ಬುಧವಾರ, ಮಾರ್ಚ್ 3, 2021
31 °C
15 ದಿನಗಳಲ್ಲಿ ಆರು ವಿಚಾರಣೆ

285 ಎಕರೆ ಸರ್ಕಾರಿ ಭೂಮಿ ವರ್ಗಾವಣೆ: ನಿಯಮ ಗಾಳಿಗೆ ತೂರಿದ ವಿಶೇಷ ಡಿ.ಸಿ

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಎಸ್‌.ರಂಗಪ್ಪ ಅವರು 15 ದಿನಗಳಲ್ಲೇ ಆರು ವಿಚಾರಣೆಗಳನ್ನು ನಡೆಸಿ 285 ಎಕರೆ ಕಾವಲ್‌ ಭೂಮಿ ವರ್ಗಾವಣೆಗೆ ಆದೇಶ ಹೊರಡಿಸಿರುವುದು ಬೆಳಕಿಗೆ ಬಂದಿದೆ.

ನಗರ ಜಿಲ್ಲೆಯಲ್ಲಿ ಭೂ ಮಂಜೂರಾತಿ ನೈಜತೆಗೆ ಸಂಬಂಧಿಸಿದಂತೆ 3 ಸಾವಿರಕ್ಕೂ ಅಧಿಕ ಪ್ರಕರಣಗಳು ಇವೆ. ಈ ಎಲ್ಲ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಯಿಂದಲೇ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಬೆಂಗಳೂರು ದಕ್ಷಿಣ ವಿಭಾಗದಲ್ಲಿ 1,500 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಕೆಲವು ಪ್ರಕರಣಗಳಂತೂ ಹತ್ತಾರು ವರ್ಷಗಳಿಂದ ಹಾಗೆಯೇ ಉಳಿದಿವೆ. ಈ ಪ್ರಕರಣಗಳ ವಿಚಾರಣೆ ನಡೆಸಲು ದಿನ ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಈ ಪ್ರಕರಣದಲ್ಲಿ ರಂಗಪ್ಪ ಅವರು ವಿಶೇಷ ಆಸಕ್ತಿ ತೋರಿಸಿದ್ದು ಅನುಮಾನಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಎರಡು ವಿಚಾರಣೆಗಳ ನಡುವೆ 8ರಿಂದ 10 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಪ್ರಕರಣದಲ್ಲಿ, 2018ರ ಜುಲೈ 20, 26, 30, 31, ಆಗಸ್ಟ್‌ 1 ಹಾಗೂ 4ರಂದು ವಿಚಾರಣೆ ನಡೆಸಲಾಗಿದೆ. ಆಗಸ್ಟ್‌ 4ರಂದೇ ಆದೇಶ ಕಾಯ್ದಿರಿಸಲಾಯಿತು.

2002ರಿಂದಲೇ ಈ ಪ್ರಕರಣ ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿದೆ. ಇದು ಸರ್ಕಾರಿ ಜಾಗ ಎಂದು ಹಿಂದಿನ ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಹೈಕೋರ್ಟ್‌ ಸಹ ವಿಶೇಷ ಜಿಲ್ಲಾಧಿಕಾರಿಗಳ ಆದೇಶವನ್ನು ಮಾನ್ಯ ಮಾಡಿತ್ತು. ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರು, ‘ಇದು ಅಮೃತ ಮಹಲ್‌ ತಳಿ ರಾಸುಗಳ ಅಭಿವೃದ್ಧಿಗೆ ಕಾಯ್ದಿರಿಸಿದ ಜಾಗ’ ಎಂದು ವರದಿ ನೀಡಿದ್ದರು. ಆದರೆ, ರಂಗಪ್ಪ ಅವರು ಭೂದಾಖಲೆಗಳ ಜಂಟಿ ನಿರ್ದೇಶಕರ ವರದಿಯನ್ನಷ್ಟೇ ಪರಿಗಣಿಸಿ ಆದೇಶ ಹೊರಡಿಸಿದ್ದಾರೆ. 16 ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದ ವಿಚಾರಣೆ ಏಕಾಏಕಿ ವೇಗ ಪಡೆಯಲು ಕಾರಣ ಏನು? ಅದರ ಹಿಂದಿರುವ ಶಕ್ತಿಗಳು ಯಾರು ಎಂಬುದು ಗೊತ್ತಾಗಬೇಕು’ ಎಂದು ಕಂದಾಯ ಇಲಾಖೆಯ ಹಲವು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

‘ಈರಪ್ಪ ಅವರ ಹೆಸರಿಗೆ 1940ರಲ್ಲಿ ಸೇಲ್‌ ಡೀಡ್‌ ಆಗಿತ್ತು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಸೇಲ್‌ ಡೀಡ್‌ನ ನಕಲು ಪ್ರತಿಯನ್ನು ಮಾತ್ರ ಹಾಜರುಪಡಿಸಲಾಗಿದೆ. ಜತೆಗೆ, 1954ರಲ್ಲಿ ಭೂಮಿತಿ ಕಾಯ್ದೆ ಜಾರಿಗೆ ಬಂದಿತ್ತು. ಅದರ ಪ್ರಕಾರ, ಒಬ್ಬ ವ್ಯಕ್ತಿ ಗರಿಷ್ಠ 54 ಎಕರೆ ಜಾಗ ಹೊಂದಬಹುದು. ಅದರ ಪ್ರಕಾರ, ಇಬ್ಬರು ಮಹಿಳೆಯರಿಗೆ 285 ಎಕರೆ ಹಂಚಿಕೆ ಮಾಡಲು ಸಾಧ್ಯವೇ ಇಲ್ಲ. ಹಿಡುವಳಿ ಜಮೀನು ಎಂದು ಬೋಗಸ್‌ ದಾಖಲೆ ಸೃಷ್ಟಿಸಿರುವ ಅನುಮಾನ ಇದೆ’ ಎಂದು ಅಧಿಕಾರಿಯೊಬ್ಬರು ಬೊಟ್ಟು ಮಾಡುತ್ತಾರೆ.

‘ಜಿಲ್ಲಾಡಳಿತ ಈವರೆಗೆ 16 ಸಾವಿರ ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿದೆ. ಪ್ರಭಾವಿಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗಿದೆ. ವಿಶೇಷ ಜಿಲ್ಲಾಧಿಕಾರಿ ಅವರ ಈ ಆದೇಶದಿಂದ ಇಡೀ ಜಿಲ್ಲಾಡಳಿತವೇ ತಲೆ ತಗ್ಗಿಸುವಂತಾಗಿದೆ. ಎಲ್ಲ ಅಧಿಕಾರಿಗಳನ್ನು ಜನರು ಅನುಮಾನದಿಂದ ನೋಡುವಂತಾಗಿದೆ’ ಎಂದು ಮತ್ತೊಬ್ಬ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.

ಎರಡು ಹುದ್ದೆ: ‘ರಂಗಪ್ಪ ಅವರು ಈ ಹುದ್ದೆಯ ಜತೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಆಪ್ತ ಕಾರ್ಯದರ್ಶಿ ಸಹ ಹೌದು. ಅವರು 2006ನೇ ಬ್ಯಾಚ್‌ನ ಕೆಎಎಸ್‌ ಅಧಿಕಾರಿ. ಸಾಮಾನ್ಯವಾಗಿ ವಿಶೇಷ ಜಿಲ್ಲಾಧಿಕಾರಿ ಹುದ್ದೆಗೆ ಐಎಎಸ್‌ ಅಥವಾ ಐಎಎಸ್‌ ಹುದ್ದೆಯ ನಿರೀಕ್ಷೆಯಲ್ಲಿರುವ ಹಿರಿಯ ಕೆಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. 12 ವರ್ಷಗಳಷ್ಟು ಅನುಭವ ಹೊಂದಿರುವ ಅಧಿಕಾರಿಯನ್ನು ವಿಶೇಷ ಜಿಲ್ಲಾಧಿಕಾರಿ ಹುದ್ದೆಗೆ ನೇಮಕ ಮಾಡಿರುವ ಉದಾಹರಣೆಯೇ ಇಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ವಿಶ್ಲೇಷಿಸಿದರು.

ಮಾಹಿತಿ ಪಡೆದ ಸಿ.ಎಂ

285 ಎಕರೆ ಸರ್ಕಾರಿ ಭೂಮಿ ವರ್ಗಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಅವರಿಂದ ಮಾಹಿತಿ ಪಡೆದಿದ್ದಾರೆ.

‘ಈ ಪ್ರಕರಣದಲ್ಲಿ ವಿಶೇಷ ಜಿಲ್ಲಾಧಿಕಾರಿ ಅವರು ಲೋ‍ಪ ಎಸಗಿದ್ದಾರೆ. ಅವರ ವರ್ಗಾವಣೆ ಮಾಡಬೇಕು’ ಎಂದೂ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ. ‘ಇದು ಸರ್ಕಾರಿ ಜಾಗ ಎಂದು ದಾಖಲೆಗಳು ಹೇಳುತ್ತವೆ. ಈ ಹಿಂದಿನ ವಿಶೇಷ ಜಿಲ್ಲಾಧಿಕಾರಿಗಳು, ಉ‍ಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ಈ ಬಗ್ಗೆ ಈ ಹಿಂದೆಯೇ ವರದಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು’ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು