ಶುಕ್ರವಾರ, ಜನವರಿ 27, 2023
26 °C
ಎನ್‌ಜಿಒಗಳಿಂದ ಸರ್ಕಾರಕ್ಕೆ ಪತ್ರ

ಇಸ್ಕಾನ್‌: ಮೊಟ್ಟೆ ಕೊಡಿಸಿ ಇಲ್ಲವೇ ಗುತ್ತಿಗೆ ರದ್ದುಪಡಿಸಿ

Reshma Ravishanker Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ಷಯ ಪಾತ್ರೆ ಪ್ರತಿಷ್ಠಾನ (ಇಸ್ಕಾನ್) ಪೂರೈಸುವ ಬಿಸಿಯೂಟದ ಜತೆ ಮೊಟ್ಟೆಯನ್ನೂ ನೀಡಬೇಕು, ಇಲ್ಲವಾದಲ್ಲಿ ಗುತ್ತಿಗೆ ರದ್ದು ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಅಲ್ಲದೆ, ಇಸ್ಕಾನ್‌ ಧಾರ್ಮಿಕ ವಿಚಾರಗಳನ್ನು ಪ್ರಚಾರ ಮಾಡುವ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕೆಲವು ಎನ್‌ಜಿಒಗಳು ಮತ್ತು ತಜ್ಞರು ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆ ನೀಗಿಸಲು ಮೊಟ್ಟೆಯನ್ನು ಕೊಡಬೇಕು. ಇಸ್ಕಾನ್‌ ಮೊಟ್ಟೆಯನ್ನು ಕೊಡಲು ನಿರಾಕರಿಸಿದರೆ ಬಿಸಿಯೂಟ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿವೆ.

ಮೊಟ್ಟೆಯ ಬೇಡಿಕೆ ಮುಂದಿಟ್ಟಿರುವ ‘ರೈಟ್‌ ಫಾರ್‌ ಫುಡ್‌ ಕ್ಯಾಂಪೇನ್‌’ ಮತ್ತು ‘ಜನ ಸ್ವಾಸ್ಥ್ಯ ಅಭಿಯಾನ’ ಎಂಬ ಸಂಸ್ಥೆಗಳು, 4.43 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಸುತ್ತಿರುವ ಅಕ್ಷಯ ಪಾತ್ರೆ ಸಂಸ್ಥೆಗೆ ನೀಡಿರುವ ಗುತ್ತಿಗೆಯನ್ನು ತಕ್ಷಣದಿಂದಲೇ ರದ್ದು ಮಾಡಬೇಕು ಎಂದು ಆಗ್ರಹಿಸಿವೆ.

ಮೊಟ್ಟೆ ತಿನ್ನುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಕಡ್ಡಾಯವಾಗಿ ಮೊಟ್ಟೆಯನ್ನು ನೀಡಬೇಕು. ಬಿಸಿಯೂಟವನ್ನು ಸ್ವಸಹಾಯ ಗುಂಪುಗಳ ಮೂಲಕ ಪೌಷ್ಟಿಕತೆಯ ಮಾನದಂಡಕ್ಕೆ ಅನುಗುಣವಾಗಿ ಸ್ಥಳೀಯ ಆಹಾರ ಪದಾರ್ಥವನ್ನು ಬಳಸಿ ಸಿದ್ಧಪಡಿಸಬೇಕು ಎಂದು ಹೇಳಿದೆ.

ಮೊಟ್ಟೆಯನ್ನು ನೀಡಬೇಕು ಎಂಬ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ವೈದ್ಯ ಡಾ.ಸಿಲ್ವಿಯಾ ಕರ್ಪಗಾಮ್,  ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಆರಂಭಿಸಲಾಗಿದೆ. ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆಯನ್ನು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಹುಪಾಲು ವಿದ್ಯಾರ್ಥಿಗಳು ಮೊಟ್ಟೆಯನ್ನು ಸೇವಿಸುತ್ತಾರೆ ಎಂದು ಹೇಳಿದ್ದಾರೆ. ಧಾರ್ಮಿಕ ನಂಬಿಕೆಯ ಕಾರಣಗಳಿಗೆ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿಸಬಾರದು ಮತ್ತು ಸೇವಾ ಸಂಸ್ಥೆಯೊಂದು (ಅಕ್ಷಯ ಪಾತ್ರೆ) ಸರ್ಕಾರಕ್ಕೆ ನಿರ್ದೇಶನ ನೀಡುವಂತಾಗಿದೆ. ಇದನ್ನು ಸರ್ಕಾರ ಸಹಿಸಬಾರದು ಎಂದು ಹೇಳಿದ್ದಾರೆ.

ವಾರಕ್ಕೆ ಮೂರು ದಿನ ಮೊಟ್ಟೆಗಳನ್ನು ಸೇವಿಸಬೇಕು ಎಂದು ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ನ್ಯೂಟ್ರಿಷಿಯನ್‌ ಸಂಸ್ಥೆ ಶಿಫಾರಸು ಮಾಡಿದೆ. ಮೊಟ್ಟೆಯಲ್ಲಿ ಸಾಕಷ್ಟು ಪೌಷ್ಟಿಕ ಲಾಭಗಳಿವೆ. ಪ್ರಾಣಿ ಜನ್ಯ ಪೌಷ್ಟಿಕಾಂಶ ಅಧಿಕ ಗುಣಮಟ್ಟದ ಮತ್ತು ಅಗತ್ಯವಾದ ಅಮಿನೋ ಆಮ್ಲವನ್ನು ದೇಹಕ್ಕೆ ನೀಡುತ್ತದೆ ಎಂದು ರೈಟ್‌ ಟು ಫುಡ್‌ ಕ್ಯಾಂಪೇನ್‌ ಹೇಳಿದೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮಾರ್ಗಸೂಚಿಯ ಪ್ರಕಾರ, ಜಾತಿ, ಧರ್ಮದ ಆಧಾರದಲ್ಲಿ ವ್ಯತ್ಯಾಸ ಮಾಡುವಂತಿಲ್ಲ. ಧರ್ಮದ ವಿಚಾರ ಮತ್ತು ಆಚರಣೆಗಳನ್ನು ಪ್ರಚಾರ ಮಾಡಲು ಇಂತಹ ಕಾರ್ಯಕ್ರಮವನ್ನು ಬಳಸಿಕೊಳ್ಳಬಾರದು. ಆದರೆ, ಅಕ್ಷಯ ಪಾತ್ರೆ ಆರಂಭದಿಂದಲೇ ಇದನ್ನು ಉಲ್ಲಂಘಿಸಿದೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಕ್ಷಯ ಪಾತ್ರೆ, ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಪೂರಕವಾಗುವ ಪೌಷ್ಟಿಕ ಆಹಾರವನ್ನೇ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು