ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಸ್ಮಶಾನಗಳಲ್ಲಿ ಮೆಶ್ ಕಾಂಪೋಸ್ಟ್‌

ಕಸದಿಂದ ಗೊಬ್ಬರ ತಯಾರಿಸಲಿದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ
Last Updated 2 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಸ್ಮಶಾನಗಳ ಕಸದ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಪ್ರಾಯೋಗಿಕವಾಗಿ ಐದು ಸ್ಮಶಾನಗಳಲ್ಲಿ ಮೆಶ್ ಕಾಂಪೋಸ್ಟ್‌ ಘಟಕಗಳನ್ನು ಅಳವಡಿಸಲಿದೆ.

ಸ್ಮಶಾನಗಳ ಕಸ ವಿಲೇವಾರಿ ಸಮಸ್ಯೆ ನಿವಾರಣೆ ಕುರಿತು ಚರ್ಚಿಸಲು ಮೇಯರ್‌ ಗಂಗಾಂಬಿಕೆ ಅವರು ಮಂಗಳವಾರ ಕರೆದಿದ್ದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ವಿದ್ಯುತ್ ಚಿತಾಗಾರಗಳು ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 251 ಸ್ಮಶಾನಗಳಿವೆ. ಈ ಪೈಕಿ ಹರಿಶ್ಚಂದ್ರ ಘಾಟ್, ವಿಲ್ಸನ್ ಗಾರ್ಡನ್, ಶಾಂತಿನಗರ, ಹಲಸೂರು ಹಾಗೂ ನಂದಿದುರ್ಗದ ಸ್ಮಶಾನಗಳಲ್ಲಿ ಮೆಶ್‌ ಕಾಂಪೋಸ್ಟ್ ಘಟಕಗಳನ್ನು ಅಳವಡಿಸಬೇಕು. ಸ್ವಚ್ಛತೆ ಕಾಪಾಡುವ ಬಗ್ಗೆಯೂ ಜಾಗೃತಿ ಮೂಡಿಸಬೇಕು ಎಂದು ಮೇಯರ್‌ ಸೂಚಿಸಿದರು.

‘ಶವಸಂಸ್ಕಾರ ಮಾಡಲು ನಿಗದಿ ಪಡಿಸಿರುವ ದರಗಳನ್ನು ಫಲಕಗಳಲ್ಲಿ ಅಳವಡಿಸಬೇಕು. ಯಾವುದಾದರೂ ಸ್ಮಶಾನದಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ದುಡ್ಡು ಪಡೆದರೆ ಪಾಲಿಕೆಗೆ ದೂರು ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಯ ಹೆಸರು, ದೂರವಾಣಿ ಸಂಖ್ಯೆಯನ್ನೂ ಫಲಕದಲ್ಲಿ ಉಲ್ಲೇಖಿಸಬೇಕು’ ಎಂದರು.

ಸ್ಮಶಾನಗಳ ನಿರ್ವಹಣೆಗಾಗಿ ಬಜೆಟ್‌ನಲ್ಲಿ ₹ 3 ಕೋಟಿ ಮೀಸಲಿಡಲಾಗಿದೆ. ಇದನ್ನು ಬಳಸಿ ಸ್ಮಶಾನಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸ್ಥಳಾವಕಾಶ ಇರುವ ಸ್ಮಶಾನಗಳಲ್ಲಿ ಸಸ್ಯತೋಟಗಳನ್ನು ನಿರ್ಮಿಸುವ ಉದ್ದೇಶವನ್ನೂ ಪಾಲಿಕೆ ಹೊಂದಿದೆ.

ಮೆಶ್‌ ಕಾಂಪೋಸ್ಟ್‌ ತಯಾರಿ ಹೇಗೆ?

‘ಮೆಶ್ ಕಾಂಪೋಸ್ಟ್‌ ತಯಾರಿಸಲು ಸಿದ್ಧ ಘಟಕಗಳು ಲಭ್ಯ ಇವೆ. ಅದರ ಮೇಲಿನ ಮುಚ್ಚಳ ತೆಗೆದು ತರಗೆಲೆ ಹಾಗೂ ಹಸಿ ಕಸ ತುಂಬಿದರೆ ನಾಲ್ಕರಿಂದ ಎಂಟು ವಾರಗಳಲ್ಲಿ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಈ ಘಟಕವು ಗಾಳಿಯಾಡುವಂತಹ ರಚನೆ ಹೊಂದಿರುವುದರಿಂದ ದುರ್ವಾಸನೆಯ ಸಮಸ್ಯೆಯೂ ಇರುವುದಿಲ್ಲ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸ್ಮಶಾನದ ಕಸದಲ್ಲಿ ಹೆಚ್ಚಾಗಿ ಹೂವುಗಳು ಇರುತ್ತವೆ. ಹೂವು ಹಾಗೂ ತರಗೆಲೆಗಳನ್ನು ಗೊಬ್ಬರ ತಯಾರಿಸಲು ಬಳಸಿದರೆ ಸ್ಮಶಾನವೂ ಸ್ವಚ್ಛವಾಗಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೋರಮಂಗಲ, ಡಾಲರ್ಸ್‌ ಕಾಲೋನಿ, ಕಲ್ಯಾಣನಗರ, ಸದಾಶಿವ ನಗರದಲ್ಲಿ ಮನೆಗಳ ಹಸಿ ಕಸ ಹಾಗೂ ತರಗೆಲೆಗಳನ್ನು ಸೇರಿಸಿ ಕಾಂಪೋಸ್ಟ್‌ ಮಾಡುವ 250ಕ್ಕೂ ಹೆಚ್ಚು ಘಟಕಗಳನ್ನು ಈಗಾಗಲೇ ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಪ್ಲಾಸ್ಟಿಕ್‌: ಬಳಸುವವರಿಗೂ ದಂಡ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

‘ಪ್ಲಾಸ್ಟಿಕ್‌ ನಿಷೇಧದ ನಿಯಮ ಉಲ್ಲಂಘಿಸುವವರಿಗೆ ಮುಲಾಜಿಲ್ಲದೇ ದಂಡ ವಿಧಿಸಬೇಕು. ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡುವವರು ಮಾತ್ರವಲ್ಲ, ಅದನ್ನು ಬಳಸುವವರ ವಿರುದ್ಧವೂ ದಂಡ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಪ್ಲಾಸ್ಟಿಕ್‌ ಬಳಕೆ ಮಾಡುವವರ ವಿರುದ್ಧವೂ ದಂಡ ವಿಧಿಸಬೇಕು’ ಎಂದು ಆಯುಕ್ತರು ತಿಳಿಸಿದರು.

‘ಪ್ಲಾಸ್ಟಿಕ್‌ ಬಳಸದಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವ್ಯಾಪಕ ಜಾಹೀರಾತು ನೀಡಬೇಕು. ಯಾವೆಲ್ಲ ರೀತಿಯ ಪ್ಲಾಸ್ಟಿಕ್ ಪರಿಕರಗಳನ್ನು ನಿಷೇಧಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಜನರಿಗೆ ಒದಗಿಸಬೇಕು. ಪ್ರತಿ ವಾರ್ಡ್‌ನ ಆರೋಗ್ಯಾಧಿಕಾರಿ ಮನೆ ಮನೆಗೆ ತೆರಳಿ ಮಾಹಿತಿ ಪತ್ರ ಹಂಚಬೇಕು. ಆ ಬಳಿಕವೂ ಎಚ್ಚೆತ್ತುಕೊಳ್ಳದಿದ್ದಲ್ಲಿ ದಂಡ ವಿಧಿಸುವುದು ಅನಿವಾರ್ಯ’ ಎಂದರು

‘ಜಾಗೃತಿ ಅಭಿಯಾನ ನಡೆಸಿದ ಬಳಿಕ ಎಲ್ಲ ವಾರ್ಡ್‌ಗಳಲ್ಲೂ ಮುಖ್ಯ ಆರೋಗ್ಯಾಧಿಕಾರಿಗಳು, ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ ಆರೋಗ್ಯಾಧಿಕಾರಿಗಳು ಸೇರಿ ಮಾಲ್‌ಗಳು, ಮಳಿಗೆಗಳು, ತಳ್ಳುವ ಗಾಡಿಗಳಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಪರಿಕರಗಳನ್ನು ವಶಪಡಿಸಿಕೊಂಡು ದಂಡ ವಿಧಿಸಬೇಕು’ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಪಿಒಪಿ ಮೂರ್ತಿ ವಶಕ್ಕೆ ಪಡೆಯಿರಿ’

‘ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಬಳಸಿ ತಯಾರಿಸುವ ಮೂರ್ತಿಗಳನ್ನು ನಗರದಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ಗಣೇಶೋತ್ಸವ ಸಲುವಾಗಿ ಎಲ್ಲಾದರೂ ಪಿಒಪಿ ಮೂರ್ತಿಗಳನ್ನು ತಯಾರಿಸುತ್ತಿರುವುದು ಕಂಡುಬಂದರೆ, ಅವುಗಳನ್ನು ವಶಪಡಿಸಿಕೊಳ್ಳಬೇಕು’ ಎಂದು ಮೇಯರ್‌ ಅವರು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT