ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಿಂದ ವಿದ್ಯುತ್‌ಗೆ ಯುರೋಪ್‌ ತಂತ್ರಜ್ಞಾನ!

ಫ್ರಾನ್ಸ್‌, ಜರ್ಮನಿಯ ಘಟಕಗಳ ಕಾರ್ಯವೈಖರಿಗೆ ಮಾರುಹೋದ ಪಾಲಿಕೆ ತಂಡ
Last Updated 7 ಡಿಸೆಂಬರ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ಫ್ರಾನ್ಸ್‌ ಹಾಗೂ ಜರ್ಮನಿಯಲ್ಲಿ ಕಸದಿಂದ ವಿದ್ಯುತ್‌ ತಯಾರಿಸುವ ಘಟಕಗಳಿಗೆ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಅಧಿಕಾರಿಗಳ ತಂಡ ಅವುಗಳ ಕಾರ್ಯವೈಖರಿಗೆ ಮಾರು ಹೋಗಿದೆ. ಇದೇ ಮಾದರಿಯಲ್ಲಿ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಆರಂಭಿಸಲು ಪಾಲಿಕೆ ಮುಂದಾಗಿದೆ.

ಪರಮೇಶ್ವರ ಅವರ ಜೊತೆಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಹಾಗೂ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌ ಅವರೂ ಫ್ರಾನ್ಸ್‌, ಜರ್ಮನಿ ಹಾಗೂ ಸ್ವಿಟ್ಜರ್ಲೆಂಡ್‌ನ ವಿವಿಧ ಘಟಕಗಳಿಗೆ ಭೇಟಿ ನೀಡಿದ್ದರು.

‘ಜರ್ಮನಿಯ ನಾರ್ತ್‌ ರೈನ್‌ ಡೆಸ್ಟ್‌ಫೇಲಿಯ ಪ್ರಾಂತ್ಯವೊಂದರಲ್ಲೇ ಮಿಶ್ರ ಕಸವನ್ನು ಬೇರ್ಪಡಿಸಿ ಅದರಿಂದ ವಿದ್ಯುತ್‌ ತಯಾರಿಸುವ 16 ಘಟಕಗಳು ಕಾರ್ಯಾಚರಿಸುತ್ತಿವೆ. ಈ ಪೈಕಿ ಐಸರ್ಲೋನ್‌ ಹಾಗೂ ಕ್ರೆಫೆಲ್ಡ್‌ ನಗರಗಳಲ್ಲಿರುವ ಎರಡು ಘಟಕಗಳಿಗೆ ಭೇಟಿ ನೀಡಿದ್ದೇವೆ. ಇಲ್ಲಿ ವಿದ್ಯುತ್‌ ಉತ್ಪಾದನೆಗೆ ಕಸವನ್ನು ಸುಡುವ ಬಳಿಕ ಉಳಿಯುವ ಬೂದಿಯನ್ನು ರಸ್ತೆ ಡಾಂಬರೀಕರಣಕ್ಕೆ ಬಳಸುತ್ತಾರೆ. ಕಬ್ಬಿಣದ ಅಂಶವಿರುವ ವಸ್ತುಗಳನ್ನು ಬೇರ್ಪಡಿಸಿ ಮರುಬಳಕೆ ಮಾಡುತ್ತಾರೆ’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐಸರ್ಲೋನ್‌ ಘಟಕವು ವರ್ಷಕ್ಕೆ 1.5 ಲಕ್ಷ ಮೆಗಾವಾಟ್‌ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕ್ರೆಫೆಲ್ಡ್‌ ಘಟಕಕ್ಕೆ ಸುಮಾರು 35 ವರ್ಷಗಳ ಇತಿಹಾಸವಿದೆ. 1975ರಲ್ಲೇ ಈ ಘಟಕ ಆರಂಭವಾಗಿತ್ತು. ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನ ಘಟಕಕ್ಕೂ ಭೇಟಿ ನೀಡಿದ್ದೇವೆ. ಇಲ್ಲಿ ಘನತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳೆರಡನ್ನೂ ಬಳಸಲಾಗುತ್ತದೆ. ಇಲ್ಲಿ ನಿತ್ಯ 740 ಟನ್‌ ತ್ಯಾಜ್ಯವನ್ನು ವಿಲೇ ಮಾಡಲಾಗುತ್ತದೆ’ ಎಂದು ಹೇಳಿದರು.

‘ಮಿಶ್ರ ತ್ಯಾಜ್ಯ ಬೇರ್ಪಡಿಸಿ ವಿದ್ಯುತ್‌ ಉತ್ಪಾದಿಸುವ ತ್ರೀವೇಸ್ಟ್‌ ಕಂಪನಿಯ ಫ್ರಾನ್ಸ್‌ನ ಘಟಕಕ್ಕೂ ಭೇಟಿ ನೀಡಿದ್ದೇವೆ. ಈ ಘಟಕವು ನಮ್ಮ ನಗರದ ಕಸದ ಸಮಸ್ಯೆ ನಿವಾರಣೆಗೆ ಹೇಳಿ ಮಾಡಿಸಿದಂತಿದೆ.ತ್ರೀವೇಸ್ಟ್‌ ಕಂಪನಿಯು ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್‌ ಉತ್ಪಾದಿಸಲು ಮುಂದೆ ಬಂದಿದೆ. ಸಂಪತ್‌ರಾಜ್‌ ಅವರು ಮೇಯರ್‌ ಆಗಿದ್ದಾಗಲೇ ಈ ಕಂಪನಿ ಜೊತೆ ಪಾಲಿಕೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಸಚಿವ ಸಂಪುಟದ ಅನುಮತಿಯೂ ಸಿಕ್ಕಿದೆ’ ಎಂದು ಅವರು ವಿವರಿಸಿದರು.

ತ್ರೀವೇಸ್ಟ್‌ ಕಂಪನಿಯ ವಿದ್ಯುತ್‌ ಖರೀದಿ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಜೊತೆ (ಕೆಇಆರ್‌ಸಿ) ಹಾಗೂ ನಿತ್ಯ ಎಷ್ಟು ಪ್ರಮಾಣದ ಕಸವನ್ನು ಪೂರೈಸಬೇಕು ಎಂಬ ಬಗ್ಗೆ ಪಾಲಿಕೆ ಜೊತೆ ಒಪ್ಪಂದ ಮಾಡಿಕೊಳ್ಳುವುದು ಮಾತ್ರ ಬಾಕಿ ಇದೆ.

ಈ ಕಂಪನಿಗೆ ಚಿಕ್ಕನಾಗಮಂಗಲದಲ್ಲಿ ಪಾಲಿಕೆ 10 ಎಕರೆ ಜಾಗ ನೀಡಲಿದೆ. ಅಲ್ಲಿ ಘಟಕ ಸ್ಥಾಪಿಸುವ ಕೆಲಸವನ್ನು ಅವರು 2019ರ ಜನವರಿಯಿಂದಲೇ ಆರಂಭಿಸಲಿದ್ದಾರೆ. ಇದಾಗಿ ಒಂದು ವರ್ಷದ ಒಳಗೆ ಈ ಘಟಕವು ವಿದ್ಯುತ್‌ ಉತ್ಪಾದನೆ ಆರಂಭ ಮಾಡಲಿದೆ.

‘ಚಿಕ್ಕನಾಗಮಂಗಲದ ಘಟಕವು ನಿತ್ಯ 500 ಟನ್‌ ಮಿಶ್ರ ತ್ಯಾಜ್ಯವನ್ನು ವಿಲೇ ಮಾಡುವ ಸಾಮರ್ಥ್ಯ ಹೊಂದಿದೆ. ಪಾಲಿಕೆ ವತಿಯಿಂದ 300 ಟನ್‌ ತ್ಯಾಜ್ಯವನ್ನು ಒದಗಿಸಲಿದ್ದೇವೆ. ಅವರು ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರಿಂದ ನಿತ್ಯ 200 ಟನ್‌ ಕಸವನ್ನು ಪಡೆಯಲಿದ್ದಾರೆ. ನಾವು ಈ ಘಟಕಕ್ಕೆ ಯಾವುದೇ ಹೂಡಿಕೆ ಮಾಡುವುದಿಲ್ಲ. ಕಸವನ್ನು ನಾವು ಉಚಿತವಾಗಿ ನೀಡುತ್ತೇವೆ. ವಿದ್ಯುತ್‌ ಮಾರಾಟದಿಂದ ಬರುವ ಆದಾಯವು ಕಂಪನಿಗೆ ಸೇರಲಿದೆ’ ಎಂದು ಆಯುಕ್ತರು ತಿಳಿಸಿದರು.

ಹಲವು ಹಂತಗಳಲ್ಲಿ ತ್ಯಾಜ್ಯ ವಿಂಗಡಣೆ

‘ತ್ರೀವೇಸ್ಟ್‌ ಕಂಪನಿಯ ಘಟಕವು ಬಹು ಹಂತಗಳಲ್ಲಿ ತ್ಯಾಜ್ಯವನ್ನು ಬೇರ್ಪಡಿಸಲಿದೆ. ಮಿಶ್ರ ಕಸವನ್ನು ಘಟಕಕ್ಕೆ ಸುರಿದರೆ ಪ್ಲಾಸ್ಟಿಕ್‌, ಕಬ್ಬಿಣದ ಅಂಶವಿರುವ ತ್ಯಾಜ್ಯ, ಪೇಪರ್‌ಗಳು, ಹಸಿ ತ್ಯಾಜ್ಯಗಳು ಪ್ರತ್ಯೇಕಗೊಳ್ಳುತ್ತವೆ. ಮಿಶ್ರ ತ್ಯಾಜ್ಯವು ಶೇ 90ರಷ್ಟು ವಿಂಗಡಣೆಗೊಳ್ಳಲಿದೆ. ಹಸಿ ತ್ಯಾಜ್ಯವನ್ನು ಕಾಂಪೋಸ್ಟ್‌ ತಯಾರಿಗೆ ಕಂಪನಿ ಬಳಸುತ್ತದೆ. ಅದರಿಂದಲೂ ಕಂಪನಿಗೆ ಆದಾಯ ಬರಲಿದೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ಅಂಕಿ ಅಂಶ

* 10 ಮೆಗಾವಾಟ್‌ ಚಿಕ್ಕನಾಗಮಂಗಲ ಘಟಕದ ದೈನಂದಿನ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ

* ₹ 250 ಕೋಟಿ ಈ ಘಟಕ ಸ್ಥಾಪನೆಗೆ ತ್ರೀವೇಸ್ಟ್‌ ಕಂಪನಿ ಮಾಡಲಿರುವ ಹೂಡಿಕೆ

* 30 ವರ್ಷ ಚಿಕ್ಕನಾಗಮಂಗಲದಲ್ಲಿ ಪಾಲಿಕೆ ವತಿಯಿಂದ ಕಂಪನಿಗೆ ನೀಡಿರುವ ಜಾಗದ ಗುತ್ತಿಗೆ ಅವಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT