ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಬಿಎಂಟಿಸಿ ಬಸ್‌ಗಳಲ್ಲೇ ಅರ್ಧ ಕೆ.ಜಿ ಚಿನ್ನ ಕದ್ದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ಹಾಗೂ ಚಿನ್ನಾಭರಣ ದೋಚುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು, ಅರ್ಧ ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.

ಹನುಮಂತನಗರದ ಚಾಂದ್ ಪಾಷಾ (32) ಹಾಗೂ ಸೈಯದ್ ಅಕ್ರಂ (40) ಬಂಧಿತರು. ಇಬ್ಬರೂ ಭದ್ರಾವತಿ ತಾಲ್ಲೂಕಿನವರಾಗಿದ್ದು, ಕಳ್ಳತನ ಮಾಡುವುದಕ್ಕಾಗಿಯೇ ನಗರಕ್ಕೆ ಬಂದು ನೆಲೆಸಿದ್ದರು. ಇವರ ಬಂಧನದಿಂದ ಒಂಬತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಬೆಳಿಗ್ಗೆ ಹಾಗೂ ಸಂಜೆ ವೇಳೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಇವರು, ಹೆಚ್ಚು ಪ್ರಯಾಣಿಕರಿರುವ ಬಸ್‌ಗಳನ್ನೇ ಹತ್ತುತ್ತಿದ್ದರು. ಚಿನ್ನದ ಸರ ತೊಟ್ಟಿರುವ ಮಹಿಳೆಯ ಹಿಂದೆಯೇ ನಿಂತುಕೊಂಡು, ಅವರ ಗಮನಕ್ಕೆ ಬಾರದಂತೆ ಸರ ಎಗರಿಸುತ್ತಿದ್ದರು. ನಂತರ ಮುಂದಿನ ನಿಲ್ದಾಣದಲ್ಲೇ ಇಳಿದು ಹೋಗುತ್ತಿದ್ದರು.

ಆಭರಣ ಕಳೆದುಕೊಂಡವರು, ಉಪ್ಪಾರಪೇಟೆ ಠಾಣೆಯ ಮೆಟ್ಟಿಲೇರಿದ್ದರು. ಮೆಜೆಸ್ಟಿಕ್ ನಿಲ್ದಾಣದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಹಳೇ ಆರೋಪಿಗಳಾದ ಪಾಷಾ ಹಾಗೂ ಅಕ್ರಂನ ಚಹರೆ ಸಿಕ್ಕಿತ್ತು. ಹನುಮಂತನಗರದ ಮನೆಯಲ್ಲೇ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ.

ಬಸ್‌ಗಳಲ್ಲಿ ಜೇಬುಗಳ್ಳರ ಫೋಟೊ

‘ಬಿಎಂಟಿಸಿ ಬಸ್‌ಗಳಲ್ಲಿ ಪಿಕ್‌ ಪಾಕೆಟ್ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಯಾಣಿಕರೂ ಎಚ್ಚರಿಕೆಯಿಂದ ಇರಬೇಕು. ಎಲ್ಲ ಬಸ್‌ಗಳಲ್ಲೂ ಜೇಬುಗಳ್ಳರ ಫೋಟೊಗಳನ್ನು ಅಂಟಿಸುವ ಬಗ್ಗೆ ಬಿಎಂಟಿಸಿ ಅಧಿಕಾರಿಗಳ ಜತೆ ಈಗಾಗಲೇ ಚರ್ಚಿಸಿದ್ದೇನೆ. ಪ್ರಯಾಣಿಕರು ಇನ್ನು ಮುಂದಾದರೂ ಆ ಫೋಟೊಗಳನ್ನು ನೋಡಿಕೊಂಡು, ತಮ್ಮ ಅಕ್ಕ–ಪಕ್ಕ ನಿಂತಿರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು