ಶನಿವಾರ, ಸೆಪ್ಟೆಂಬರ್ 21, 2019
21 °C
ನೀರು ಅಪವ್ಯಯ ತಪ್ಪಿಸಲು ಬಿಡಿಎ ಹೊಸ ಹೆಜ್ಜೆ

ಕೆಂಪೇಗೌಡ ಬಡಾವಣೆ: ಶುದ್ಧೀಕರಿಸಿದ ನೀರು ಮರುಬಳಕೆ

Published:
Updated:
Prajavani

ಬೆಂಗಳೂರು: ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ಬಗ್ಗೆ ನಗರದಲ್ಲಿ ನೀರಿನ ಅಭಾವ ತಲೆದೋರಿದಾಗಲೆಲ್ಲ ಚರ್ಚೆ ನಡೆಯುತ್ತದೆ. ಆದರೆ, ಸರ್ಕಾರಿ ವ್ಯವಸ್ಥೆಯಲ್ಲಿ ಇದರ ಅನುಷ್ಠಾನದ ಪ್ರಯತ್ನಗಳು ನಡೆದಿಲ್ಲ. ನೀರಿನ ಅಪವ್ಯಯ ತಪ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಬಾರಿ ಈ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುತ್ತಿದೆ. 

ಬಡಾವಣೆಯಲ್ಲಿ ಬಳಕೆಯಾದ ನೀರನ್ನು ಶುದ್ಧೀಕರಿಸಿ ಅದನ್ನು ಮರುಪೂರೈಕೆ ಮಾಡಲು ಬಿಡಿಎ ಮುಂದಾಗಿದೆ. ಈ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವಾಗ ನೀರುಶುದ್ಧೀಕರಿಸಿ ಮನೆ ಮನೆಗೆ ಪೂರೈಸುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

‘ಈ ಬಡಾವಣೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದ ಬಳಿಕ ನಿತ್ಯ 15 ಕೋಟಿ ಲೀಟರ್‌ ಕಾವೇರಿ ನೀರಿಗೆ ಬೇಡಿಕೆ ಸೃಷ್ಟಿಯಾಗಬಹುದು ಎಂದು ಅಂದಾಜಿಸಿದ್ದೇವೆ. ಮನೆ ಬಳಕೆ ಬಳಿಕ ಒಳಚರಂಡಿಯನ್ನು ಸೇರುವ ಈ ನೀರನ್ನು ಎರಡು ಹಂತಗಳಲ್ಲಿ ಶುದ್ಧೀಕರಿಸಿ ಮತ್ತೆ ಮನೆಗಳಿಗೆ ಪೂರೈಸುತ್ತೇವೆ’ ಎಂದು ಬಿಡಿಎ ಕಾರ್ಯಪಾಲಕ ಎಂಜಿನಿಯರ್‌ ಸತೀಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಳಚೆ ನೀರಿನ ಶುದ್ಧೀಕರಣಕ್ಕಾಗಿ ಬಡಾವಣೆಯ ಪ್ರತಿ ಬ್ಲಾಕ್‌ನಲ್ಲೂ ತಲಾ ಒಂದು ಎಸ್‌ಟಿಪಿ ನಿರ್ಮಿಸಲಿದ್ದೇವೆ. ಈ ಘಟಕ ನಿತ್ಯ 15 ಲಕ್ಷ ಲೀಟರ್‌ ನೀರನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಕ್ರಮೇಣ ಬಡಾವಣೆಯಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರಿನ ಪ್ರಮಾಣ ಹೆಚ್ಚಾದರೆ, ಮೆಂಬ್ರೇನ್‌ ಬಯೊರಿಯಾಕ್ಟರ್‌ (ಎಂಬಿಆರ್‌) ತಂತ್ರಜ್ಞಾನ ಬಳಸಿ ಇವುಗಳ ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸುವುದಕ್ಕೂ ಅವಕಾಶ ಇದೆ’ ಎಂದು ವಿವರಿಸಿದರು.

ಜೋಡಿ ಕೊಳವೆ: ‘ಪ್ರತಿ ಮನೆಗೆ ಕಾವೇರಿ ನೀರು ಹಾಗೂ ಶುದ್ಧೀಕರಿಸಿದ ಕೊಳಚೆ ನೀರು ಪೂರೈಸಲು ಜೋಡಿಕೊಳವೆ ಅಳವಡಿಸಲಾಗುತ್ತದೆ. ಇದಕ್ಕೆ ಹೈಡೆನ್ಸಿಟಿ ಪಾಲಿ ಇಥಿಲೀನ್‌ (ಎಚ್‌ಡಿಪಿಇ) ಪೈಪ್‌ಗಳನ್ನು ಬಳಸುತ್ತೇವೆ.  ಮನೆಯ ಕೊಳಚೆ ನೀರನ್ನು ಒಳಚರಂಡಿ ವ್ಯವಸ್ಥೆಗೆ ಸೇರಿಸಲು ಪ್ರತ್ಯೇಕ ಕೊಳವೆ ಜಾಲ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಬಡಾವಣೆಯ 10 ಬ್ಲಾಕ್‌ಗಳಿಗೆ ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಪೂರೈಕೆ, ಕೊಳಚೆ ನೀರು ಶುದ್ಧೀಕರಣ, ಒಳಚರಂಡಿ ವ್ಯವಸ್ಥೆ  ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹ 1,300 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಕಾಮಗಾರಿಗಳನ್ನು ಬಿಡಿಎ ಎರಡು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿದ್ದು, ಎಲ್‌ ಆ್ಯಂಡ್‌ ಟಿ ಮತ್ತು ಎಸ್‌ಪಿಎಂಎಲ್‌ ಕಂಪನಿಗಳಿಗೆ  ಗುತ್ತಿಗೆ ನೀಡಿದೆ. ಪ್ರತಿ ಕಂಪನಿಯೂ ತಲಾ 5 ಬ್ಲಾಕ್‌ಗಳಲ್ಲಿ ಕಾಮಗಾರಿ ನಡೆಸಲಿವೆ. ಒಟ್ಟು ಮೊತ್ತದಲ್ಲಿ ಶೇ 40 ರಷ್ಟು ವೆಚ್ಚ ವಿದ್ಯುತ್‌ ಮೂಲಸೌಕರ್ಯಕ್ಕೆ ಬಳಕೆ ಆಗಲಿದೆ. ಕುಡಿಯುವ ನೀರು ಹಾಗೂ ಶುದ್ಧೀಕರಿಸಿದ ನೀರು ಪೂರೈಕೆಗೆ ಶೇ 30ರಷ್ಟು ಹಾಗೂ ಒಳಚರಂಡಿ ವ್ಯವಸ್ಥೆ ಜಾಲಕ್ಕೆ ಶೇ 30ರಷ್ಟು ಅನುದಾನ ಬಳಕೆ ಆಗಲಿದೆ.

‘ಶುದ್ಧೀಕರಿಸಿದ ನೀರನ್ನು ಮನೆಗಳಿಗೆ ಪೂರೈಸುವ ಕೊಳವೆ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಎಸ್‌ಟಿಪಿ ನಿರ್ಮಾಣ ಇನ್ನಷ್ಟೇ ಆರಂಭವಾಗಬೇಕಿದೆ. ಎಸ್‌ಟಿಪಿ ನಿರ್ಮಾಣಕ್ಕೆ ಕೆಲವೆಡೆ ಜಾಗದ ಕೊರತೆ ಇತ್ತು.  ಕೆರೆ ಮತ್ತು ರಾಜಕಾಲುವೆಗಳ ಮೀಸಲು ಪ್ರದೇಶಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಹಿಂದೆ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಹಾಗಾಗಿ ಈ ಹಿಂದೆ ಮೀಸಲು ಪ್ರದೇಶಗಳಿಗೆ ಜಾಗ ಗುರುತಿಸಿದ್ದ ಕಡೆ ಹೆಚ್ಚುವರಿ ಜಮೀನು ಲಭ್ಯವಾಗಿದೆ. ಇಲ್ಲಿ ಎಸ್‌ಟಿಪಿ ನಿರ್ಮಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘10 ವರ್ಷ ಗುತ್ತಿಗೆದಾರರಿಂದಲೇ ನಿರ್ವಹಣೆ’
ಶುದ್ಧೀಕರಿಸಿದ ನೀರು ಪೂರೈಕೆ ವ್ಯವಸ್ಥೆಯ ಕಾಮಗಾರಿ ಪೂರ್ಣಗೊಂಡ ಬಳಿಕ  ಗುತ್ತಿಗೆದಾರ ಕಂಪನಿಗಳೇ 10 ವರ್ಷಗಳವರೆಗೆ ಅದರ ನಿರ್ವಹಣೆ ಮಾಡಬೇಕು. ಆ ಬಳಿಕ ಬಳಕೆ ಯೋಗ್ಯ ಸ್ಥಿತಿಯಲ್ಲಿ ಅದನ್ನು ಹಸ್ತಾಂತರಿಸಬೇಕು ಎಂಬ ಷರತ್ತುಗಳನ್ನು ಬಿಡಿಎ ವಿಧಿಸಿದೆ.

‘30 ವರ್ಷಗಳಲ್ಲಿ ಆಗುವ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಕಲ್ಪಿಸುತ್ತಿದ್ದೇವೆ. ನಂತರ ತಂತ್ರಜ್ಞಾನಗಳಲ್ಲಿ ಏನಾದರೂ ಸುಧಾರಣೆಗಳಾದರೆ ಅದನ್ನು ಅಳವಡಿಸಿಕೊಳ್ಳುವುದಕ್ಕೂ ಅವಕಾಶ ಇಟ್ಟುಕೊಂಡಿದ್ದೇವೆ’ ಎಂದು ಕಾರ್ಯಪಾಲಕ ಎಂಜಿನಿಯರ್‌ ವಿವರಿಸಿದರು.

‘ಮನೆಗೆ ಪೂರೈಕೆ ಆಗುವುದು ಶೇ 30ರಷ್ಟು ಮಾತ್ರ’
‘ಶುದ್ಧೀಕರಿಸಿದ ನೀರಿನಲ್ಲಿ ಶೇ 30ರಷ್ಟನ್ನು ಮಾತ್ರ ಮನೆಗಳಿಗೆ ಪೂರೈಸಲಾಗುತ್ತದೆ. ಎರಡು ಹಂತಗಳಲ್ಲಿ ಶುದ್ಧೀಕರಣಗೊಂಡಿರುವ ಈ ನೀರನ್ನು ಕುಡಿಯುವ ಉದ್ದೇಶವನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಉಪಯೋಗಿಸಬಹುದು. ಉದ್ಯಾನಗಳಿಗೆ, ವಾಹನ ತೊಳೆಯಲು, ಕಟ್ಟಡ ನಿರ್ಮಾಣ ಮತ್ತಿತರ ಕಾರ್ಯಗಳಿಗೆ ಬಳಸಬಹುದು’ ಎಂದು ಸತೀಶ್‌ ಕುಮಾರ್‌ ತಿಳಿಸಿದರು.

‘ಉಳಿದ ಶೇ 70ರಷ್ಟು ನೀರನ್ನು ಈ ಬಡಾವಣೆಯ ಕೆರೆಗಳಿಗೆ ಬಿಡುತ್ತೇವೆ.  ಬಡಾವಣಿಯಲ್ಲಿ ನಿರ್ಮಿಸುವ ಉದ್ಯಾನಗಳಿಗೆ ಪೂರೈಸುತ್ತೇವೆ. ರಾಜಕಾಲುವೆಗಳ ಪಕ್ಕದ ಮೀಸಲು ಪ್ರದೇಶದಲ್ಲೂ ಹಸಿರು ಬೆಳೆಸುವ ಯೋಜನೆ ಇದ್ದು, ಅದಕ್ಕೂ ಶುದ್ಧೀಕರಿಸಿದ ಕೊಳಚೆ ನೀರನ್ನೇ ಬಳಕೆ ಮಾಡ
ಲಾಗುವುದು’ ಎಂದರು.

‘ಸಮರ್ಥ ನಿರ್ವಹಣೆಯೂ ಅಗತ್ಯ’
‘ಬಳಸಿದ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವುದು ಒಳ್ಳೆಯದೇ. ಕೆಂಪೇಗೌಡ ಬಡಾವಣೆಯಲ್ಲಿ ಈ ಪ್ರಯತ್ನ ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ, ನೀರಿನ ಶುದ್ಧೀಕರಣ ವ್ಯವಸ್ಥೆಯ ಸಮರ್ಥ ನಿರ್ವಹಣೆಯ ಬಗ್ಗೆಯೂ ಬಿಡಿಎ ಕಾಳಜಿ ವಹಿಸಬೇಕು’ ಎಂದು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ಶ್ಯಾಮ್‌ ಅಭಿಪ್ರಾಯಪಟ್ಟರು.

‘ಒಮ್ಮೆ ಶುದ್ಧೀಕರಿಸಿ ಬಳಸಿದ ನೀರನ್ನು ಮತ್ತೆ ಮತ್ತೆ ಎಷ್ಟು ಬಾರಿ ಶುದ್ಧೀಕರಿಸಿ ಬಳಸಬಹುದು ಎಂಬ ಬಗ್ಗೆ ಗೊಂದಲ ಇದೆ. ಜನರಲ್ಲಿರುವ ಇಂತಹ ಗೊಂದಲ ನಿವಾರಿಸಲು ಬಿಡಿಎ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ನೀರನ್ನು ಶುದ್ಧೀಕರಿಸುವ ಪ್ರಕ್ರಿಯೆಗೆ ಕೊನೆ ಎಂಬುದಿಲ್ಲ. ಅದೇ ನೀರನ್ನು ಎಷ್ಟು ಬಾರಿ ಬೇಕಾದರೂ ಶುದ್ಧೀಕರಿಸಬಹುದು. ಕುಡಿಯುವ ಉದ್ದೇಶಕ್ಕೆ ಪೂರೈಸುವ ಕಾವೇರಿ ನೀರು ಈ ವ್ಯವಸ್ಥೆಯನ್ನು ಸೇರಿಕೊಳ್ಳುತ್ತಲೇ ಇರುತ್ತದೆ. ಹಾಗಾಗಿ ಈ ಪ್ರಕ್ರಿಯೆ ಹೆಚ್ಚು ಬಾರಿ ಪುನರಾವರ್ತನೆ ಆಗುವುದಿಲ್ಲ’ ಎಂದು ಕಾರ್ಯಪಾಲಕ ಎಂಜಿನಿಯರ್ ವಿವರಿಸಿದರು.

Post Comments (+)