ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಯಲ್ಲೇ ಮಹಿಳೆಗೆ ಥಳಿತ; ಎಎಸ್‌ಐ ಅಮಾನತು

11ನೇ ವರ್ಷಕ್ಕೇ ಮಗಳನ್ನು ಮದುವೆ ಮಾಡಿದ್ದ ಚಿತ್ತೂರಿನ ಮಹಿಳೆ * ಆಂಧ್ರ ಪೊಲೀಸರಿಗೂ ಮಾಹಿತಿ ರವಾನೆ
Last Updated 29 ಜನವರಿ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಮಗಳನ್ನು ಬಲವಂತವಾಗಿ ಊರಿಗೆ ಕರೆದೊಯ್ಯಲು ಯತ್ನಿಸುತ್ತಿದ್ದ ಚಿತ್ತೂರಿನ ಮಹಿಳೆ ಹಾಗೂ ಅವರ ಸಂಬಂಧಿಗಳನ್ನು ಠಾಣೆಯಲ್ಲೇ ಮನಸೋಇಚ್ಛೆ ಥಳಿಸಿದ ಆರೋಪದಡಿ ಕುಮಾರಸ್ವಾಮಿ ಲೇಔಟ್‌ ಎಎಸ್‌ಐ ರೇಣುಕಯ್ಯ ಅಮಾನತಾಗಿದ್ದಾರೆ.

ಜ.20ರಂದು ಈ ಘಟನೆ ನಡೆದಿದೆ. ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಆ ದೃಶ್ಯವನ್ನು ಪೊಲೀಸರೇ ಮಂಗಳವಾರ ಮಾಧ್ಯಮಗಳಿಗೆ ಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಎಎಸ್‌ಐ ಅವರನ್ನು ಅಮಾನತು ಮಾಡಿ ಎಸಿಪಿ ಮಟ್ಟದಲ್ಲಿ ಇಲಾಖಾ ತನಿಖೆಗೂ ಆದೇಶಿಸಿದ್ದಾರೆ.

11 ವರ್ಷಕ್ಕೇ ಮದುವೆ: ‘ಪೊಲೀಸರ ರಕ್ಷಣೆಯಲ್ಲಿದ್ದ ಸಂತ್ರಸ್ತೆ ತನ್ನ ತಾಯಿ ತಾರಕೇಶ್ವರಿ ಜತೆ ತೆರಳಲು ನಿರಾಕರಿಸಿದ್ದಳು. ಆದರೂ, ಮಹಿಳೆಯರ ಗುಂಪು ಏಕಾಏಕಿ ಠಾಣೆಗೆ ನುಗ್ಗಿ ಆಕೆಯನ್ನು ಎಳೆದೊಯ್ಯಲು ಮುಂದಾಯಿತು. ಈ ಹಂತದಲ್ಲಿ ರೇಣುಕಯ್ಯ ಕುತ್ತಿಗೆ ಹಿಡಿದು ಎಲ್ಲರನ್ನೂ ಹೊರತಳ್ಳಿದ್ದಾರೆ. ಹಾಗಂತ ನಾನು ಅವರ ನಡೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಪೊಲೀಸ್ ಅಧಿಕಾರಿಯಾಗಿ ಆ ರೀತಿ ವರ್ತಿಸಿರುವುದು ತಪ್ಪು’ ಎಂದು ಅಣ್ಣಾಮಲೈ ಹೇಳಿದ್ದಾರೆ.

‘ತಾರಕೇಶ್ವರಿ ಅವರು ಮಗಳು 11 ವರ್ಷವಿರುವಾಗಲೇ ಆಕೆಯನ್ನು ತಮ್ಮ ಸೋದರನೊಂದಿಗೆ ಮದುವೆ ಮಾಡಿದ್ದರು. ಆರು ವರ್ಷ ಸಂಸಾರ ನಡೆಸಿದ್ದ ಬಾಲಕಿ, ಪತಿಯ ಕುಟುಂಬದ ಕಿರುಕುಳಕ್ಕೆ ತತ್ತರಿಸಿ ಹೋಗಿದ್ದಳು. ಕ್ರಮೇಣ ಕೌಟಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ವಿಚಾರ ತಿಳಿದ ತಾರಕೇಶ್ವರಿ, ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಮಗಳಿಗೆ ಬುದ್ಧಿ ಹೇಳಿದ್ದರು.’

‘18 ವರ್ಷ ತುಂಬುತ್ತಿದ್ದಂತೆಯೇ ಸಂತ್ರಸ್ತೆಯು ತಾನೂ ಕಾನೂನು ಬದ್ಧವಾಗಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಹಕ್ಕುದಾರಳು ಎಂಬ ತೀರ್ಮಾನಕ್ಕೆ ಬಂದಳು. ‍ಆ ನಂತರ ಪತಿಯನ್ನು ತೊರೆದು ಬೆಂಗಳೂರಿಗೆ ಬಂದು ಒಂಟಿಯಾಗಿ ಬದುಕುತ್ತಿದ್ದಳು. ಮಗಳು ಕೋರಮಂಗಲದಲ್ಲಿ ನೆಲೆಸಿರುವ ವಿಚಾರ ತಿಳಿದ ತಾರಕೇಶ್ವರಿ, ಸಂಬಂಧಿಕರೊಂದಿಗೆ ಸೇರಿ ಮೂರು ತಿಂಗಳ ಹಿಂದೆ ಆಕೆಯನ್ನು ಚಿತ್ತೂರಿಗೆ ಕರೆದೊಯ್ಯಲು ಯತ್ನಿಸಿದ್ದರು. ಆಗ ತಪ್ಪಿಸಿಕೊಂಡಿದ್ದ ಸಂತ್ರಸ್ತೆ, ನಂತರ ವಾಸ್ತವ್ಯವನ್ನು ಕುಮಾರಸ್ವಾಮಿ ಲೇಔಟ್‌ಗೆ ಬದಲಿಸಿ ಮನೆ ಸಮೀಪದ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.’

‘ಆ ವಾಸಸ್ಥಳವನ್ನೂ ತಿಳಿದುಕೊಂಡ ತಾರಕೇಶ್ವರಿ ಹಾಗೂ ಸಂಬಂಧಿಕರು, ಜ.20ರಂದು ಬುರ್ಖಾಧಾರಿಗಳಾಗಿ ಹೋಟೆಲ್‌ಗೆ ನುಗ್ಗಿ ಮಗಳನ್ನು ಅಪಹರಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರು ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಸಿಬ್ಬಂದಿ, ಸಂತ್ರಸ್ತೆಯನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದರು.

ವಿಚಾರಿಸಿದಾಗ, ‘ನನಗೆ ಬಾಲ್ಯ ವಿವಾಹ ಮಾಡಿದ್ದರು. ಇಷ್ಟು ವರ್ಷ ಚಿತ್ರಹಿಂಸೆ ಅನುಭವಿಸಿದ್ದೇನೆ. ಅವರೊಟ್ಟಿಗೆ ಕಳುಹಿಸಿಕೊಡಬೇಡಿ’ ಎಂದು ಆಕೆ ರಕ್ಷಣೆ ಕೋರಿದ್ದಳು. ಹೀಗಾಗಿ, ಅವರು ಹೋಗುವವರೆಗೂ ಸಂತ್ರಸ್ತೆಯನ್ನು ಸುರಕ್ಷಿತವಾಗಿ ಠಾಣೆಯಲ್ಲೇ ಇರಿಸಿಕೊಳ್ಳಲು ನಿರ್ಧರಿಸಲಾಗಿತ್ತು.’

‘ಸ್ವಲ್ಪ ಸಮಯದಲ್ಲೇ ಠಾಣೆ ಹತ್ತಿರವೂ ಬಂದ ತಾರಕೇಶ್ವರಿ ಹಾಗೂ ಸಂಬಂಧಿಕರು, ‘ನಮ್ಮ ಮಗಳನ್ನು ಕಳುಹಿಸಿಕೊಡಿ. ಇಲ್ಲವಾದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಸಿದ್ದರು. ಈ ವೇಳೆ ಸಿಬ್ಬಂದಿ ಅವರ ವರ್ತನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲು ಶುರು ಮಾಡಿದರು. ಮಹಿಳಾ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಅಪರಾಧ ವಿಭಾಗದ ಎಎಸ್‌ಐ ರೇಣುಕಯ್ಯ ಎಲ್ಲರನ್ನೂ ಕುತ್ತಿಗೆ ಹಿಡಿದು ಹೊರದಬ್ಬಿದ್ದರು’ ಎಂದು ಅಣ್ಣಾಮಲೈ ವಿವರಿಸಿದ್ದಾರೆ.

**

ಆಂತರಿಕ ಕಲಹದ ಬಗ್ಗೆಯೂ ತನಿಖೆ

‘ಕರ್ತವ್ಯ ನಿಯೋಜನೆ ವಿಚಾರದಲ್ಲಿ ಭಾನುವಾರ ಎಎಸ್‌ಐ ರೇಣುಕಯ್ಯ ಮೇಲೆ ಬೇಸರಗೊಂಡಿದ್ದ ಕಾನ್‌ಸ್ಟೆಬಲ್‌ವೊಬ್ಬರು, ಅಂದಿನ ದಾಂದಲೆಯ ವಿಡಿಯೊವನ್ನು ಎಡಿಟ್ ಮಾಡಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಹೀಗಾಗಿ, ಅವರನ್ನೂ ಅಮಾನತು ಮಾಡಲು ಡಿಸಿಪಿಗೆ ವರದಿ ಕೊಟ್ಟಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಠಾಣೆಯಲ್ಲಿ ಹಲವು ದಿನಗಳಿಂದ ಸಿಬ್ಬಂದಿ ನಡುವೆ ಆಂತರಿಕ ಕಲಹ ನಡೆಯುತ್ತಲೇ ಇದೆ. ಠಾಣೆಯಲ್ಲಿರುವ ಉತ್ತರ ಕರ್ನಾಟಕದ ಸಿಬ್ಬಂದಿ ‘ಎನ್‌ಕೆ’ (ನಾರ್ಥ್ ಕರ್ನಾಟಕ) ಎಂತಲೂ, ದಕ್ಷಿಣ ಕರ್ನಾಕದ ಸಿಬ್ಬಂದಿ 'ಎಸ್‌ಕೆ' (ಸೌತ್ ಕರ್ನಾಟಕ) ಎಂತಲೂ ಗುಂಪುಗಳನ್ನು ಕಟ್ಟಿಕೊಂಡಿದ್ದಾರೆ. ಕೆಲಸದ ಹಂಚಿಕೆ, ಗಸ್ತು ನಿಯೋಜನೆ, ರಜೆ ಮಂಜೂರು.. ಸೇರಿ ವೃತ್ತಿ ವಿಚಾರದಲ್ಲಿ ಈ ಬಣಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ತಮ್ಮ ಎದುರಾಳಿ ಬಣದ ಎಸ್‌ಐವೊಬ್ಬರನ್ನು ಸಂಕಷ್ಟದಲ್ಲಿ ಸಿಕ್ಕಿಸಲು 2018ರ ಜೂನ್‌ನಲ್ಲಿ ನಾಲ್ವರು ಕಾನ್‌ಸ್ಟೆಬಲ್‌ಗಳೇ ಠಾಣೆಯಲ್ಲಿ ರೈಫಲ್ ಕದ್ದಿದ್ದರು’ ಎಂದು ಮಾಹಿತಿ ನೀಡಿದರು.

ಇನ್‌ಸ್ಪೆಕ್ಟರ್ ಬಳಿ ವಿವರಣೆ

‘ಜ.20ರಂದು ಠಾಣೆಯಲ್ಲಿ ಇಂಥ ದೊಡ್ಡ ದಾಂದಲೆ ನಡೆದಿದ್ದರೂ, ಇಲ್ಲಿಯವರೆಗೂ ಆ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಇನ್‌ಸ್ಪೆಕ್ಟರ್‌ ಬಳಿ ವಿವರಣೆ ಕೇಳಿದ್ದೇನೆ. ಜತೆಗೆ, ಠಾಣೆಯ ಸಿಬ್ಬಂದಿ ಮಧ್ಯೆ ಇದೆ ಎನ್ನಲಾಗುತ್ತಿರುವ ಆಂತರಿಕ ಕಲಹದ ಬಗ್ಗೆಯೂ ವಿಚಾರಣೆ ನಡೆಸುತ್ತೇನೆ’ ಎಂದು ಅಣ್ಣಾಮಲೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT