ಆನೆ ದಂತಚೋರರ ಬಂಧನ

ಬೆಂಗಳೂರು: ಆನೆ ಕೊಂದು ಅದರ ದಂತಗಳನ್ನು ಕದ್ದುಕೊಂಡು ಬಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ದಿಂಡಿಗಲ್ ಜಿಲ್ಲೆಯ ಪಳನಿಯ ಮುರಗಾನಂದಂ (35) ಹಾಗೂ ಥೇಣಿ ಜಿಲ್ಲೆಯ ಪುದೂರಿನ ಬಾಲು (60) ಬಂಧಿತರು.
ಅವರಿಂದ ಎರಡು ಆನೆ ದಂತಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ತಮಿಳುನಾಡಿಗೆ ಹೋಗಿದೆ. ಆನೆ ದಂತಗಳನ್ನು ಚೀಲದಲ್ಲಿ ಇಟ್ಟುಕೊಂಡು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಆರೋಪಿಗಳು ಫೆ. 6ರಂದು ಬೆಂಗಳೂರಿಗೆ ಬಂದಿದ್ದರು. ನಂತರ, ಎಚ್‌ಆರ್‌ಬಿಆರ್ ಲೇಔಟ್‌ನ 3ನೇ ಬ್ಲಾಕ್‌ನ ಸರ್ವೀಸ್ ರಸ್ತೆಯ ನೀರಿನ ಟ್ಯಾಂಕ್ ಬಳಿಗೆ ಬಿಎಂಟಿಸಿ ಬಸ್ಸಿನಲ್ಲಿ ಸಂಜೆ ಬಂದಿಳಿದು, ಗ್ರಾಹಕರಿಗಾಗಿ ಕಾಯುತ್ತ ನಿಂತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಬಾಣಸವಾಡಿ ಠಾಣೆಯ ಇನ್‌ಸ್ಪೆಕ್ಟರ್ ಆರ್.ವಿರೂಪಾಕ್ಷ ಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹೊಗೇನಕಲ್ ಅರಣ್ಯದಲ್ಲಿ ಆನೆ ಕೊಂದಿರುವ ಶಂಕೆ: ‘ಬಂಧಿತ ಆರೋಪಿಗಳು, ಏಜೆಂಟರೆಂದು ಹೇಳಿಕೊಳ್ಳುತ್ತಿದ್ದಾರೆ. ಪ್ರಮುಖ ಆರೋಪಿ ಕೊಟ್ಟಿದ್ದ ಆನೆದಂತಗಳನ್ನು ಕಮಿಷನ್ ಆಸೆಗಾಗಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಂದಿರುವುದಾಗಿ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ದಂತ ಮಾರಾಟ ಮಾಡಲು ಬಂದಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.
‘ಹೊಗೇನಕಲ್ ಅರಣ್ಯದಲ್ಲಿ ಆನೆಯನ್ನು ಕೊಂದು ಅದರ ದಂತಗಳನ್ನು ಕದ್ದು ತಂದಿರುವ ಶಂಕೆ ಇದೆ. ದಂತವನ್ನು ಯಾರಿಗೆ ಮಾರಾಟ ಮಾಡಲು ಬಂದಿದ್ದರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ. ಪ್ರಮುಖ ಆರೋಪಿ ಸಿಕ್ಕ ಬಳಿಕ ನಿಖರ ಮಾಹಿತಿ ಸಿಗಬಹುದು’ ಎಂದರು.
‘ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.