ಭಾನುವಾರ, ಮೇ 16, 2021
22 °C
ಭಾರತೀಯ ವಿಜ್ಞಾನ ಸಂಸ್ಥೆಯಿಂದ ಹೈಕೋರ್ಟ್‌ಗೆ ವರದಿ ಸಲ್ಲಿಕೆ

‘ಕೋಲಾರದ ಕೆರೆಗಳ ನೀರಿನಲ್ಲಿ ಅಧಿಕ ಲೋಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕೆ.ಸಿ. ವ್ಯಾಲಿ ಯೋಜನೆಯ ಮೂಲಕ ಕೋಲಾರದ ಕೆರೆಗಳಿಗೆ ಬೆಳ್ಳಂದೂರು ಚರಂಡಿ ಸಂಸ್ಕರಣಾ ಘಟಕದಿಂದ (ಎಸ್‌ಟಿಪಿ) ಬಿಡುತ್ತಿರುವ ನೀರಿನಲ್ಲಿ ಅಧಿಕ ಪ್ರಮಾಣದ ಲೋಹದ ಅಂಶಗಳು ಇವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ನೀಡಿದ ವರದಿಯಲ್ಲಿ ಬಹಿರಂಗಗೊಂಡಿದೆ.

ಐಐಎಸ್‌ಸಿಯ ಸಂಶೋಧಕ ಟಿ.ವಿ ರಾಮಚಂದ್ರ ಅವರನ್ನು ಒಳಗೊಂಡ ತಂಡ ವರದಿ ಸಿದ್ಧಪಡಿಸಿ ಶುಕ್ರವಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಬೇರೆ ಬೇರೆ ಕೆರೆಗಳಲ್ಲಿ ನೀರಿನ ಮಾದರಿಯನ್ನು ಮೊದಲೇ ಸಂಗ್ರಹಿಸಲಾಗಿತ್ತು. ಕೋಲಾರದ ಲಕ್ಷ್ಮೀಸಾಗರ ಹಾಗೂ ನರಸಾಪುರ ಕೆರೆಗಳಲ್ಲಿ ಮಿತಿಗಿಂತ ಹೆಚ್ಚಿನ ಲೋಹದ ಅಂಶಗಳು ಕಂಡುಬಂದಿವೆ ಎಂಬ ಅಂಶ ವರದಿಯಲ್ಲಿದೆ.

ಕೆ.ಸಿ. ವ್ಯಾಲಿಯ ಎರಡು ಎಸ್‌ಟಿಪಿ ಘಟಕಗಳಿಂದ (ಚರಂಡಿ ನೀರು ಸಂಸ್ಕರಣಾ ಘಟಕ) ಬಿಡಲಾಗುವ ನೀರಿನಲ್ಲಿ ಕ್ರೋಮಿಯಂ, ಕೋಬಾಲ್ಟ್‌, ಕಾಪರ್‌, ಜಿಂಕ್‌, ಕ್ಯಾಡ್ಮಿಯಂ ಸೇರಿದಂತೆ ಆರು ಲೋಹದ ಅಂಶಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಿರುವುದನ್ನು ವರದಿಯಲ್ಲಿ ಹೇಳಲಾಗಿದೆ.

ಅಧಿಕ ಲೋಹದ ಅಂಶಗಳು ಆಹಾರ ಸರಪಳಿ ಮೂಲಕ ಆರೋಗ್ಯದ ಅಪಾಯಗಳನ್ನು ತಂದೊಡ್ಡಲಿವೆ ಎಂದು ಕೂಡ ಎಚ್ಚರಿಸಲಾಗಿದೆ.

₹ 1,300 ಕೋಟಿ ವೆಚ್ಚದಲ್ಲಿ ಕೆ.ಸಿ. ವ್ಯಾಲಿ ಏತ ನೀರಾವರಿ ಯೋಜನೆಯನ್ನು ಆರಂಭಿಸಲಾಗಿತ್ತು. ಬೆಳ್ಳಂದೂರು ಎಸ್‌ಟಿಪಿ ಘಟಕದಿಂದ ಸಂಸ್ಕರಿಸಿದ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 126 ಟ್ಯಾಂಕ್‌ ಮತ್ತು ಕೆರೆಗಳಿಗೆ ಸಾಗಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶ ಹೊಂದಿತ್ತು. ಇದರಿಂದ ಪ್ರತಿದಿನಕ್ಕೆ 15 ಕೋಟಿಯಿಂದ 18 ಕೋಟಿ ಲೀಟರ್‌ ಸಂಸ್ಕರಿಸಿದ ನೀರು 55 ಕಿ.ಮೀ ಉದ್ದದ ಪೈಪ್‌ಲೈನ್‌ನಲ್ಲಿ ಸಾಗಿಸಲು ಸೌಲಭ್ಯ ಕಲ್ಪಿಸಲಾಗಿದೆ. ಈ ನೀರನ್ನು ಮೀನುಗಾರಿಕೆ ಹಾಗೂ ಕೃಷಿಗೆ ಬಳಸುವ ಉದ್ದೇಶ ಇದೆ. ಆದರೆ ಲಕ್ಷ್ಮೀಸಾಗರ ಕೆರೆಗೆ ಸಂಪರ್ಕ ನೀಡುವ ಕಾಲುವೆಯಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ.

ಬೆಳ್ಳಂದೂರಿನಿಂದ ಭಾಗಶಃ ಸಂಸ್ಕರಿಸಿದ ತ್ಯಾಜ್ಯದ ನೀರು ಕೋಲಾರದ ಕೆರೆಗೆ ತಲುಪಿದ ಬಳಿಕ ನೊರೆಯಾಗಿ ಬದಲಾಗುತ್ತಿದೆ. ಜಲವಾಸಿಗಳು ಹಾಗೂ ಮಾನವನಿಗೆ ಇದು ಹಾನಿ ಮಾಡುತ್ತದೆ ಎಂಬ ಅಂಶಗಳು ವರದಿಯಲ್ಲಿ ಇವೆ.

ಗೃಹ ಬಳಕೆಗೆ ಉಪಯೋಗಿಸಿದ ನೀರು ನರಸಾಪುರ ಕೆರೆಯನ್ನು ತಲುಪುತ್ತಿದೆ. ಈ ನೀರನ್ನು ಮತ್ತೆ ಬಳಸಿದರೆ ಇದು ವಿಷಕಾರಿ ಸಸ್ಯಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದ ಯಕೃತ್ತು ಹಾಗೂ ಜೀವಕೋಶಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತದೆ.

ವಕೀಲ ಪ್ರಿನ್ಸ್‌ ಐಸಾಕ್‌, ‘ಕೋಲಾರದ ಕೆರೆಗಳ ನೀರಿನ ಮಾದರಿಯನ್ನು ಪರೀಕ್ಷಿಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ವರದಿಯಲ್ಲಿ ಏನಾದರೂ ಬದಲಾವಣೆ ಇದ್ದರೆ, ಮುಂದಿನ ತೀರ್ಮಾನಕ್ಕೆ ಚಿಂತಿಸಲಿದೆ’ ಎಂದರು.

‘ಮುಂದಿನ ಮೂರು ವಾರಗಳ ಬಳಿಕ ಅಂತಿಮ ತೀರ್ಪು ನೀಡಲಿದೆ’ ಎಂದು ಅವರು ಮಾಹಿತಿ ನೀಡಿದರು.

**

ವಿವಿಧ ಲೋಹಗಳು ಹೆಚ್ಚುವುದರಿಂದ ಆಗುವ ದುಷ್ಪರಿಣಾಮ

ಕ್ರೋಮಿಯಂ: ಉಸಿರಾಟದ ತೊಂದರೆ, ಚರ್ಮದ ಅಲರ್ಜಿ, ಕಣ್ಣಿಗೆ ಹಾನಿ

ಕೋಬಾಲ್ಟ್‌: ಯಕೃತ್ತಿಗೆ ಹಾನಿ, ಆಸ್ತಮಾ ಸಾಧ್ಯತೆ

ಕಾಪರ್‌: ವಾಂತಿ, ಅತಿಸಾರ, ಕಿಡ್ನಿ ತೊಂದರೆ

ಜಿಂಕ್‌: ಮಾಂಸ ಖಂಡಗಳ ನೋವು, ವಾಕರಿಕೆ

ಕ್ಯಾಡ್ಮಿಯಂ: ಕಿಡ್ನಿಗೆ ಹಾನಿ, ಮೂಳೆಗಳ ತೊಂದರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು