ಮಂಗಳವಾರ, ಜೂನ್ 28, 2022
27 °C
ಐಸಿಎಂಆರ್‌ನಿಂದ ಗಾಂಧೀಜಿ ಆರೋಗ್ಯ ಕುರಿತ ದಾಖಲೆಗಳು ಬಹಿರಂಗ

ರಕ್ತದೊತ್ತಡ ಹೆಚ್ಚಿಸಿತ್ತು ಬೋಸ್‌ ಜೊತೆಗಿನ ತಿಕ್ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸುವ ವಿಚಾರದಲ್ಲಿ ಸುಭಾಸ್‌ಚಂದ್ರ ಬೋಸ್‌ ಜೊತೆಗಿನ ತಿಕ್ಕಾಟವು ಮಹಾತ್ಮ ಗಾಂಧಿ ಅವರ ರಕ್ತದೊತ್ತಡವನ್ನು ಹೆಚ್ಚಿಸಲು ಕಾರಣವಾಗಿತ್ತೇ? ಹೌದು ಎನ್ನುತ್ತವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಬಿಡುಗಡೆ ಮಾಡಿರುವ ದಾಖಲೆಗಳು.

ಗಾಂಧೀಜಿಯ 150ನೇ ಜನ್ಮವರ್ಷಾಚರಣೆಯ ಅಂಗವಾಗಿ ಮಂಡಳಿಯು ಸೋಮವಾರ ಬಿಡುಗಡೆ ಮಾಡಿರುವ ವಿಶೇಷ ಸಂಚಿಕೆಯಲ್ಲಿ ಗಾಂಧೀಜಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಬಹಿರಂಗಪಡಿಸಿದೆ. ತಮ್ಮ ಜೀವನದ ಮಹತ್ವದ ಘಟ್ಟದಲ್ಲಿ ಗಾಂಧೀಜಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಪೌಷ್ಟಿಕಾಂಶದ ಕೊರತೆ ಅವರನ್ನು ಕಾಡುತ್ತಿತ್ತು. 46 ಕೆ.ಜಿ. ತೂಕ ಹೊಂದಿದ್ದ ಗಾಂಧಿಯ ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ) ಕೇವಲ 17.1 ಆಗಿತ್ತು ಎಂದು ವರದಿ ಹೇಳಿದೆ.

1939ರಲ್ಲಿ ಕಾಂಗ್ರೆಸ್‌ ಪಕ್ಷವು ಗಾಂಧಿ ಮತ್ತು ಬೋಸ್‌ ಬಣಗಳಾಗಿ ವಿಭಜನೆಯಾದಾಗ ಗಾಂಧಿಯ ರಕ್ತದೊತ್ತಡವು 180/110 (ಮಾರ್ಚ್‌ 4), 180/110 (ಮಾರ್ಚ್‌ 5) ರಿಂದ 160/100 (ಏಪ್ರಿಲ್‌ 30)ರ ಆಸುಪಾಸಿನಲ್ಲಿತ್ತು.

ಗಾಂಧೀಜಿ ಏಪ್ರಿಲ್‌ 29ರಂದು ಬೋಸ್‌ ಅವರಿಗೆ ಬರೆದ ಪತ್ರದಲ್ಲಿ, ‘...ನೀವು ಮತ್ತು ಹೆಚ್ಚಿನ ಸದಸ್ಯರು ಮೂಲಭೂತ ವಿಚಾರಗಳನ್ನು ವಿರೋಧಿಸುತ್ತೀರಿ ಎಂದು ತಿಳಿದಿದೆ... ನೀವು ನಿಮ್ಮದೇ ಆದ ಸಮಿತಿಯನ್ನು ರಚಿಸಿಕೊಳ್ಳಲು ಸ್ವತಂತ್ರರಿದ್ದೀರಿ...’ ಎಂದಿದ್ದರು. ತಿರುಪತಿಯಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಆ ಪತ್ರವನ್ನು ಓದಿದ ಬೋಸ್‌, ಅದೇ ದಿನ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಒಂದು ವರ್ಷದ ನಂತರ, 1940ರ ಫೆ.19ರಂದು ಗಾಂಧೀಜಿಯ ರಕ್ತದೊತ್ತಡ ಪರೀಕ್ಷಿಸಿದಾಗ ಅದು 220/110ರಷ್ಟಿತ್ತು ಎಂದು ವರದಿ ತಿಳಿಸಿದೆ. ಲಾಹೋರ್‌ನಲ್ಲಿ ಆಲ್‌ ಇಂಡಿಯಾ ಮುಸ್ಲಿಂ ಲೀಗ್‌ನ ಅಧಿವೇಶನ ನಡೆಯುವುದಕ್ಕೂ ಒಂದು ತಿಂಗಳ ಹಿಂದೆ ಗಾಂಧೀಜಿಯಲ್ಲಿ ಇದೇ ಪ್ರಮಾಣದ ರಕ್ತದೊತ್ತಡ ಕಾಣಿಸಿಕೊಂಡಿತ್ತು. ಆ ಅಧಿವೇಶನದಲ್ಲಿ ಬಂಗಾಳದ ಪ್ರಧಾನಿ ಎ.ಕೆ. ಫಜಲುಲ್‌ ಹಕ್‌ ಅವರು ಭಾರತೀಯ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ (ಪಾಕಿಸ್ತಾನ) ರಚನೆಯ ಪ್ರಸ್ತಾಪ ಇಟ್ಟಿದ್ದರು. ಅದನ್ನು ಅಧಿವೇಶನ ಅಂಗೀಕರಿಸಿತ್ತು.

