ಮಂಗಳವಾರ, ಏಪ್ರಿಲ್ 7, 2020
19 °C
Bmtc- free driving for ladies

ಅವಳಿಗೆ ಬಿಎಂಟಿಸಿ ‘ನಿರ್ಭಯಾ’

ಮಂಜುಶ್ರೀ ಎಂ. ಕಡಕೋಳ, ಚಿತ್ರಗಳು–ಚಂದ್ರಹಾಸ ಕೋಟೆಕಾರ್ Updated:

ಅಕ್ಷರ ಗಾತ್ರ : | |

‘ನಿತ್ಯವೂ ಮಕ್ಕಳಿಗೆ ಶಾಲೆಗೆ ಬಿಡಬೇಕೆಂದರೆ ಯಜಮಾನ್ರಿಗೆ ಕೇಳಬೇಕಿತ್ತು. ಇತರ ಮಹಿಳೆಯರು ಸ್ಕೂಟರ್, ಕಾರಿನಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕರೆದು ತರುವುದು ನೋಡುತ್ತಿದ್ದೆ. ಮನೆಯಲ್ಲಿ ಸ್ವಂತ ಕಾರಿದ್ದರೂ ಗಾಡಿ ಓಡಿಸಲು ಬರುತ್ತಿರಲಿಲ್ಲ. ಹೊರಗೆ ಡ್ರೈವಿಂಗ್ ಕಲಿಯಬೇಕೆಂದರೆ ಹೆಚ್ಚು ಹಣ ವ್ಯಯಿಸಬೇಕಿತ್ತು. ಆದರೆ, ಈಗ ಬಿಎಂಟಿಸಿಯ ‘ನಿರ್ಭಯಾ’ ಯೋಜನೆಯಡಿ ಉಚಿತವಾಗಿ ನಾನೂ ಕಾರು ಡ್ರೈವಿಂಗ್ ಕಲಿತೆ. ಇನ್ಮುಂದೆ ಯಾರ ಸಹಾಯವೂ ಇಲ್ಲದೇ ನಾನೇ ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡಬಹುದು, ಥ್ಯಾಂಕ್ಸ್ ಟು ಬಿಎಂಟಿಸಿ’

–ಹಾಗೆಂದು ವಿಲ್ಸನ್‌ ಗಾರ್ಡನ್ ನಿವಾಸಿ, ಗೃಹಿಣಿ ಮಂಜುಳಾ ಹೇಳುತ್ತಿದ್ದರೆ ಅವರ ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಸಣ್ಣಪುಟ್ಟ ಕೆಲಸಗಳಿಗೆ ಹೊರಗೆ ಹೋಗಬೇಕೆಂದರೆ ಆಟೋ, ಓಲಾ, ಉಬರ್‌ಗೆ ಮೊರೆ ಹೋಗುತ್ತಿದ್ದ ಅವರೀಗ ಸ್ವಂತ ಕಾರಿನಲ್ಲಿ ಎಂಥಾ ಟ್ರಾಫಿಕ್‌ ತಾವೇ ಡ್ರೈವ್ ಮಾಡಿಕೊಂಡು ಹೋಗುವಷ್ಟು ಅವರೀಗ ಸಮರ್ಥರು.

ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಬಿಎಂಟಿಸಿ ‘ನಿರ್ಭಯಾ’ ಯೋಜನೆಯಡಿ ಚಾಲನಾ ತರಬೇತಿಯನ್ನು ಹಮ್ಮಿಕೊಂಡಿದ್ದು, ಇದಕ್ಕೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ನಿರ್ಭಯಾ’ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಒಟ್ಟು ಒಂದು ಸಾವಿರ ಮಹಿಳೆಯರಿಗೆ ಭಾರಿ ವಾಹನ ಮತ್ತು ಲಘು ವಾಹನ ಚಾಲನಾ ತರಬೇತಿ ನೀಡುವ ಗುರಿ ಹೊಂದಿದ್ದು, 120 ಮಹಿಳೆಯರು ತರಬೇತಿಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ 12 ಮಂದಿ ಭಾರಿ ವಾಹನ ತರಬೇತಿ ಮತ್ತು 108 ಮಂದಿ ಲಘು ವಾಹನ ತರಬೇತಿಗೆ ಆಯ್ಕೆಯಾಗಿದ್ದಾರೆ. 14 ಮಹಿಳೆಯರು ತರಬೇತಿ ಪೂರ್ಣಗೊಳಿಸಿದ್ದು, 15 ಮಂದಿ ವಾಹನ ತರಬೇತಿ ಪಡೆಯುತ್ತಿದ್ದಾರೆ.

ಕೇಂದ್ರ (ಶೇ 60) ಮತ್ತು ರಾಜ್ಯ ಸರ್ಕಾರದ (ಶೇ 40) ಸಹಭಾಗಿತ್ವದಲ್ಲಿ ನಡೆಯುತ್ತಿರುವ ‘ನಿರ್ಭಯಾ’ ಯೋಜನೆಯಲ್ಲಿ ಒಟ್ಟು ₹ 7.5 ಕೋಟಿ ಹಣ ಮೀಸಲಿಡಲಾಗಿದೆ. ಮಾಗಡಿ ರಸ್ತೆಯ ವಡ್ಡರಹಳ್ಳಿ ಮತ್ತು ಶಾಂತಿನಗರದಲ್ಲಿ ಎರಡು ಬ್ಯಾಚ್‌ಗಳಲ್ಲಿ ವಾಹನ ತರಬೇತಿ ನೀಡಲಾಗುತ್ತಿದೆ.

ಬಿಎಂಟಿಸಿಯಲ್ಲಿ ವಾಹನ ತರಬೇತಿ ಪಡೆದ ಬಹುತೇಕ ಮಹಿಳೆಯರು ಬಿಎಂಟಿಸಿ ಇಲ್ಲವೇ ಕೆಎಸ್ಆರ್‌ಟಿಸಿಯಲ್ಲಿ ಚಾಲಕಿಯಾಗಿ ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ ಬಿಎಂಟಿಸಿಯಲ್ಲಿ ಒಬ್ಬರೇ ಮಹಿಳಾ ಚಾಲಕಿ ಇದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ವಾಹನ ತರಬೇತಿಗೆ ಅರ್ಜಿ ಸಲ್ಲಿಸಲು ಶಾಂತಿನಗರದ ಬಿಎಂಟಿಸಿ ಕಚೇರಿಗೆ ಬಂದಿದ್ದ ಕಗ್ಗಲೀಪುರದ ಲಲಿತಾ ಮಾತನಾಡಿ, ‘ಸರ್ಕಾರ ಈ ರೀತಿಯ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಮಹಿಳೆಯರು ಹೊರಗೆ ₹ 5 ಸಾವಿರದಷ್ಟು ಮೊತ್ತ ಪಾವತಿಸಿ ವಾಹನ
ಚಾಲನೆ ಕಲಿಯಬೇಕಿತ್ತು. ಆದರೆ, ‘ನಿರ್ಭಯಾ’ ಯೋಜನೆಯ ಅಡಿ ಸರ್ಕಾರವೇ ಉಚಿತವಾಗಿ ವಾಹನ ಚಾಲನೆ ತರಬೇತಿಯ ಜೊತೆಗೆ ಚಾಲನಾ ಪರವಾನಗಿ ಪತ್ರವನ್ನು ನೀಡುತ್ತಿರುವುದು ಅನೇಕರಿಗೆ ಉಪಯೋಗವಾಗುತ್ತಿದೆ. ಇಲ್ಲಿ ಚಾಲನ ತರಬೇತಿ ಪಡೆದ ನಂತರ ನಾನು ಸ್ವಉದ್ಯೋಗ ಮಾಡುವ ಇಚ್ಛೆ ಹೊಂದಿದ್ದೇನೆ’ ಎಂದು ತಮ್ಮ ಸ್ವಾವಲಂಬನೆಯ ಕನಸು ಹಂಚಿಕೊಂಡರು.

‘ಬಿಎಂಟಿಸಿಯ ಈ ಯೋಜನೆ ಮಹಿಳೆಯರಿಗೆ ಉಪಯುಕ್ತವಾಗಿದೆ. ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿ ಪಡೆದವರು ಸ್ವಾವಲಂಬಿಗಳಾಗಿ ಜೀವನ ಸಾಗಿಸಬಹುದು’ಎನ್ನುತ್ತಾರೆ ಶ್ರೀನಿವಾಸ ನಗರದ ಕಾಲೇಜು ವಿದ್ಯಾರ್ಥಿನಿ ಭಾವನಾ ಬಿ.ಕೆ.

‘ಟ್ರಾಫಿಕ್ ನಡುವೆಯೇ ನಮಗೆ ಚಾಲನಾ ತರಬೇತಿ ನೀಡಲಾಗುತ್ತಿದೆ. ಇದರಿಂದಾಗಿ ನಗರದ ಸಂಚಾರ ದಟ್ಟಣೆಯ ನಡುವೆಯೂ ವಾಹನ ಚಲಾಯಿಸುವ ಆತ್ಮವಿಶ್ವಾಸ ಮೂಡುತ್ತಿದೆ. ಸಾಮಾನ್ಯವಾಗಿ ಮಹಿಳೆಯರಿಗೆ ಸುಲಭವಾಗಿ ವಾಹನ ಚಲಾಯಿಸಲು ಸಾಧ್ಯವಾಗುವುದಿಲ್ಲ ಅನ್ನುವ ಆರೋಪವಿದೆ. ಆದರೆ, ಬಿಎಂಟಿಸಿ ಒಂದು ತಿಂಗಳಲ್ಲೇ ಲಘು ವಾಹನ ಚಲಾಯಿಸುವಷ್ಟು ತರಬೇತಿ ನೀಡುತ್ತಿದೆ. ಅಷ್ಟೇ ಅಲ್ಲ ಭಾರಿ ವಾಹನ ಚಾಲನಾ ತರಬೇತಿಯನ್ನೂ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ. ಅನೇಕ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ’ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಲಘು ವಾಹನ ಚಾಲನಾ ತರಬೇತಿ ಪಡೆಯುತ್ತಿರುವ ವಿಲ್ಸನ್ ಗಾರ್ಡನ್ ನಿವಾಸಿ ಕಾಂತಪ್ರಭಾ.

‘ಈಗ ಕಾಲ ಬದಲಾಗಿದೆ. ಮಹಿಳೆ ಮತ್ತು ಪುರುಷ ಎನ್ನುವ ತಾರತಮ್ಯ ಅಷ್ಟಾಗಿ ಇಲ್ಲ. ಈಗ ಗಂಡು ಮಕ್ಕಳೂ ಅಡುಗೆ ಮಾಡುತ್ತಿದ್ದಾರೆ. ಬಿಎಂಟಿಸಿಯ ವಾಹನ ಚಾಲನಾ ತರಬೇತಿಯಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಇದೊಂದು ಒಳ್ಳೆಯ ಯೋಜನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಬಿಎಂಟಿಸಿಯ ಹಿರಿಯ ಚಾಲನಾ ಬೋಧಕ ಶೌಕತ್ ಪಾಷ.

‘ನಿರ್ಭಯಾ’ ಯೋಜನೆ ರಾಜಧಾನಿ ಮಹಿಳೆಯರಿಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ಇತರ ಜಿಲ್ಲೆಯ ಮಹಿಳೆಯರು ಇಲ್ಲಿ ವಾಹನ ಚಾಲನಾ ತರಬೇತಿ ಪಡೆಯಬಹುದು. ನಿಗದಿತ ಸಂಖ್ಯೆಯಲ್ಲಿ ಮಹಿಳೆಯರು ಬಂದರೆ ಅವರಿಗಾಗಿ ಪ್ರತ್ಯೇಕ  ವಸತಿ ಮತ್ತು ಊಟದ ಸೌಲಭ್ಯ ಮಾಡುವ ಚಿಂತನೆ ಇದೆ ಎನ್ನುತ್ತಾರೆ ಬಿಎಂಟಿಸಿ ಅಧಿಕಾರಿಗಳು.

ಸಂಪರ್ಕ ಸಂಖ್ಯೆ: 77609 91348, 77609 79980, 77609 91086.

**

‘ನಿರ್ಭಯಾ’ದಡಿ ಮತ್ತಷ್ಟು ಯೋಜನೆ

‘ನಿರ್ಭಯಾ’ ಯೋಜನೆಯಡಿ ಮಹಿಳೆಯರಿಗಾಗಿ ಬಿಎಂಟಿಸಿ ಮತ್ತಷ್ಟು ಯೋಜನೆಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಿದೆ. ಈ ಬಗ್ಗೆ ನೀಲನಕ್ಷೆ ರೂಪಿಸಲಾಗುತ್ತಿದೆ.

ಮಹಿಳಾ ಸುರಕ್ಷತೆಗಾಗಿ ಬಸ್‌ನಿಲ್ದಾಣಗಳಲ್ಲಿ ‘ವುಮೆನ್ ಲಾಂಚ್’ ಸುರಕ್ಷಿತ ಪ್ರಯಾಣಕ್ಕಾಗಿ ಮುಂಬರುವ ದಿನಗಳಲ್ಲಿ 1 ಸಾವಿರ ಬಸ್‌ಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವ ಯೋಜನೆ ಇದೆ. ಬಸ್‌ಗಳಲ್ಲಿ ಮಹಿಳೆಯರಿಗೆ ತೊಂದರೆಯುಂಟಾದಲ್ಲಿ ಅದನ್ನು ಪರಿಹರಿಸಲು ವಿಶೇಷ ಪಡೆಯೊಂದನ್ನು ರೂಪಿಸಲಾಗುವುದು.

ಇದಕ್ಕಾಗಿ 25 ಜೀಪ್‌ಗಳ ವ್ಯವಸ್ಥೆ ಮಾಡಲಾಗುವುದು. ಬಸ್‌ನಲ್ಲಿರುವ ಮಹಿಳೆಯರು ಸಹಾಯವಾಣಿಗೆ ಎಸ್‌ಎಂಎಸ್ ಕಳಿಸಿದರೆ ಸಾಕು ಜೀಪ್‌ನಲ್ಲಿರುವ ವಿಶೇಷ ಪಡೆ ಯಾವ ಬಸ್‌ನಲ್ಲಿ ತೊಂದರೆಯಾಗಿರುತ್ತದೆಯೋ ಅಲ್ಲಿಗೇ ತೆರಳಿ ಪರಿಶೀಲನೆ 
ನಡೆಸಲಿದೆ.

ಬಿಎಂಟಿಸಿ ನಿರಂತರವಾಗಿ ತನ್ನ ಸಿಬ್ಬಂದಿಗೆ ಲಿಂಗ ಸಂವೇದನೆ ತರಬೇತಿಯನ್ನೂ ನೀಡುತ್ತಿದೆ ಎಂದು ಮಾಹಿತಿ ನೀಡುತ್ತಾರೆ ಬಿಎಂಟಿಸಿ ಎಚ್ಆರ್‌ಡಿ ವಿಭಾಗದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಪಿ. ಮಿನುಲ್ಲಾ ಸಾಹೇಬ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು