ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಬಮುಲ್‌ನಿಂದ ‘ಕ್ಷೀರ ಭಾಗ್ಯ’

Last Updated 19 ಅಕ್ಟೋಬರ್ 2018, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸಾವು, ಬದುಕಿನ ಅರಿವಿಲ್ಲದೆ ಆಸ್ಪತ್ರೆಯಲ್ಲೇ ದಿನಕಳೆಯುತ್ತಿರುವ ರಾಜ್ಯದ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮುಲ್‌) ಉಚಿತವಾಗಿ ಹಾಲು, ಮೊಸರು, ಮಜ್ಜಿಗೆಯನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ.

ನಗರದ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ದಾಖಲಾಗಿರುವ ಮಕ್ಕಳು ಹಾಗೂ ರೋಗಿಗಳೆಲ್ಲರಿಗೂ ಪ್ರತಿದಿನ ಎರಡು ಬಾರಿ ಬಮುಲ್‌ನಿಂದ ಹಾಲು, ಮೊಸರು ಹಾಗೂ ಮಜ್ಜಿಗೆ ಉಚಿತವಾಗಿ ಸಿಗುತ್ತಿದೆ.

ಬೆಳಿಗ್ಗೆ 6.30 ಹಾಗೂ 10.30ರ ವೇಳೆಗೆ ಹಾಲಿನ ವಾಹನ ಸಂಸ್ಥೆಯ ಆವರಣವನ್ನು ತಲುಪಲಿದೆ. ಬಳಿಕ ಕ್ಯಾಂಟೀನ್‌ನವರು ಹಾಲನ್ನು ಕಾಯಿಸಿ ಮಕ್ಕಳು ಹಾಗೂ ರೋಗಿಗಳು ಇರುವ ವಾರ್ಡ್‌ಗಳಿಗೆ ತಲುಪಿಸುತ್ತಾರೆ.

‘ಸದ್ಯಕ್ಕೆ ಒಂದು ವರ್ಷ ಉಚಿತವಾಗಿ ಕೊಡುವ ತೀರ್ಮಾನ ಆಗಿದೆ. ಆ ನಂತರದ ಬಗ್ಗೆ ಇನ್ನೂ ಗೊತ್ತಿಲ್ಲ. ವರ್ಷದ ಬಳಿಕ ಸಭೆ ನಡೆಸಿ ತೀರ್ಮಾನ ಮಾಡುವ ಸಾಧ್ಯತೆ ಇದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ಸುರೇಶ್‌ ಹೇಳಿದರು.

‘ಬಡರೋಗಿಗಳಿಗೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಈ ಯೋಜನೆ ಆರಂಭಿಸಿದೆವು. ಮುಖ್ಯವಾಗಿ ಮಕ್ಕಳಿಗೆ ಇದರಿಂದ ಅನುಕೂಲ ಹೆಚ್ಚು. ಸಂಸ್ಥೆಗೆ ಯಾವ ನಷ್ಟವೂ ಆಗಿಲ್ಲ. ರೈತರಿಗೂ ತೊಂದರೆಯಾಗಿಲ್ಲ. ಬಂದ ಲಾಭದಲ್ಲಿ ಒಳ್ಳೆಯ ಕೆಲಸ ಮಾಡುವ ಉದ್ದೇಶ ಇತ್ತು. ಅದು ಸಾಕಾರವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಊರು ಬಿಟ್ಟು ಇನ್ನೊಂದು ಊರಿಗೆ ಮಕ್ಕಳ ಅನಾರೋಗ್ಯದ ಕಾರಣದಿಂದ ಬಂದು ಇಲ್ಲಿ ತಂಗುವ ನೂರಾರು ರೋಗಿಗಳು ಉಚಿತ ಹಾಲು ಹಾಗೂ ಮೊಸರಿನ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.

‘ನಮ್ಮೂರು ತೀರ್ಥಹಳ್ಳಿ. ನಾವು ಅಲ್ಲಿ ಕೂಲಿ ಕೆಲಸ ಮಾಡಿ ಉಳಿಸಿದ್ದ ಅಲ್ಪಸ್ವಲ್ಪ ಹಣವನ್ನೂ ಮಗನ ಕಾಯಿಲೆಗಾಗಿ ಖರ್ಚು ಮಾಡಿದ್ದೇವೆ. ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರೂ, ಓಡಾಟ, ಊಟ ಎಂದು ಸಾಕಷ್ಟು ಖರ್ಚಾಗುತ್ತದೆ. ಅದನ್ನು ಭರಿಸುವ ಶಕ್ತಿ ಈಗ ಇಲ್ಲ. ಹಾಲು, ಮೊಸರು, ಮಜ್ಜಿಗೆಯನ್ನು ಉಚಿತವಾಗಿ ಕೊಟ್ಟಿದ್ದು ನಮಗೆ ಜೀವ ಬಂದಂತೆ ಆಗಿದೆ’ ಎಂದು ಮಕ್ಕಳ ವಾರ್ಡ್‌ನಲ್ಲಿರುವ ಐದು ವರ್ಷದ ಮಗುವಿನ ತಂದೆ ಬಸಪ್ಪ ಹೇಳಿದರು.

‘ಈ ಮೊದಲು ರೋಗಿಗಳು ಹಾಲಿಗಾಗಿ ಕ್ಯಾಂಟೀನ್‌ವರೆಗೂ ಹೋಗಬೇಕಿತ್ತು. ದುಡ್ಡು ಕೊಟ್ಟರೂ ಉತ್ತಮವಾದ ಹಾಲು ಸಿಗೋದು ಕಷ್ಟ ಇತ್ತು. ತಣ್ಣಗಾದ ಹಾಲನ್ನು ಕ್ಯಾಂಟೀನ್‌ನವರು ಕೊಡುತ್ತಿದ್ದರು. ಅದನ್ನು ಮಕ್ಕಳು ಕುಡಿಯದೇ ಚೆಲ್ಲುತ್ತಿದ್ದರು. ಈಗ ಡೈರಿಯವರೇ ಹಾಲು ಪೂರೈಕೆ ಮಾಡುವುದರಿಂದ ಬಿಸಿ ಹಾಲನ್ನು ಮಕ್ಕಳು ಇಷ್ಟಪಟ್ಟು ಕುಡಿಯುತ್ತಾರೆ. ವಯಸ್ಸಾದ ರೋಗಿಗಳಿಗೂ ಸಾಕಷ್ಟು ಅನುಕೂಲ ಆಗಿದೆ’ ಎಂದು ಮೂರು ವರ್ಷದಿಂದ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

**

ಪ್ರತಿದಿನ ಬಮುಲ್‌ನಿಂದ ಕಿದ್ವಾಯಿಗೆ

180: ಹಾಲಿನ ಪ್ಯಾಕ್‌ಗಳು (ಒಂದು ಲೀಟರ್‌ ಪ್ಯಾಕ್‌)

10 ಕೆ.ಜಿ: ಮೊಸರಿನ ಪ್ಯಾಕ್‌ಗಳು

200 ಗ್ರಾಂ: 750 ಪ್ಯಾಕ್ ಮೊಸರು

₹ 25 ಲಕ್ಷ: ವರ್ಷಕ್ಕೆ ಬಮುಲ್‌ಗೆ ಆಗುವ ಖರ್ಚು

**

ಸಮಾಜಮುಖಿ ನಿಲುವು

‘ಬೆಳೆಯುವ ಹಂತದಲ್ಲಿಯೇ ಮಕ್ಕಳು ಆಸ್ಪತ್ರೆ ಸೇರಿದಾಗ ಪೌಷ್ಟಿಕಾಂಶದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಇದಕ್ಕಾಗಿ ಉಚಿತವಾಗಿ ಹಾಲು, ಮೊಸರು ಕೊಡುವುದು ಒಳ್ಳೆಯ ಬೆಳವಣಿಗೆ. ಬಮುಲ್‌ ಸಂಸ್ಥೆಯ ನಿಲುವಿನಿಂದ ರೋಗಿಗಳಿಗೆ ಸಾಕಷ್ಟು ನೆರವಾಗಿದೆ’ ಎಂದು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಹೇಳಿದರು.

**

ಉದ್ಘಾಟನೆ ಆದಂದಿನಿಂದಲೂ ನೀರೇ ಬರುತ್ತಿಲ್ಲ!

ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ವರ್ಷದ ಹಿಂದೆ ಸ್ಥಾಪಿಸಲಾಗಿದೆ. ಅಚ್ಚರಿಯೆಂದರೆ ಈ ಘಟಕ ಉದ್ಘಾಟನೆಗೊಂಡ ದಿನದಿಂದಲೂ ಅದರಲ್ಲಿ ನೀರೇ ಬರುತ್ತಿಲ್ಲ.

ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು ನೀರು ಸಿಗದೆ ಜನರು ಪರದಾಡುವಂತಾಗಿದೆ -ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು ನೀರು ಸಿಗದೆ ಜನರು ಪರದಾಡುವಂತಾಗಿದೆ -ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

ಬಡ ರೋಗಿಗಳಿಗೆ ಶುದ್ಧ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಘಟಕವನ್ನು 2017ರ ಜುಲೈನಲ್ಲಿ ಆರಂಭಿಸಲಾಗಿತ್ತು. ವಿಧಾನಸಭೆಗೆ ನಾಮನಿರ್ದೇಶಿತ ಸದಸ್ಯರಾಗಿದ್ದ ವಿನಿಷಾ ನೀರೊ ಅವರ ₹10 ಲಕ್ಷ ಅನುದಾನದಿಂದ ಬಿಬಿಎಂಪಿಯವರು ಇದನ್ನು ನಿರ್ಮಿಸಿದ್ದರು. ಆದರೆ, ಆ ಬಳಿಕ ಇದರಲ್ಲಿ ನೀರು ಬರುತ್ತಿದೆಯೇ, ಇಲ್ಲವೇ ಎಂದು ನೋಡುವ ಗೋಜಿಗೆ ಯಾರೂ ಹೋಗಿಲ್ಲ. ಸಮರ್ಪಕ ನಿರ್ವಹಣೆ ಸಾಧ್ಯವಾಗದೇ ಈ ಘಟಕವನ್ನು ಮುಚ್ಚಲಾಗಿದೆ.

‘ಆಗಿನ ಮೇಯರ್‌ ಜಿ.ಪದ್ಮಾವತಿ ಅವರು ನೀರಿನ ಘಟಕವನ್ನು ಉದ್ಘಾಟಿಸಿದ್ದರು. ಇನ್ನೇನು ಕೆಲವು ದಿನಗಳಲ್ಲಿ ನೀರು ಬರುತ್ತದೆ ಎಂದು ಹೇಳಿದ್ದರು. ಆದರೆ ನೀರು ಮಾತ್ರ ಬರಲೇ ಇಲ್ಲ’ ಎಂದು ಆಸ್ಪತ್ರೆಯ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

‘ಈಗ ಯಂತ್ರಗಳು ಕೆಟ್ಟು ಹೋಗಿರುವ ಸಾಧ್ಯತೆ ಇದೆ. ಮತ್ತೆ ಹಣ ಖರ್ಚು ಮಾಡಿ ದುರಸ್ತಿ ಮಾಡಿಸಬೇಕಾಗುತ್ತದೆ. ಇದಕ್ಕೆ ಮತ್ತೆ ಸಾರ್ವಜನಿಕರ ಹಣ ಪೋಲು’ ಎಂದು ಸ್ಥಳೀಯ ಹಣ್ಣಿನ ವ್ಯಾಪಾರಿಯೊಬ್ಬರು ಹೇಳಿದರು.

ಬಿಸಿನೀರು ಸಿಗುತ್ತಿಲ್ಲ: ‘ತಣ್ಣೀರಿಗೆ ಇಲ್ಲಿ ಅಷ್ಟೊಂದು ತೊಂದರೆ ಇಲ್ಲ. ಆದರೆ ರೋಗಿಗಳಿಗೆ ತಣ್ಣೀರು ಕೊಡಲು ಸಾಧ್ಯವಿಲ್ಲ. ಬಿಸಿನೀರಿಗೆ ಆಸ್ಪತ್ರೆಯಲ್ಲಿ ಫಿಲ್ಟರ್‌ ವ್ಯವಸ್ಥೆ ಇಲ್ಲ. ಕ್ಯಾಂಟೀನ್‌ಗೆ ಹೋಗಿ ತರಬೇಕು. ಅಲ್ಲಿಯೂ ಕ್ಯೂ ಇರುತ್ತದೆ. ಕಾದು ತರುವುದು ನಿತ್ಯದ ಸಮಸ್ಯೆಯಾಗಿದೆ’ ಎಂದು ರೋಗಿಯೊಬ್ಬರ ಸಂಬಂಧಿ ರಾಜು ಹೇಳಿದರು.

‘ನಾವು ಕ್ಯಾಂಟೀನ್‌ಗೆ ಬರುವವರಿಗೆ ಉಚಿತವಾಗಿ ಫಿಲ್ಟರ್‌ ನೀರು ಹಾಗೂ ಬಿಸಿ ನೀರು ಕೊಡುತ್ತಿದ್ದೇವೆ. ಕೆಲವರು ₹30 ಕೊಟ್ಟು ಅಂಗಡಿಗಳಿಂದ ನೀರು ಖರೀದಿಸುತ್ತಾರೆ. ಕೊಳ್ಳಲು ಆಗದವರು ಕ್ಯಾಂಟೀನ್‌ನಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಇಲ್ಲಿಯೂ ಜನರು ಸಾಲುಗಟ್ಟಿರುತ್ತಾರೆ’ ಎಂದು ಕ್ಯಾಂಟೀನ್‌ ಮಾಲೀಕ ಅಶೋಕ್‌ ಪೂಜಾರಿ ಹೇಳಿದರು.

‘ಐದು ವರ್ಷದ ಮಗ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಮೂರು ತಿಂಗಳಿನಿಂದ ಇಲ್ಲಿದ್ದೇವೆ. ನಿತ್ಯ ಬಿಸಿನೀರಿಗಾಗಿ ಅಲೆಯಬೇಕಿದೆ. ರಾತ್ರಿಹೊತ್ತು ಕೆಲವೊಮ್ಮೆ ಬಿಸಿನೀರು ಬೇಕಾಗುತ್ತದೆ. ಆ ಸಮಯದಲ್ಲಿ ಎಲ್ಲಿಯೂ ನೀರು ಸಿಗುವುದಿಲ್ಲ. ಇದರಿಂದಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ. ವಾರ್ಡ್‌ಗೆ ಹತ್ತಿರದಲ್ಲಿಯೇ ಬಿಸಿನೀರು ಸಿಕ್ಕರೆ ಅನುಕೂಲ’ ಎಂದು ಮಕ್ಕಳ ವಿಭಾಗದ ವಾರ್ಡ್‌ನಲ್ಲಿರುವ ರೋಗಿಯ ತಾಯಿ ಮೀರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT