ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲೆಯ ಏಳು ಶಾಲೆಗಳಲ್ಲಿ ಎಲ್‌ಕೆಜಿ ಶಿಕ್ಷಣ

ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳಲ್ಲಿ ಪೂರ್ವ ಪ್ರಾರ್ಥಮಿಕ ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ
Last Updated 15 ಮೇ 2019, 12:41 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದ 276 ಪಬ್ಲಿಕ್‌ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ (ಎಲ್‌ಕೆಜಿ) ತರಗತಿಗಳ ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ಜಿಲ್ಲೆಯ ಏಳು ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಈ ತರಗತಿಗಳು ಆರಂಭಗೊಳ್ಳಲಿವೆ.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಕಳೆದ ವರ್ಷದಿಂದ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಪ್ರತಿ ತಾಲ್ಲೂಕಿಗೆ ಒಂದರಂತೆ ಒಟ್ಟು ನಾಲ್ಕು ಶಾಲೆಗಳನ್ನು ಆರಂಭಿಸಲಾಗಿತ್ತು. ಈ ವರ್ಷ ಹೊಸತಾಗಿ ಮೂರು ಶಾಲೆಗಳ ಆರಂಭಕ್ಕೆ ಸರ್ಕಾರವು ಹಸಿರು ನಿಶಾನೆ ತೋರಿದೆ.

‘ಈ ಏಳು ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಳ್ಳಲಿವೆ. ಅದರಲ್ಲಿಯೂ ಇಂಗ್ಲಿಷ್‌ ಮಾಧ್ಯಮದಲ್ಲಿ ತರಗತಿಗಳು ನಡೆಯಲಿವೆ. ದಾಖಲಾತಿ ಪ್ರಕ್ರಿಯೆಯೂ ಚುರುಕಾಗಲಿದೆ’ ಎಂದು ಕರ್ನಾಟಕ ಪಬ್ಲಿಕ್‌ ಶಾಲೆಗಳ ಜಿಲ್ಲಾ ನೋಡಲ್‌ ಅಧಿಕಾರಿ ಬಿ.ವಿ.ಬಿ. ಪವಿತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕುರಿತಂತೆ ಆಯ್ದ ಶಿಕ್ಷಕರಿಗೆ ಇಲಾಖೆಯು ಈಗಾಗಲೇ 10 ದಿನಗಳ ತರಬೇತಿ ನೀಡಿದೆ. ಅಗತ್ಯ ಇರುವಷ್ಟು ಶಿಕ್ಷಕರನ್ನು ನಿಯೋಜನೆ ಮಾಡಲಾಗುತ್ತಿದೆ. ಕೆಪಿಎಸ್‌ ಶಾಲೆಗಳಲ್ಲಿನ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರವನ್ನೂ ಕೈಗೊಳ್ಳಲಾಗತ್ತಿದೆ’ ಎಂದರು.

ಹೇಗಿರಲಿವೆ ‘ಪಬ್ಲಿಕ್‌’ ಶಾಲೆಗಳು

ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಕಳೆದ ಶೈಕ್ಷಣಿಕ ಸಾಲಿನಿಂದ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಿದೆ.

ಈ ವರ್ಷದಿಂದ ಎಲ್‌ಕೆಜಿಯಿಂದ ದ್ವಿತೀಯ ಪಿಯುವರೆಗೂ ಇದೇ ಶಾಲೆಯಲ್ಲಿ ಶಿಕ್ಷಣ ದೊರೆಯಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಬೇರೊಂದು ಶಾಲೆಗೆ ಅಲೆಯುವುದೂ ತಪ್ಪಲಿದೆ.

‘ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ದೊರೆಯಲಿದೆ. ಇಲ್ಲಿ ದಾಖಲಾಗುವ ಪ್ರತಿ ಮಗುವೂ ಕನಿಷ್ಠ ಶೇ 75ರಷ್ಟು ಅಂಕ ಗಳಿಸಬೇಕು ಎನ್ನುವ ಗುರಿ ಹೊಂದಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೂ ಉತ್ತಮ ಪ್ರೋತ್ಸಾಹ ಸಿಗಲಿದೆ. ಉತ್ತಮ ಕೊಠಡಿಗಳು, ಪ್ರಯೋಗಾಲಯ, ಕಂಪ್ಯೂಟರ್ ತರಗತಿ ಸಹಿತ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಒದಗಿಸಲಾಗಿದೆ. ಸರ್ಕಾರವು ಇವುಗಳಿಗಾಗಿಯೇ ಹೆಚ್ಚುವರಿ ಅನುದಾನ ನೀಡಿದೆ. ದಾನಿಗಳ ನೆರವಿನಿಂದಲೂ ಹೆಚ್ಚುವರಿ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆದಿದೆ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಎಲ್ಲೆಲ್ಲಿ ಪಬ್ಲಿಕ್‌ ಶಾಲೆ?

ಹೊಸತಾಗಿ ಅನುಮತಿ ದೊರೆತ ಶಾಲೆಗಳು: ಹೊಂಗನೂರು (ಚನ್ನಪಟ್ಟಣ), ತಿಪ್ಪಸಂದ್ರ (ಮಾಗಡಿ), ಹಾರೋಹಳ್ಳಿ (ಕನಕಪುರ).
ಕಳೆದ ವರ್ಷ ಆರಂಭವಾದ ಶಾಲೆಗಳು: ಕುದೂರು (ಮಾಗಡಿ), ಅರಳಾಳುಸಂದ್ರ (ಚನ್ನಪಟ್ಟಣ), ದೊಡ್ಡಾಲಹಳ್ಳಿ (ಕನಕಪುರ), ಅವ್ವೇರಹಳ್ಳಿ (ರಾಮನಗರ).

*ಈ ವರ್ಷ ಹೊಸತಾಗಿ ಮೂರು ಶಾಲೆಗಳಿಗೆ ಅನುಮತಿ ದೊರೆತಿದ್ದು, ಜಿಲ್ಲೆಯ ಒಟ್ಟು ಏಳು ಕೆಪಿಎಸ್‌ ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳು ಆರಂಭ ಆಗಲಿವೆ
-ಪವಿತ್ರಾ,ಜಿಲ್ಲಾ ನೋಡಲ್‌ ಅಧಿಕಾರಿ, ಕೆಪಿಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT