ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಸಮಾನತೆಯೇ ಸಮಸ್ಯೆಗೆ ಪರಿಹಾರ: ಡಾ. ಪಾಮ್‌ ರಜಪೂತ್‌

ಮಹಿಳಾಪರ ಚಿಂತಕಿ ಉಪನ್ಯಾಸ
Last Updated 5 ಡಿಸೆಂಬರ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲರಲ್ಲಿಯೂ ಲಿಂಗತ್ವ ಸೂಕ್ಷ್ಮತೆ ಮತ್ತು ಸಮಾನತೆ ಬೆಳೆದಿದ್ದರೆ, ಶಬರಿಮಲೆ ದೇಗುಲ ಪ್ರವೇಶದಂತಹ ಸಮಸ್ಯೆಗಳು ಕರಗುತ್ತಿದ್ದವು’ ಎಂದು ಮಹಿಳಾಪರ ಚಿಂತಕಿ ಡಾ. ಪಾಮ್‌ ರಜಪೂತ್‌ ಹೇಳಿದರು.

ನ್ಯಾಷನಲ್‌ ಅಲಯನ್ಸ್‌ ಆಫ್‌ ವಿಮೆನ್‌ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಲಿಂಗತ್ವ ಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳು’ ಕುರಿತು ಅವರು ಉಪನ್ಯಾಸ ನೀಡಿದರು.

‘ದೇಶದ 200ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಲಿಂಗಾನುಪಾತ ಪ್ರಮಾಣ ಹೆಚ್ಚುತ್ತಿದೆ. ಲಿಂಗತ್ವ ಅಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಸಹ ಹೆಣ್ಣು ಮಕ್ಕಳ ಜನನ ಪ್ರಮಾಣದ ಮೇಲೆ ಪರಿಣಾಮ ಬೀರುತ್ತಿವೆ. ಹಾಗಾಗಿ ಪ್ರತಿ ಸ್ಮಾರ್ಟ್‌ ಸಿಟಿಯ ನಿರ್ಮಾಣದಲ್ಲಿ ಮಹಿಳಾ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ದೇಶವೊಂದರ ಸುಸ್ಥಿರ ಅಭಿವೃದ್ಧಿಯಲ್ಲಿ ಬಡತನ ನಿರ್ಮೂಲನೆ, ಆರೋಗ್ಯ ಸೇವೆ, ಉತ್ತಮ ಶಿಕ್ಷಣ, ನೀರು ಮತ್ತು ನೈರ್ಮಲ್ಯ ಹಾಗೂ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುತ್ತದೆ. ಇವುಗಳ ಕೊರತೆಯಿಂದ ಮಹಿಳೆಯರೇ ಹೆಚ್ಚು ಬಾಧಿತರಾಗುತ್ತಾರೆ. ಹಾಗಾಗಿ ಮಹಿಳಾ ದೃಷ್ಟಿಕೋನದಲ್ಲಿಯೇ ಈ ಸೌಲಭ್ಯ ವಿತರಣೆಯ ಗುರಿಗಳನ್ನು ಸಾಧಿಸಬೇಕು’ ಎಂದು ಆಗ್ರಹಿಸಿದರು.

‘ಲಿಂಗತ್ವ ಸಮಾನತೆ ಕುರಿತು ಸರ್ಕಾರಗಳು ಅರಿವು ಮೂಡಿಸುತ್ತಿವೆ. ಹಾಗಿದ್ದರೂ, ಗಂಡು–ಹೆಣ್ಣಿನಲ್ಲಿ ಸಂಪೂರ್ಣವಾಗಿ ಸಮಾನತೆ ಭಾವ ಮೂಡಲು ಒಂದು ಶತಮಾನವಾದರೂ ಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ರಾಣಿ ಸತೀಶ್‌, ‘ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯ ಪ್ರಾತಿನಿಧ್ಯ ಹೆಚ್ಚಿದಂತೆ, ವಿಧಾನಸಭೆ ಮತ್ತು ಸಂಸತ್ತಿನಲ್ಲೂ ಹೆಚ್ಚಬೇಕು. ಮಹಿಳೆಯರಿಗೆಎಲ್ಲ ಕ್ಷೇತ್ರಗಳಲ್ಲೂ ಅವಕಾಶಗಳು ಸಿಕ್ಕಾಗ ಮಾತ್ರ ಅವರ ಸಾಮರ್ಥ್ಯ ತಿಳಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT