ಮಂಗಳವಾರ, ಆಗಸ್ಟ್ 20, 2019
25 °C
ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್‌ ಘಟಕದಿಂದ ಕ್ರಮ

ಬೆಳಗಾವಿ ಜಿಲ್ಲೆಯಾದ್ಯಂತ ಮತಗಟ್ಟೆಗಳ ಬಳಿ ಪೊಲೀಸ್ ಪಹರೆ

Published:
Updated:

ಬೆಳಗಾವಿ: ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ನಡೆಯುವುದರಿಂದ ಏ. 23ರಂದು ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ವಿಶೇಷವಾಗಿ ಚುನಾವಣಾ ಅಕ್ರಮಗಳನ್ನು ತಡೆಯುವುದಕ್ಕಾಗಿ ಮತಗಟ್ಟೆಗಳ ಸುತ್ತಮುತ್ತ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

‘ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಗೆ ಉತ್ತರ, ದಕ್ಷಿಣ, ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲದೇ ಯಮಕನಮರಡಿ ವಿಧಾನಸಭಾ ಕ್ಷೇತ್ರದ 101 ಮತಗಟ್ಟೆಗಳು ಬರುತ್ತವೆ. ಕಮಿಷನರೇಟ್‌ ವ್ಯಾಪ್ತಿಯಲ್ಲಿ ಒಟ್ಟು 893 ಮತಗಟ್ಟೆಗಳಿಗೆ ಬಂದೋಬಸ್ತ್‌ ಕರ್ತವ್ಯಕ್ಕೆ 1,433 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ ರಾಜ್ಯ ಮೀಸಲು ಪಡೆಯ 3, ಕೇಂದ್ರ ಮೀಸಲು ಪಡೆಯ (ಸಿಎಪಿಎಫ್) 2 ಹಾಗೂ ನಗರ ಸಶಸ್ತ್ರ ಪಡೆಯ 10 ದಳದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

‘ಸಿಬ್ಬಂದಿಯು ಸೋಮವಾರ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ.ಸಾರ್ವಜನಿಕರು ನಿರ್ಭೀತಿಯಿಂದ ಮತ ಚಲಾಯಿಸಬಹುದು. ಮತಗಟ್ಟೆಯಲ್ಲಿ ಯಾವುದೇ ತೊಂದರೆಯಾದಲ್ಲಿ ಅಲ್ಲಿರುವ ಪೊಲೀಸ್ ಅಧಿಕಾರಿ ಅಥವಾ ಸೆಕ್ಟರ್ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 3540 ಮತಗಟ್ಟೆಗಳು ಬರುತ್ತವೆ. 5,200 ಸಿಬ್ಬಂದಿ ನಿಯೋಜಿಸಲಾಗಿದೆ. ಇವರೊಂದಿಗೆ 200 ಪಿಎಸ್‌ಐ/ಎಎಸ್‌ಐಗಳು 7ರಿಂದ 10 ಕಿ.ಮೀ. ಅಂತರದಲ್ಲಿರುವ 15ರಿಂದ 20 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸೆಕ್ಟರ್‌ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವರು. 45 ಇನ್‌ಸ್ಪೆಕ್ಟರ್‌ಗಳು ಮೇಲುಸ್ತುವಾರಿ ನೋಡಿಕೊಳ್ಳುವರು. ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವುದಕ್ಕೆ ಸಂಬಂಧಿಸಿದಂತೆ ನಿಗಾ ವಹಿಸುವರು. ಪ್ರತಿ ವಿಧಾನಸಭಾ ಕ್ಷೇತ್ರದ ಮೇಲುಸ್ತುವಾರಿಯನ್ನು 15 ಡಿವೈಎಸ್ಪಿಗಳಿಗೆ ವಹಿಸಲಾಗಿದೆ. ಅವರೊಂದಿಗೆ ತಲಾ ಒಂದು ಕೆಎಸ್‌ಆರ್‌ಪಿ ತುಕಡಿ ಇರುತ್ತದೆ. ಒಟ್ಟು ಕೆಎಸ್‌ಆರ್‌ಪಿಯ 16 ತುಕಡಿಗಳು, ಸಿಪಿಎಂಎಫ್‌ನ 6 ಕಂಪನಿಗಳು ಕಾರ್ಯನಿರ್ವಹಿಸಲಿವೆ.

ಹೋದ ವರ್ಷ ನಡೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಒಂದು ಸಾವಿರ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Post Comments (+)