ಶುಕ್ರವಾರ, ಏಪ್ರಿಲ್ 23, 2021
27 °C

ಮನದ ಸಾಂತ್ವನಕ್ಕೆ ‘ಆಶಾ’ ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರೀಕ್ಷೆಯಲ್ಲಿ ಫೇಲ್ ಆಗಿ ಖಿನ್ನತೆಗೆ ಒಳಗಾಗಿರುವ ಮಗು, ದಾಂಪತ್ಯಕ್ಕೆ ಕಾಲಿಡುವ ಮುನ್ನ ಇರುವ ಗೊಂದಲ, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಂದಿಗ್ಧತೆ, ಜೀವನವನ್ನು ಸಂತೋಷದಿಂದ ಕಳೆಯಲು ಇರುವ ಅಡ್ಡಿ, ಸೋಲಿನ ಭೀತಿ – ಇಂತಹ ಎಷ್ಟೋ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದೆ ಹನುಮಂತನಗರದ ‘ಆಶಾ ದಿ ಹೋಪ್ ಫೌಂಡೇಷನ್’. ಆಪ್ತಸಮಾಲೋಚನೆ ಮೂಲಕ ಮನದ ದುಗುಡವನ್ನು ದೂರವಾಗಿಸುವ ಯತ್ನದಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ. 

ಡಾ.ಆಶಾ ಅವರು 15 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಕೆರಿಯರ್, ಪ್ರೊಫೆಷನಲ್, ಮೆರಿಟಲ್, ಅಕಾಡೆಮಿಕ್, ಅಡಾಲಸೆನ್ಸ್, ಕಾರ್ಪೊರೇಟ್ ಸೇರಿದಂತೆ ಎಲ್ಲ ರೀತಿಯ ಕೌನ್ಸೆಲಿಂಗ್ ನಡೆಸುತ್ತಿರುವ ಜೊತೆಗೆ, ಮನಶಾಸ್ತ್ರದ ತರಗತಿ ಹಾಗೂ ಸಾಮಾಜಿಕ ಕೆಲಸಗಳಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ.

ವಿಶೇಷ ಮಕ್ಕಳು ಹಾಗೂ ವಿಶೇಷ ವ್ಯಕ್ತಿಗಳನ್ನು ಇಲ್ಲಿಗೆ ಕರೆತರಲಾಗುತ್ತದೆ. ಮಾನಸಿಕ ಗೊಂದಲ, ದುಗುಡ, ಖಿನ್ನತೆ, ತೊಳಲಾಟ.. ಹೀಗೆ ಮನಸ್ಸಿಗೆ ಸಂಬಂಧಿಸಿದ ಹಲವು ರೀತಿಯ ತೊಂದರೆಯಿಂದ ಬಳಲುತ್ತಿರುವವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆರ್ಟ್ ಥೆರಪಿ, ಕಲರ್ ಥೆರಪಿ, ಕ್ಯಾನ್ಸರ್ ಪೀಡಿತರಿಗೆ ಕ್ರೋಮೊ ಥೆರಪಿಯಂತಹ ವಿವಿಧ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಚಿತ್ರಗಳಿಗೆ ಬಣ್ಣ ತುಂಬುವುದೂ ಒಂದು ಚಿಕಿತ್ಸಾ ವಿಧಾನ. ಒಂದೊಂದು ಬಣ್ಣಕ್ಕೆ ಒಂದೊಂದು ಅರ್ಥವಿದೆ. ಬಿಳಿಯು ಶಾಂತಿಯನ್ನೂ, ಹಳದಿಯು ಜ್ಞಾನವನ್ನೂ, ಕೇಸರಿಯು ಧೈರ್ಯವನ್ನೂ ಸೂಚಿಸುತ್ತವೆ. 

‘ಮೆಡಿಟೇಟಿವ್ ಮಂಡಲ’ ಎಂಬ ಕಾರ್ಯಾಗಾರವು ನಮ್ಮತನವನ್ನು ನಮಗೆ ಮರಳಿ ದೊರಕಿಸಿಕೊಡುತ್ತದೆ ಎಂಬುದು ಸಂಸ್ಥಾಪಕಿ ಡಾ. ಆಶಾ ಅವರ ಭರವಸೆಯ ನುಡಿ. ಮಾನಸಿಕ ಸಾಂತ್ವನ, ಅರ್ಥ ಮಾಡಿಕೊಳ್ಳುವಿಕೆ, ಕ್ರಿಯಾಶೀಲತೆ ಬೆಳವಣಿಗೆ, ತಾರ್ಕಿಕ ಚಿಂತನೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳ ಬಗ್ಗೆಯೂ ಮಾರ್ಗದರ್ಶನ ಸಿಗುತ್ತದೆ. ಇದಕ್ಕೆಂದೇ ತರಬೇತಿ ಪಡೆದ 12 ತರಬೇತುದಾರರು ಇಲ್ಲಿದ್ದಾರೆ.  

ಮನ ತೆರೆದಿಡುವ ಚಿತ್ರ 

ಡ್ರಾಯಿಂಗ್ ಮೂಲಕ ಮಕ್ಕಳನ್ನು ಅರಿಯುವುದು ಮತ್ತೊಂದು ರೀತಿಯ ಚಿಕಿತ್ಸಾ ವಿಧಾನ. ಸಮಸ್ಯೆ ಇರುವ ಮಗುವಿಗೆ ಮೊದಲಿಗೆ ಚಿತ್ರ ಬರೆಯಲು ಸೂಚಿಸಲಾಗುತ್ತದೆ. ತನ್ನ  ಮನದಲ್ಲಿರುವ ವಿಚಾರವನ್ನು ಮಗು ಚಿತ್ರ ಬಿಡಿಸಿ ಸೂಚ್ಯವಾಗಿ ಹೇಳುತ್ತದೆ. ಇದು ಮೊದಲ ಹಂತ. ಮಗುವಿನ ಜೊತೆ ಅನ್ಯೋನ್ಯತೆ ಸಾಧಿಸಿ, ಸಮಸ್ಯೆಯ ಮೂಲವನ್ನು  ಪತ್ತೆಹಚ್ಚಿ, ಚಿಕಿತ್ಸೆ ನೀಡಿ ಸಾಮಾನ್ಯ ವ್ಯಕ್ತಿಯಾಗಿ ಪರಿವರ್ತಿಸಲಾಗುತ್ತದೆ. 

ಸಮಸ್ಯೆಪೀಡಿತ ಮಗುವನ್ನು ಪೋಷಕರು ಇಲ್ಲಿಗೆ ಕರೆತಂದಿದ್ದರು. ಅವನು ಬಿಡಿಸಿದ ಚಿತ್ರ ದಂಗುಬಡಿಸುವಂತಿತ್ತು. ‘ಒಂದು ಬರಡು ಮರ. ಅದರಲ್ಲಿ ಕುಣಿಕೆ, ಅದರ ಕೆಳಗಡೆ ಸ್ಮಶಾನ’– ಇವಿಷ್ಟನ್ನು ನೋಡಿದರೆ ಸಾಕು, ಬಾಲಕ ತೀವ್ರ ಮಾನಸಿಕ ತೊಳಲಾಟದಲ್ಲಿದ್ದಾನೆ ಎಂದು ಥಟ್ಟನೆ ಅರಿವಾಯಿತು. ಮೂರ್ನಾಲ್ಕು ತಿಂಗಳ ಸಮಾಲೋಚನೆ ಬಳಿಕ ಆ ಮನಸ್ಥಿತಿಯಿಂದ ಅವನನ್ನು ಹೊರತರಲಾಯಿತು ಎಂದು ಹೇಳುತ್ತಾರೆ ಆಪ್ತ ಸಮಾಲೋಚಕರಾದ ಗಂಗಾ. ಇದು ಒಂದು ಉದಾಹರಣೆ ಮಾತ್ರ. ಇಂತಹ ಎಷ್ಟೋ ಸಮಸ್ಯೆಯ ಮಕ್ಕಳಿಗೆ ಇಲ್ಲಿ ಚಿಕಿತ್ಸೆ ದೊರೆತಿದೆ. 

ಅಭ್ಯುದಯದ ಹೆಜ್ಜೆ 

ಸಂಸ್ಥೆಯು ಅಭ್ಯುದಯ ಎಂಬ ವಿನೂತನ ಕಾರ್ಯಕ್ರಮದಡಿ, ಪರೀಕ್ಷೆಯಲ್ಲಿ ಫೇಲ್ ಆಗಿರುವ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತವಾಗಿ ತರಗತಿಗಳನ್ನು ನಡೆಸುತ್ತಿದೆ. ಸದ್ಯ 12 ಮಕ್ಕಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಸಂಸ್ಥೆಯ ಕಾರ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವಿಕ್ಟೋರಿಯಾ ಲೇಔಟ್‌ನಲ್ಲಿ ಜುಲೈನಲ್ಲಿ ಮತ್ತೊಂದು ಶಾಖೆ ಆರಂಭವಾಗುತ್ತಿದೆ. ಆಪ್ತ ಸಮಾಲೋಚನೆಗೆಂದೇ ಇದನ್ನು ಮೀಸಲಿರಿಸಲಾಗಿದೆ. ಭವಿಷ್ಯದಲ್ಲಿ ಸಂಸ್ಥೆಯಿಂದ ವೃದ್ಧಾಶ್ರಮ ನಿರ್ಮಿಸುವ, ಉಚಿತ ಶಿಕ್ಷಣ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. 

ಡಿಪ್ಲೊಮಾ ಇನ್ ಆರ್ಟ್ ಥೆರಪಿ ಎಂಬ ಕೋರ್ಸ್ ಜೂನ್ ಮೊದಲ ವಾರದಿಂದ ಆರಂಭವಾಗುತ್ತಿದೆ. 

ವಿಳಾಸ: ನಂ.870, 13ನೇ ಮೇನ್, 5ನೇ ಕ್ರಾಸ್, ಹನುಮಂತನಗರ ಸಂಪರ್ಕ: 9686542038 
www.ashathehope.org

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು