ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಿಗೆ ಪ್ರಕರಣ; ಮಾಜಿ ಪತ್ರಕರ್ತರ ಬಂಧನ

ಕಿರಣ್‌, ಜಗನ್ನಾಥಗೌಡ ವಿರುದ್ಧ ₹25 ಲಕ್ಷ ವಂಚನೆ ಆರೋಪ
Last Updated 7 ಮೇ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌’ ವ್ಯವಸ್ಥಾಪಕರಿಂದ ₹ 25 ಲಕ್ಷ ಸುಲಿಗೆ ಮಾಡಿದ ಆರೋಪದಡಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಮಾಜಿ ಪತ್ರಕರ್ತರಾದ ಕಿರಣ್ ಶಾನುಭಾಗ್, ಜಗನ್ನಾಥಗೌಡ ಅವರನ್ನು ನೆಲಮಂಗಲ ಪೊಲೀಸರು ಸೆರೆ ಹಿಡಿದಿದ್ದಾರೆ.

ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಜಗನ್ನಾಥಗೌಡನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಿರಣ್ ಶಾನುಭಾಗ್ ದಾವಣಗೆರೆ ದೇವಸ್ಥಾನವೊಂದರಲ್ಲಿ ಸೆರೆಸಿಕ್ಕಿದ್ದಾನೆ.

ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ತಮ್ಮ ವಶಕ್ಕೆ ಪಡೆದಿದ್ದ ಪೊಲೀಸರು, ಕಸ್ಟಡಿ ಅವಧಿ ಮುಗಿದಿದ್ದರಿಂದ ಬುಧವಾರ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇವರ ವಿರುದ್ಧ ಟ್ರಸ್ಟ್ ವ್ಯವಸ್ಥಾಪಕ ಡಾ.ಎ.ಆರ್.ಶ್ರೀನಿವಾಸ್ ದೂರು ಕೊಟ್ಟಿದ್ದರು. ‘2018ರ ನ.23ರಂದು ಟ್ರಸ್ಟ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಕಿರಣ್‌ ಪರಿಚಯವಾಗಿತ್ತು. ₹ 25 ಲಕ್ಷ ಕೊಡದಿದ್ದರೆ, ನಿಮ್ಮ ಗೌರವಕ್ಕೆ ಧಕ್ಕೆ ತರುವಂತಹ ವಿಡಿಯೊ ಒಂದನ್ನು ಟಿ.ವಿ–9 ವಾಹಿನಿಯಲ್ಲಿ ಪ್ರಸಾರ ಮಾಡುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ, ಹಣ ಕೊಟ್ಟಿದ್ದೆ. ಈಗ ಮತ್ತೆ ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ’ ಎಂದ್ದರು.

ಕಿತ್ತಾಡಿಕೊಂಡು ದೂರಾದರು: ‘ಎಫ್ಐಆರ್ ದಾಖಲಾದ ಬಳಿಕ ಕಿರಣ್, ಜಗನ್ನಾಥಗೌಡ ಪರಸ್ಪರ ಕಿತ್ತಾಡಿಕೊಂಡಿದ್ದರು. ಕಿರಣ್ ತನ್ನ ಸ್ನೇಹಿತನೊಬ್ಬನ ಕಾರು ತೆಗೆದುಕೊಂಡು ಬೆಳಗಾವಿಗೆ ಹೋದರೆ, ಜಗನ್ನಾಥಗೌಡ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ’ ಎಂದು ನೆಲಮಂಗಲ ಡಿವೈಎಸ್ಪಿ ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ದಿನಗಳ ಬಳಿಕ ಕಿರಣ್ ಕಾರನ್ನು ಬೆಳಗಾವಿಯಲ್ಲೇ ಬಿಟ್ಟು, ಬಸ್‌ನಲ್ಲಿ ದಾವಣಗೆರೆಗೆ ಮರಳಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದೇವಸ್ಥಾನ ಒಂದರಲ್ಲಿ ವಶಕ್ಕೆ ಪಡೆಯಲಾಯಿತು. ₹25 ಲಕ್ಷ ಪಡೆದಿದ್ದನ್ನು ಒಪ್ಪಿಕೊಂಡಿದ್ದು, ಸ್ನೇಹಿತರೊಂದಿಗೆ ಮೋಜು ಮಾಡಿ ಹಣ ಖರ್ಚು ಮಾಡಿದ್ದಾನೆ’ ಎಂದು ಮಾಹಿತಿ ನೀಡಿದರು.

ಶಾಸಕ ಅರವಿಂದ ಲಿಂಬಾವಳಿ ಅವರಿಗೆ
₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ‘ಫೋಕಸ್‌’ ಟಿ.ವಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹೇಮಂತ್‌ಕುಮಾರ್ ಕಮ್ಮಾರ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

‘ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರಿಗೆ ಸಂಬಂಧಪಟ್ಟ ಸಿ.ಡಿ ತನ್ನ ಬಳಿ ಇರುವುದಾಗಿ ಹೇಳಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಹೇಮಂತ್, ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಸಚಿವರ ಆಪ್ತ ಸಹಾಯಕ ಮಾರೇಗೌಡ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.

‘ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗಾವಣೆಗೆ ಲಂಚ ಕೇಳಿದ ರೀತಿಯಲ್ಲಿದ್ದ ನಕಲಿ ಆಡಿಯೊವನ್ನು ನಮಗೆ ಕಳುಹಿಸಿದ್ದ ಹೇಮಂತ್, ‘ಈ ಆಡಿಯೊವನ್ನು ಯಾರೋ ನನಗೆ ಕಳುಹಿಸಿ ₹ 50 ಲಕ್ಷಕ್ಕೆ ಕೇಳುತ್ತಿದ್ದಾರೆ. ನೀವೇ ಹಣ ಕೊಟ್ಟರೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರಿಂದ ಆಡಿಯೊ ಬಿಡುಗಡೆ ಮಾಡಿ ತೇಜೋವಧೆ ಮಾಡಿದ್ದರು’ ಎಂದೂ ಮಾರೇಗೌಡ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT