ಮಂಗಳವಾರ, ಮಾರ್ಚ್ 2, 2021
28 °C
ನಗರದ ಹೊರವಲಯದಲ್ಲಿ ಬರಿದಾದ ಕೊಳವೆ ಬಾವಿಗಳು

ಬೆಂಗಳೂರು: ನೀರಿಗಾಗಿ ನಾಗರಿಕರ ನರಳಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಸಾಮರ್ಥ್ಯ ವಿಸ್ತರಿಸಿದ್ದೇವೆ. ಈ ಬಾರಿ ನೀರಿನ ಸಮಸ್ಯೆ ಇರದು’ ಎಂದು ಜಲಮಂಡಳಿ ಹೇಳುತ್ತಿದ್ದರೆ, ಮತ್ತೊಂದೆಡೆ ನಗರದ ಹೊರ ವಲಯದಲ್ಲಿ ಬೇಸಿಗೆ ಅಡಿ ಇಡುವ ಮುನ್ನವೇ ನೀರಿನ ಬವಣೆ ಎದುರಾಗಿದೆ.

ಬಿಬಿಎಂಪಿ ಹಳೆ ಪ್ರದೇಶದ  ಬಡಾವಣೆಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಕಾವೇರಿ ನೀರು ಪೂರೈಕೆ ಅಷ್ಟೇನೂ ವ್ಯತ್ಯಯವಾಗಿಲ್ಲ. ಆದರೆ, ಹೊರವಲಯದ ಹಳ್ಳಿಗಳ ಬಡಾವಣೆಗಳು, ಕೊಳೆಗೇರಿಗಳು ನೀರು ಪೂರೈಕೆಯ ಅನಿಶ್ಚಿತತೆ ಎದುರಿಸುತ್ತಿವೆ. ಅನೇಕ ಕಡೆ ಜನರ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಪಾಲಿಕೆ ಸದಸ್ಯರು ಫೆಬ್ರುವರಿ ತಿಂಗಳಲ್ಲೇ ಟ್ಯಾಂಕರ್ ನೀರಿನ ಮೊರೆ ಹೋಗಲಾರಂಭಿಸಿದ್ದಾರೆ.  ಇನ್ನು ಕೆಲವೆಡೆ ಮನೆ ಮಾಲೀಕರ ಮನವೊಲಿಸಿ ನೀರು ಹಂಚಿಕೆ ಸೂತ್ರ ರೂಪಿಸಿ ತಾತ್ಕಾಲಿಕ ಉಪಶಮನ ಕಂಡುಕೊಳ್ಳುತ್ತಿದ್ದಾರೆ. 

ಬಂಡೆಪಾಳ್ಯ, ಹೊಸಪಾಳ್ಯ, ಅರಕೆರೆ, ಜರಗನಹಳ್ಳಿ, ಬೊಮ್ಮನಹಳ್ಳಿ, ಕೆ.ಆರ್‌.ಪುರದ ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆಯ ಚಿತ್ರಣವನ್ನು ಬಿಬಿಎಂಪಿ ಸದಸ್ಯರೇ ಕಟ್ಟಿಕೊಟ್ಟರು. ಜಲಮಂಡಳಿಯ ಕಾರ್ಯವೈಖರಿ ಬಗ್ಗೆ ಅಸಹನೆಯನ್ನೂ ವ್ಯಕ್ತಪಡಿಸಿದರು.

‘ಜರಗನಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿ 40 ಬೋರ್‌ವೆಲ್‌ಗಳಿವೆ. ಕೆಲವೆಡೆ ಸಿಹಿನೀರು ಹಲವು ಬೋರ್‌ವೆಲ್‌ಗಳಲ್ಲಿ ಸವಳು ನೀರು ಬರುವುದೂ ಇದೆ. ಇಲ್ಲಿ ಪದೇ ಪದೇ ಬೋರ್‌ವೆಲ್‌ ಕೆಡುತ್ತದೆ. ದುರಸ್ತಿಗೆಂದು ಪಂಪ್‌ ಕೊಂಡೊಯ್ದವರು ಸಮಯಕ್ಕೆ ಸರಿಯಾಗಿ ಕೊಡುವುದಿಲ್ಲ. ಇಂಥ ಸಂದರ್ಭ ಒಂದೊಂದು ಪ್ರದೇಶಕ್ಕೆ 20ರಿಂದ 25 ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುವುದಿದೆ’ ಎಂದರು ಜರಗನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯೆ ಬಿ.ಎಂ.ಶೋಭಾ ಮುನಿರಾಮ್‌.

‘ಮೊದಲೇ ನೀರಿನ ಕೊರತೆಯಿದೆ. ರಸ್ತೆ, ಚರಂಡಿ, ಪೈಪ್‌ಲೈನ್‌ ಕಾಮಗಾರಿಗಳಿಗಾಗಿ ಭೂಮಿ ಅಗೆದಾಗ ನೀರು ಪೂರೈಕೆ ಕೊಳವೆಗೆ ಹಾನಿಯಾಗಿ ಅದು ದುರಸ್ತಿಯಾಗುವವರೆಗೆ ಕಾಯಬೇಕು. ಸಮಸ್ಯೆ ಇರುವ ಬಡಾವಣೆಗಳಲ್ಲಿ ಇಂಥ ಪರಿಸ್ಥಿತಿಯಾದರೆ ಕೇಳುವುದೇ ಬೇಡ’ ಎನ್ನುತ್ತಾರೆ ಅರಕೆರೆ ವಾರ್ಡ್‌ ಸದಸ್ಯೆ ಭಾಗ್ಯಲಕ್ಷ್ಮೀ ಮುರಳಿ.

ರಾಮಮೂರ್ತಿ ನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್‌ ಜಲಕ್ಷಾಮದ ಕುರಿತು ಇತ್ತೀಚೆಗೆ ಬಿಬಿಎಂಪಿಗೆ ಪತ್ರ ಬರೆದಿದ್ದಾರೆ. ‘ನಮ್ಮ ವಾರ್ಡ್‌ನ ಅರ್ಧ ಭಾಗಕ್ಕೆ ಮಾತ್ರ ಕಾವೇರಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಅದೂ ವಾರಕ್ಕೊಮ್ಮೆ ಬಂದರೆ ಹೆಚ್ಚು. ಕಲ್ಕೆರೆ, ಕನಕನಗರ, ಚನ್ನಸಂದ್ರ, ಪೂಜಾ ಬಡಾವಣೆ, ಎನ್‌ಆರ್‌ಐ ಬಡಾವಣೆಗಳು ಕೊಳವೆ ಬಾವಿ ನೀರಿನ ಮೇಲೆ ಅವಲಂಬಿತವಾಗಿವೆ. ಇಲ್ಲಿ ಹೊಸ ಕೊಳವೆ ಬಾವಿಗಳನ್ನು ತೋಡಬೇಕು’ ಎಂದು ಅವರು ಪತ್ರದಲ್ಲಿ
ಕೋರಿದ್ದಾರೆ.

ಪೂರೈಕೆ ಸಾಮರ್ಥ್ಯ ಹೆಚ್ಚಳ

‘ನೀರು ಪೂರೈಕೆ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸುಧಾರಿಸಿದೆ. ಕಳೆದ ವರ್ಷ ಪ್ರತಿದಿನ 135 ಕೋಟಿ ಲೀಟರ್‌ನಿಂದ 136 ಕೋಟಿ ಲೀಟರ್‌ಗಳಷ್ಟು ನೀರು ಪೂರೈಸಿದ್ದೆವು. ಈ ವರ್ಷ ನೀರು ಪಂಪ್‌ ಮಾಡುವ ಸಾಮರ್ಥ್ಯ ಹೆಚ್ಚಿಸಿದ್ದೇವೆ. ನಿತ್ಯ 138 ಕೋಟಿ ಲೀಟರ್‌ನಿಂದ 140 ಕೋಟಿ ಲೀಟರ್‌ಗಳಷ್ಟು ನೀರು ಪೂರೈಸುತ್ತಿದ್ದೇವೆ’ ಎಂದು ಜಲ ಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವೆಡೆ ಕಾರ್ಯಜಾಲದ ವ್ಯವಸ್ಥೆಯ ಕಾರಣದಿಂದ ನೀರು ಹರಿಯುವಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಏಕೆಂದರೆ ನಗರ ವ್ಯಾಪ್ತಿಗೆ 110 ಹಳ್ಳಿಗಳನ್ನೂ ಸೇರಿಸಿದ್ದೇವೆ. ಹೀಗಾಗಿ ಅಲ್ಲಿನ ಕೊನೆಯ ಭಾಗಗಳಿಗೆ ನೀರು ಹರಿಯುವಾಗ ಒತ್ತಡ ಕಡಿಮೆಯಾಗಿ ಪೂರೈಕೆಯಲ್ಲಿ ವ್ಯತ್ಯಯ ಆಗಿರಬಹುದು’ ಎಂದರು.

ಟ್ಯಾಂಕರ್‌ ನೀರೇ ಗತಿ

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹಲವು ವಾರ್ಡ್‌ಗಳಲ್ಲಿ ಟ್ಯಾಂಕರ್ ನೀರೇ ಗತಿ. ಪ್ರತಿ ಟ್ಯಾಂಕರ್‌ ನೀರಿನ ಬೆಲೆ ₹ 500ರಿಂದ ₹ 600 ಇದೆ.

ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಪ್ರಕಾರ ಈ ಕ್ಷೇತ್ರದ 11 ಹಳ್ಳಿಗಳಿಗೂ ಸವಲತ್ತು ಸಿಗಬೇಕಿತ್ತು. ಆದರೆ, ಈ ಯೋಜನೆ ಜನರ ಪಾಲಿಗೆ ಗಗನ ಕುಸುಮವಾಗಿದೆ.

ಅಲ್ಲಲ್ಲಿ ರಸ್ತೆ ಆಗೆದಿದ್ದು ಬಿಟ್ಟರೆ ಪೈಪ್ ಆಳವಡಿಸುವ ಕಾರ್ಯ ಇನ್ನೂ ಮುಗಿದಿಲ್ಲ. ರಾಮಮೂರ್ತಿನಗರ ವಾರ್ಡಿನ ಕಲ್ಕೆರೆ, ಕನಕನಗರ, ಚನ್ನಸಂದ್ರ, ಅಕ್ಷಯನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಜಯಂತಿ ನಗರದಲ್ಲಿ ವಾರಕ್ಕೆ ಒಂದು ಬಾರಿ ಮಾತ್ರ ಕುಡಿಯುವ ನೀರು ಬರುತ್ತಿದೆ. ನೀರಿಗಾಗಿ ಕಾದು ರಾತ್ರಿ ವೇಳೆ ಜಾಗರಣೆ ಮಾಡುವಂತಾಗಿದೆ. ಕೆಲವು ರಾಜಕೀಯ ಮುಖಂಡರು ತಮ್ಮ ಟ್ರಸ್ಟ್‌ಗಳ ಮೂಲಕ ಉಚಿತವಾಗಿ ಕುಡಿಯುವ ನೀರು ಒದಗಿಸಲು ಮುಂದಾಗಿದ್ದಾರೆ.

***

 ನಗರದಲ್ಲಿ ಎಲ್ಲೂ ನೀರಿನ ಸಮಸ್ಯೆ ಉದ್ಭವಿಸದಂತೆ ಎಲ್ಲ ಮುಂಜಾಗ್ರತಾ ಕ್ರಮ ವಹಿಸಿದ್ದೇವೆ. ಆದರೆ, ಜನರೂ ಜವಾಬ್ದಾರಿಯಿಂದ ನೀರು ಬಳಸಬೇಕು

-ತುಷಾರ್‌ ಗಿರಿನಾಥ್‌, ಜಲ ಮಂಡಳಿ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.