ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 ವಿಶ್ವಕಪ್ ಮೆಲುಕು | ಇಂಗ್ಲೆಂಡ್ ಕಿರೀಟವೂ.. ಕೊಹ್ಲಿ ಆಟವೂ..

Published 31 ಮೇ 2024, 0:02 IST
Last Updated 31 ಮೇ 2024, 0:02 IST
ಅಕ್ಷರ ಗಾತ್ರ

ಕೋವಿಡ್‌ನಿಂದಾಗಿ ಆರ್ಥಿಕ ಹಿನ್ನಡೆ ಅನುಭವಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗೆ ಬಲ ತುಂಬಿದ್ದು 2022ರ ಟಿ20 ವಿಶ್ವಕಪ್ ಟೂರ್ನಿ. 2020ರಲ್ಲಿಯೇ ಈ ಟೂರ್ನಿಯು ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಬಂದ ಕಾರಣ ಮುಂದೂಡಲಾಯಿತು. ಈ ನಡುವೆ 2021ರಲ್ಲಿ ಭಾರತದ ಆತಿಥ್ಯದಲ್ಲಿ ಏಳನೇ ಟಿ20 ವಿಶ್ವಕಪ್ ಯುಎಇಯಲ್ಲಿ ನಡೆಯಿತು. ಅದರಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಆದರೆ ತನ್ನದೇ  ಆತಿಥ್ಯದಲ್ಲಿ ನಡೆದ ಎಂಟನೇ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಜಯಿಸಲಿಲ್ಲ.

ಭಾರತ ತಂಡದ ಪ್ರಶಸ್ತಿ ಬರ ಈ ಟೂರ್ನಿಯಲ್ಲಿಯೂ ನೀಗಲಿಲ್ಲ. ಸೆಮಿಫೈನಲ್‌ವರಗೆ ಬಂದ ಭಾರತ ತಂಡವನ್ನು ಇಂಗ್ಲೆಂಡ್ ಸೋಲಿಸಿತು. ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಜಯ ಸಾಧಿಸಿದ ಇಂಗ್ಲೆಂಡ್ ಪ್ರಶಸ್ತಿಗೆ ಮುತ್ತಿಕ್ಕಿತು. ಪಾಕ್ ತಂಡವು ನಾಲ್ಕರ ಘಟ್ಟದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯಿಸಿತ್ತು. 

ಭಾರತದ ಮಟ್ಟಿಗೆ ಈ ಟೂರ್ನಿಯಲ್ಲಿ ನೆನಪಿಡುವ ಪ್ರಮುಖ ಸಂಗತಿಯೆಂದರೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್. ಮೆಲ್ಬರ್ನ್‌ನಲ್ಲಿ ನಡೆದಿದ್ದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರಿನ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡವು 160 ರನ್‌ಗಳ ಗುರಿ ಬೆನ್ನಟ್ಟಿತ್ತು. ತಂಡಕ್ಕೆ ಕೊನೆಯ 2 ಓವರ್‌ಗಳಲ್ಲಿ 31 ರನ್‌ ಅಗತ್ಯವಿತ್ತು. ತಮ್ಮ ಮೊದಲ ಸ್ಪೆಲ್ ಉತ್ತಮವಾಗಿ ಬೌಲಿಂಗ್ ಮಾಡಿದ್ದ ಹ್ಯಾರಿಸ್ ರವೂಫ್ 19ನೇ  ಓವರ್ ಬೌಲಿಂಗ್‌ಗೆ ಬಂದರು. ಕೊನೆಯ ಎರಡೂ ಎಸೆತಗಳನ್ನು ವಿರಾಟ್ ಸಿಕ್ಸರ್‌ಗೆ ಎತ್ತಿದರು. ಐದನೇ ಎಸೆತದಲ್ಲಿ ಹೊಡೆದ ಸಿಕ್ಸರ್‌ ‘ಶತಮಾನದ ಹೊಡೆತ’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಗುಡ್‌ಲೆಂಗ್ತ್ ಎಸೆತವು ಬೇಲ್ಸ್ ಎತ್ತರಕ್ಕೆ ಪುಟಿದು ಸೀದಾ ನುಗ್ಗಿತ್ತು. ತುಸು ಕಠಿಣವೇ ಆದ ನೇರ ಹೊಡೆತ ಪ್ರಯೋಗಿಸಿದ ಅವರ ಕೌಶಲಕ್ಕೆ ಚೆಂಡು ಸೀದಾ ಸೈಟ್‌ಸ್ಕ್ರೀನ್‌ಗೆ ಅಪ್ಪಳಿಸಿತ್ತು. ಇಂತಹ ಹೊಡೆತಗಳು ಕ್ರಿಕೆಟ್‌ನಲ್ಲಿ ಅಪರೂಪವೆಂದು ವಿಶ್ಲೇಷಿಸಲಾಗಿದೆ. ಕೊನೆಯ ಓವರ್‌ನಲ್ಲಿ ವಿರಾಟ್ ಮತ್ತು ಅಶ್ವಿನ್ ಅವರ ಚಾಣಾಕ್ಷ ಆಟದಿಂದ ತಂಡಕ್ಕೆ ಗೆಲುವು ಸಾಧ್ಯವಾಯಿತು. 

ಪ್ರಮುಖ ಅಂಶಗಳು

  • ಆತಿಥೇಯ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್ ಪ್ರವೇಶಿಸದೇ ಹೊರಬಿದ್ದಿತು. 

  • ಸೂಪರ್ 12 ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಪಾಕಿಸ್ತಾನ ವಿರುದ್ಧ 1 ರನ್ ರೋಚಕ ಜಯ ಸಾಧಿಸಿತ್ತು

  • ಗುಂಪು ಹಂತದ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನೆದರ್ಲೆಂಡ್ಸ್; ಇಂಗ್ಲೆಂಡ್‌ ತಂಡಕ್ಕೆ ಐರ್ಲೆಂಡ್‌ ಆಘಾತ ನೀಡಿದ್ದವು.

  • ಎರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಆರಂಭಿಕ ಸುತ್ತಿನಲ್ಲಿ ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ತಂಡಕ್ಕೆ ಮಣಿದಿತ್ತು. ಶ್ರೀಲಂಕಾವು ನಮೀಬಿಯಾ ತಂಡದ ಎದುರು ಸೋತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT