ಶುಕ್ರವಾರ, ಏಪ್ರಿಲ್ 23, 2021
22 °C
ಜನರ ಬವಣೆಗಳನ್ನು ತಾಳ್ಮೆಯಿಂದ ಆಲಿಸಿದ ಶಾಸಕ ಎಸ್‌.ಆರ್‌. ವಿಶ್ವನಾಥ್‌ l ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಲು ವಾಗ್ದಾನ

ರಸ್ತೆ ದುರಸ್ತಿ, ಫುಟ್‌ಪಾತ್‌ ಒತ್ತುವರಿ ತೆರವಿಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊಳವೆ ಅಳವಡಿಸಲು ಅಗೆದ ಬಳಿಕ ದುರಸ್ತಿ ಕಾಣದ ರಸ್ತೆಗಳು, ಒತ್ತುವರಿಯಾದ ಪಾದಚಾರಿ ಮಾರ್ಗಗಳು, ಕೋತಿ, ಹಂದಿ ಹಾಗೂ ಬೀದಿ ನಾಯಿಗಳ ಕಾಟ, ಪದೇ ಪದೇ ಕೈಕೊಡುವ ಬೀದಿ ದೀಪ, ಕಸ ವಿಲೇವಾರಿ ಸಮಸ್ಯೆ... 

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಭಾನುವಾರ ಏರ್ಪಡಿಸಿದ್ದ ಯಲಹಂಕ ವಿಧಾನಸಭಾ ಕ್ಷೇತ್ರದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ಹೇಳಿಕೊಂಡ ಪ್ರಮುಖ ಸಮಸ್ಯೆಗಳಿವು. ಜನರ ಬವಣೆಗಳನ್ನು ತಾಳ್ಮೆಯಿಂದ ಆಲಿಸಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಅವುಗಳಿಗೆ ಶೀಘ್ರವೇ ಪರಿಹಾರ ಒದಗಿಸುವ ವಾಗ್ದಾನ ನೀಡಿದರು. 

ಕೊಳವೆ ಅಳವಡಿಸುವ ಸಲುವಾಗಿ ಜಲಮಂಡಳಿಯವರು ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿದ್ದಾರೆ. ತಿಂಗಳು ಕಳೆದ ಬಳಿಕವೂ ಅವುಗಳನ್ನು ದುರಸ್ತಿಗೊಳಿಸಿಲ್ಲ ಎಂಬ ಬಗ್ಗೆ ಅನೇಕರು ಅಳಲು ತೋಡಿಕೊಂಡರು.

ಈ ಸಮಸ್ಯೆ ಹಿಂದಿನ ಕಾರಣವನ್ನೂ ವಿವರಿಸಿದ ಶಾಸಕರು, ‘ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಸೋರಿಕೆ ತಡೆಯಲು ಹಳೆಯ ಕೊಳವೆಗಳನ್ನು ಬದಲಾಯಿಸುವ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಕಾವೇರಿ ನೀರಿನ ಹೊಸ ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆಯ ಹೊಸ ಕೊಳವೆ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಕೊಳವೆ ಅಳವಡಿಸುವ ಕೆಲಸ ಮುಗಿದ ಬಳಿಕ ಮನೆ ಮನೆಗೆ ನೀರಿನ ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಬೇಕು. ಇದಕ್ಕೆ ಇನ್ನೂ ಒಂದು ವರ್ಷ ಬೇಕಾಗಬಹುದು. ಆ ಬಳಿಕವೇ ಅಗೆದ ಮಾರ್ಗಗಳಿಗೆ ಹೊಸತಾಗಿ ಡಾಂಬರೀಕರಣ ಸಾಧ್ಯ. ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು 15 ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಯಲಹಂಕದ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿದೆ. ಕೆಲವರು ಪರವಾನಗಿ ಪಡೆಯದೆಯೇ ಮಳಿಗೆಗಳನ್ನು ನಡೆಸುತ್ತಿದ್ದಾರೆ. ಅನೇಕ ಕಡೆ ಪಾದಚಾರಿ ಮಾರ್ಗಗಳನ್ನು ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವರು ಕಾರುಗಳನ್ನು ಫುಟ್‌ಪಾತ್‌ನಲ್ಲಿ ನಿಲ್ಲಿಸುವುದರಿಂದಲೂ ಜನರ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಕೆಲವೆಡೆ ವ್ಯಾಪಾರಿಗಳು ರಸ್ತೆಯನ್ನೂ ಆಕ್ರಮಿಸಿರುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಪ್ರತಿನಿಧಿಗಳು ಅಹವಾಲು ಹೇಳಿಕೊಂಡರು. ಕೆಲವೆಡೆ ಫುಟ್‌ಪಾತ್‌ನಲ್ಲೇ ಗುಜರಿ ಸೇರಬೇಕಾದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಟಿ.ಎಲ್‌.ಪ್ರೇಮ್‌ಕುಮಾರ್‌ ದೂರಿದರು.

ಜನರು ಓಡಾಡುವ ಜಾಗವನ್ನು ಯಾರೇ ಆಕ್ರಮಿಸಿಕೊಂಡಿದ್ದರೂ, ಅದನ್ನು ಮುಲಾಜಿಲ್ಲದೇ ತೆರವುಗೊಳಿಸಬೇಕು. ಪರವಾನಗಿ ಪಡೆಯದೆ ಅಂಗಡಿಗಳನ್ನು ಆರಂಭಿಕ ಹಂತದಲ್ಲೇ ಮುಚ್ಚಿಸಬೇಕು ಎಂದು ಶಾಸಕರು ಸೂಚಿಸಿದರು. 

‘ಬೀದಿ ಬದಿ ವ್ಯಾಪಾರಿಗಳು ಪಾದಚಾರಿಗಳು ನಡೆದಾಡಲು ಅಡ್ಡಿಪಡಿಸುವಂತಿಲ್ಲ. ಪಾದಚಾರಿ ಮಾರ್ಗದಲ್ಲಿದ್ದ 35 ಅಂಗಡಿಗಳನ್ನು ಶನಿವಾರ ತೆರವುಗೊಳಿಸಿದ್ದೇವೆ. ಅವರಿಗಾಗಿ ಪ್ರತ್ಯೇಕ ಸ್ಥಳ ಗುರುತಿಸಲಿದ್ದೇವೆ’ ಎಂದು ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್‌ ಮಾಹಿತಿ ನೀಡಿದರು.

ಬಹುತೇಕ ವಾರ್ಡ್‌ಗಳಲ್ಲಿ ಬೀದಿದೀಪಗಳು ಪದೇ ಪದೇ ಹದಗೆಡುತ್ತಿವೆ. ಇದರಿಂದ ಕಳ್ಳರ ಹಾವಳಿಯೂ ಹೆಚ್ಚುತ್ತಿದೆ. ರಾತ್ರಿ ವೇಳೆ ಮಹಿಳೆಯರು ಓಡಾಡಲು ಆತಂಕ ಪಡುವ ಸ್ಥಿತಿ ಇದೆ ಎಂಬ ಬಗ್ಗೆಯೂ ಅನೇಕರು ದೂರು ಹೇಳಿದರು.

‘ಬಿಬಿಎಂಪಿ ವ್ಯಾಪ್ತಿಯ ಎಲ್ಲ ಬೀದಿಗಳಿಗೂ ಎಲ್‌ಇಡಿ ದೀಪ ಅಳವಡಿಸಲು ಯೋಜನೆ ರೂಪಿಸಲಾಗಿದೆ. ‘ಸ್ಮಾರ್ಟ್‌ ಸ್ಟ್ರೀಟ್‌ ಲೈಟ್‌’ ಯೋಜನೆ ಅಡಿ ಎಲ್‌ಇಡಿ ದೀಪ ಅಳವಡಿಸುವ ನಿಟ್ಟಿನಲ್ಲಿ ಜಾಗತಿಕ ಟೆಂಡರ್‌ ಕರೆಯಲಾಗಿದೆ. ಹಾಗಾಗಿ ಸದ್ಯ ಹೊಸ ಬೀದಿದೀಪಗಳನ್ನು ಅಳವಡಿಸುವುದನ್ನು ಸ್ಥಳೀಯವಾಗಿ ಕೈಗೆತ್ತಿಕೊಳ್ಳುತ್ತಿಲ್ಲ. ಮಳೆಗಾಲ ಆಗಿರುವುದರಿಂದ ಹೆಚ್ಚು ಬೀದಿದೀಪಗಳು ಹಾಳಾಗುತ್ತಿವೆ. ಅವುಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕರು ತಿಳಿಸಿದರು.

‘ಆಯಾ ವಾರ್ಡ್‌ನಲ್ಲೇ ವಿಲೇವಾರಿಯಾಗಲಿ ಕಸ’
‘ನಮ್ಮ ಮನೆ ಕಸವನ್ನು ನಮ್ಮ ವಾರ್ಡ್‌ನಲ್ಲೇ ವಿಲೇವಾರಿ ಮಾಡುವ ವ್ಯವಸ್ಥೆ ರೂಪಿಸಬೇಕು. ಮನೆಯ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸುವುದು, ತಾರಸಿ ತೋಟಗಳಿಗೆ ಅವುಗಳನ್ನು ಬಳಸುವ ಪರಿಪಾಠವನ್ನು ಜನ ಬೆಳೆಸಿಕೊಳ್ಳಬೇಕು. ಕಸಮುಕ್ತ ಹಾಗೂ ಪ್ಲಾಸ್ಟಿಕ್‌ ಮುಕ್ತ ಸುಂದರ ಯಲಹಂಕ ನಿರ್ಮಾಣದ ಕನಸು ಸಾಕಾರಗೊಳಿಸಲು ಕೈಜೋಡಿಸಬೇಕು’ ಎಂದು ಶಾಸಕ ವಿಶ್ವನಾಥ್‌ ಮನವಿ ಮಾಡಿದರು.

‘ನಮ್ಮ ವಾರ್ಡ್‌ನ ಕಸವನ್ನು ಮಾವಳ್ಳಿಪುರ, ಬೆಲ್ಲಹಳ್ಳಿಗೆ ಕಳುಹಿಸಿಕೊಡುವುದು ಸರಿಯೇ? ಬೇರೆ ಕಡೆಯ ಕಸದಿಂದಾಗಿ ಅಲ್ಲಿನ ಜನ ದುರ್ವಾಸನೆ ಸಮಸ್ಯೆ ಎದುರಿಸಬೇಕೇ’ ಎಂದು ಪ್ರಶ್ನಿಸಿದರು.

‘ಯಲಹಂಕದಲ್ಲಿ ಒಂದು ಕಾಲದಲ್ಲಿ ಶೇಕಡ 65ರಷ್ಟು ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ಪ್ರತ್ಯೇಕಿಸಿ ನೀಡಲಾಗುತ್ತಿತ್ತು. ಆದರೆ, ಇತ್ತೀಚಿಗೆ ಜನ ಈ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಕಸವನ್ನು ಬೇಕಾಬಿಟ್ಟಿ ಎಸೆಯುತ್ತಿದ್ದಾರೆ’ ಎಂದರು.

‘ಕಸ ವಿಂಗಡಿಸಿ ಕೊಡದವರಿಗೆ ಬಿಬಿಎಂಪಿ ಆಗಸ್ಟ್‌ನಿಂದ ₹ 500 ದಂಡ ವಿಧಿಸಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇಡಲು ಮಾರ್ಷಲ್‌ಗಳನ್ನು ನೇಮಿಸಲಿದೆ’ ಎಂದರು.

‘ನೀರು ಎಲ್ಲಿಂದ ತರಲಿ’
‘ಬೆಂಗಳೂರು ನಗರ ಇನ್ನು ಕೆಲವೇ ವರ್ಷಗಳಲ್ಲಿ ತೀವ್ರ ಜಲ ಕಂಟಕವನ್ನು ಎದುರಿಸಲಿದೆ. ರಸ್ತೆ ಬೇಕು ಎಂದರೆ ಅನುದಾನ ಕೊಡಬಹುದು. ಆದರೆ, ಕುಡಿಯಲು ನೀರು ಕೊಡಿ ಎಂದರೆ, ಇಲ್ಲದ ನೀರನ್ನು ಎಲ್ಲಿಂದ ತರಲಿ’ ಎಂದು ವಿಶ್ವನಾಥ್‌ ಪ್ರಶ್ನಿಸಿದರು.

‘ಮನೆಯ ಚಾವಣಿ ಮೇಲೆ ಬೀಳುವ ಮಳೆ ನೀರಿನ ಒಂದು ಹನಿಯೂ ಹೊರಹೋಗದಂತೆ ತಡೆದು ಬಳಸಬೇಕು. ಸಾಧ್ಯವಿರುವ ಕಡೆಗಳಲ್ಲೆಲ್ಲ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಅಳವಡಿಸಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ಕ್ಷೇತ್ರದ ಎಲ್ಲ ಕೆರೆಗಳು ಸುಸ್ಥಿತಿಯಲ್ಲಿದ್ದು, ಅವುಗಳಲ್ಲಿ ಮಳೆ ನೀರು ಸಂಗ್ರಹಿಸಲಾಗುತ್ತಿದೆ. ಮಳೆ ನೀರು ಚರಂಡಿ ನಿರ್ಮಿಸುವಾಗಲೂ ಅಲ್ಲಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದೇವೆ’ ಎಂದರು.

‘ಅನುದಾನ ಹಂಚಿಕೆಯಲ್ಲಿ ತಾರತಮ್ಯ’
‘ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾದ 110 ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗಿದೆ. ಯಲಹಂಕ ಕ್ಷೇತ್ರಕ್ಕೆ ನಯಾಪೈಸೆ ಕೊಟ್ಟಿಲ್ಲ. ನಗರ ಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗಿದೆ’ ಎಂದು ವಿಶ್ವನಾಥ್ ಆರೋಪಿಸಿದರು.

‘ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಈ ಲೋಪವನ್ನು ಒಪ್ಪಿಕೊಂಡಿದ್ದು, ಅನುದಾನ ನೀಡುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ಕೋತಿ, ಹಂದಿ ಕಾಟವೂ... ಬೀದಿನಾಯಿ ಸ್ಥಾನಪಲ್ಲಟವೂ
ಯಲಹಂಕ ನ್ಯೂಟೌನ್‌, ಚೌಡೇಶ್ವರಿ ವಾರ್ಡ್‌ಗಳಲ್ಲಿ ಕೋತಿಗಳು, ಹಂದಿಗಳು ಹಾಗೂ ಬೀದಿನಾಯಿಗಳ ಕಾಟ ನಿಯಂತ್ರಣದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. 

‘ಕೊಂಡಪ್ಪ ಬಡಾವಣೆಯಲ್ಲಿ ಹಂದಿಗಳನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದೆವು. ದಲಿತ ಸಂಘರ್ಷ ಸಮಿತಿಯವರು, ‘15 ದಿನ ಕಾಲಾವಕಾಶ ಕೊಡಿ. ಹಂದಿಗಳು ಬೀದಿಗೆ ಬಾರದಂತೆ ನೋಡಿಕೊಳ್ಳುತ್ತೇವೆ’ ಎಂದು ಕೇಳಿಕೊಂಡಿದ್ದಾರೆ. ಆ ಬಳಿಕವೂ ಹಂದಿಗಳು ಕಾಣಿಸಿಕೊಂಡರೆ ಕ್ರಮಕೈಗೊಳ್ಳುತ್ತೇವೆ’ ಎಂದು ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕ ರಮೇಶ್‌ ತಿಳಿಸಿದರು. ‘ಹಂದಿ ಹಾವಳಿ ತಡೆಯದಿದ್ದರೆ ನಿಮ್ಮ ಮನೆ ಮುಂದೆ ಹಂದಿ ತಂದು ಬಿಡಬೇಕಾಗುತ್ತದೆ’ ಎಂದು ಶಾಸಕರು ಚಟಾಕಿ ಹಾರಿಸಿದರು.

‘ಮನೆಯ ಬಳಿ ಕೊಟ್ಟಿಗೆ ನಿರ್ಮಿಸಿಕೊಂಡು ಹಂದಿ ಸಾಕಲು ಕಲ್ಯಾಣ ಕಾರ್ಯಕ್ರಮದಡಿ ಅನುದಾನ ಒದಗಿಸಬಹುದು. ಆದರೆ, ಅವು ಬೀದಿಗೆ ಬಾರದಂತೆ, ಕೊಟ್ಟಿಗೆಯಿಂದ ಕೊಳಚೆ ನೀರು ಹೊರಬಾರದಂತೆ ನೋಡಿಕೊಳ್ಳುವುದು ಸಾಕುವವರ ಹೊಣೆ’ ಎಂದು ಜಂಟಿ ಆಯುಕ್ತ ಅಶೋಕ್‌ ಹೇಳಿದರು. 

‘ಕೋತಿಗಳನ್ನು ಹಿಡಿದು ಬೇರೆ ಕಡೆ ಬಿಡುವಂತಿಲ್ಲ. ಅವುಗಳ ಹಾವಳಿ ತಡೆಯುವ ಬಗ್ಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ’ ಎಂದು ಪಾಲಿಕೆ ಉಪವಲಯ ಅರಣ್ಯಾಧಿಕಾರಿ ಚಂದ್ರಪ್ಪ ತಿಳಿಸಿದರು. 

‘ನಮ್ಮ ಜನ ಕೋತಿಯನ್ನು ದೇವರು ಎಂದು ಪೂಜಿಸುವವರು. ಅವುಗಳನ್ನು ಕೊಲ್ಲುವುದಿಲ್ಲ. ಅವುಗಳನ್ನು ಕಾಡು ಇರುವ ಕಡೆ ಬಿಡಿ ಎಂದು

ಕೇಳುತ್ತಿದ್ದಾರೆ ಅ‌ಷ್ಟೇ. ಹಾಗೆಂದ ಮಾತ್ರಕ್ಕೆ ಅವುಗಳನ್ನು ತಂದು ನಮ್ಮ ಊರಿನಲ್ಲಿ ಬಿಡಬೇಡಿ’ ಎಂದು ಶಾಸಕರು ಹೇಳಿದಾಗ ನಗೆಯ ಅಲೆ ಉಕ್ಕಿತು. 

‘ಯಲಹಂಕ ವಲಯದಲ್ಲಿ ಏಪ್ರಿಲ್‌ನಲ್ಲಿ 350, ಮೇ ತಿಂಗಳಲ್ಲಿ 500 ಹಾಗೂ ಜೂನ್‌ನಲ್ಲಿ 543 ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ನಡೆಸಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳ ಕಿವಿ ತುದಿಯನ್ನು ಕತ್ತರಿಸಲಾಗುತ್ತದೆ’ ಎಂದು ರಮೇಶ್‌ ಮಾಹಿತಿ ನೀಡಿದರು.

‘ಈ ಅಂಕಿ ಅಂಶ ಒಪ್ಪಲು ಸಾಧ್ಯವಿಲ್ಲ. ನೀವು ವಾರ್ಡ್‌ವಾರು ಅಂಕಿಅಂಶ ನೀಡಿ’ ಎಂದು ವಿಶ್ವನಾಥ್‌ ಸೂಚಿಸಿದರು.

‘ನಾಯಿ ಹಿಡಿಯಲು ಹೋದಾಗ ಅದು ಬೇರೆ ವಾರ್ಡ್‌ಗೆ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತವೆ. ಹಾಗಾಗಿ ವಾರ್ಡ್‌ವಾರು ವಿವರ ಲಭ್ಯವಿಲ್ಲ’ ಎಂದು ಅಧಿಕಾರಿ ವಿವರಣೆ ನೀಡಿದರು.

‘ಮನುಷ್ಯರಾದರೂ ಸ್ನೇಹಜೀವಿಗಳು. ಎಲ್ಲರನ್ನೂ ಸಹಿಸಿಕೊಳ್ಳುತ್ತೇವೆ. ನಾಯಿಗಳು ಹಾಗಲ್ಲ. ಬೇರೆ ವಾರ್ಡ್‌ನ ನಾಯಿ ತಮ್ಮ ವಾರ್ಡ್‌ಗೆ ಬರಲು ಯಾವ ನಾಯಿಯೂ ಅವಕಾಶ ನೀಡುವುದಿಲ್ಲ’ ಎಂದು ಶಾಸಕರು ಹೇಳಿದಾಗ ಮತ್ತೆ ನಗೆಯ ಅಲೆ ಎದ್ದಿತು. 

‘ಎಲ್ಲೆಂದರಲ್ಲಿ ಆಹಾರ ಪದಾರ್ಥ ಹಾಗೂ ಮಾಂಸ ತ್ಯಾಜ್ಯವನ್ನು ಎಸೆಯುವುದಕ್ಕೆ ಕಡಿವಾಣ ಹಾಕಬೇಕು. ನಾಯಿ ಹಾವಳಿ ಹೆಚ್ಚಲು ಇದು ಕೂಡಾ ಕಾರಣ’ ಎಂದು ಶಾಸಕರು ಕಿವಿಮಾತು ಹೇಳಿದರು. ಎಬಿಸಿ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷೇತ್ರದ ಪ್ರಮುಖ ಅಭಿವೃದ್ಧಿ ಯೋಜನೆಗಳು
* ಯಲಹಂಕ ಪೊಲೀಸ್‌ ಠಾಣೆಯಿಂದ ಎನ್‌ಇಎಸ್‌ ವೃತ್ತದವರೆಗೆ ₹ 58 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ
* ಕೆಂಪೇಗೌಡ ವೃತ್ತದ ಬಳಿ ₹ 25 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ
* ಎಂ.ಎಸ್‌.ಪಾಳ್ಯ ವೃತ್ತದ ಬಳಿ ₹ 42 ಕೋಟಿ ವೆಚ್ಚದಲ್ಲಿ ಗ್ರೇಡ್‌ ಸಪರೇಟರ್‌
* ₹ 12 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ. ಡಿಜಿಟಲ್‌ ಧ್ವನಿ ವ್ಯವಸ್ಥೆ ಅಳವಡಿಕೆ
* ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ ನಿರ್ಮಾಣ

‘ರೈಲು ನಿಲ್ದಾಣಕ್ಕೆ ಮಿನಿ ಬಸ್‌ ಕಲ್ಪಿಸಿ’
401 ಸರಣಿಯ ಬಸ್‌ಗಳನ್ನು ಜಾಲಹಳ್ಳಿ ಕ್ರಾಸ್‌ನಿಂದ ಯಲಹಂಕ ಐದನೇ ಹಂತದವರೆಗೆ ವಿಸ್ತರಿಸಿದರೆ ಅನುಕೂಲವಾಗುತ್ತದೆ. ಜೊತೆಗೆ, ರೈಲು ನಿಲ್ದಾಣದವರೆಗೆ ಮಿನಿಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಎ.ಬಿ. ಶಿವಕುಮಾರ್‌ ಮನವಿ ಮಾಡಿದರು. 

‘ರೈಲು ನಿಲ್ದಾಣದವರೆಗೆ ಬಸ್‌ ಸೌಲಭ್ಯ ಕಲ್ಪಿಸುವ ಕುರಿತು ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಯಲಹಂಕ ಐದನೇ ಹಂತದವರೆಗೆ ಬಸ್‌ ಸಂಚಾರ ಸೌಲಭ್ಯ ವಿಸ್ತರಿಸಿದರೆ ಟಿಕೆಟ್‌ ದರ ಹೆಚ್ಚಾಗುತ್ತದೆ’ ಎಂದು ವಿಭಾಗೀಯ ಸಾರಿಗೆ ಅಧಿಕಾರಿ ಎಸ್.ಕೆ. ಹಿರೇಮಠ ಹೇಳಿದರು. 

‘ಪ್ರಯಾಣ ದರ ಸ್ವಲ್ಪ ಹೆಚ್ಚಾದರೂ, ಜನರಿಗೆ ಅನುಕೂಲವಾಗುತ್ತದೆ ಎನ್ನುವುದಾದರೆ ಬಸ್‌ ಸಂಚಾರ ಸೌಲಭ್ಯ ವಿಸ್ತರಿಸಿ’ ಎಂದು ಎಸ್‌.ಆರ್‌.ವಿಶ್ವನಾಥ್‌ ಸೂಚಿಸಿದರು.

‘ಜಿ9’ ಸಂಖ್ಯೆಯ ಬಸ್‌ಗಳು ರಾತ್ರಿ 7ರ ನಂತರ ಬರುತ್ತಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ಉತ್ತರಿಸಿದ ಹಿರೇಮಠ, ‘ಶಿವಾಜಿ ನಗರ, ಎಂ.ಜಿ. ರಸ್ತೆ ಮಾರ್ಗದಲ್ಲಿ ‘ನಮ್ಮ ಮೆಟ್ರೊ’ ಕಾಮಗಾರಿ ನಡೆಯುತ್ತಿರುವುದರಿಂದ ‘ಜಿ9’ ಬಸ್‌ ಬರುವುದು 15–20 ನಿಮಿಷ ತಡವಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು. 

ಇನ್ನು, ಸಂತೆ ನಡೆಯುವ ಸ್ಥಳದ ಬಳಿಯೇ ಬಸ್‌ಗಳು ನಿಲ್ಲುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಶಿವಕುಮಾರ್‌ ಅಳಲು ತೋಡಿಕೊಂಡರು.

‘ಬಿಎಂಟಿಸಿಯವರಿಗೂ ತೊಂದರೆಯಾಗುತ್ತಿದೆ. ಈ ಮಾರ್ಗದಲ್ಲಿ ಬಸ್‌ ಸಂಚಾರ ಕಡಿಮೆ ಮಾಡಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದು ಎಸ್‌.ಕೆ. ಹಿರೇಮಠ ಅವರು ಉತ್ತರಿಸಿದರು.

‘ಸಂಚಾರ ಸುಲಭವಾಗಲಿ ಎಂದು ರಸ್ತೆ ವಿಸ್ತರಣೆ ಮಾಡಿಸಿದರೂ, ವ್ಯಾಪಾರಿಗಳು ರಸ್ತೆಯನ್ನು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಶಾಸಕರು ಉತ್ತರಿಸಿದರು.

ಅಂಕಲ್‌, ಪಾರ್ಕ್‌ನಲ್ಲಿ ಆಟಿಕೆ ಸರಿ ಮಾಡಿಸಿ
‘ಅಂಕಲ್‌, ಪಾರ್ಕ್‌ನಲ್ಲಿ ಆಟಿಕೆಗಳೆಲ್ಲ ತುಕ್ಕು ಹಿಡಿದಿವೆ. ಆಡಲು ಆಗುತ್ತಿಲ್ಲ. ಹೊಸ ಆಟಿಕೆ ತರಿಸಿ.. ಪ್ಲೀಸ್’ ಎಂದು ಯಲಹಂಕ ‘ಎ’ ಸೆಕ್ಟರ್‌ ನಿವಾಸಿ, ಬಾಲಕಿ ಮೇದಶ್ರೀ ಶಾಸಕರಿಗೆ ಮನವಿ ಸಲ್ಲಿಸಿದಳು. 

‘ನಾಲ್ಕು ವಾರ್ಡ್‌ಗಳಲ್ಲಿ 13 ಉದ್ಯಾನಗಳಿವೆ. ಹೊಸ ಆಟಿಕೆಗಳನ್ನು ತರಿಸಲಾಗುತ್ತಿದೆ. ಉದ್ಯಾನದಲ್ಲಿ ಅಳವಡಿಸಲಾಗುತ್ತದೆ’ ಎಂದು ವಿಶ್ವನಾಥ್‌ ಉತ್ತರಿಸಿದರು.

ಎಲ್ಲ ಉದ್ಯಾನಗಳಲ್ಲಿ ವಾಯುವಿಹಾರಿಗಳ ಸಂಘ ರಚಿಸಲಾಗಿದೆ. ಇದರ ಸದಸ್ಯರೇ ನಿರ್ವಹಣೆ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಉದ್ಯಾನಗಳಲ್ಲಿ ಬೀದಿದೀಪ ಅಳವಡಿಸಿ, ವಾಯುವಿಹಾರ ಪಥ ನಿರ್ಮಿಸಲಾಗುವುದು ಎಂದರು.

ಆರ್. ಬಚ್ಚೇಗೌಡ ಎಂಬುವರ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ‘ಎಲ್ಲ ಉದ್ಯಾನಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ₹70 ಲಕ್ಷ ಮೀಸಲಿಡಲಾಗಿದೆ. ಆದರೆ, ಇವುಗಳ ನಿರ್ವಹಣೆಯನ್ನು ಸಂಘಗಳ ಸದಸ್ಯರೇ ಮಾಡಬೇಕು’ ಎಂದರು.

ವಿದ್ಯುತ್‌ ಚಿತಾಗಾರ ವ್ಯವಸ್ಥೆ ಕಲ್ಪಿಸಿ
ನಾಲ್ಕು ವಾರ್ಡ್‌ಗಳಿಗೆ ಒಂದೊಂದು ವಿದ್ಯುತ್‌ ಚಿತಾಗಾರ ಮಾಡಬೇಕು ಎಂದು ಯಲಹಂಕ ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರು ಒತ್ತಾಯಿಸಿದರು. 

ಆವಲಹಳ್ಳಿಯಲ್ಲಿ ಎರಡು ಎಕರೆ ಗುರುತಿಸಲಾಗಿದ್ದು, ವಿದ್ಯುತ್‌ ಚಿತಾಗಾರ ನಿರ್ಮಿಸಲು ಬಿಬಿಎಂಪಿಗೆ ನೀಡಲಾಗುವುದು. ಈ ಕುರಿತು ಪತ್ರವೂ ಸಿದ್ಧವಾಗಿದೆ. ಸಂಭ್ರಮ ಕಾಲೇಜು ಬಳಿಯಲ್ಲಿ ಸ್ಮಶಾನ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಶ್ವನಾಥ್‌ ಹೇಳಿದರು.

ಸಿಸಿಟಿವಿ ಕ್ಯಾಮೆರಾಗಳು ಆಕಾಶ ನೋಡುತ್ತಿವೆ!
ಸೋಮೇಶ್ವರ ನಗರದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಅಲ್ಲದೆ, ಪುಂಡರು ಯುವತಿಯರನ್ನು ಚುಡಾಯಿಸುವ ಪ್ರಕರಣಗಳು ಹೆಚ್ಚುತ್ತಿವೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಇಂಥದ್ದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಜನಾರ್ದನ ಎಂಬುವರು ಕೋರಿದರು. 

‘ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ, ಕೆಲವರು ಅವುಗಳನ್ನು ಹಾಳುಗೆಡವಿದ್ದಾರೆ. 18ಕ್ಕೂ ಹೆಚ್ಚು ಕ್ಯಾಮೆರಾಗಳ ಸಂಪರ್ಕ ಕಿತ್ತೆಸೆದಿದ್ದಾರೆ ಮತ್ತು ಕೆಲವು ಕ್ಯಾಮೆರಾಗಳನ್ನು ಆಕಾಶದತ್ತ ತಿರುಗಿಸಿದ್ದಾರೆ’ ಎಂದು ಶಾಸಕರು ಹೇಳಿದರು. 

‘ಕಳ್ಳತನ ಪ್ರಕರಣಗಳು ವರದಿಯಾಗಿರುವ ಕಡೆಗಳಲ್ಲಿ, ಶಾಲೆ–ಕಾಲೇಜು ಮತ್ತು ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು. ಸುಮಾರು 200 ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶ್ವನಾಥ್‌ ಉತ್ತರಿಸಿದರು. 

‘ನಿರ್ಭಯಾ ಯೋಜನೆಯಡಿ 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಾಳಾಗಿರುವ ಕ್ಯಾಮೆರಾಗಳ ದುರಸ್ತಿ ಮಾಡಿಸಲಾಗುವುದು’ ಎಂದು ಎಸಿಪಿ ಶ್ರೀನಿವಾಸ್ ಹೇಳಿದರು.

ನೀರಿನ ಸಮಸ್ಯೆ ನೀಗಿಸಿ...
ಹಲವು ಬಡಾವಣೆಗಳ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಎಂಟು ತಿಂಗಳಿನಿಂದ ನೀರು ಬರುತ್ತಿಲ್ಲ. ವಾಟರ್‌ಮನ್‌ಗೆ ಕೇಳಿದರೆ ‘ನಾನು ಅಸಹಾಯಕ’ ಎಂಬ ಉತ್ತರ ನೀಡುತ್ತಾರೆ. ಸಮಸ್ಯೆ ಬಗೆಹರಿಸಿ ಎಂದು ಸ್ನೇಹಲತಾ ಎಂಬುವರು ಕೋರಿದರು. 

‘ಮುಖ್ಯರಸ್ತೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ತೊಂದರೆಯಾಗಿದೆ. ಯಲಹಂಕ ನ್ಯೂಟೌನ್‌ನ 16ನೇ ಕ್ರಾಸ್‌ನಲ್ಲಿರುವ ಎರಡು ಮನೆಯಲ್ಲಿ ಮಾತ್ರ ಸಮಸ್ಯೆಯಾಗಿದೆ. ಈ ಮನೆಗಳಿಗೆ ಕಲ್ಪಿಸಿರುವ ಪೈಪ್‌ಲೈನ್‌ ಪರೀಕ್ಷಿಸಿ ಸರಿ ಮಾಡುತ್ತೇವೆ’ ಎಂದು ಜಲಮಂಡಳಿ ಅಧಿಕಾರಿಗಳು ಉತ್ತರಿಸಿದರು. 

ಯಲಹಂಕ ನ್ಯೂಟೌನ್‌ ವಾರ್ಡ್ 3 ಮತ್ತು 4ರಲ್ಲಿ ಜಲಮಂಡಳಿ ಪೂರೈಸುತ್ತಿರುವ ನೀರಿನಲ್ಲಿ ಹುಳುಗಳು ಬರುತ್ತಿವೆ. ವಾರಕ್ಕೊಂದು ದಿನ ನೀರು ಪೂರೈಸಲಾಗುತ್ತಿದೆ ಎಂದು ಕೆ.ಜಿ.ಎಚ್. ದಾಸ್‌ ಎಂಬುವರು ದೂರಿದರು. 

ಅಟ್ಟೂರಿನ ಚಿತ್ರಾ ಲೇಔಟ್‌ನಲ್ಲಿ ಒಂದು ವರ್ಷದಿಂದ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ ಎಂದು ಅಮಯೋಗಿ ಶಾಸಕರ ಗಮನಕ್ಕೆ ತಂದರು. ‘ಅಟ್ಟೂರಿನ ಚಿತ್ರಾ ಲೇಔಟ್‌ಗೆ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಪೂರ್ಣಗೊಂಡಿದೆ. ಎರಡು–ಮೂರು ದಿನಗಳಲ್ಲಿ ನೀರು ಪೂರೈಸಲಾಗುವುದು’ ಎಂದು ಜಲಮಂಡಳಿ ಅಧಿಕಾರಿ ಉತ್ತರಿಸಿದರು. 

ಸಮಸ್ಯೆಗೆ ಸ್ಥಳದಲ್ಲಿಯೇ ಉತ್ತರ
* ಉದ್ಯಾನಗಳಲ್ಲಿ ಬೀದಿ ದೀಪ ಅಳವಡಿಸಿ

ಕೆ.ಎನ್. ಸುರೇಶ್‌: ರಾತ್ರಿ 7ರ ನಂತರ ಉದ್ಯಾನಗಳಲ್ಲಿ ದೀಪದ ವ್ಯವಸ್ಥೆ ಇಲ್ಲ. ಉದ್ಯಾನಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಿ ಎಂದು ಡಾ. ರಾಜಕುಮಾರ್‌ ಅಭಿಮಾನಿಗಳ ಸಂಘದ ಸುರೇಶ್‌ ಒತ್ತಾಯಿಸಿದರು. 

ಉದ್ಯಾನಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೀದಿದೀಪಗಳನ್ನು ಅಳವಡಿಸಲಾಗಿದ್ದರೂ ಕೆಲವು ಹಾಳಾಗಿವೆ. ದುರಸ್ತಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಶಾಸಕರು ಹೇಳಿದರು.

* ಆಟೊದವರು ಕನಿಷ್ಠ ₹100 ಕೇಳ್ತಾರೆ...
ಜಿ.ಬಿ. ಪಾಟೀಲ: ಮೂರು ನಾಲ್ಕು ಕಿ.ಮೀ. ತೆರಳಲೂ ಆಟೊದವರು ಕನಿಷ್ಠ ₹100 ತೆಗೆದುಕೊಳ್ಳುತ್ತಾರೆ ಮತ್ತು ನಾವು ಕರೆದಲ್ಲಿಗೆ ಬರುವುದಿಲ್ಲ. 

ಈ ಬಗ್ಗೆ ದೂರುಗಳು ಬರುತ್ತಿವೆ. ಹೆಚ್ಚು ದುಡ್ಡು ಕೇಳುವ ಆಟೊ ಚಾಲಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಇದಕ್ಕಾಗಿ ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು ಎಂದು ಶಾಸಕರು ಪೊಲೀಸರಿಗೆ ಸೂಚಿಸಿದರು. 

* ಮನೆ ಬಳಿಯ ಜಾಗ ಸಾರ್ವಜನಿಕ ಶೌಚಾಲಯವಾಗಿದೆ
ಸುಧಾ ನರಸಿಂಹಾಚಾರ್‌: ಮನೆಯ ಬಳಿಯ ಖಾಲಿ ಜಾಗವನ್ನು ಜನರು ಸಾರ್ವಜನಿಕ ಶೌಚಾಲಯದ ರೀತಿ ಬಳಸುತ್ತಿದ್ದಾರೆ. ಅಲ್ಲಿಯೇ ಧೂಮಪಾನ ಮಾಡುತ್ತಾರೆ. ದುರ್ವಾಸನೆ ಸಹಿಸಲಾಗುತ್ತಿಲ್ಲ. 

ಆ ಪ್ರದೇಶವನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಲಾಗುವುದು. ಕಸ ಎಸೆಯುವವರ ವಿರುದ್ಧ ಮತ್ತು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರ ಮೇಲೆ ದಂಡ ಹಾಕಬೇಕು ಎಂದು ಶಾಸಕರು ಸೂಚಿಸಿದರು.

* ಮೊಬೈಲ್‌ ಟವರ್‌ ತೆರವುಗೊಳಿಸಿ
ಗುರು: ಚರ್ಚ್‌, ಶಾಲೆ ಬಳಿಯ ಕಟ್ಟಡಗಳ ಮೇಲೆ ಮೊಬೈಲ್‌ ಟವರ್‌ ಅಳವಡಿಸಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. 

ಈ ಕುರಿತು ರೂಪಿಸಲಾಗಿರುವ ನಿಯಮಗಳಲ್ಲಿ ಸ್ಪಷ್ಟತೆ ಇಲ್ಲ. ವಾಣಿಜ್ಯ ಕಟ್ಟಡಗಳಿದ್ದರೆ ಅನುಮತಿ ನೀಡಬಹುದಾಗಿದೆ. ಆದರೆ, ಕಟ್ಟಡವು ಚರ್ಚ್‌ ಬಳಿ ಅಥವಾ ಶಾಲೆಯ ಬಳಿ ಇದ್ದರೆ, ಅದರ ಮೇಲಿನ ಟವರ್‌ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿ ಉತ್ತರಿಸಿದರು. 

* ಹಾವುಗಳ ಕಾಟ ತಪ್ಪಿಸಿ
ಸುಜಾತ: ಸುಗ್ಗಪ್ಪ ಲೇಔಟ್‌ನಲ್ಲಿ ನಮ್ಮ ಮನೆಯ ಬಳಿಯ ಕಾಲೇಜಿನಲ್ಲಿ ಗಿಡ–ಗಂಟಿ ಬೆಳೆದಿವೆ. ಅಲ್ಲಿ ಹಾವುಗಳು ಓಡಾಡುತ್ತಿದ್ದು, ಮನೆಯೊಳಗೇ ಬರುತ್ತಿವೆ. 

ಸ್ವಚ್ಛತೆ ಕಾಪಾಡಲು ಸಮೀಪದ ಕಾಲೇಜಿನವರಿಗೆ ಹೇಳಲಾಗುವುದು. ಅಲ್ಲಿನ ಗಿಡ–ಗಂಟಿಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಉತ್ತರಿಸಿದರು.

* ಮನೆಗೆ ನುಗ್ಗುತ್ತಿದೆ ಮಲಿನ ನೀರು
ಸರಸ್ವತಿ: ಕೂರ್ಲಪ್ಪ ಬಡಾವಣೆಯ 7ನೇ ಅಡ್ಡರಸ್ತೆಯಲ್ಲಿ ರಾಜಕಾಲುವೆ ಕಟ್ಟಿಕೊಂಡು ದುರ್ವಾಸನೆ ಬರುತ್ತಿದೆ. ಕಲುಷಿತ ನೀರು ಮನೆಯೊಳಗೇ ನುಗ್ಗುತ್ತಿದೆ.

‘ಸರ್ವೇ ಸಂಖ್ಯೆ ವ್ಯತ್ಯಾಸವಿರುವುದರಿಂದ ಮತ್ತು ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ರಾಜಕಾಲುವೆ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ಅಧಿಕಾರಿ ಉತ್ತರಿಸಿದರು.

‘ತುರ್ತು ಕಾಮಗಾರಿ ಎಂದು ಪರಿಗಣಿಸಿ ಬೇರೆ ಯೋಜನೆ ಅಥವಾ ಪ್ರಕರಣದಡಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಿ. ಹತ್ತು ದಿನದೊಳಗೆ ಈ ಕಾರ್ಯ ಪೂರ್ಣಗೊಳಿಸಿ’ ಎಂದು ಶಾಸಕರು ಅಧಿಕಾರಿಗೆ ಸೂಚಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು