ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ವ್ಯಾಪ್ತಿಯಲ್ಲೇ ಸೂರು ಕಲ್ಪಿಸಿ: ಡಿಸಿಗೆ ಕೊಡಗು ಸಂತ್ರಸ್ತರ ಮನವಿ

ಸಾಲ ಮನ್ನಾಕ್ಕೆ ಹೋರಾಟ ಸಮಿತಿ ಆಗ್ರಹ
Last Updated 31 ಮೇ 2019, 12:59 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಮನೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಹಾಗೂ ಪ್ರಕೃತಿ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಮೊದಲು ಆಯ್ಕೆ ಮಾಡಿದ್ದ ಸ್ಥಳದಲ್ಲೇ ಮನೆ ಹಸ್ತಾಂತರಿಸಬೇಕು ಎಂದು ಸಂತ್ರಸ್ತರೂ ಕೋರಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಒಂದೇ ಒಂದು ಮನೆಯನ್ನೂ ನೀಡಿಲ್ಲ. ಜತೆಗೆ, ಮನೆ ಹಂಚಿಕೆ ವಿಷಯದಲ್ಲಿರುವ ಗೊಂದಲವೂ ನಿವಾರಣೆಯೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿದ್ದ ಮನೆಗಳನ್ನು ‍ಪರಿಶೀಲಿಸಿದ್ದ ಅಧಿಕಾರಿಗಳು ಸಂತ್ರಸ್ತರ ಬೇಡಿಕೆಯ ಸ್ಥಳದಲ್ಲೇ ಮನೆ ನೀಡುತ್ತೇವೆಂದು ಆರಂಭದಲ್ಲಿ ಹೇಳಿದ್ದರು. ಅದರಂತೆ ಹತ್ತಿರದ ಸ್ಥಳದಲ್ಲಿಯೇ ನಿವೇಶನ ಗುರುತಿಸುವ ಕಾರ್ಯವೂ ನಡೆದಿತ್ತು. ಆದರೆ, ಇದೀಗ ಏಕಾಏಕಿಯಾಗಿ ದೂರದ ಊರಿನಲ್ಲಿ ಮನೆ ನೀಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತ್ರಸ್ತರ ಇಚ್ಛೆಯಂತೆ ಗುರುತಿಸಿದ ಸ್ಥಳದಲ್ಲಿ ಹಾಗೂ ಪಟ್ಟಿಯಲ್ಲಿ ನಮೂದಿಸಿರುವ ಸ್ಥಳದಲ್ಲಿಯೇ ಮನೆ ನೀಡಬೇಕು. ಮೂಲ ಸ್ಥಳದ ಸಮೀಪವೇ ಸಂತ್ರಸ್ತರ ತೋಟ– ಗದ್ದೆಯಿದೆ. ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ ಮನೆ ನೀಡಿದರೆ ಸಂತ್ರಸ್ತರು ಮತ್ತಷ್ಟು ಸಮಸ್ಯೆಗೆ ಸಿಲುಕಲಿದ್ದಾರೆ ಎಂದು ನೋವು ತೋಡಿಕೊಂಡರು.

ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷ್ ನಾಣಯ್ಯ ಮಾತನಾಡಿ, ಸಂತ್ರಸ್ತರನ್ನು ಮೂಲ ಸ್ಥಳದಿಂದ ಬೇರೆಡೆಗೆ ಕಳುಹಿಸಿದರೆ ಬದುಕು ಕಷ್ಟವಾಗಲಿದೆ. ಕೆಲವರ ತೋಟ, ಮನೆ ಬೇರೆಬೇರೆ ಜಾಗದಲ್ಲಿ ಇರುವುದರಿಂದ ಸ್ವಂತ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಹಣ ನೀಡಬೇಕು ಎಂದು ಕೋರಿದರು.

ಅರಣ್ಯ ಇಲಾಖೆ ಮರಗಳನ್ನು ವಶಪಡಿಸಿಕೊಂಡರೆ ಆಯಾ ಮಾಲೀಕರಿಗೆ ಮರಗಳ ಬೆಲೆಗೆ ಅನುಗುಣವಾಗಿ ಹಣ ನೀಡಬೇಕು ಎಂದು ಮನವಿ ಮಾಡಿದರು.

ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪಾರ ನಷ್ಟವಾಗಿದೆ. ಈ ಪಂಚಾಯಿತಿ ವ್ಯಾಪ್ತಿಯ ರೈತರ ಬೆಳೆ ಸಾಲ, ಕೃಷಿ ಅಭಿವೃದ್ಧಿ ಸಾಲ ಹಾಗೂ ಯಂತ್ರೋಪಕರಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕೆಲವು ಸಂತ್ರಸ್ತರು ಸೂಕ್ಷ್ಮ ವಲಯದಲ್ಲಿ ವಾಸಿಸುತ್ತಿದ್ದು, ಅವರಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲು ಹಾಗೂ ಬಾಡಿಗೆ ಮನೆ ಪಡೆಯಲು ಬೇಕಾದ ಮುಂಗಡ ಹಣ ಹಾಗೂ ಪ್ರತಿ ತಿಂಗಳ ಬಾಡಿಗೆಯನ್ನು ಸರ್ಕಾರವೇ ನೀಡಬೇಕು ಎಂದು ಕೋರಿದರು.

ಆಧಾರ್ ಕಾಡ್, ಐ.ಡಿ ಕಾರ್ಡ್ ಹಾಗೂ ಮನೆಯ ದಾಖಲೆ ಕಳೆದುಕೊಂಡವರಿಗೆ ಮತ್ತೆ ಹೊಸ ದಾಖಲೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ವಕ್ತಾರ ನಾಪಂಡ ರವಿ ಕಾಳಪ್ಪ ಹೇಳಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾಡಳಿತವು ಸರ್ಕಾರದ ಅನುದಾನದಲ್ಲಿ ಗುಣಮಟ್ಟದ ಮನೆ ನಿರ್ಮಿಸುತ್ತಿದೆ. ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿರುವೆ. ಮಳೆಗಾಲಕ್ಕೂ ಮೊದಲೇ ಸಂತ್ರಸ್ತರಿಗೆ ಮನೆ ವಿತರಿಸುವ ಉದ್ದೇಶದಿಂದ ಕಾಮಗಾರಿ ತ್ವರಿತ ಮಾಡಲಾಗಿದೆ ಎಂದು ಭರವಸೆ ನೀಡಿದರು.

ಮೊದಲ ಪಟ್ಟಿಯಲ್ಲಿರುವ ಸಂತ್ರಸ್ತರಿಗೆ ಶೀಘ್ರವಾಗಿ ಮನೆ ನೀಡಲು ಪ್ರಯತ್ನಿಸಲಾಗಿದೆ. ಸಂತ್ರಸ್ತರು ಗೊಂದಲ ಸೃಷ್ಟಿ ಮಾಡದೇ ತಮಗೆ ಸಿಗುವ ಸ್ಥಳದಲ್ಲಿಯೇ ಮನೆಗಳನ್ನು ಪಡೆದುಕೊಳ್ಳಿ ಎಂದು ಕೋರಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ಸತೀಶ್, ವಿ.ಕೆ. ಲೋಕೇಶ್, ತಳೂರು ಕಿರ್ತನ್ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT