ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಛದ್ಮವೇಷದ ವೈದಿಕತೆ ಬಸವಣ್ಣನ ಕೂಗುತಿದೆ’

ಜಾಗತಿಕ ಲಿಂಗಾಯತ ಮಹಾಸಭಾದಿಂದ ಬಸವ ಜಯಂತಿ * ವಿಮರ್ಶಕಿ ಎಂ.ಎಸ್. ಆಶಾದೇವಿ ಕಳವಳ
Last Updated 7 ಮೇ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು:‘ಬಸವಣ್ಣನವರುಯಾವ ವೈದಿಕತೆಯನ್ನು ಶೋಷಣೆಯ ಮಹಾಪ್ರವಾಹ ಎಂದುಕೊಂಡು ಅದರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದರೋ, ಅದೇ ವೈದಿಕತೆ ಪ್ರಸ್ತುತ ಛದ್ಮವೇಷ ತೊಟ್ಟು ಅವರನ್ನು ಕರೆದೊಯ್ಯುತ್ತಿದೆ’ ಎಂದುವಿಮರ್ಶಕಿ ಎಂ.ಎಸ್‌.ಆಶಾದೇವಿ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವ ಕಾಲಘಟ್ಟದಲ್ಲೂ ಇರದ ಅಸಹನೆ ಪ್ರಸ್ತುತ ಇದೆ. ಇನ್ನೊಬ್ಬರ ವಿಚಾರಗಳನ್ನು ಗೌರವಿಸುವುದಿರಲಿ ಸಹಿಸಿಕೊಳ್ಳುವ ಮನಸ್ಸುಗಳೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬದುಕಿನುದ್ದಕ್ಕೂ ಸಮಾನತೆಗಾಗಿ ಹಂಬಲಿಸಿದಬಸವಣ್ಣನವರಮಾನವೀಯತೆಯ ಮದ್ದಿನ ಮೂಲಕ ಅಸಹಿಷ್ಣುತೆಗೆ ಚಿಕಿತ್ಸೆ ನೀಡಬೇಕು. ಆ ಶಕ್ತಿ ಬಸವಣ್ಣನವರ ಅಂತಃಕರಣಕ್ಕಿದೆ’ ಎಂದು ಅಭಿಪ್ರಾಯಪಟ್ಟರು.

‘ಬಸವಣ್ಣನವರು ದಲಿತರ ಪ್ರಶ್ನೆಗಳಿಗೆ ಮನಸ್ಸಿನಾಳದಿಂದ ಉತ್ತರಿಸಿದರು. ಆದರೆ, ಹೆಣ್ಣಿನ ವಿಚಾರದಲ್ಲಿ ಅವರಿಗದು ಸಾಧ್ಯವಾಗಲಿಲ್ಲ. ಆದರೂ, ಗಂಡು ಹೆಣ್ಣಿನ ಸಂಬಂಧವನ್ನುಸೂಕ್ಷ್ಮವಾಗಿ ವಿವರಿಸಿದರು’ ಎಂದು ಹೇಳಿದರು.

‘ಬೌದ್ಧ ಧರ್ಮಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಿಕ್ಕ ರೀತಿಯಲ್ಲಿ ಲಿಂಗಾಯತ ಧರ್ಮಕ್ಕೆ ಯಾಕೆ ಒಬ್ಬ ಸೂಕ್ತ ನಾಯಕ ಸಿಗುತ್ತಿಲ್ಲ? ಬೌದ್ಧ ಧರ್ಮದಲ್ಲಿ ಅಂಬೇಡ್ಕರ್‌ ಅವರು ಮಾಡಿದ ಕೆಲಸವನ್ನು ಜಾಗತಿಕ ಲಿಂಗಾಯತ ಮಹಾಸಭಾ ಮಾಡಲಿ’ ಎಂದು ಆಶಿಸಿದರು.

ಸಾಹಿತಿ ಎಸ್‌.ಜಿ.ಸಿದ್ಧರಾಮಯ್ಯ,‘ಸಂಘಟನಾತ್ಮಕವಾದ ಪ್ರಜಾಪ್ರಭುತ್ವದ ನೆಲೆಯಲ್ಲಿ ರೂಪಿತವಾದ ಧರ್ಮ ಶರಣ ಧರ್ಮ. ಈ ಧರ್ಮಕ್ಕೆ ಅಂತರಂಗ ಹಾಗೂ ಬಹಿರಂಗದ ಕುಲುಮೆಯಲ್ಲಿ ಜನ್ಮತಾಳಿದ ವಚನ ಸಾಹಿತ್ಯವೇ ಧರ್ಮಗ್ರಂಥ’ ಎಂದು ಹೇಳಿದರು.

‘ಮೇಲ್ವರ್ಗದ ಜಾತಿ ವ್ಯವಸ್ಥೆಯ ಆಚರಣೆಬಸವಣ್ಣ ಅವರನ್ನು ನೈತಿಕ ಸಂಕಟವಾಗಿ ಕಾಡಿತ್ತು. ಮೇಲ್ವರ್ಗದಲ್ಲಿ ಹುಟ್ಟಿದ್ದಾನೆ ಎನ್ನುವ ಪಾಪದ ಭಾರವನ್ನು ನನ್ನ ಮೇಲೆ ಹೊರಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು’ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ,‘ಸಮ ಸಮಾಜವನ್ನು ಕಟ್ಟಲು ಶ್ರಮಿಸಿದ ಬಸವಣ್ಣನವರ ಸಿದ್ಧಾಂತವನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರಬೇಕಾಗಿದೆ’ ಎಂದರು.

‘102 ಉಪಜಾತಿಗಳಲ್ಲಿ ವೀರಶೈವವೂ ಒಂದು. ಅದು ಉಪಜಾತಿಯಾಗಿದ್ದರೆ ಇರಲಿ. ಇಲ್ಲದಿದ್ದರೆ ಹೊರ ಹೋಗಲಿ. ಧರ್ಮ ಒಡೆಯುವುದು ನಮ್ಮ ಉದ್ದೇಶವಲ್ಲ. ಜೀವ‍ಪರ ಧರ್ಮವನ್ನು ಪ್ರಚುರಪಡಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT