ಶನಿವಾರ, ಜೂಲೈ 4, 2020
24 °C
ಸಂಘದ ಸಭೆಯಲ್ಲಿ ಎಂಟು ನಿರ್ಣಯಗಳು ಅಂಗೀಕಾರ

ಕೆಎಟಿ ಆಡಳಿತ ವೈಖರಿಗೆ ವಕೀಲರ ಸಂಘದ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ’ ಎಂದು ಆಕ್ಷೇಪಿಸಿರುವ ಬೆಂಗಳೂರು ವಕೀಲರ ಸಂಘ, ಕೆಎಟಿ ಅಧ್ಯಕ್ಷರ ವಿರುದ್ಧ ನಿರ್ಣಯ ಸ್ವೀಕರಿಸಿದೆ.

ಈ ಕುರಿತಂತೆ ಇತ್ತೀಚೆಗೆ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಂಟು ನಿರ್ಣಯಗಳನ್ನು
ಸ್ವೀಕರಿಸಲಾಗಿದ್ದು, ಈ ನಿರ್ಣಯಗಳಿಗೆ ರಂಗನಾಥ್‌ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಎ.ಎನ್‌.ಗಂಗಾಧರಯ್ಯ ಮತ್ತು ಖಜಾಂಚಿ ಶಿವಮೂರ್ತಿ ಸಹಿ ಹಾಕಿದ್ದಾರೆ.

‘ಕೆಎಟಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರು, ಕೆಎಟಿಯ ಏಕತೆ ಮತ್ತು ಸಮನ್ವಯತೆಯನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದು ಇದನ್ನು ಸಂಘದ ವಿಶೇಷ ಸಭೆ ಒಮ್ಮತದಿಂದ ಖಂಡಿಸುತ್ತದೆ’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

‘ಅಧ್ಯಕ್ಷರು ಬೆಳಗಿನ ಸಮಯದಲ್ಲಿ ಮಾತ್ರವೇ ಕಲಾಪ ನಡೆಸುತ್ತಾರೆ. ಮಧ್ಯಾಹ್ನದ ವೇಳೆ ಅಪರೂಪಕ್ಕೆ ಎಂಬಂತೆ ಕಲಾಪ ನಡೆಸುತ್ತಾರೆ. ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಶೀಘ್ರ ಇತ್ಯರ್ಥಗೊಳಿಸಿದರೆ ಸರ್ಕಾರಿ ಅಧಿಕಾರಿಗಳು ಕಂಬ ಕಂಬ ಅಲೆಯುವುದು
ತಪ್ಪುತ್ತದೆ’ ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.

‘ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಕೆಎಟಿ ನ್ಯಾಯಪೀಠಗಳಿವೆ. ಆದರೆ, ಇರುವ ಮೂವರೇ ಸದಸ್ಯರಿರುವ ಕಾರಣ ಅವು ಕಾರ್ಯ ನಿರ್ವಹಿಸುತ್ತಿಲ್ಲ. ಅಷ್ಟೇ ಅಲ್ಲ, ಇರುವ ಮೂವರ ಸದಸ್ಯರಲ್ಲಿ ಒಬ್ಬರು ಇದೇ ವರ್ಷದ ಮೇ ತಿಂಗಳಲ್ಲಿ ಮತ್ತು ಇನ್ನೊಬ್ಬರು ಇದೇ ವರ್ಷದ ನವೆಂಬರ್‌ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಆದ್ದರಿಂದ ಕೆಎಟಿಗೆ ಹತ್ತು ಸದಸ್ಯರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು’ ಎಂದು ತೀರ್ಮಾನಿಸಲಾಗಿದೆ.‌

‘ಮನವಿ ಪ್ರಯೋಜನವಾಗಿಲ್ಲ’

‘ಆಡಳಿತ ಮತ್ತು ನ್ಯಾಯವಿತರಣೆಯ ವಿಭಾಗದಲ್ಲಿ ಕೆಎಟಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ. ಈ ಕುರಿತಂತೆ ಸಂಬಂಧಿಸಿದವರಿಗೆ ಹಲವು ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಮಾರ್ಚ್‌ 11ರಂದು ನಡೆದ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಚರ್ಚಿಸಲಾಗಿದೆ.

‘ಅಧ್ಯಕ್ಷ ಕೆ.ಭಕ್ತವತ್ಸಲ ಅವರು ಆಯ್ದ ವಕೀಲರ ಸಮೂಹವನ್ನು ರಚಿಸಿಕೊಂಡು ಅವರಿಗೆ ಅನುಕೂಲಕರವಾಗಿ ನಡೆದುಕೊಳ್ಳುತ್ತಿರುವ ದುರಾಚಾರದ ವಿರುದ್ಧ ಈಗಾಗಲೇ ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೂ ಮನವಿ ಸಲ್ಲಿಸಲಾಗಿದೆ’ ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು