ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ ಸೃಷ್ಟಿಸಿದ ಅವಾಂತರ: ದಿನವಿಡೀ ನಡೆದ ತೆರವು ಕಾರ್ಯಾಚರಣೆ

ಹಲವೆಡೆ ಉರುಳಿಬಿದ್ದ ಮರ: ಕೆಲವೆಡೆ ವಿದ್ಯುತ್‌ ಸರಬರಾಜು ಸ್ಥಗಿತ
Last Updated 8 ಮೇ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಧಾರಾಕಾರವಾಗಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಹಲವೆಡೆ ಉರುಳಿಬಿದ್ದಿದ್ದ ಮರಗಳು ಹಾಗೂ ವಿದ್ಯುತ್‌ ಕಂಬಗಳ ತೆರವು ಕಾರ್ಯಾಚರಣೆ ಬುಧವಾರವೂ ನಡೆಯಿತು.

ನಗರದ ಬಹುತೇಕ ಕಡೆಗಳಲ್ಲಿ ಮಳೆ ಸುರಿದು, ರಸ್ತೆಯಲ್ಲೆಲ್ಲ ನೀರು ಹರಿದಿತ್ತು. ಕಾಲುವೆ ಹಾಗೂ ಚರಂಡಿಯ ತ್ಯಾಜ್ಯವೆಲ್ಲವೂಆ ರಸ್ತೆಗಳಲ್ಲಿ ಬಿದ್ದಿದ್ದು ಬುಧವಾರ ಕಂಡುಬಂತು.

ಬನಶಂಕರಿ, ಜೆ.ಪಿ.ನಗರ, ಚಾಮರಾಜಪೇಟೆ, ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ನಾಗಸಂದ್ರ, ಪೀಣ್ಯ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಅಲ್ಲೆಲ್ಲ ತಡರಾತ್ರಿ ವಾಹನಗಳ ದಟ್ಟಣೆಯೂ ಉಂಟಾಗಿತ್ತು.

ಚೊಕ್ಕಸಂದ್ರ, ಬಸವೇಶ್ವರನಗರ, ರಾಜಾಜಿನಗರದ ಟಿವಿಎಸ್ ಲೇಔಟ್‌ನ ಸುರಾನ ಕಾಲೇಜು, ಸಂಜಯನಗರ,ಪೀಣ್ಯದ ಎನ್‌ಟಿಟಿಎಫ್ ವೃತ್ತ, ಬಸವನಗುಡಿ, ಆರ್‌ಎಂಸಿ ಆಸ್ಪತ್ರೆ, ಹಲಸೂರು ಹಾಗೂ ಬಾಗಲಗುಂಟೆ ಎಂಇಐ ಲೇಔಟ್‌ ಬಳಿ ಉರುಳಿಬಿದ್ದಿದ್ದ ಮರಗಳ ಅವಶೇಷಗಳನ್ನು ತೆರವು ಮಾಡಲು ಬಿಬಿಎಂಪಿ ಸಿಬ್ಬಂದಿ ಹರಸಾಹಸಪಟ್ಟರು.

ಬಸವನಗುಡಿ, ಚೊಕ್ಕಸಂದ್ರ, ಬಸವೇಶ್ವರ ವೃತ್ತ (ಚಾಲುಕ್ಯ ವೃತ್ತ), ಜಯನಗರ 2ನೇ ಹಂತ, ಆನಂದನಗರದಲ್ಲಿ ಉರುಳಿಬಿದ್ದಿದ್ದ ಮರಗಳ ತೆರವು ಕೆಲಸ ಬುಧವಾರವೂ ಚಾಲ್ತಿಯಲ್ಲಿತ್ತು.

ವಿದ್ಯುತ್ ಕಂಬಗಳ ತೆರವು: ಮಳೆ ವೇಳೆ ಜೋರಾದ ಗಾಳಿ ಬೀಸಿದ್ದರಿಂದ ನಗರದ ಹಲವೆಡೆ ವಿದ್ಯುತ್‌ ಕಂಬಗಳು ಸಹ ನೆಲಕ್ಕುರುಳಿದ್ದವು. ಅದರಿಂದಾಗಿ ಆರ್‌.ಟಿ.ನಗರ, ಸುಬ್ರಹ್ಮಣ್ಯನಗರ, ಆನಂದನಗರ, ಸಂಜಯನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಅಲ್ಲೆಲ್ಲ ಬೆಸ್ಕಾಂ ಸಿಬ್ಬಂದಿ, ವಿದ್ಯುತ್ ಕಂಬಗಳನ್ನು ಬುಧವಾರ ರಾತ್ರಿವರೆಗೂ ತೆರವು ಮಾಡಿದರು. ಅಲ್ಲಿಯವರೆಗೂ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು.

ಮಳೆ ಆರ್ಭಟ; ಮನೆ, ಬೈಕ್‌ಗಳು ಜಖಂ

(ನೆಲಮಂಗಲ ವರದಿ):ತಾಲ್ಲೂಕಿನಾದ್ಯಂತ ಮಂಗಳವಾರ ಸುರಿದ ಗಾಳಿ ಸಹಿತ ಮಳೆಗೆ 13 ಮನೆಗಳಿಗೆ ಹಾನಿಯಾಗಿದ್ದು, ಎರಡು ಮನೆಗಳುಸಂಪೂರ್ಣವಾಗಿ ಹಾಳಾಗಿವೆ. ಎರಡುಬೈಕ್‌ಗಳು ಜಖಂಗೊಂಡು, ಇಬ್ಬರು ಗಾಯಗೊಂಡಿದ್ದಾರೆ.

ಇಲ್ಲಿಗೆಸಮೀಪದ ಮಲ್ಲಾಪುರದಲ್ಲಿ ಐದು ಮರಗಳು ನೆಲಕ್ಕುರುಳಿವೆ. ಆಲದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಮನೆಯ ಒಂದು ಭಾಗ ಸಂಪೂರ್ಣವಾಗಿ ಹಾಳಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಎಂಬುವರಿಗೆ ಸೇರಿದ ಮನೆಯ ಶೀಟು ಹಾರಿಹೋಗಿದ್ದು, ಮನೆಯಲ್ಲಿದ್ದ ಪೀಠೋಪಕರಣಗಳಿಗೆ ಹಾನಿಯಾಗಿದೆ. ಗ್ರಾಮದ ಮತ್ತೊಂದು ಮನೆಯಲ್ಲಿದ್ದ ಒಬ್ಬರ ಕಾಲು ಮುರಿದಿದ್ದು, ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮನೆ ಕಳೆದುಕೊಂಡಸೋಮಶೇಖರ್‌, ‘ಮನೆಗೆ ಸಂಪೂರ್ಣ ಹಾನಿಯಾಗಿದೆ. ರಜೆ ಕಳೆಯಲೆಂದು ಊರಿನಿಂದ ಬಂದಿದ್ದ ಸಂಬಂಧಿಯ ಮಗನ ಕಾಲು ಮುರಿದಿದ್ದು ಬೇಸರ ಉಂಟು ಮಾಡಿದೆ. ಮನೆಯಲ್ಲಿ ಒಟ್ಟು 10 ಜನ ಇದ್ದೆವು. ರಾತ್ರಿಯೆಲ್ಲ ನಿದ್ದೆ ಇಲ್ಲ. ಸರ್ಕಾರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರಿ ಶಾಲೆಯ ಕಾಂಪೌಂಡ್‌ ಮೇಲೆ ಮರದ ಕೊಂಬೆ ಬಿದ್ದಿದ್ದು, ಮುಂಭಾಗಕ್ಕೆ ಹಾನಿಯಾಗಿದೆ. ಶಾಲೆ ರಜೆ ಇದ್ದ ಕಾರಣ ದೊಡ್ಡ ಅವಘಡ ಸಂಭವಿಸುವುದು ತಪ್ಪಿದೆ’ ಎಂದು ಸ್ಥಳೀಯ ಮಾರಯ್ಯ ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ರಾಜಶೇಖರ್‌, ‘ಹಾನಿಗೆ ಸಂಬಂಧಿಸಿದ ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿ, ಶೀಘ್ರವಾಗಿ ಪರಿಹಾರ
ಒದಗಿಸಿಕೊಡಲಾಗುವುದು’ ಎಂದು ತಿಳಿಸಿದರು.

ವಿದ್ಯುತ್‌ ಸಂಪರ್ಕ ಕಡಿತ: ಇಲ್ಲಿಗೆ ಸಮೀಪದ ದಾಸನಪುರದಲ್ಲಿ ಮಂಗಳವಾರ ಸಂಜೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಜನ ಪರದಾಡುತ್ತಿದ್ದಾರೆ.

**

65:ಉರುಳಿಬಿದ್ದ ಮರಗಳು
80:ನೆಲಕ್ಕುರುಳಿದ ವಿದ್ಯುತ್ ಕಂಬಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT