ಶನಿವಾರ, ಸೆಪ್ಟೆಂಬರ್ 19, 2020
27 °C
ನಾವೇನು ಜೋಕ್‌ ಕಟ್‌ ಮಾಡಲು ಕುಳಿತಿದ್ದೀವಾ ಎಂದ ಮುಖ್ಯನ್ಯಾಯಮೂರ್ತಿ

ರಸ್ತೆ ಗುಂಡಿಗೆ ಸಿಗದ ಮುಕ್ತಿ: ಬಿಬಿಎಂಪಿಗೆ ಬೆವರಿಳಿಸಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದ ಕಮ್ಮನಹಳ್ಳಿ ಮುಖ್ಯರಸ್ತೆಯ ಜಂಕ್ಷನ್‌ ಬಳಿ ಸೋಮವಾರವಷ್ಟೇ ರಸ್ತೆಗುಂಡಿಗೆ ಬೀಳುವುದನ್ನು ತಪ್ಪಿಸಲು ಹೋದ ಯುವಕನ ಮೇಲೆ ಬಸ್‌ ಹರಿದು ಆತ ಸಾವನ್ನಪ್ಪಿದ್ದಾನೆ’ ಎಂಬ ಹಿರಿಯ ವಕೀಲ ಆದಿತ್ಯ ಸೋಂಧಿ ಅವರ ಹೇಳಿಕೆಯಿಂದ ಕೆರಳಿ ಕೆಂಡವಾದ ಹೈಕೋರ್ಟ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

‘ರಸ್ತೆಯಲ್ಲಿನ ತೆರೆದ ಗುಂಡಿಗಳಿಂದ ಜನರು ಸಾವು ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್‌ ಮೆನನ್‌ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು (ಪಿಐಎಲ್) ಮಂಗಳವಾರ ಮುಂದುವರಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿ ಎಂಜಿನಿಯರ್‌ಗಳಿಗೆ ಇನ್ನಿಲ್ಲದಂತೆ ಬೆವರಿಳಿಸಿತು.

ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರನ್ನು ಪ್ರಶ್ನಿಸಿದ ದಿನೇಶ್‌ ಮಾಹೇಶ್ವರಿ, ‘ಆದಿತ್ಯ ಸೋಂಧಿ ಅವರು ಹೇಳುತ್ತಿರುವುದು ನಿಜವೇ’ ಎಂದು ಕೇಳಿದರು.

ಇದಕ್ಕೆ ಶ್ರೀನಿಧಿ, ‘ಅಲ್ಲಿ ಒಳಚರಂಡಿ ಸಮಸ್ಯೆ ಇರುವುದರಿಂದ ಗುಂಡಿ ಮುಚ್ಚಲು ಆಗಿಲ್ಲ, ಮೇಲಾಗಿ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಆಡಳಿತ ಯಂತ್ರದ ಬಹುಭಾಗ ಅಲ್ಲಿಗೆ ವರ್ಗಾವಣೆಗೊಂಡಿದೆ’ ಎಂದು ಉತ್ತರಿಸಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಹೇಶ್ವರಿ, ‘ನಿಮ್ಮ ಉತ್ತರ ತೃಪ್ತಿಕರವಾಗಿಲ್ಲ. ನಗರದಲ್ಲಿನ ಗುಂಡಿ ಮುಚ್ಚುವಂತೆ ಹೇಳಿ ಆರು ತಿಂಗಳಾಯಿತು. ನೀವಿನ್ನೂ ನಾಳೆ ಮುಚ್ತೀವಿ, ನಾಳಿದ್ದು ಮುಚ್ತೀವಿ ಎಂದು ಆಟ ಆಡ್ತಿದ್ದೀರಾ, ನಿಮ್ಮ ಜವಾಬ್ದಾರಿಗಳನ್ನು ಮತ್ತೊಬ್ಬರ ಹೆಗಲಿಗೆ ವರ್ಗಾಯಿಸಿ ಉಡಾಫೆಯಿಂದ ವರ್ತಿಸುತ್ತಿದ್ದೀರಾ’ ಎಂದು ಎಂಜಿನಿಯರ್‌ಗಳಿಗೆ ತರಾಟೆಗೆ ತೆಗೆದುಕೊಂಡರು.

‘ನೀವು ಹೀಗೆಯೇ ಉತ್ತರ ಕೊಡುತ್ತಾ ಹೋದರೆ ಕೋರ್ಟ್‌ ತನ್ನ ಭಾಷೆಯನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಬೇಕಾಗುತ್ತದೆ’ ಎಂದು ಶ್ರೀನಿಧಿ ಅವರನ್ನು ಎಚ್ಚರಿಸಿದರು.

‘ಈ ಅರ್ಜಿ ಸಲ್ಲಿಸಿ ಮೂರು ವರ್ಷವಾಗಿದೆ. ಆದರೆ ಏನೂ ಕೆಲಸ ಆಗಿಲ್ಲ. ಕೋರ್ಟ್‌ ಏನೋ ಒಂದು ಆದೇಶ ಮಾಡುತ್ತೆ. ನೋಡಿಕೊಂಡರಾಯಿತು ಬಿಡು ಎಂದುಕೊಂಡಿದ್ದೀರಾ, ಬಿಬಿಎಂಪಿ ವಲಯದಲ್ಲಿ ಎಷ್ಟು ವಲಯಗಳಿವೆ, ಎಷ್ಟು ಎಂಜಿನಿಯರ್‌ಗಳಿದ್ದಾರೆ, ಈಗ ಕೋರ್ಟ್‌ಗೆ ಎಷ್ಟು ಜನ ಎಂಜಿನಿಯರ್‌ಗಳು ಬಂದಿದ್ದಾರೆ’ ಎಂದು ಖಾರವಾಗಿ ಪ್ರಶ್ನಿಸಿದರು.

ತಕ್ಷಣವೇ ನಾಲ್ಕು ಜನ ಎಂಜನಿಯರ್‌ಗಳು ಎದ್ದು ನ್ಯಾಯಪೀಠದ ಬಳಿ ಹೋದರು. ಆಗ ಮಾಹೇಶ್ವರಿ, ‘ಇವರೆಲ್ಲಾ ಇಲ್ಲಿಗೆ ಏಕೆ ಬಂದಿದ್ದಾರೆ, ಕೋರ್ಟ್‌ ಇವರನ್ನು ಬರ ಹೇಳಿತ್ತಾ, ಫೀಲ್ಡ್‌ನಲ್ಲಿ ಹೋಗಿ ಕೆಲಸ ಮಾಡುವುದು ಬಿಟ್ಟು ಇಲ್ಲೇನು ಜಾಲಿ ಪಿಕ್‌ನಿಕ್‌ ಮಾಡಲು ಬಂದಿದ್ದೀರಾ, ನಿಮ್ಮನ್ನು ಬರ ಹೇಳಿದವರು ಯಾರು’ ಎಂದು ಅಬ್ಬರಿಸಿದರು.

ಇದಕ್ಕೆ ಶ್ರೀನಿಧಿ, ‘ನಾನೇ ಬರಹೇಳಿದ್ದೇನೆ. ಮಾಹಿತಿ ಬೇಕಾಗಿತ್ತು’ ಎಂದು ಸಮಾಧಾನಪಡಿಸಲು ಮುಂದಾದರು.

ಇದಕ್ಕೆ ತೀವ್ರ ಬೇಸರ ಹೊರಹಾಕಿದ ಮಾಹೇಶ್ವರಿ, ‘ಹೇ ಭಗವಾನ್‌, ಇದೊಂದು ದುಃಸ್ವಪ್ನವಾಗಿದೆಯಲ್ಲಾ’ ಎಂದು ಅಸಹಾಯಕತೆ ಹೊರಹಾಕಿದರು.

ಅರ್ಜಿದಾರರ ಪರ ವಕೀಲೆ ಎಸ್‌.ಆರ್‌.ಅನುರಾಧಾ, ‘ನಗರದ ಗುಂಡಿಗಳ ಭರ್ತಿ ತೃಪ್ತಿಕರವಾಗಿಲ್ಲ. ಈ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್‌ನ ಎರಡನೇ ಗೇಟ್ ಬಳಿ ಗುಂಡಿ ಮುಚ್ಚಿಲ್ಲ ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದೆ. ಅದಿನ್ನೂ ಹಾಗೇ ಇದೆ’ ಎಂದರು.

‘ಇಲ್ಲಾ ನಿನ್ನೆ ಸಂಜೆಯಷ್ಟೇ ಮುಚ್ಚಿದ್ದೇವೆ’ ಎಂದರು.

‘ಹಾಗಾದರೆ ನಾಳೆ ವಿಚಾರಣೆ ಇದೆ ಎಂದಾಗ ನೀವು ಹಿಂದಿನ ಗುಂಡಿ ಮುಚ್ಚುತ್ತೀರಾ’ ಎಂದು ಮಾಹೇಶ್ವರಿ, ‘ಎಲ್ಲೆಲ್ಲೆ ಎಷ್ಟು ಗುಂಡಿಗಳಿವೆ, ಯಾವ ವಲಯ ಅತ್ಯಂತ ದುಃಸ್ಥಿತಿಯಲ್ಲಿದೆ’ ಎಂದು ಪ್ರಶ್ನಿಸಿದರು.

ಉತ್ತರಿಸಲು ಕೊಂಚ ತಡಕಾಡಿದ ಶ್ರೀನಿಧಿ, ‘ಮಹದೇವಪುರ’ ಎಂದರು. ‘ಹಾಗಾದರೆ, ಮಹದೇವಪುರದ ಎಂಜಿನಿಯರ್‌ಗಳು ಏನು ಮಾಡುತ್ತಿದ್ದಾರೆ. ಕೋರ್ಟ್‌ಗೆ ಫೈಲು ಹಿಡಿದುಕೊಂಡು ಬೆಳಿಗ್ಗೆಯಿಂದ ಸಂಜೆತನಕ ಪಿಕ್‌ನಿಕ್‌ ಮಾಡಲು ಬರುತ್ತಿದ್ದಾರಾ’ ಎಂದು ಕಿಡಿ ಕಾರಿದರು.

‘ನೀವು ಬರೀ ಸಬೂಬು ಹೇಳಿದ್ದೇ ಆಯಿತು. ಬುಧವಾರದ ಒಳಗೆ ಅಲ್ಲಿ ಒಂದೂ ಗುಂಡಿ ಇರಕೂಡದು’ ಎಂದು ತಾಕೀತು ಮಾಡಿದರು.

‘ದಯವಿಟ್ಟು ಬುಧವಾರ ಎಂದು ಗಡುವು ನೀಡಬೇಡಿ, ಒಂದಷ್ಟು ಸಮಯ ಕೊಡಿ’ ಎಂದು ಶ್ರೀನಿಧಿ ಮಾಡಿದ ಮನವಿಯನ್ನು ತಳ್ಳಿ ಹಾಕಿದ ನ್ಯಾಯಮೂರ್ತಿಗಳು, ‘ಇದೇ 17ರೊಳಗೆ ಮಹದೇವಪುರ ಮಾತ್ರವಲ್ಲ ಎಂಟೂ ವಲಯದ ಯಾವ ಮೂಲೆಯಲ್ಲೂ ಒಂದೇ ಒಂದು ಗುಂಡಿ ಇರಕೂಡದು. ಇಲ್ಲದಿದ್ದರೆ ಮುಂದಿನ ವಿಚಾರಣೆ ವೇಳೆ ನಾನು ಲಿಖಿತ ಆದೇಶ ಬರೆಸಿ, ಏನು ಮಾಡಬೇಕೊ ಅದನ್ನು ಮಾಡುತ್ತೇನೆ’ ಎಂದು ಕಠಿಣ ಧ್ವನಿಯಲ್ಲಿ ಎಚ್ಚರಿಕೆ ನೀಡಿದರು.

ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.

**

‘ಚಲ್ತಾ ಹೈ ಧೋರಣೆ ಬಿಟ್ಟುಬಿಡಿ’

ನ್ಯಾಯಪೀಠದ ಎದುರು ಬಂದು ನಿಂತ ಮುಖ್ಯ ಎಂಜಿನಿಯರ್ ಪರಮೇಶ್ವರಯ್ಯ ಹಾಗೂ ಸೋಮಶೇಖರ್‌ ಅವರು ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆಗಳಿಗೆ ಕೆಲಕಾಲ ತಬ್ಬಿಬ್ಬಾದರು.

‘ಗುಂಡಿ ಮುಚ್ಚಲು ಜಲಮಂಡಳಿ ಪೈಪುಗಳದ್ದೇ ದೊಡ್ಡ ಸಮಸ್ಯೆ ನಿತ್ಯವೂ ಅವುಗಳ ಕಡೆ ಗಮನಹರಿಸಬೇಕು’ ಎಂದು ಸೋಮಶೇಖರ್‌ ಹೇಳಿದರು.

ಈ ಮಾತಿಗೆ ವ್ಯಗ್ರರಾದ ನ್ಯಾಯಮೂರ್ತಿಗಳು, ‘ನೀವು ಹೀಗೆಯೇ ಹೇಳುತ್ತಾ ಹೋದರೆ ಇದು ಮುಗಿಯದ ಕಥೆ. ನಿಮ್ಮ ಜವಾಬ್ದಾರಿಗಳನ್ನು ಕೇವಲ ವರ್ಗಾವಣೆ ಮಾಡುತ್ತಿದ್ದೀರಿ. ಹೀಗಾದರೆ ಈ ಸಮಸ್ಯೆ ಬಗೆಹರಿಯೋದಿಲ್ಲ. ನಿಮಗೆ ಕೆಲಸ ಮಾಡುವ ವಿಧಾನವೇ ಗೊತ್ತಿದ್ದಂತಿಲ್ಲ. ಮುಂದಿನ ವಿಚಾರಣೆ ವೇಳೆ ನೀವು ಮೆಷರ್‌ಮೆಂಟ್‌ ಪುಸ್ತಕಗಳಿಗೆ ಸಹಿ ಮಾಡಿರುವುದನ್ನು ಮತ್ತು ಎಷ್ಟು ಕೆಲಸಗಳಿಗೆ ಒಪ್ಪಿಗೆ ಕೊಟ್ಟಿದ್ದೀರಿ ಎಂಬುದರ ವಿವರ ನೀಡಿ’ ಎಂದು ತಾಕೀತು ಮಾಡಿದರು.

**

ಬೆಂಗಳೂರಿನ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಾನು ಮಧ್ಯರಾತ್ರಿವರೆಗೂ ಕುಳಿತು ಕಲಾಪ ನಡೆಸಬಲ್ಲೆ.
- ದಿನೇಶ್ ಮಾಹೇಶ್ವರಿ, ಮುಖ್ಯ ನ್ಯಾಯಮೂರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು