ಸೋಮವಾರ, ಜುಲೈ 4, 2022
24 °C

ಹಜ್‌ ಯಾತ್ರೆಗೆ 6,701 ಮಂದಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ಹಜ್ ಸಮಿತಿಯು ಪ್ರಸಕ್ತ ಸಾಲಿನ ಹಜ್‌ ಯಾತ್ರೆಗಾಗಿ ರಾಜ್ಯದಿಂದ 6,701 ಮಂದಿಯನ್ನು ಆಯ್ಕೆ ಮಾಡಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್. ಜಮೀರ್‌ ಅಹ್ಮದ್‌ ಖಾನ್‌ ತಿಳಿಸಿದರು.

ರಾಜ್ಯ ಹಜ್‌ ಸಮಿತಿ ವತಿಯಿಂದ ಹಜ್‌ ಯಾತ್ರಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸೌದಿ ಅರೇಬಿಯಾ ಸರ್ಕಾರವು ಭಾರತೀಯ ಹಜ್ ಸಮಿತಿಗೆ 1,23,900 ಮಂದಿಯ ಕೋಟಾವನ್ನು ಹಂಚಿಕೆ ಮಾಡಿದೆ. 2011ರ ಜನಗಣತಿಯನ್ನು ಆಧರಿಸಿ ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ರಾಜ್ಯಗಳಿಗೆ ಭಾರತೀಯ ಹಜ್ ಸಮಿತಿಯು ಕೋಟಾವನ್ನು ನಿಗದಿ ಮಾಡಿದೆ. ರಾಜ್ಯ ಹಜ್ ಸಮಿತಿಯು 13,995 ಅರ್ಜಿಗಳನ್ನು ಸ್ವೀಕರಿಸಿದ್ದು, ಈ ಪೈಕಿ 7298 ಪುರುಷರು, 6685 ಮಹಿಳೆಯರು ಹಾಗೂ 12 ಮಕ್ಕಳು ಅರ್ಜಿ ಸಲ್ಲಿಸಿದ್ದರು ಎಂದರು.

70 ವರ್ಷ ಮೇಲ್ಪಟ್ಟವರ ಮೀಸಲಾತಿ ಪ್ರವರ್ಗದಲ್ಲಿ 794 ಅರ್ಜಿದಾರರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರ ಮೀಸಲಾತಿ ಪ್ರವರ್ಗದಲ್ಲಿ 23 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಆನ್‌ಲೈನ್‌ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಯಾರ ಹಸ್ತಕ್ಷೇಪಕ್ಕೂ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಆರ್.ರೋಷನ್‌ ಬೇಗ್‌ ಮಾತನಾಡಿ, ‘ದೇಶದಲ್ಲೇ ಮಾದರಿಯಾದ ಹಜ್ ಕ್ಯಾಂಪ್ ಅನ್ನು ನಮ್ಮ ರಾಜ್ಯದಲ್ಲಿ ನಡೆಸಲಾಗುತ್ತಿದೆ. ಯಾತ್ರಿಗಳಿಗೆ ಸೂಕ್ತವಾದ ತರಬೇತಿ, ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ವಿವಿಧ ರಾಜ್ಯಗಳ ಪ್ರತಿನಿಧಿಗಳು ನಮ್ಮ ರಾಜ್ಯದ ಮಾದರಿಯನ್ನು ಅನುಸರಿಸುತ್ತಿದ್ದಾರೆ’ ಎಂದರು.

‘ರಾಜ್ಯದ ಹಜ್‌ ಭವನವು ಇಡೀ ದೇಶಕ್ಕೆ ಮಾದರಿ. 100 ಕೊಠಡಿಗಳು ಅದರಲ್ಲಿದ್ದು, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಹೊರ ಜಿಲ್ಲೆಗಳು, ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ತಂಗಲು ಇದರಲ್ಲಿ ಅವಕಾಶ ಮಾಡಿಕೊಡಲಾಗುವುದು. ವರ್ಷದ ಎಲ್ಲ ದಿನಗಳಲ್ಲೂ ಹಜ್ ಭವನ ಸಕ್ರಿಯವಾಗಿರಬೇಕು ಎಂಬುದು ನಮ್ಮ ಬಯಕೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು