ಶನಿವಾರ, ಏಪ್ರಿಲ್ 1, 2023
25 °C
ಐಪಿಎಲ್ ಫೈನಲ್ ಪಂದ್ಯಕ್ಕೆ ಭಾರಿ ಬಾಜಿ * ಸಿಸಿಬಿ ದಾಳಿ, ಬುಕ್ಕಿ ಪರಾರಿ

ಬೆಟ್ಟಿಂಗ್ ಏಜೆಂಟ್ ಸೆರೆ; ₹ 70.33 ಲಕ್ಷ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದ ಕೋರಮಂಗಲದ ಮನೆಯೊಂದರ ಮೇಲೆ ಭಾನುವಾರ ತಡರಾತ್ರಿ ದಾಳಿ ನಡೆಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು, ಚಾಂದ್‌ ಪಾಷಾ (25) ಎಂಬಾತನನ್ನು ಬಂಧಿಸಿ ₹ 70.33 ಲಕ್ಷ ನಗದು ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

‘ಚೆನ್ನೈ ಸೂಪರ್‌ ಕಿಂಗ್ಸ್’ ಹಾಗೂ ‘ಮುಂಬೈ ಇಂಡಿಯನ್ಸ್’ ತಂಡಗಳ ನಡುವೆ ಭಾನುವಾರ ಫೈನಲ್ ಪಂದ್ಯ ನಿಗದಿಯಾಗಿತ್ತು. ಕೋರಮಂಗಲ 3ನೇ ಬ್ಲಾಕ್‌ನಲ್ಲಿ ಮನೆ ಬಾಡಿಗೆ ಪಡೆದಿದ್ದ ಸೈಯದ್ ಇಲಿಯಾಜ್ ಎಂಬ ಬುಕ್ಕಿ, ಪಿಳ್ಳಣ್ಣ ಗಾರ್ಡನ್‌ನ ಚಾಂದ್‌ ಪಾಷಾನನ್ನು ಬಳಸಿಕೊಂಡು ಮೊಬೈಲ್ ಆ್ಯಪ್‌ಗಳ ಮೂಲಕ ಆ ಮನೆಯಿಂದಲೇ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ.

ಪ್ಲೇ 365 ವಿನ್, ಲೋಟಸ್ ಬುಕ್ ಹಾಗೂ ಸೆವೆನ್ ಬೆಟ್ ಎಂಬ ಆ್ಯಪ್‌ಗಳನ್ನು ಬಳಸಿ ಗ್ರಾಹಕರನ್ನು ಸಂಪರ್ಕಿಸಿದ್ದ ಆರೋಪಿಗಳು, ₹ 1,000ಕ್ಕೆ ₹ 1,300 ನೀಡುವುದಾಗಿ ಬಾಜಿ ಕಟ್ಟಿಸಿಕೊಂಡಿದ್ದರು. ನಾಣ್ಯ ಚಿಮ್ಮಿಕೆಯಿಂದ ಹಿಡಿದು ಕೊನೆಯ ‌ಎಸೆತದವರೆಗೆ ಪ್ರತಿ ಹಂತದಲ್ಲೂ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬುಕ್ಕಿಗಳೊಂದಿಗೆ ಸಂಪರ್ಕ: ‘ಆ್ಯಪ್‌ಗಳ ಮೂಲಕ ಮಾತ್ರವಲ್ಲದೇ, ಪರಿಚಿತ ಗ್ರಾಹಕರು ಸಹ ಆ ಮನೆಗೇ ಬಂದು ಪಾಷಾನ ಬಳಿ ಬಾಜಿ ಕಟ್ಟಿ ಹೋಗಿದ್ದರು. ಸಂಗ್ರಹವಾದ ಹಣವನ್ನು ಪಂದ್ಯ ಮುಗಿದ ಬಳಿಕ ಇಲಿಯಾಜ್‌ಗೆ ತಲುಪಿಸುವುದು ಪಾಷಾನ ಜವಾಬ್ದಾರಿಯಾಗಿತ್ತು. ಇದಕ್ಕೆ ಆತನಿಗೆ ಒಂದು ಪಂದ್ಯಕ್ಕೆ ₹ 1.5 ಲಕ್ಷದವರೆಗೆ ಕಮಿಷನ್ ಸಿಗುತ್ತಿತ್ತು. ಆ ಮನೆಯಲ್ಲಿ ಸದ್ಯ ₹ 70.33 ಲಕ್ಷ ನಗದು ಜಪ್ತಿಯಾಗಿದ್ದು, ಬ್ಯಾಂಕ್ ಖಾತೆಯ ವಿವರ ಪರಿಶೀಲಿಸಬೇಕಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಬೈ, ರಾಜಸ್ಥಾನ, ಪಂಜಾಬ್, ಹರಿಯಾಣ ಹಾಗೂ ಕೋಲ್ಕತ್ತಾದ ಬುಕ್ಕಿಗಳು, ಇಲಿಯಾಜ್‌ನನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ದಂಧೆ ನಡೆಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಸದ್ಯ ಇಲಿಯಾಜ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಸಿಸಿಬಿ ಕಾನ್‌ಸ್ಟೆಬಲ್‌ನ ಸೋದರನೂ ಭಾಗಿ

ಬೆಟ್ಟಿಂಗ್ ದಂಧೆ ವಿರುದ್ಧ ಶ್ರೀರಾಂಪುರ ಪೊಲೀಸರು ಇತ್ತೀಚೆಗೆ ನಡೆಸಿದ್ದ ದಾಳಿಯಲ್ಲಿ ಸಿಸಿಬಿ ಕಾನ್‌ಸ್ಟೆಬಲ್‌ ಒಬ್ಬರ ಸೋದರ ಪಿ.ವಿ.ಹರೀಶ್ ಕುಮಾರ್ ಹಾಗೂ ಆತನ ಸಹಚರ ಯಲಚೇನಹಳ್ಳಿಯ ದೇವೇಂದ್ರಪ್ಪ ಸಿಕ್ಕಿಬಿದ್ದಿದ್ದರು.

ಏ.27ರಂದು ದಯಾನಂದನಗರ 6ನೇ ಕ್ರಾಸ್‌ನಲ್ಲಿ ದೇವೇಂದ್ರಪ್ಪ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಆತನಿಂದ ₹ 6.28 ಲಕ್ಷ ಜಪ್ತಿ ಮಾಡಿದ್ದರು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತ ಹರೀಶ್‌ನ ಹೆಸರು ಬಾಯ್ಬಿಟ್ಟಿದ್ದ. ನಂತರ ಕೆಂಪಾಪುರ ಅಗ್ರಹಾರದ ‘ಇ.ಟಿ.ಎ’ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಹರೀಶ್‌ನನ್ನೂ ಬಂಧಿಸಿದ್ದರು. ಆತನ ಬಳಿ ₹ 2.50 ಲಕ್ಷ ನಗದು ಹಾಗೂ ವಿವಿಧ ಕಂಪನಿಗಳ ಎಂಟು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿತ್ತು.

‘ಹುಬ್ಬಳ್ಳಿಯ ರಾಮು, ಅನಿಲ್, ಗುಜರಾತ್‌ನ ಗಣೇಶ್ ಸೇರಿದಂತೆ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಶ್ರೀರಾಮಪುರ ಪೊಲೀಸರು ಹೇಳಿದ್ದಾರೆ.

‘ಮೋಸ ಹೋಗಬೇಡಿ’

‘ಮೈದಾನದಲ್ಲಿ ನಡೆಯುವ ಪಂದ್ಯಕ್ಕೂ, ಅದು ಟಿ.ವಿಯಲ್ಲಿ ಪ್ರಸಾರವಾಗುವುದಕ್ಕೂ 6–7 ಸೆಕೆಂಡ್ ವ್ಯತ್ಯಾಸವಿರುತ್ತದೆ. ಹೀಗಾಗಿ, ಬುಕ್ಕಿಗಳು ತಮ್ಮ ಹುಡುಗರನ್ನು ವೀಕ್ಷಕರಂತೆ ಮೈದಾನಕ್ಕೆ ಕಳುಹಿಸಿ ಅವರಿಂದ ಮೊದಲೇ ಮಾಹಿತಿ ಪಡೆದುಕೊಳ್ಳುತ್ತಾರೆ. ಆ ನಂತರ ಆ್ಯಪ್‌ನಲ್ಲಿ ‌ಬೆಟ್ಟಿಂಗ್ ಕಟ್ಟಿಸಿಕೊಂಡು ಸುಲಭವಾಗಿ ಹಣ ಕಳುಹಿಸುತ್ತಾರೆ. ಹೀಗಾಗಿ, ಆಮಿಷಕ್ಕೆ ಒಳಗಾಗಿ ಯಾರೂ ಮೋಸ ಹೋಗಬೇಡಿ’ ಎಂದು ಸಿಸಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು