ಮಂಗಳವಾರ, ಸೆಪ್ಟೆಂಬರ್ 21, 2021
22 °C
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ

‘ರಂಗಮಂದಿರ ಪ್ರಾಧಿಕಾರ’ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಂಗಮಂದಿರಗಳ ಕೊರತೆ ಹಾಗೂ ರಂಗಭೂಮಿಯ ಸಮಸ್ಯೆಗಳನ್ನು ನೀಗಿಸುವ ‘ರಂಗ ಮಂದಿರ ಪ್ರಾಧಿಕಾರ’ ರಚನೆಗೆ ಅಂತಿಮ ರೂಪುರೇಷೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಸಿದ್ಧಪಡಿಸಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಂಗಮಂದಿರ ಕೊರತೆಯಿಂದಾಗಿ ರಂಗ ಚಟುವಟಿಕೆಗಳು ಕುಂಠಿತವಾಗಿವೆ. ಈ ಕಾರಣದಿಂದಾಗಿ ರಂಗಮಂದಿರ ಪ್ರಾಧಿಕಾರ ರಚಿಸಬೇಕು ಎಂಬ ಬೇಡಿಕೆ ಜೀವತಳೆದಿತ್ತು. ನಾಡಿನ ರಂಗ
ಕರ್ಮಿಗಳು ಹಾಗೂ ಸಾಂಸ್ಕೃತಿಕ ವಲಯದ ತಜ್ಞರ ಸಲಹೆ ಅನುಸಾರ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಂಗಮಂದಿರ ಪ್ರಾಧಿಕಾರಕ್ಕೆ ಅಂತಿಮ ಸ್ವರೂಪ ನೀಡಲಾಗಿದೆ. ‘ಕರ್ನಾಟಕ ರಂಗಮಂದಿರಗಳ ಪ್ರಾಧಿಕಾರ’ ಎಂಬ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಪ್ರಾಧಿಕಾರದ ಪ್ರಧಾನ ಕಚೇರಿಯನ್ನು ಧಾರವಾಡ ಅಥವಾ ದಾವಣಗೆರೆಯಲ್ಲಿ ನಿರ್ಮಿಸಬೇಕೆಂದು ನಿರ್ಧರಿಸಲಾಗಿದೆ. ಈ ಕರಡು ಪ್ರಸ್ತಾವನೆಯನ್ನು ಲೋಕಸಭೆ ಚುನಾವಣೆ ಬಳಿಕ ನಾಟಕ ಅಕಾಡೆಮಿಯು ಸರ್ಕಾರಕ್ಕೆ ಸಲ್ಲಿಸಲಿದೆ. 

300 ಆಸನಗಳ ರಂಗಮಂದಿರ: ಪ್ರತಿ ತಾಲ್ಲೂಕಿನಲ್ಲಿ 300 ಆಸನದ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಬೇಕು ಎಂದು ಶಿಫಾರಸು ಮಾಡಿದೆ.

ಇದರ ಅನುಸಾರ ವೃತ್ತಿ, ಪೌರಾಣಿಕ ಹಾಗೂ ಹವ್ಯಾಸಿ ನಾಟಕಗಳ ಪ್ರದರ್ಶನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಲಾಗಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಡಳಿತ ಅನುಭವ ಹಾಗೂ ರಂಗ ಪರಿಣತಿ ಹೊಂದಿರುವವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸೂಚಿಸಲಾಗಿದೆ.

ರಾಜ್ಯದ ನಾಲ್ಕೂ ಕಂದಾಯ ವಿಭಾಗದಿಂದ ತಲಾ ಇಬ್ಬರಂತೆ ರಂಗಭೂಮಿಗೆ ಸಂಬಂಧಿಸಿದ 8 ಜನ ಸದಸ್ಯರ ಜತೆಗೆ ಒಟ್ಟು 15 ಸದಸ್ಯರು ಪ್ರಾಧಿಕಾರದಲ್ಲಿ ಇರಬೇಕು. ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರವಧಿ 5 ವರ್ಷ ಇರಬೇಕೆಂದು ಅಂಗರಚನೆಯಲ್ಲಿ ತಿಳಿಸಲಾಗಿದೆ.

***
ರಂಗಭೂಮಿ ಪ್ರಾಧಿಕಾರ ರಚನೆ ವಿಚಾರವಾಗಿ ರಂಗಕರ್ಮಿಗಳ ಸಲಹೆ ಅನುಸಾರ ಕರಡು ಅಂಗರಚನೆ ಸಿದ್ಧಗೊಳಿಸಲಾಗಿದೆ. ಇದಕ್ಕೆ ₹300ಕೋಟಿ ಅಗತ್ಯ ಇದೆ

-ಜೆ. ಲೋಕೇಶ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು