ಸೋಮವಾರ, ಸೆಪ್ಟೆಂಬರ್ 16, 2019
29 °C

ಸಿಜೆಐ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ: ತನಿಖಾ ವರದಿ ನೀಡಲು ಮಹಿಳೆ ಒತ್ತಾಯ

Published:
Updated:

ದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರಿಗೆ ನ್ಯಾಯಾಲಯದ ಆಂತರಿಕ ಸಮಿತಿಯು ಕ್ಲೀನ್‌ ಚಿಟ್‌ ನೀಡಿರುವುದರಿಂದ ಆಕ್ರೋಶಗೊಂಡಿರುವ ದೂರುದಾರ ಮಹಿಳೆ, ಸಮಿತಿಯ ತನಿಖಾ ವರದಿಯ ಪ್ರತಿಯನ್ನು ತಮಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ತನಿಖಾ ವರದಿಯನ್ನು ನೀಡದೇ ಇರುವುದು ನ್ಯಾಯಾಂಗದ ದುರಂತ ಎಂದು ಅವರು ಹೇಳಿದ್ದಾರೆ. 

ವಿಚಾರಣೆಯನ್ನು ಮಹಿಳೆ ಬಹಿಷ್ಕರಿಸಿರುವುದಾಗಿ ಹೇಳಿದ್ದರೂ, ವಿಚಾರಣೆ ಮುಂದುವರಿಸಿದ್ದ ನ್ಯಾಯಾಲಯದ ಆಂತರಿಕ ಸಮಿತಿಯು ಸೋಮವಾರ ಸಿಜೆಐ ಗೊಗೊಯಿ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು. ಪ್ರಕರಣದಲ್ಲಿ ಹುರುಳಿಲ್ಲ ಎಂದಿತ್ತು. ಎಲ್ಲಕ್ಕೂ ಮುಖ್ಯವಾಗಿ ತನಿಖೆಯ ವರದಿಯ ಪ್ರತಿಯನ್ನು ದೂರುದಾರ ಮಹಿಳೆಗೆ ನೀಡಿರಲಿಲ್ಲ. ಸಾರ್ವಜನಿಕವಾಗಿಯೂ ವರದಿ ಲಭ್ಯವಾಗಿಲ್ಲ. ಇದೇ ಹಿನ್ನೆಲೆಯಲ್ಲಿ ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಹಿಳೆ, ಪ್ರಕರಣದ ವಿಚಾರಣೆಯ ವರದಿ ಪಡೆಯಲು ನಾನು ಅರ್ಹಳು ಎಂದು ಪ್ರತಿಪಾದಿಸಿದ್ದಾರೆ. 

‘ದೂರುದಾರಳ ಪ್ರಕರಣದ ವರದಿಯನ್ನು ಆಕೆಗೇ ನೀಡದೇ ಇರುವುದು ಮತ್ತು ಅದನ್ನು ಬಹಿರಂಗವಾಗಲು ಬಿಡದೇ ಇರುವುದು ಅನ್ಯಾಯ. ಇದು ನ್ಯಾಯಾಂಗದ ದುರಂತ,’ ಎಂದು ಅವರು ಹೇಳಿದ್ದಾರೆ. 

ರಂಜನ್‌ ಗೊಗೊಯಿ ಅವರ ವಿರುದ್ಧ ಸುಪ್ರೀಂ ಕೋರ್ಟ್‌ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿ ರಚಿಸಲಾಗಿತ್ತು. ತನಿಖೆ ನಡೆಸಿರುವ ಸಮಿತಿಯು ಗೊಗೊಯಿ ಅವರಿಗೆ ಪ್ರಕರಣದಲ್ಲಿ ಸೋಮವಾರ ಕ್ಲೀನ್‌ ಚಿಟ್‌ ನೀಡಿದೆ.

ಸಿಜೆಐಗೆ ಕ್ಲೀನ್‌ ಚಿಟ್‌ ನೀಡಿದ ಆಂತರಿಕ ಸಮಿತಿಯ ನಿರ್ಧಾರದ ವಿರುದ್ಧ ಮಂಗಳವಾರ ಸುಪ್ರೀಂ ಕೋರ್ಟ್‌ ಬಳಿಯೇ ಪ್ರತಿಭಟನೆಗಳು ನಡೆದಿವೆ. 

Post Comments (+)