ಗಾಂಧೀಜಿ ಆರೋಗ್ಯ ಕುರಿತ 1924ರಿಂದ 47ರವರೆಗಿನ ದಾಖಲೆಗಳ ಪ್ರಕಾರ ಅವರ ರಕ್ತದೊತ್ತಡವು ಸಾಮಾನ್ಯಕ್ಕಿಂತ ಅಧಿಕವಾಗಿ, 170/110 ರಿಂದ 180/105ರವರೆಗೂ ದಾಖಲಾಗಿತ್ತು ಎಂದು ಐಸಿಎಂಆರ್‌ ಸಂಚಿಹೆ ಹೇಳಿದೆ.

‘ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಗಾಂಧೀಜಿ ಆಯುರ್ವೇದ ಔಷಧಿ ‘ಸರ್ಪಗಂಧ’ವನ್ನು ಬಳಸುತ್ತಿದ್ದರು. ಈ ವಿಚಾರವನ್ನು ಅವರು ತಮ್ಮ ವೈದ್ಯರಾಗಿದ್ದ ಸುಶೀಲಾ ನಯ್ಯರ್‌ ಅವರಿಗೆ ತಿಳಿಸಿದ್ದರು. ಗಾಂಧಿ ಮೂರು ಬಾರಿ ಮಲೇರಿಯಾಕ್ಕೆ ತುತ್ತಾಗಿದ್ದರು. ಪುಣೆಯ ಸಸೂನ್‌ ಆಸ್ಪತ್ರೆಯಲ್ಲಿ ಪೈಲ್ಸ್‌ ಮತ್ತು ಅಪೆಂಡಿಸೈಟಿಸ್‌ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು’ ಎಂದು ಐಸಿಎಂಆರ್‌ ಮಹಾ ನಿರ್ದೇಶಕ ಬಲರಾಮ್‌ ಭಾರ್ಗವ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಆರೋಗ್ಯ ಸಮಸ್ಯೆಗಳಿದ್ದರೂ ಇಷ್ಟೆಲ್ಲ ಸಾಧನೆ ಮಾಡಲು ಅವರು ದಿನನಿತ್ಯ ನಡೆಸುತ್ತಿದ್ದ 18 ಕಿ.ಮೀ. ನಡಿಗೆಯೇ ಕಾರಣ ಇರಬಹುದು. 1913ರಿಂದ 1948ರ ವರೆಗಿನ ಅವಧಿಯಲ್ಲಿ ಗಾಂಧಿ ಒಟ್ಟಾರೆ 79,000 ಕಿ.ಮೀ. ದೂರ ನಡೆದಾಡಿದ್ದಾರೆ’ ಎಂದು ಭಾರ್ಗವ್‌ ಹೇಳಿದ್ದಾರೆ.

ರಾಷ್ಟ್ರದ ನಾಯಕರ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವ ಸಂಪ್ರದಾಯವನ್ನು ಕೆಲವು ರಾಷ್ಟ್ರಗಳಲ್ಲಿ ಪಾಲಿಸಲಾಗುತ್ತದೆಯಾದರೂ ಭಾರತದಲ್ಲಿ ಅಂಥ ಸಂಪ್ರದಾಯವಿಲ್ಲ. ಆದರೆ ಕೆಲವು ಜಾಗತಿಕ ನಾಯಕರ ಆರೋಗ್ಯವನ್ನು ಕುರಿತ ದಾಖಲೆಗಳು ಓದಲು ಆಸಕ್ತಿದಾಯಕವಾಗಿರುತ್ತವೆ ಎಂದು ಭಾರ್ಗವ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು