ನೌಕರಸ್ಥ ಮಹಿಳೆಯರನ್ನು ಸುರಕ್ಷಿತವಾಗಿ ಮನೆ ಮಟ್ಟಿಸಿ...

7
ಬಾರ್ ಅಂಡ್‌ ರೆಸ್ಟೋರೆಂಟ್‌ ಮಾಲೀಕರಿಗೆ ಹೈಕೋರ್ಟ್‌ ನಿರ್ದೇಶನ

ನೌಕರಸ್ಥ ಮಹಿಳೆಯರನ್ನು ಸುರಕ್ಷಿತವಾಗಿ ಮನೆ ಮಟ್ಟಿಸಿ...

Published:
Updated:
Deccan Herald

ಬೆಂಗಳೂರು: ‘ನಗರದ ಬಾರ್ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ದುಡಿಯುವ ಮಹಿಳಾ ನೌಕರರು ತಡರಾತ್ರಿಯಲ್ಲಿ ಸುರಕ್ಷಿತವಾಗಿ ಮನೆ ಸೇರಬೇಕು. ಒಂದು ವೇಳೆ ಮನೆ ಸೇರುವಾಗ ಮಾರ್ಗಮಧ್ಯೆ ಏನಾದರೂ ಅಹಿತಕರ ಘಟನೆ ಸಂಭವಿಸಿ ಅವರಿಗೆ ತೊಂದರೆ ಉಂಟಾದರೆ ಅದಕ್ಕೆ ಆ ಮಹಿಳೆಯರು ಕೆಲಸ ಮಾಡುವ ಬಾರ್ ಅಂಡ್‌ ರೆಸ್ಟೋರೆಂಟ್‌ ಮಾಲೀಕರೇ ಹೊಣೆಯಾಗುತ್ತಾರೆ’ ಎಂದು ಹೈಕೋರ್ಟ್‌ ಹೇಳಿದೆ.

‘ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಮಹಿಳೆಯರು ದುಡಿಯುವುದಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಆಕ್ಷೇಪಿಸಿ ಮೆಸರ್ಸ್‌ ಬ್ರಿಗೇಡ್‌ ಡ್ರೀಮ್ಸ್‌ ಬಾರ್ ಅಂಡ್‌ ರೆಸ್ಟೋರೆಂಟ್‌ ಮಾಲೀಕರು ಸೇರಿದಂತೆ 28 ಬಾರ್‌ ಅಂಡ್‌ ರೆಸ್ಟೋರೆಂಟ್‌ ಮಾಲೀಕರು ಸಲ್ಲಿಸಿದ್ದ ಅರ್ಜಿಗಳನ್ನು ಇತ್ತೀಚೆಗಷ್ಟೇ ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ಈ ಕುರಿತಂತೆ ನಿರ್ದೇಶನ ನೀಡಿದೆ.

‘ಬಾರ್ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ದುಡಿಯುವ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮಹಿಳೆಯರು ಬಾರ್ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ದುಡಿಯುತ್ತಿದ್ದಾರೆ ಎಂದ ಮಾತ್ರಕ್ಕೆ ಪೊಲೀಸರು ಅವರ ದೈನಂದಿನ ಚಟುವಟಿಕೆಗಳಿಗೆ ವಿನಾಕಾರಣ ಅಡ್ಡಿಪಡಿಸುವುದು ಸರಿಯಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ನಿಮ್ಮ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಮಹಿಳೆಯರು ದುಡಿಯುತ್ತಿದ್ದಾರೆ. ಆದ್ದರಿಂದ ನಿಮ್ಮ ವ್ಯವಹಾರ ಬಂದ್ ಮಾಡಿ. ಒಂದು ವೇಳೆ ಸ್ಥಗಿತಗೊಳಿಸದೇ ಹೋದರೆ ದಾಳಿ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಸಿಸಿಬಿ ಪೊಲೀಸರು ನಮಗೆ ಮೌಖಿಕವಾಗಿ ಎಚ್ಚರಿಕೆ ನೀಡಿದ್ದಾರೆ’ ಎಂದು ದೂರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ದೂರುಗಳನ್ನು ಅಲ್ಲಗಳೆದಿದ್ದ ಪ್ರತಿವಾದಿ ನಗರ ಪೊಲೀಸ್ ಕಮಿಷನರ್‌ ಮತ್ತು ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್‌.ಪೊನ್ನಣ್ಣ, ‘ಅರ್ಜಿದಾರರು ಹೇಳಿರುವ ಅಂಶಗಳೆಲ್ಲಾ ಸುಳ್ಳು. ಅವರ ಕಾನೂನುಬದ್ಧ ಚಟುವಟಿಕೆಗೆ ನಾವು ಯಾವತ್ತೂ ಅಡ್ಡಿ ಉಂಟು ಮಾಡಿಲ್ಲ’ ಎಂದು  ಹೇಳಿದ್ದರು.

‘ಕಾನೂನುಬದ್ಧವಾಗಿ ವ್ಯವಹಾರ ನಡೆಸಿ’

‘ಬಾರ್ ಅಂಡ್‌ ರೆಸ್ಟೋರೆಂಟ್‌ ಮಾಲೀಕರು, ತಮ್ಮ ವ್ಯವಹಾರವನ್ನು ಕಾನೂನು ಬದ್ಧವಾಗಿ ನಡೆಸಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.

‘ಮ್ಯೂಸಿಕ್, ಡ್ಯಾನ್ಸ್‌, ಡಿಸ್ಕೊ ಮತ್ತು ಲೈವ್‌ ಬ್ಯಾಂಡ್‌ ನಡೆಸಬೇಕಾದರೆ ಸಕ್ಷಮ ‍ಪ್ರಾಧಿಕಾರಗಳಿಂದ ಅಗತ್ಯ ಪರವಾನಗಿ ಪಡೆದಿರಬೇಕು. ತಮ್ಮ ವ್ಯವಹಾರದ ಸ್ಥಳದಲ್ಲಿ ಶಾಂತಿ ಕಾಪಾಡಿಕೊಂಡು ಹೋಗಬೇಕು. ಪೊಲೀಸರು ಮತ್ತು ಬಾರ್ ಅಂಡ್‌ ರೆಸ್ಟೋರೆಂಟ್‌ ಮಾಲೀಕರು ಬೆಂಗಳೂರಿನ ವೈಭವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಎಂದೂ ನ್ಯಾಯಪೀಠ ಹೇಳಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !