ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಜೋರು ಮಳೆ: ಉರುಳಿದ ಮರ

ರಸ್ತೆಯಲ್ಲಿ ಹರಿದ ನೀರು; 2 ಕಾರು, 5 ಬೈಕ್‌ ಜಖಂ * ಇಬ್ಬರು ಮಹಿಳೆಯರಿಗೆ ತೀವ್ರ ಗಾಯ
Last Updated 7 ಮೇ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಗಾಳಿ ಸಹಿತ ಧಾರಾಕಾರ ಮಳೆ ಸುರಿದು, 12ಕ್ಕೂ ಹೆಚ್ಚು ಕಡೆ ಮರಗಳು ಉರುಳಿಬಿದ್ದಿವೆ. ಗಾಯತ್ರಿನಗರದಲ್ಲಿ ಮರದಕೊಂಬೆಯಡಿ ಸಿಲುಕಿ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬಸವೇಶ್ವರನಗರ, ಗಾಯತ್ರಿನಗರ ಹಾಗೂ ಲಾಲ್‌ಬಾಗ್‌ ಮೆಟ್ರೊ ನಿಲ್ದಾಣ ಬಳಿ ವಾಹನಗಳ ಮೇಲೆಯೇ ಮರ ಉರುಳಿಬಿದ್ದಿದ್ದು, ಎರಡು ಕಾರು ಹಾಗೂ ಐದು ಬೈಕ್‌ಗಳು ಜಖಂಗೊಂಡಿವೆ. ಕಾರು ಚಾಲಕರು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ಮಹಿಳೆಯರಿಗೆ ಗಾಯ: ‘ಸ್ಥಳೀಯ ನಿವಾಸಿ ಪೂಜಾ, ಅಕ್ಷಯ ತೃತೀಯ ನಿಮಿತ್ತ ಚಿನ್ನ ಖರೀದಿಸಲೆಂದು ಗಾಯತ್ರಿನಗರದ ಮುಖ್ಯರಸ್ತೆ ಬಳಿಯ ಕಾಮಾಕ್ಷಿ ಆಭರಣ ಮಳಿಗೆಗೆ ಬಂದಿದ್ದರು. ಅದೇ ವೇಳೆ ಜೋರು ಮಳೆ ಸುರಿಯುತ್ತಿತ್ತು. ರಸ್ತೆ ಪಕ್ಕದಲ್ಲಿ ಬೈಕ್‌ ನಿಲ್ಲಿಸಿ ಮಳಿಗೆಯೊಳಗೆ ಹೋಗುವಾಗ ಅವರ ಮೇಲೆ ಮರದ ಕೊಂಬೆ ಬಿದ್ದಿತ್ತು’ ಎಂದು ಗಾಯತ್ರಿ ನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಚಂದ್ರಕಲಾ ಗಿರೀಶ್ ಲಕ್ಕಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೊಂಗೆಗಳ ಕೆಳಗೆ ಸಿಲುಕಿದ್ದ ಪೂಜಾ ಹಾಗೂ ಇನ್ನೊಬ್ಬ ಮಹಿಳೆಯನ್ನು ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಪೂಜಾ, ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬ ಮಹಿಳೆ, ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ಬಿಬಿಎಂಪಿ ಸಿಬ್ಬಂದಿ ರಾತ್ರಿಯೇ ಮರ ತೆರವುಗೊಳಿಸಿದರು’ ಎಂದು ಹೇಳಿದರು.

ರಾಜಧಾನಿಯಲ್ಲಿ ಜೋರು ಮಳೆ: ಉರುಳಿದ ಮರ

ಸಿಡಿಲು– ಗುಡುಗು ಆರ್ಭಟ: ನಗರದಲ್ಲಿ ಮಧ್ಯಾಹ್ನವೇ ಮೋಡ ಕವಿದ ವಾತಾವರಣ ಮಳೆಯ ಮುನ್ಸೂಚನೆ ನೀಡಿತ್ತು. ಸಿಡಿಲು, ಗುಡುಗು ಸಹಿತ ಸಂಜೆಯ ವೇಳೆಗೆ ಜಿಟಿ ಜಿಟಿಯಾಗಿ ಮಳೆ ಶುರುವಾಯಿತು. ಕ್ರಮೇಣ ಮಳೆಯ ಆರ್ಭಟ ಹೆಚ್ಚಾಗಿ ಹನಿಗಳ ಸದ್ದು ಜೋರಾಯಿತು.

ಎಚ್‌ಎಸ್‌ಆರ್ ಲೇಔಟ್, ಮಡಿವಾಳ,ಕುಮಾರಸ್ವಾಮಿ ಲೇಔಟ್, ಗಿರಿನಗರ, ಬನಶಂಕರಿ, ಪದ್ಮನಾಭನಗರ, ಚಾಮರಾಜಪೇಟೆ, ಬಸವನಗುಡಿ, ರಾಜಾಜಿನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಪೀಣ್ಯ, ದಾಸರಹಳ್ಳಿ, ನಾಗಸಂದ್ರ, ವಿದ್ಯಾರಣ್ಯಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಧಾರಾಕಾರ ಮಳೆ ಆಯಿತು.

ಅಲ್ಲೆಲ್ಲ ಕಾಲುವೆಗಳು ತುಂಬಿ ರಸ್ತೆಯಲ್ಲೇ ನೀರು ಹರಿಯಿತು. ಕೆಲವೆಡೆ ಕೆಳಸೇತುವೆಗಳಲ್ಲೂ ನೀರು ಹರಿಯುತ್ತಿದ್ದ ದೃಶ್ಯ ಕಂಡುಬಂತು.ಚೊಕ್ಕಸಂದ್ರ, ಬಸವೇಶ್ವರನಗರ, ರಾಜಾಜಿನಗರದ ಟಿವಿಎಸ್ ಲೇಔಟ್‌ನ ಸುರಾನ್ ಕಾಲೇಜು, ಸಂಜಯನಗರ,ಪೀಣ್ಯದ ಎನ್‌ಟಿಟಿಎಫ್ ವೃತ್ತ, ಬಸವನಗುಡಿ, ಆರ್‌ಎಂಸಿ ಆಸ್ಪತ್ರೆ, ಹಲಸೂರು ಹಾಗೂ ಬಾಗಲಗುಂಟೆ ಎಂಇಐ ಲೇಔಟ್‌ ಬಳಿ ಮರಗಳು ಉರುಳಿಬಿದ್ದವು. ಇದರಿಂದ ಆ ಮಾರ್ಗಗಳಲ್ಲಿ ಕೆಲ ಹೊತ್ತು ವಾಹನಗಳ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು. ನಂತರ ಸಂಚಾರ ಸ್ಥಿತಿ ಯಥಾಸ್ಥಿತಿಗೆ ತಲುಪಿತು.

ರಾಜಧಾನಿಯಲ್ಲಿ ಜೋರು ಮಳೆ: ಉರುಳಿದ ಮರ

'ಮರಗಳು ಉರುಳಿದ್ದು ಬಿಟ್ಟರೆ ಬೇರೆ ಯಾವ ರೀತಿಯ ಅವಘಡಗಳ ಬಗ್ಗೆ ಕರೆಗಳು ಬಂದಿಲ್ಲ. ಕೆಲೆವೆಡೆ ಕಾಲುವೆಗಳಲ್ಲಿ ಹೂಳು ತುಂಬಿದ್ದರಿಂದ, ರಸ್ತೆ ಮೇಲೆಯೇ ನೀರು ಹರಿದಿದೆ. ಆ ಬಗ್ಗೆ ಬಂದಿದ್ದ ದೂರುಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.

ಹಾರಿದ ತಗಡು: ನಾಗಸಂದ್ರ ಸಮೀಪದ ವಿನಾಯಕ ನಗರದಲ್ಲಿ ಗಾಳಿ ಜೋರಾಗಿ ಬೀಸಿದ್ದರಿಂದ, ಕೆಲ ಮನೆಗಳ ಚಾವಣಿಗೆ ಅಳವಡಿಸಿದ್ದ ತಗಡುಗಳು ಹಾರಿಹೋಗಿವೆ’ ಎಂದು ನಿವಾಸಿಗಳು ತಿಳಿಸಿದರು.

ವಿದ್ಯುತ್ ಸಂಪರ್ಕ ಕಡಿತ

ಮಳೆ ಸುರಿಯುತ್ತಿದ್ದ ವೇಳೆ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ ಆಯಿತು. ಅದರಿಂದಾಗಿ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ರಾಜಾಜಿನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಪೀಣ್ಯ, ದಾಸರಹಳ್ಳಿ, ನಾಗಸಂದ್ರ ಹಾಗೂ ಸುತ್ತಮುತ್ತ ಕೆಲ ಪ್ರದೇಶಗಳಲ್ಲಿ ರಾತ್ರಿ 8 ಗಂಟೆಯಿಂದ ತಡರಾತ್ರಿಯವರೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT