ಬುಧವಾರ, ಮೇ 12, 2021
18 °C
ಬಸವ ಜಯಂತಿ

ಪೂಜೆ ಮಾಡುವುದು ಮುಖ್ಯವಲ್ಲ: ಬಿ.ಜಯಶ್ರೀ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೂಜೆ ಮಾಡುವುದು ಮುಖ್ಯವಲ್ಲ. ಕೆಲಸವನ್ನು ಕಾಯ–ವಾಚಾ–ಮನಸಾದಿಂದ ಮಾಡಿದರೆ ಅದುವೇ ದೊಡ್ಡ ಪೂಜೆ’ ಎಂದು ರಂಗಕರ್ಮಿ ಬಿ.ಜಯಶ್ರೀ ಹೇಳಿದರು.

ಬಸವ ವೇದಿಕೆಯು ಭಾನುವಾರ ಆಯೋಜಿಸಿದ್ದ ‘ಬಸವ ಜಯಂತಿ ಹಾಗೂ ಬಸವಶ್ರೀ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ನಾವು ಶರಣರ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಅವರ ತತ್ವಾದರ್ಶಗಳನ್ನು ಪಾಲಿಸುವುದಿಲ್ಲ. ಪೂಜೆ–ಪುನಸ್ಕಾರಗಳಿಗಿಂತ ಕಾಯಕವೇ ಮುಖ್ಯ. ಇದನ್ನು ಶರಣರು ಸಹ ಪ್ರತಿಪಾದಿಸಿದ್ದಾರೆ’ ಎಂದರು.

ಮೂಡುಬಿದಿರೆಯ ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ, ‘ಬಸವಣ್ಣ ಅವರು ಭಕ್ತಿ ಮತ್ತು ಕಾಯಕ ತತ್ವ ಪ್ರತಿಪಾದಿಸಿದ್ದಾರೆ. ಈ ಎರಡಕ್ಕೂ ಸಂಬಂಧವಿದೆ. ಕೇವಲ ಪೂಜೆ ಮಾಡುವುದರಿಂದ ಜೀವನ ಹಸನಾಗುವುದಿಲ್ಲ. ಬಸವ ತತ್ವವನ್ನು ಜಾತಿ, ಮತ, ದೇಶಕ್ಕೆ ಸೀಮಿತಗೊಳಿಸದೆ ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ‘ವಚನ ಸಾಹಿತ್ಯವನ್ನು ಬೇರ್ಪಡಿಸಿದರೆ ಕನ್ನಡ ಸಾಹಿತ್ಯದ ಘನತೆ, ಗೌರವವೇ ಕಡಿಮೆ ಆಗುತ್ತದೆ. ವಚನಗಳು ಸಾಹಿತ್ಯದ ಪ್ರಮುಖ ಭಾಗವಾಗಿವೆ. ವಚನಗಳನ್ನು ಓದಿ ಪಚನ ಮಾಡಿಕೊಳ್ಳಬೇಕು’ ಎಂದು ಸಂದೇಶ ನೀಡಿದರು.

ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ.ಮೊಗಸಾಲೆ, ‘ಬಸವಣ್ಣ ಅವರು ಮನೋ ಮತ್ತು ಸಮಾಜ ವಿಜ್ಞಾನಿಯಾಗಿ ಅಲಿಖಿತ ಸಂವಿಧಾನ ರಚಿಸಿದ್ದಾರೆ. ಅದು ಈಗಿನ ಸಂವಿಧಾನಕ್ಕಿಂತ ಒಂದು ಮೆಟ್ಟಿಲು ಮೇಲಿದೆ. ವಿಷಾದವೆಂದರೆ ನಾವು ಬಸವಣ್ಣರ ಸಂವಿಧಾನಕ್ಕೆ ಅಪಚಾರ ಮಾಡುತ್ತಾ ಸಾಗಿದ್ದೇವೆ’ ಎಂದರು.

ಎ.ಎಸ್.ಕಿರಣ್‌ ಕುಮಾರ್‌ ಅವರಿಗೆ ‘ಬಸವಶ್ರೀ’ ಹಾಗೂ ಕವಿ ಜರಗನಹಳ್ಳಿ ಶಿವಶಂಕರ್‌ ಮತ್ತು ನಾ.ಮೊಗಸಾಲೆ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತ್ಯಶ್ರೀ ಪ್ರಶಸ್ತಿಯು ₹ 10 ಸಾವಿರ ಒಳಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು