫೈನಲ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿದೆ. ನಾಲ್ಕನೇ ಸೋಲು ಅನುಭವಿಸಿದ 1996ರ ಚಾಂಪಿಯನ್‌ ಲಂಕಾ ತಂಡದ ಸೆಮಿ ಸಾಧ್ಯತೆ ಕ್ಷೀಣಿಸಿದೆ.

ಮೊದಲು ಬ್ಯಾಟ್‌ ಮಾಡಿದ ಎದುರಾಳಿಗಳನ್ನು 241 ರನ್‌ಗಳಿಗೆ ನಿಯಂತ್ರಿಸಿದ ಅಫ್ಗನ್‌, 45.2 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ರಹಮತ್‌ ಶಾ (62; 74 ಎ., 7 ಬೌಂ), ಹಷ್ಮತ್‌ಉಲ್ಲಾ (ಔಟಾಗದೆ 58; 74 ಎ.) ಮತ್ತು ಅಜ್ಮತ್ಉಲ್ಲಾ ಒಮರ್‌ಝೈ (ಔಟಾಗದೆ 73; 63 ಎ.) ಅವರು ಗೆಲುವಿನ ಕಾವ್ಯ ರಚಿಸಿದರು.

ಈ ಹಿಂದೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ನೆರೆಯ ಪಾಕಿಸ್ತಾನ ತಂಡಗಳಿಗೆ ಆಘಾತ ನೀಡಿದ್ದ ಅಫ್ಗನ್‌ ತಂಡ, ಟೂರ್ನಿಯನ್ನು ಈಗಾಗಲೇ ಸ್ಮರಣೀಯವನ್ನಾಗಿಸಿಕೊಂಡಿದೆ.

ಸಾಧಾರಣ ಗುರಿ ಬೆನ್ನಟ್ಟಿದ ಅಫ್ಗನ್‌, ಖಾತೆ ತೆರೆಯುವ ಮುನ್ನ ರಹ್ಮಾನುಲ್ಲಾ ಗುರ್ಬಾಜ್‌ (0) ಅವರನ್ನು ಕಳೆದುಕೊಂಡಿತು. ಆದರೆ ಇಹ್ರಾಹಿಂ ಜದ್ರಾನ್‌ (39) ಮತ್ತು ರಹಮತ್‌ ಶಾ ಅವರು ಎರಡನೇ ವಿಕೆಟ್‌ಗೆ 73 ರನ್‌ ಸೇರಿಸಿ, ಲಂಕಾ ಬೌಲರ್‌ಗಳು ಮೇಲುಗೈ ಸಾಧಿಸದಂತೆ ನೋಡಿಕೊಂಡರು.

ಇವರಿಬ್ಬರು ಔಟಾದ ಬಳಿಕ ಜತೆಯಾದ ಹಷ್ಮತ್‌ಉಲ್ಲಾ ಮತ್ತು ಒಮರ್‌ಝೈ ಮುರಿಯದ ನಾಲ್ಕನೇ ವಿಕೆಟ್‌ಗೆ 108 ಎಸೆತಗಳಲ್ಲಿ 111 ರನ್‌ ಸೇರಿಸಿ ತಂಡವನ್ನು ಜಯದತ್ತ ಮುನ್ನಡೆಸಿದರು. ಪರಿಸ್ಥಿತಿಗೆ ತಕ್ಕಂತೆ ಆಡಿದ ಇವರು ಯಾವುದೇ ಒತ್ತಡಕ್ಕೆ ಒಳಗಾಗದೆ ಇನಿಂಗ್ಸ್‌ ಕಟ್ಟಿದರು. ಹಷ್ಮತ್ ತಾಳ್ಮೆಯ ಆಟದ ಮೊರೆಹೋದರೆ, ಒಮರ್‌ಝೈ ರನ್‌ರೇಟ್‌ ತಗ್ಗದಂತೆ ನೋಡಿಕೊಂಡರು. ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಹೊಡೆದರು.

ಫಜಲ್‌ಹಕ್‌ ಪರಿಣಾಮಕಾರಿ ದಾಳಿ: ಇದಕ್ಕೂ ಮುನ್ನ ಟಾಸ್‌ ಗೆದ್ದ ಅಫ್ಗಾನಿಸ್ತಾನ ತಂಡ ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ವೇಗಿ ಫಜಲ್‌ಹಕ್‌ ಫರೂಕಿ (34ಕ್ಕೆ 4) ಮತ್ತು ಮುಜೀಬ್‌ ಉರ್‌ ರೆಹಮಾನ್‌ (38ಕ್ಕೆ 2) ಅವರು ಪರಿಣಾಮಕಾರಿ ದಾಳಿ ನಡೆಸಿ ಲಂಕಾ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. 100ನೇ ಏಕದಿನ ಪಂದ್ಯವನ್ನಾಡಿದ ರಶೀದ್‌ ಖಾನ್‌ 50ಕ್ಕೆ 1 ವಿಕೆಟ್‌ ಪಡೆದರು.

ದಿಮುತ್‌ ಕರುಣರತ್ನೆ (15) ಅವರ ವಿಕೆಟ್‌ ಪಡೆದ ಫರೂಕಿ, ಅಫ್ಗನ್‌ಗೆ ಮೊದಲ ಯಶಸ್ಸು ತಂದಿತ್ತರು. ಇನ್ನೊಬ್ಬ ಆರಂಭಿಕ ಬ್ಯಾಟರ್‌ ಪಥುಮ್‌ ನಿಸಾಂಕ (46; 60 ಎ.) ಮತ್ತು ನಾಯಕ ಕುಶಾಲ್‌ ಮೆಂಡಿಸ್‌ (39; 50 ಎ.) ಎರಡನೇ ವಿಕೆಟ್‌ಗೆ 62 ರನ್‌ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ನಿಸಾಂಕ ವಿಕೆಟ್‌ ಪಡೆದ ಒಮರ್‌ಝೈ ಈ ಜತೆಯಾಟ ಮುರಿದರು.

ಅಫ್ಗನ್‌ ಬೌಲರ್‌ಗಳು ಬಿಗುವಾದ ದಾಳಿ ನಡೆಸಿದ್ದರಿಂದ ಲಂಕಾ ತಂಡದ ರನ್‌ರೇಟ್‌ ಐದರ ಆಸುಪಾಸಿನಲ್ಲೇ ಇತ್ತು. ಕುಶಾಲ್‌ ಮೆಂಡಿಸ್‌ (39; 50 ಎ.) ಮತ್ತು ಸದೀರ ಸಮರವಿಕ್ರಮ (36; 40 ಎ.) ಮೂರನೇ ವಿಕೆಟ್‌ಗೆ 50 ರನ್‌ ಸೇರಿಸಿದರು. ಆದರೆ ಐದು ರನ್‌ಗಳ ಅಂತರದಲ್ಲಿ ಇಬ್ಬರನ್ನೂ ಔಟ್‌ ಮಾಡಿದ ಮುಜೀಬ್‌, ಲಂಕಾ ತಂಡಕ್ಕೆ ಬಲವಾದ ಪೆಟ್ಟುಕೊಟ್ಟರು. 30ನೇ ಓವರ್‌ನಲ್ಲಿ ಸದೀರ ಔಟಾಗುವಾಗ ಸ್ಕೋರ್‌ 139 ಆಗಿತ್ತು. ಆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳು ಬಿದ್ದವು.

ಏಂಜೆಲೊ ಮ್ಯಾಥ್ಯೂಸ್‌ ಮತ್ತು ಮಹೀಶ ತೀಕ್ಷಣ ಅವರು 8ನೇ ವಿಕೆಟ್‌ಗೆ 45 ರನ್‌ ಸೇರಿಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 49.3 ಓವರ್‌ಗಳಲ್ಲಿ 241 (ಪಥುಮ್‌ ನಿಸಾಂಕ 46, ಕುಶಾಲ್‌ ಮೆಂಡಿಸ್‌ 39, ಸದೀರ ಸಮರವಿಕ್ರಮ 36, ಚರಿತ್‌ ಅಸಲಂಕಾ 22, ಏಂಜೆಲೊ ಮ್ಯಾಥ್ಯೂಸ್‌ 23, ಮಹೀಶ ತೀಕ್ಷಣ 29, ಮುಜೀಬ್‌ ಉರ್‌ ರೆಹಮಾನ್‌ 38ಕ್ಕೆ 2, ಫಜಲ್‌ಹಕ್‌ ಫರೂಕಿ 34ಕ್ಕೆ 4, ಅಜ್ಮತ್ಉಲ್ಲಾ ಒಮರ್‌ಝೈ 37ಕ್ಕೆ 1, ರಶೀದ್‌ ಖಾನ್‌ 50ಕ್ಕೆ 1)

ಅಫ್ಗಾನಿಸ್ತಾನ: 45.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 242 (ಇಬ್ರಾಹಿಂ ಜದ್ರಾನ್‌ 39, ರಹಮತ್‌ ಶಾ 62, ಹಷ್ಮತ್‌ಉಲ್ಲಾ ಶಾಹಿದಿ ಔಟಾಗದೆ 58, ಅಜ್ಮತ್ಉಲ್ಲಾ ಒಮರ್‌ಝೈ ಔಟಾಗದೆ 73, ದಿಲ್ಶಾನ್‌ ಮಧುಶಂಕಾ 48ಕ್ಕೆ 2, ಕಸುನ್‌ ರಜಿತ 48ಕ್ಕೆ 1) ಫಲಿತಾಂಶ: ಅಫ್ಗಾನಿಸ್ತಾನಕ್ಕೆ 7 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT