ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎಫ್‌ಸಿ ತೆರವಿಗೆ ಮುನ್ನ ನೋಟಿಸ್‌ ಕಡ್ಡಾಯ

ನಗರಾಭಿವೃದ್ಧಿ ಇಲಾಖೆ ಸಭೆಯಲ್ಲಿ ನಿರ್ಧಾರ l ಸಮಂಜಸ ಕಾರಣವಿದ್ದರೆ ನೆಲದ ಮೇಲಿನ ಕೇಬಲ್‌ ತೆರವು ಇಲ್ಲ
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅನಧಿಕೃತ ಅಪ್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ) ತೆರವುಗೊಳಿಸುವ ಮುನ್ನ ಅದನ್ನು ಅಳವಡಿಸಿರುವ ಕಂಪನಿಗೆ ನೋಟಿಸ್‌ ನೀಡುವುದು ಇನ್ನು ಕಡ್ಡಾಯ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಅನಧಿಕೃತ ಕೇಬಲ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಆದರೆ, ಜನರ ನಿತ್ಯದ ಬದುಕಿನಲ್ಲಿ ಡಿಜಿಟಲ್‌ ಸಂಪರ್ಕ ಅವಿಭಾಜ್ಯ ಅಂಗ. ಹಾಗಾಗಿ ಒಎಫ್‌ಸಿಗಳನ್ನು ಮನಸೋಇಚ್ಛೆ ತೆರವುಗೊಳಿಸುವುದನ್ನು ತಪ್ಪಿಸಬೇಕು. ಒಎಫ್‌ಸಿ ತೆರವಿಗೆ ಮುನ್ನ ಅದನ್ನು ಅಳವಡಿಸಿರುವವರು ಪರವಾನಗಿ ಪತ್ರವನ್ನು ಹಾಜರುಪಡಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಭೆ ಅಭಿಪ್ರಾಯಪಟ್ಟಿದೆ.

ಏಜೆನ್ಸಿಗಳು ನೆಲದಡಿ ಒಎಫ್‌ಸಿ ಅಳವಡಿಕೆಗೆ ಪರವಾನಗಿ ಪಡೆದಿರುದ ಬಗ್ಗೆ ತೆರವು ಕಾರ್ಯಾಚರಣೆಗೆ ಮುನ್ನವೇ ಪುರಾವೆ ಒದಗಿಸಿದರೆ ಹಾಗೂ ಕೇಬಲ್‌ಗಳನ್ನು ನೆಲದ ಮೇಲೆ ಅಳವಡಿಸುವುದಕ್ಕೆ ಸಮಂಜಸ ಕಾರಣ ನೀಡಿದರೆ ಅಂತಹವುಗಳನ್ನು ತೆರವು ಮಾಡಬಾರದು. ಆದರೆ, ಅವುಗಳನ್ನು ಕಾಲಮಿತಿಯೊಳಗೆ ನೆಲದಡಿಯಲ್ಲಿ ಅಳವಡಿಸುವುದಕ್ಕೆ ಕ್ರಮಕೈಗೊಳ್ಳಬೇಕು ಎಂದೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನೆಲದ ಮೇಲೆ ಅಳವಡಿಸಿರುವ ಒಎಫ್‌ಸಿಯಿಂದ ಸಮಸ್ಯೆ ಆಗುತ್ತಿರುವ ಬಗ್ಗೆಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ಬಿಬಿಎಂಪಿ ದಿಢೀರ್‌ ತೆರವು ಕಾರ್ಯಾಚರಣೆ ನಡೆಸಿತ್ತು. ದೂರಸಂಪರ್ಕ ಸೇವೆಗಳನ್ನು ಪೂರೈಸುವ ಕಂಪನಿಗಳ ಸಂಸ್ಥೆಯಾದ ‘ಸೆಲ್ಯುಲಾರ್ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಸಿಒಎಐ)’ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

‘ಬೆಂಗಳೂರಿನಲ್ಲಿ ಅಧಿಕೃತವಾಗಿ ಅಳವಡಿಸಿರುವ ಕೇಬಲ್‌ಗಳನ್ನೂ ತೆರವುಗೊಳಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನನುಕೂಲಗಳಾಗುತ್ತಿವೆ. ಚುನಾವಣಾ ಕೆಲಸಕ್ಕೆ ಹಾಗೂ ರಾಷ್ಟ್ರೀಯ ಭದ್ರತೆ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ದೂರಿ ಸಿಒಎಐ ಮಹಾನಿರ್ದೇಶಕ ರಾಜನ್‌ ಎಸ್‌. ಮ್ಯಾಥ್ಯೂಸ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಪತ್ರ ಬರೆದಿದ್ದರು. ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆಯೂ ಒತ್ತಾಯಿಸಿದ್ದರು.

ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಪ್ರಮುಖರನ್ನು ಕರೆಸಿ ಸಭೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಯವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರಿಗೆ ಸೂಚನೆ ನೀಡಿದ್ದರು. ಏಪ್ರಿಲ್‌ 29ರಂದು ನಡೆದ ಸಭೆಯ ನಡಾವಳಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸಿಒಎಐ ಆರೋಪಗಳನ್ನು ಸಭೆಯಲ್ಲಿ ಪಾಲಿಕೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಅಧಿಕೃತವಾಗಿ ಅಳವಡಿಸಿದ ಕೇಬಲ್‌ ತೆರವುಗೊಳಿ
ಸಿಲ್ಲ. ಅಡ್ಡ ಕೊರೆಯುವಿಕೆ (ಎಚ್‌ಡಿಡಿ) ವಿಧಾನ ಬಳಸಿ ನೆಲದಡಿ ಕೇಬಲ್‌ಅಳವಡಿಸುವುದಕ್ಕೆ ಮಾತ್ರ ಪರವಾನಗಿ ಅನುಮತಿ ನೀಡಲಾಗಿದೆ. ನೆಲದ ಮೇಲೆ ಕೇಬಲ್‌ ಅಳವಡಿಸಲು ಪರವಾನಗಿ ನೀಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಅನುಮತಿ ಪಡೆದಿದ್ದರೂ, ಕೆಲವೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ನಮ್ಮ ಮೆಟ್ರೊ ಕಾಮಗಾರಿಯಿಂದಾಗಿ ಅನಿವಾರ್ಯವಾಗಿ ನೆಲದ ಮೇಲೆ ಕೇಬಲ್‌ ಅಳವಡಿಸಬೇಕಾಗಿದೆ’ ಎಂಬ ಸಿಒಎಐ ಸಮರ್ಥನೆಯನ್ನೂಪಾಲಿಕೆ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ‘ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಹಾಗೂ ಪಾಲಿಕೆಯ ಸ್ಥಳೀಯ ಎಂಜಿನಿಯರ್‌ಗಳಿಂದ ನಿರಾಕ್ಷೇಪಣಾ ಪತ್ರ ಪಡೆದ ಬಳಿಕವೇ ಒಎಫ್‌ಸಿ ಅಳವಡಿಕೆಗೆ ಅನುಮತಿ ನೀಡಲಾಗುತ್ತದೆ’ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯ ಪ್ರಮುಖ ನಿರ್ಣಯಗಳು

* ಕೇಬಲ್‌/ ಒಎಫ್‌ಸಿ ಅಳವಡಿಕೆಗೆ ಅಗೆಯುವ ರಸ್ತೆಗಳನ್ನು ಸಂಬಂಧಪಟ್ಟ ಏಜೆನ್ಸಿಯವರು 48 ಗಂಟೆಗಳ ಒಳಗೆ ದುರಸ್ತಿಪಡಿಸಬೇಕು

* ಯಾವುದೇ ಏಜೆನ್ಸಿಯೂ ಅನುಮತಿ ಇಲ್ಲದೇ ನೆಲದ ಮೇಲೆ ಅಥವಾ ನೆಲದಡಿಯಲ್ಲಿ ಕೇಬಲ್‌ ಅಳವಡಿಸುವಂತಿಲ್ಲ

* ಹೊಸತಾಗಿ ಡಾಂಬರೀಕರಣಗೊಂಡ ರಸ್ತೆಗಳನ್ನು ಕತ್ತರಿಸುವುದಕ್ಕೆ ಒಂದು ವರ್ಷ ಕಾಲ ಅನುಮತಿ ನೀಡುವಂತಿಲ್ಲ. ಅನುಮತಿ ನೀಡಿದ ಬಳಿಕ ಯಾವುದಾದರೂ ರಸ್ತೆಗೆ ಡಾಂಬರೀಕರಣಗೊಂಡರೆ ಪರ್ಯಾಯ ರಸ್ತೆಯಲ್ಲಿ ಕೇಬಲ್‌ ಅಳವಡಿಸಬಹುದು ಅಥವಾ ವರ್ಷದ ಮಟ್ಟಿಗೆ ನೆಲದ ಮೇಲೆ ಅಳವಡಿಸಲು ಅವಕಾಶ ಕಲ್ಪಿಸಬಹುದು. ಆದರೆ, ಇದರಿಂದ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಉಂಟಾಗಬಾರದು

* ವಿದ್ಯುತ್‌ ಕಂಬ ಹಾಗೂ ಮರಗಳಲ್ಲಿ ಕೇಬಲ್‌ ಅಳವಡಿಸಲು ಅವಕಾಶ ನೀಡಲೇಬಾರದು

* ಒಎಫ್‌ಸಿ ಚೇಂಬರ್‌ಗಳ ನಿರ್ಮಾಣದಲ್ಲಿ ಏಜೆನ್ಸಿಗಳು ಏಕರೂಪತೆ ಪಾಲಿಸದಿದ್ದರೆ ಹಾಗೂ ಮುಚ್ಚಳವನ್ನು ಸರಿಯಾಗಿ ಮುಚ್ಚದಿದ್ದರೆ ದುಬಾರಿ ದಂಡ ವಿಧಿಸಬಹುದು

* ಕೇಬಲ್‌ ಅಳವಡಿಕೆ ಬಿಬಿಎಂಪಿ, ಬೆಸ್ಕಾಂ, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂಚಿತವಾಗಿ ಮೂಲಸೌಕರ್ಯ ಕಲ್ಪಿಸಿದ್ದರೆ ಏಜೆನ್ಸಿಗಳು ಅದನ್ನೇ ಬಳಸಬೇಕು. ಅಂತಹ ಕಡೆ ರಸ್ತೆ ಕತ್ತರಿಸಲು ಅಥವಾ ನೆಲದ ಮೇಲೆ ಕೇಬಲ್‌ ಅಳವಡಿಕೆಗೆ ಅನುಮತಿ ನೀಡುವಂತಿಲ್ಲ

ದೂರು ನೀಡಿದವರೇ ಸಭೆಯಿಂದ ದೂರ

ಒಎಫ್‌ಸಿ ತೆರವು ಕಾರ್ಯಾಚರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಒಎಐ ಮಹಾನಿರ್ದೇಶಕರಾಗಲೀ ಅಥವಾ ಪ್ರತಿನಿಧಿಗಳಾಗಲೀ ಈ ಕುರಿತು ಚರ್ಚಿಸಲು ಕರೆದ ಸಭೆಗೆ ಹಾಜರಾಗಿಲ್ಲ.

ಸಭೆಯಲ್ಲಿ ಭಾಗವಹಿಸುವಂತೆ ಸಿಒಎಐ ಮಹಾ ನಿರ್ದೇಶಕರಿಗೆ ಆಹ್ವಾನ ನೀಡಲಾಗಿತ್ತು. ದೂರವಾಣಿ ಮೂಲಕವೂ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಒಎಫ್‌ಸಿ ಪರವಾನಗಿ ಪುನರಾರಂಭಕ್ಕೆ ಸೂಚನೆ

ಕೇಬಲ್‌ ಅಳವಡಿಕೆಗೆ ಆನ್‌ಲೈನ್‌ನಲ್ಲೇ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಪಾಲಿಕೆ ಸ್ಥಗಿತಗೊಳಿಸಿತ್ತು. ಇದನ್ನು ತಕ್ಷಣವೇ ಪುನರಾರಂಭ ಮಾಡಬೇಕು ಎಂದೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಪರವಾನಗಿ ನಿರಾಕರಿಸಿದರೆ ಅನಧಿಕೃತವಾಗಿ ಕೇಬಲ್‌ ಅಳವಡಿಸುವುದು ಹೆಚ್ಚಲಿದೆ. ಪಾಲಿಕೆಗೂ ವರಮಾನ ನಷ್ಟವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ತಿರಸ್ಕೃತಗೊಂಡಿರುವ ಅರ್ಜಿಗಳ ಸಂಬಂಧ ಪರ್ಯಾಯ ರಸ್ತೆಯಲ್ಲಿ ಕೇಬಲ್ ಅಳವಡಿಕೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT