ಬುಧವಾರ, ಏಪ್ರಿಲ್ 14, 2021
31 °C
ಕಟ್ಟುನಿಟ್ಟಿನ ಕ್ರಮಕ್ಕೆ ಹಿಂದೇಟು ಹಾಕುವ ಅಧಿಕಾರಿಗಳು

ಕಟ್ಟಡ ನಿರ್ಮಾಣ ನಿಯಮ ಜಾರಿ ಮರೀಚಿಕೆ|ಸಾವಿನ ಸರಣಿಗೆ ಕೊನೆಯೇ ಇಲ್ಲವೇ–ಜನರ ಪ್ರಶ್ನೆ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡಗಳು ಕುಸಿದು ಜನರ ಪ್ರಾಣಹಾನಿ ಸಂಭವಿಸುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇಂತಹ ದುರಂತಗಳಿಗೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದ ಸರ್ಕಾರ ರೂಪಿಸಿರುವ ಕಟ್ಟಡ ನಿರ್ಮಾಣದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಯತ್ನ ಮರೀಚಿಕೆಯಾಗಿಯೇ ಉಳಿದಿದೆ.

ರಾಜಧಾನಿಯಲ್ಲಿ 2012ರಿಂದ ಈಚೆಗೆ 15ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳು ನಿರ್ಮಾಣ ಹಂತದಲ್ಲೇ ಕುಸಿದಿವೆ. ಈ ದುರ್ಘಟನೆಗಳಿಂದ 45ಕ್ಕೂ ಅಧಿಕ ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2018ರ ಜನವರಿಯಿಂದ ಈಚೆಗೆ ನಿರ್ಮಾಣ ಹಂತದ ಕಟ್ಟಡ ಕುಸಿದ ನಾಲ್ಕು ಪ್ರಮುಖ ಪ್ರಕರಣಗಳು ನಡೆದಿವೆ. ಆದರೂ ಇದನ್ನು ತಡೆಯುವ ಗಂಭೀರ ಪ್ರಯತ್ನಗಳು ನಡೆದಂತೆ ಕಾಣಿಸುತ್ತಿಲ್ಲ.

2018ರ ಫೆಬ್ರುವರಿಯಲ್ಲಿ ಕಸವನಹಳ್ಳಿ ಸಮೀಪದ ಜಯರಾಮ ರೆಡ್ಡಿ ಬಡಾವಣೆಯಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು. 10 ವರ್ಷಗಳ ಹಿಂದೆಯೇ ನಿರ್ಮಿಸಿದ್ದ ಎರಡು ಅಂತಸ್ತಿನ ಕಟ್ಟಡದ ಮೇಲೆ ಮತ್ತೆ ಮೂರು ಅಂತಸ್ತುಗಳನ್ನು ಕಟ್ಟಿಸಲು ಹೊರಟಿದ್ದು ಅವಘಡಕ್ಕೆ ಎಡೆಮಾಡಿಕೊಟ್ಟಿತ್ತು.

2018ರ ನವೆಂಬರ್‌ನಲ್ಲಿ ತ್ಯಾಗರಾಜ ನಗರದಲ್ಲಿ ನಿರ್ಮಾಣ ಹಂತದ ‘ಸಾಯಿ ಗ್ರ್ಯಾಂಡ್’ ಅಪಾರ್ಟ್‌ಮೆಂಟ್ ಸಮುಚ್ಚಯದ ಕಟ್ಟಡ ದಿಢೀರ್ ಕುಸಿದು ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಕಾಕ್ಸ್‌ಟೌನ್‌ನಲ್ಲಿ ನಾಲ್ಕು ದಿನಗಳ ಹಿಂದಷ್ಟೇ (ಮಂಗಳವಾರ)  ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ಸಮುಚ್ಚಯ ಕುಸಿದಿದೆ. ಅದರ ಪರಿಣಾಮವಾಗಿ ಪಕ್ಕದ ‘ಸಾಯಿ ಆದಿ ಅಂಬಲ್‌’ ಕಟ್ಟಡವೂ ನೆಲಕಚ್ಚಿದೆ. ಐದು ಮಂದಿ ದಾರುಣವಾಗಿ ಕೊನೆಯುಸಿರೆಳೆದಿದ್ದಾರೆ. ಈ ಸಾವಿನ ಸರಣಿಗೆ ಕೊನೆಯೇ ಇಲ್ಲವೇ ಎಂಬುದು ನಾಗರಿಕರ ಪ್ರಶ್ನೆ.

ನಿಯಮವೇನು ಹೇಳುತ್ತದೆ?

ಕಟ್ಟಡ ನಿರ್ಮಾಣ ಯೋಜನೆಗೆ ಸಂಬಂಧಪಟ್ಟ ಪ್ರಾಧಿಕಾರ ಅನುಮೋದನೆ ನೀಡಿದ ಬಳಿಕವೇ ಕಟ್ಟಡ ನಿರ್ಮಾಣ ಆರಂಭಿಸಬೇಕು. ಪಾಯ ಪೂರ್ಣಗೊಳ್ಳುವ ಹಂತದಲ್ಲಿ ಬಿಬಿಎಂಪಿಯ ಆಯಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಸ್ಥಳಕ್ಕೆ ಭೇಟಿ ನೀಡಿ ಸೆಟ್‌ ಬ್ಯಾಕ್‌ ನಿಯಮ ಉಲ್ಲಂಘನೆ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಪಾಯ ನಿಯಮ ಪ್ರಕಾರವಾಗಿದ್ದರೆ ಮಾತ್ರ ಪ್ರಾರಂಭಿಕ ಪ್ರಮಾಣಪತ್ರ (ಸಿ.ಸಿ) ನೀಡಬೇಕು. ನಂತರವೂ ಕಟ್ಟಡ ನಿರ್ಮಾಣ ಪ್ರದೇಶಕ್ಕೆ ಪದೇ ಪದೇ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟದ ಮೇಲೆ ನಿಗಾ ವಹಿಸಬೇಕು.

ಅನುಮೋದನೆ ಪಡೆದ ವಿನ್ಯಾಸಕ್ಕೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಿಸಿದರೆ ಎಇಇ ಅವರು ಕೆಎಂಸಿ ಕಾಯ್ದೆ ಸೆಕ್ಷನ್‌ 321 (1) ಪ್ರಕಾರ ನೋಟಿಸ್‌ ಜಾರಿ ಮಾಡಬೇಕು. ನಂತರ ಸೆಕ್ಷನ್‌ 321 (2) ಪ್ರಕಾರ ಕಟ್ಟಡದ ಮಾಲೀಕರಿಂದ ಸಮಜಾಯಿಷಿ ಪಡೆಯಬೇಕು. ಉಲ್ಲಂಘನೆಯನ್ನು ಸರಿಪಡಿಸಲು ಕಟ್ಟಡ ಮಾಲೀಕರು ಕ್ರಮಕೈಗೊಳ್ಳದಿದ್ದರೆ ನಿರ್ಮಾಣಕ್ಕೆ ತಡೆ ನೀಡುವ ಅಧಿಕಾರ ಕಾರ್ಯಪಾಲಕ ಎಂಜಿನಿಯರ್‌ಗೆ (ಇಇ) ಇರುತ್ತದೆ. ಅವರು ಕೆಎಂಸಿ ಕಾಯ್ದೆಯ ಸೆಕ್ಷನ್‌ 462ರಂತೆ ನೋಟಿಸ್‌ ನೀಡಿ ಅನಧಿಕೃತ ನಿರ್ಮಾಣ ತೆರವುಗೊಳಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ನಿರ್ಮಾಣ ಚಟುವಟಿಕೆ ಮೇಲೆ ನಿಗಾ ಇಡಬೇಕಾದ ಎಇಇಗಳು ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದರೆ ನಿರ್ಮಾಣ ಹಂತದಲ್ಲೇ ಕಟ್ಟಡ ಕುಸಿಯುವ ದುರಂತಗಳು ಮರುಕಳಿಸುತ್ತಿರಲಿಲ್ಲ ಎಂಬುದು ಸಾರ್ವಜನಿಕರ ದೂರು.

‘ಸ್ಥಳ ತಪಾಸಣೆಯನ್ನು ಬಹುತೇಕ ಎಇಇಗಳು ನಿಯಮಿತವಾಗಿ ನಡೆಸುತ್ತಿಲ್ಲ. ಕೆಲವರು ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡುವುದೇ ಅಪರೂಪ. ಭೇಟಿ ನೀಡಿದಾಗ ಉಲ್ಲಂಘನೆ ಕಂಡು ಬಂದರೂ ಲಂಚ ಪಡೆದು ಸುಮ್ಮನಾಗುತ್ತಾರೆ’ ಎಂದು ದೂರುತ್ತಾರೆ ಅಕ್ರಮ ಕಟ್ಟಡಗಳ ವಿರುದ್ಧ ಹೋರಾಟದಲ್ಲಿ ತೊಡಗಿರುವ ಶಶಿಕುಮಾರ್‌. 

‘ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಅದನ್ನು ಬಳಸಬೇಕಿದ್ದರೆ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆಯುವುದು ಕಡ್ಡಾಯ. ಬಹುತೇಕ ಕಟ್ಟಡ ಮಾಲೀಕರು ಇದನ್ನು ಪಡೆಯುವುದೇ ಇಲ್ಲ. ಕಟ್ಟಡ ನಿರ್ಮಾಣದ ಮೇಲೆ ನಿಗಾ ಇಡಬೇಕಾದ ಎಇಇ ಆಗಲೀ ಇಇ ಆಗಲೀ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಏನಾದರೂ ದುರಂತ ಸಂಭವಿಸಿದಾಗ ಮಾತ್ರ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಡಿ.ಎಸ್‌.ರಾಜಶೇಖರ್‌.

‘ಹೋದ ಜೀವ ಮರಳಿ ಬರುತ್ತದೆಯೇ’

‘ನಿರ್ಮಾಣ ಹಂತದ ಕಟ್ಟಡ ಕುಸಿತವಾದಾಗ ಸಾಯುವವರೆಲ್ಲ ಹೊಟ್ಟೆಪಾಡಿಗಾಗಿ ದೂರದ ಊರುಗಳಿಂದ ಕೆಲಸ ಹುಡುಕಿಕೊಂಡು ಬಂದ ಬಡ ಕಾರ್ಮಿಕರು. ತಮ್ಮ ಕುಟುಂಬಗಳಿಗೆ ಏಕಮಾತ್ರ ಆಸರೆಯಾಗಿರುವರು ಅವರು. ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ಒಂದಿಷ್ಟು ಪರಿಹಾರ ಕೊಡಬಹುದು. ಆದರೆ, ಹೋದ ಜೀವ ಮರಳಿ ಬರುತ್ತದೆಯೇ’ ಎಂದು ರಾಜಶೇಖರ್‌ ಪ್ರಶ್ನಿಸಿದರು.

‘ಅಕ್ರಮ ನಿರ್ಮಾಣಗಳನ್ನು ಸಕ್ರಮ ಮಾಡಲು ಸರ್ಕಾರ ಕಾಯ್ದೆ ರೂಪಿಸಿದಾಗ ಅದರ ವಿರುದ್ಧ ಕಾನೂನು ಹೊರಾಟ ನಡೆಸಿದೆವು. ಈ ಕಾಯ್ದೆ ರಚನೆಯಾದ ಬಳಿಕವಾದರೂ ಕಟ್ಟಡ ನಿಯಮ ಉಲ್ಲಂಘನೆ ತಡೆಯಲು ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಬೀದಿ ಬೀದಿಯಲ್ಲೂ ನಿಯಮ ಗಾಳಿಗೆ ತೂರಿ ಕಟ್ಟಡ ನಿರ್ಮಿಸುವುದು ಕಣ್ಣಿಗೆ ರಾಚುತ್ತಿದ್ದರೂ ಪಾಲಿಕೆ ಏನೂ ಮಾಡುತ್ತಿಲ್ಲ’ ಎಂದರು.

ಉಲ್ಲಂಘನೆಯನ್ನು ನಿರ್ಮಾಣ ಹಂತದಲ್ಲೇ ತಡೆಯಬೇಕು

‘ಬಹುಮಹಡಿ ಕಟ್ಟಡ ನಿರ್ಮಿಸುವವರು ಸಾಮಾನ್ಯವಾಗಿ ಎಲ್ಲ ರೀತಿಯ ಮಂಜೂರಾತಿ ಪಡೆದೇ ಮುಂದುವರಿಯುತ್ತಾರೆ. ಆದರೆ, ದುರಂತ ಸಂಭವಿಸಿದ ಬಹುತೇಕ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ ಆಗಿರುವುದು ಕಂಡುಬರುತ್ತದೆ. ಉದಾಹರಣೆಗೆ ಕಾಕ್ಸ್‌ಟೌನ್‌ನಲ್ಲಿ ದುರಂತ ಸಂಭವಿಸಿದ ಕಟ್ಟಡದಲ್ಲಿ ಮಂಜೂರಾತಿ ಪಡೆದುದಕ್ಕಿಂತ ಹೆಚ್ಚುವರಿಯಾಗಿ ಎರಡು ಮಹಡಿಗಳನ್ನು ನಿರ್ಮಿಸಲಾಗಿದೆ. ಆದರೆ, ಆ ವಾರ್ಡ್‌ನ ಎಇಇ ನಿರ್ಮಾಣ ಹಂತದಲ್ಲೇ ಉಲ್ಲಂಘನೆಯ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಅಕ್ರಮ ನಿರ್ಮಾಣ ತಡೆಯಲು ಕ್ರಮಕೈಗೊಳ್ಳಬೇಕಿತ್ತು’ ಎಂದು ಬಿಬಿಎಂಪಿಯ ನಗರ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು