ಮಂಗಳವಾರ, ಸೆಪ್ಟೆಂಬರ್ 21, 2021
22 °C
ಬೆಂಗಳೂರು ವಿಶ್ವವಿದ್ಯಾಲಯ ತೀರ್ಮಾನ

ಅಕ್ಕಪಕ್ಕದಲ್ಲೇ ಸರಸ್ವತಿ, ಬುದ್ಧನ ಪ್ರತಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸರಸ್ವತಿ ದೇವಿಯ ವಿಗ್ರಹದ ಪಕ್ಕದಲ್ಲೇ ಬುದ್ಧನ ವಿಗ್ರಹವನ್ನು ಇರಿಸಲು ತೀರ್ಮಾನಿಸಲಾಗಿದೆ.

ಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕುಲಸಚಿವ ಬಿ.ಕೆ.ರವಿ ತಿಳಿಸಿದ್ದಾರೆ. ಡಿ.ಎಂ.ನಂಜುಂಡಪ್ಪ ಕುಲಪತಿ ಆಗಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಸರಸ್ವತಿ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು.

ಇತ್ತೀಚೆಗೆ ವಿಗ್ರಹ ಬಿನ್ನಗೊಂಡಿದ್ದರಿಂದ ಸರಸ್ವತಿಯ ಹೊಸ ವಿಗ್ರಹ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಹೊಸ ವಿಗ್ರಹ ಇರಿಸಲು ಹಳೆ ವಿಗ್ರಹ ತೆರವುಗೊಳಿಸಿದಾಗ ಏಕಾಏಕಿ ಕೆಲವರು ಬುದ್ಧನ ವಿಗ್ರಹ ತಂದು ಇರಿಸಿದರು. ಇದರಿಂದ ಪರ–ವಿರೋಧ ಚರ್ಚೆಗೆ ಕಾರಣವಾಗಿ, ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು.

ಕುಲಪತಿಯವರ ಅಧ್ಯಕ್ಷತೆಯಲ್ಲಿ ತೆಗೆದುಕೊಂಡ ತೀರ್ಮಾನಗಳು
* ಬುದ್ಧನ ವಿಗ್ರಹವನ್ನು ಸರಸ್ವತಿಯ ವಿಗ್ರಹದ ಪಕ್ಕದಲ್ಲೇ ಗೌರವಯುತವಾಗಿ ಇರಿಸುವುದು.
* ಹಿಂದಿನಿಂದಲೂ ಸರಸ್ವತಿ ಇದ್ದ ಜಾಗದಲ್ಲೇ ವಿಗ್ರಹವನ್ನು ಯಥಾಸ್ಥಿತಿಯಲ್ಲಿ ಸ್ಥಾಪಿಸಲಾಗುವುದು. ಅದಕ್ಕೆ ಸಮಾನಾಂತರವಾಗಿ ಪ್ರತ್ಯೇಕ ಪೀಠವನ್ನು ನಿರ್ಮಿಸಿ ಬುದ್ಧನ ವಿಗ್ರಹ ಸ್ಥಾಪಿಸಲಾಗುವುದು.
* ಎರಡೂ ವಿಗ್ರಹಗಳ ತೂಕವನ್ನು ಕಾಯ್ದುಕೊಳ್ಳುವಂತೆ ತಾಂತ್ರಿಕ ವ್ಯಕ್ತಿಗಳ ಸಲಹೆ ಪಡೆದು ಕಟ್ಟಡಕ್ಕೆ ಹಾನಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
* ಪ್ರತ್ಯೇಕ ಪೀಠ ಸ್ಥಾಪಿಸುವ ಅವಶ್ಯಕತೆ ಇರುವುದರಿಂದ ಬುದ್ಧನ ಪ್ರತಿಮೆಯನ್ನು ಕಾಪಾಡಿಕೊಳ್ಳಲಾಗುವುದು.
* ಎರಡೂ ಪೀಠಗಳ ನಿರ್ಮಾಣದ ನಂತರ ಸರಸ್ವತಿ ಮತ್ತು ಬುದ್ಧ ವಿಗ್ರಹಗಳನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಗುವುದು.

ವಿಶ್ವವಿದ್ಯಾಲಯದ ಎಲ್ಲ ಶಿಕ್ಷಕರು, ಶಿಕ್ಷಕೇತರ ನೌಕರರು ಹಾಗೂ ವಿದ್ಯಾರ್ಥಿಗಳು ಅಹಿತಕರ ಘಟನೆಗೆ ಎಡೆ ಮಾಡಿಕೊಡದೇ, ಶಾಂತಿ ಮತ್ತು ಸಹನೆಯಿಂದ ಇರಬೇಕು ಎಂದು ಬಿ.ಕೆ.ರವಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು