ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮಳೆಗಾಲದಲ್ಲಿ ಕೆರೆಗಳು ಕೋಡಿ ಬೀಳಲ್ಲ!

* ಹೂಳು ಕಳೆದುಕೊಂಡು, ಕಟ್ಟೆ ಭದ್ರಪಡಿಸಿಕೊಂಡ 74 ಕೆರೆಗಳು * ಹೆಚ್ಚಿದೆ ನೀರು ಸಂಗ್ರಹ ಸಾಮರ್ಥ್ಯ
Last Updated 23 ಏಪ್ರಿಲ್ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆರೆಗಳ ಸಮೀಪ ವಾಸಿಸುವ ಜನ ಮಳೆಗಾಲ ಬಂತೆಂದರೆ ಪ್ರವಾಹದ ಭೀತಿಯಲ್ಲೇ ಇರುತ್ತಾರೆ. ಆದರೆ, ಈ ಸಲದ ಮಳೆಗಾಲದಲ್ಲಿ ಅಂತಹ ಭೀತಿ ಅನಗತ್ಯ ಎಂದು ಅಭಯ ನೀಡುತ್ತಿದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ). ಏಕೆಂದರೆ, ಪ್ರವಾಹಕ್ಕೆ ಕಾರಣವಾಗುತ್ತಿದ್ದ ಹಲವು ಕೆರೆಗಳ ಹೂಳನ್ನು ಬಿಬಿಎಂಪಿಯಿಂದ ಈಗಾಗಲೇ ತೆಗೆಸಲಾಗಿದೆ.

ಹಲವು ಕೆರೆಗಳ ಹೂಳನ್ನು ಈಗಾಗಲೇ ಎತ್ತಲಾಗಿದ್ದು, ಬೇಗೂರು ಕೆರೆ ಸೇರಿದಂತೆ ಕೆಲವು ಜಲಮೂಲಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವ ಕಾರ್ಯ ಇನ್ನೂ ನಡೆಯುತ್ತಿದೆ. ಈ ಸಲದ ಮಳೆಗಾಲದಲ್ಲಿ ನಗರದ ಕೆರೆಗಳು ದೊಡ್ಡ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲಿವೆ. ಹೀಗಾಗಿ ಹೆಚ್ಚು ಮಳೆ ಬಂದರೂ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಪಾಲಿಕೆ ಅಧಿಕಾರಿಗಳು ಭರವಸೆ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಪಾಲಿಕೆ ಅಪಾಯಕಾರಿ ಕೆರೆಗಳ ಪಟ್ಟಿಯನ್ನು ಮಾಡಿತ್ತು. ಉತ್ತರಹಳ್ಳಿಯ ಗುಬ್ಬಲಾಳ ಕೆರೆ, ಬೇಗೂರು ಕೆರೆ, ವಸಂತಪುರ ಕೆರೆ, ದೊಡ್ಡಕಲ್ಲಸಂದ್ರ ಕೆರೆಗಳು ಹೆಚ್ಚು ಅಪಾಯದ ಸ್ಥಿತಿಯಲ್ಲಿವೆ ಎಂಬುದು ಆಗ ಎದ್ದುಕಂಡಿತ್ತು. ಈ ಕೆರೆಗಳು ದುರ್ಬಲ ಕಟ್ಟೆಗಳನ್ನು ಹೊಂದಿದ್ದವು. ಅವುಗಳಿಗೆ ಕೋಡಿ ಬಿದ್ದು ಬಡಾವಣೆಗಳಿಗೆ ನೀರು ನುಗ್ಗಿದ ಪ್ರಕರಣಗಳೂ ವರದಿಯಾಗಿದ್ದವು.

‘ನಗರದ ಯಾವ ಕೆರೆಯ ಕಟ್ಟೆಯೂ ಇತ್ತೀಚೆಗೆ ಒಡೆದ ಉದಾಹರಣೆ ಇಲ್ಲ. ಮಳೆಯ ಪ್ರಮಾಣ ಹೆಚ್ಚಾದಾಗ ಕೋಡಿ ಬಿದ್ದಿರಬಹುದು. ಈ ಸುಡುಬೇಸಿಗೆಯಲ್ಲಿ ಹಲವು ಕೆರೆಗಳು ನೀರಿಲ್ಲದೆ ಬರಿದಾಗಿವೆ. ಈಗ ಹೂಳನ್ನು ತೆರವುಗೊಳಿಸಿದ್ದರಿಂದ ಸಹಜವಾಗಿಯೇ ನೀರು ಸಂಗ್ರಹದ ಸಾಮರ್ಥ್ಯ ವೃದ್ಧಿಸಿದೆ’ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್‌ (ಕೆರೆಗಳ ವಿಭಾಗ) ಬಿ.ವಿ.ಸತೀಶ್‌ ತಿಳಿಸುತ್ತಾರೆ.

ಬೇಗೂರು, ಸಾರಕ್ಕಿ, ಗೊಟ್ಟಿಗೆರೆ, ಸದರಮಂಗಲ, ಸಿಂಗಸಂದ್ರ , ಸರ್ಜಾಪುರ, ಯಲೇನಹಳ್ಳಿ ಕೆರೆಗಳು ಸಂಪೂರ್ಣ ಬತ್ತಿ ಹೋಗಿದ್ದವು. ಇವುಗಳಲ್ಲದೆ ಚುಂಚಘಟ್ಟ, ಸೋಮಸುಂದರ ಪಾಳ್ಯ, ಬೆನ್ನಿಗಾನಹಳ್ಳಿ ಕೆರೆಗಳು ಸೇರಿದಂತೆ 18 ಕೆರೆಗಳಲ್ಲಿ ಇತ್ತೀಚೆಗಷ್ಟೇ ಹೂಳು ತೆಗೆಯಲಾಗಿದೆ. ಇದುವರೆಗೆ 74 ಕೆರೆಗಳು ಮರುಜೀವ ಪಡೆದಿವೆ. 90 ಕೆರೆಗಳ ಹೂಳು ತೆಗೆಯುವ ಕೆಲಸ ಬಾಕಿಯಿದ್ದು, 30 ಕೆರೆಗಳ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ.

ಕೆರೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಕೊಳಚೆ ನೀರು ಸೇರದಂತೆ ತಡೆಯಲಾಗುತ್ತಿದೆ. ಮಳೆಗಾಲದಲ್ಲಿ ಒಂದು ಕೆರೆ ತುಂಬಿ ಹರಿದರೆ ಮುಂದಿನ ಕೆರೆಗೆ ತಾಜಾ ನೀರೇ ಹರಿಯಲು ಇದರಿಂದ ಅನುಕೂಲವಾಗಲಿದೆ ಎಂದು‌ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ವಿ.ರವಿ ಹೇಳುತ್ತಾರೆ.

ನೀರಿನ ಹರಿವಿನ ಮಟ್ಟಕ್ಕಿಂತ ಎಂಟು ಅಡಿಗಳಷ್ಟು ಎತ್ತರದ ಮೇಲೆ ಕಟ್ಟಡಗಳು ಇರಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮ ಪಾಲಿಸದ ಹಲವರು ಕೆಳ ಹಂತದಲ್ಲೂ ಮನೆಗಳನ್ನು ನಿರ್ಮಿಸಿದ್ದಾರೆ. ಇಂತಹ ಮನೆಗಳು ಈ ಹಿಂದೆ ಮಳೆಗಾಲದಲ್ಲಿ ಸಮಸ್ಯೆಗೆ ಸಿಲುಕಿದ್ದವು.

ಒಳಹರಿವು ಹಾಗೂ ಅಂತರ್ಜಲಮಟ್ಟ ಎರಡೂ ಕುಸಿತಗೊಂಡಿದ್ದೇ ಕೆರೆಗಳು ಒಣಗಿ ನಿಲ್ಲಲು ಕಾರಣ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

‘ಯಾವುದೇ ಲಂಗು ಲಗಾಮಿಲ್ಲದೆ ಕೆರೆಗಳನ್ನು ಮಲಿನ ಮಾಡಲಾಗುತ್ತಿದೆ. ತ್ಯಾಜ್ಯ ಹಾಗೂ ಚರಂಡಿ ನೀರನ್ನುವಿಲೇವಾರಿ ಮಾಡಲು ಕೆರೆಗಳ ಪಾತ್ರವೇ ಬಳಕೆ ಆಗುತ್ತಿದೆ. ಕೆರೆಗಳಲ್ಲಿ ಸಂಗ್ರಹವಾಗಿದ್ದ ಹೂಳು ತೆಗೆಯುವ ಕೆಲಸವನ್ನೇ ಇಲ್ಲಿಯವರೆಗೆ ಮಾಡಿರಲಿಲ್ಲ. ಇದರಿಂದ ಅಂತರ್ಜಲ ಸಂಪೂರ್ಣವಾಗಿ ಬತ್ತಿಹೋಗಿದೆ’ ಎಂದು ಫ್ರೆಂಡ್ಸ್‌ ಆಫ್‌ ಲೇಕ್ಸ್‌ ಸಂಸ್ಥೆಯ ಸಹ ಸಂಸ್ಥಾಪಕ ರಾಮ್‌ಪ್ರಸಾದ್‌ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT