ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ವಶ್ರೇಷ್ಠ ಅಧಿಕಾರ ಜನರ ಕೈನಲ್ಲೇ’

ಮಕ್ಕಳ ಸಂಸತ್ತಿನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ಅಭಿಮತ
Last Updated 28 ನವೆಂಬರ್ 2019, 9:47 IST
ಅಕ್ಷರ ಗಾತ್ರ

ಮೈಸೂರು: ‘ನಮ್ಮಲ್ಲಿ ಪ್ರಜೆಗಳೇ ರಾಜರು. ದೇಶದ ಸರ್ವಶ್ರೇಷ್ಠ ಅಧಿಕಾರ ಜನರ ಕೈನಲ್ಲಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ತಿಳಿಸಿದರು.

ಗ್ರಾಸ್‌ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೊಕಸಿ ಮೂವ್‌ಮೆಂಟ್‌ ಸುಗಮ್ಯ ಶಿಕ್ಷ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ನಗರದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಚಾಮುಂಡೇಶ್ವರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂಸತ್ತಿನಲ್ಲಿ ಅವರು ಮಾತನಾಡಿದರು.

‘ಸರ್ವ ಶ್ರೇಷ್ಠ ಅಧಿಕಾರ ಹೊಂದಿರುವ ಜನರಿಗೆ ಅದರ ಮಹತ್ವ ತಿಳಿಯುತ್ತಿಲ್ಲ. ಪರಮಾಧಿಕಾರ ಚಲಾಯಿಸುವ ಚುನಾವಣೆಯಲ್ಲಿ ಜಾತಿ, ಸ್ವಜನಪಕ್ಷಪಾತ ಸೇರಿದಂತೆ ಆಮಿಷಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳು ಈ ನಿಟ್ಟಿನಲ್ಲಿ ಜಾಗೃತರಾಗಿ ತಮ್ಮ ತಂದೆ–ತಾಯಿಗೆ ತಿಳಿವಳಿಕೆ ಮೂಡಿಸಬೇಕು. ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದರೆ, ನಮಗೆ ದೊರೆತ ಎಲ್ಲ ಹಕ್ಕು, ಸೌಲಭ್ಯ ವ್ಯರ್ಥವಾದಂತೆ’ ಎಂದು ಹೇಳಿದರು.

‘ಮಕ್ಕಳು ಸಂವಿಧಾನದ ಆಶಯ ತಿಳಿದುಕೊಳ್ಳಬೇಕು. ಉತ್ತಮ ನಾಯಕರಾಗಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಆಲೋಚಿಸಿ, ಸರಿ–ತಪ್ಪು ಯಾವುದು ಎಂಬುದನ್ನು ತಿಳಿದರೆ ಸಾಕು. ಎಲ್ಲ ಸಮಸ್ಯೆ ಪರಿಹಾರವಾಗಲಿವೆ’ ಎಂದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಕೆ.ಒಂಟಿಗೋಡಿ ಮಾತನಾಡಿ, ‘ನಾವಿಂದು ನೆಮ್ಮದಿ, ಸಂತೋಷದಿಂದ ಬದುಕುತ್ತಿದ್ದೇವೆ ಎಂದರೇ ಅದಕ್ಕೆ ನಮ್ಮ ಸಂವಿಧಾನ ನೀಡಿರುವ ಹಕ್ಕು–ಸೌಲಭ್ಯಗಳೇ ಕಾರಣ. ಇದನ್ನು ರಚಿಸಲು ಶ್ರಮಿಸಿದ ಬಾಬಾಸಾಹೇಬರ ತಂಡವನ್ನು ಎಷ್ಟು ಅಭಿನಂದಿಸಿದರು ಸಾಲದು’ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಮುಗಿಸಿದ ಬಹುತೇಕ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರದ ಕಾರ್ಯ ನಿರ್ವಹಣೆ ಹೇಗೆ ಎಂಬುದು ತಿಳಿದಿಲ್ಲ. ನಿಯಮಿತವಾಗಿ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು, ಜಗತ್ತಿನ ಆಗು ಹೋಗು ತಿಳಿಯಿರಿ. ಜಾಗೃತರಾಗಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಇದು ಅನುಕೂಲಕರವಾಗಲಿದೆ’ ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ವೆಂಕಟರಾಜು ಮಾತನಾಡಿ, ‘ಓದಿನ ಕಡೆ ಹೆಚ್ಚಿನ ಗಮನಕೊಡಿ. ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಪ್ರಾಮಾಣಿಕ ಬದುಕಿನ ಮೂಲಕ ಸಮಾಜಕ್ಕೆ ಕೊಡುಗೆ ನೀಡಿ’ ಎಂದು ಕಿವಿಮಾತು ಹೇಳಿದರು.

‘ಎಲ್ಲೆಡೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಮಹತ್ವವಾದುದು’ ಎಂದು ಡಿಡಿಪಿಐ ಡಾ.ಪಾಂಡುರಂಗ ತಿಳಿಸಿದರು.

ಗ್ರಾಮ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಆರ್.ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಕಾರ್ಯಕ್ರಮದ ಮಾಹಿತಿ ನೀಡಿದರು. ಮೈಸೂರು ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿ ರಂಗಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT