ಶನಿವಾರ, ಫೆಬ್ರವರಿ 27, 2021
31 °C
ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ:

ಅನಧಿಕೃತ ಜಾಹೀರಾತಿಗೆ ಅವಕಾಶ ಇಲ್ಲ: ಪಾಲಿಕೆ ಆಯುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಾಲಿಕೆ ಕೌನ್ಸಿಲ್‌ ಸಭೆಯು 2018ರ ಆ.6ರಂದು ತೆಗೆದುಕೊಂಡಿದ್ದ ನಿರ್ಣಯವನ್ನು ಮಾತ್ರ ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಪಡಿಸಿದೆ. ಅನಧಿಕೃತ ಜಾಹೀರಾತನ್ನು ಅಳವಡಿಸಲು ಅನುಮತಿ ನೀಡಲಾಗಿದೆ ಎಂಬುದು ಇದರ ಅರ್ಥವಲ್ಲ. ಅನಧಿಕೃತವಾಗಿ ಫ್ಲೆಕ್ಸ್‌ ಹಾಗೂ ಜಾಹೀರಾತುಗಳನ್ನು ಅಳವಡಿಸಲು ಅವಕಾಶ ನೀಡುವುದಿಲ್ಲ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

‘ಹೈಕೋರ್ಟ್‌ ಆದೇಶವನ್ನು ತಪ್ಪಾಗಿ ಅರ್ಥೈಸಿ ಯಾರಾದರೂ ಫ್ಲೆಕ್ಸ್‌ ಅಳವಡಿಸಿದರೆ ಮುಲಾಜಿಲ್ಲದೇ ತೆಗೆಸುತ್ತೇವೆ’ ಎಂದರು.

ಪ್ರಸ್ತುತ ಪಾಲಿಕೆಯು ಹೊಸ ಜಾಹೀರಾತು ನೀತಿ ರೂಪಿಸಿದ್ದು ಇದಕ್ಕೆ ಸರ್ಕಾರ ಅನುಮೋದನೆಯನ್ನೂ ನೀಡಿದೆ. ಅದರ ಪ್ರಕಾರ ಫ್ಲೆಕ್ಸ್‌ಗಳ ಬಳಕೆ ನಿಷೇಧಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇಲ್ಲ.

ಈ ನೀತಿಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಪಾಲಿಕೆ ಬೈಲಾ ಕೂಡಾ ರೂಪಿಸಿದೆ. ಇದರ ಕರಡನ್ನು ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟಿದೆ. ಆದರೆ ಇನ್ನೂ ಅನುಮೋದನೆ ಸಿಕ್ಕಿಲ್ಲ.

‘ಹೊಸ ಬೈಲಾ ಜಾರಿ ಆಗುವವರೆಗೆ ಹಳೆ ಬೈಲಾ ಜಾರಿಯಲ್ಲಿರುತ್ತದೆ ನಿಜ. ಆದರೆ, ನಾವು ಅನುಮತಿ ನೀಡದ ಹೊರತು ಜಾಹೀರಾತು ಅಳವಡಿಸುವುದಕ್ಕೆ ಹಳೆ ಬೈಲಾದಲ್ಲೂ ಅವಕಾಶ ಇಲ್ಲ. ಹಾಗಾಗಿ ನಗರದಲ್ಲಿ ಮತ್ತೆ ಫ್ಲೆಕ್ಸ್‌ ಹಾವಳಿ ಕಾಣಿಸಿಕೊಳ್ಳಲಿದೆ ಎಂಬ ಆತಂಕ ಅನಗತ್ಯ’ ಎಂದು ಅವರು ವಿವರಿಸಿದರು.

 ‘ಕೆಲವು ಜಾಹೀರಾತು ಏಜೆನ್ಸಿಗಳು ಡೀಮ್ಡ್‌ ಅನುಮೋದನೆ ಸಿಕ್ಕಿದೆ ಎಂಬ ನೆಪ ಹೇಳಿ ಜಾಹೀರಾತು ಅಳವಡಿಸಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಕೆಎಂಸಿ ಕಾಯ್ದೆಯ ಸೆಕ್ಷನ್‌ 443 (10) ಹೊಸ ಪರವಾನಗಿಗೆ ಸಂಬಂಧಿಸಿದ ಅರ್ಜಿಗಳಿಗೆ ಮಾತ್ರ ಡೀಮ್ಡ್‌ ಅನುಮತಿ ಅನ್ವಯವಾಗುತ್ತದೆಯೇ ಹೊರತು, ನವೀಕರಣದ ಅರ್ಜಿಗಳಿಗೆ ಅಲ್ಲ. ರೈಂಬೋ ಅಡ್ವರ್ಟೈಸಿಂಗ್‌ ಮತ್ತು ಪಾಲಿಕೆ ನಡುವಿನ ಪ್ರಕರಣದಲ್ಲಿ ಹೈಕೋರ್ಟ್‌ 2002ರಲ್ಲಿ ನೀಡಿದ್ದ ಆದೇಶದಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ’ ಎಂದು ವಿವರಿಸಿದರು.

**

ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸುತ್ತೇವೆ. ಮತ್ತೆ ಫ್ಲೆಕ್ಸ್‌ ಹಾವಳಿ ಕಾಣಿಸಿಕೊಳ್ಳಲು ಅವಕಾಶ ನೀಡುವುದಿಲ್ಲ
- ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು