ಕಳ್ಳ ರಸ್ತೆ ಸಿಂಗಾಪುರ ಕೆರೆಯನ್ನೇ ನುಂಗಿತ್ತಾ...

7
ಕೆರೆಗಳ ಸರಣಿ–5

ಕಳ್ಳ ರಸ್ತೆ ಸಿಂಗಾಪುರ ಕೆರೆಯನ್ನೇ ನುಂಗಿತ್ತಾ...

Published:
Updated:

ಬೆಂಗಳೂರು: ಅಗಲವಾಗಿರುವ ರಸ್ತೆಗಳು ವರ್ಷಗಳು ಕಳೆದಂತೆ ಕಿರಿದಾಗುವುದನ್ನು ನೋಡಿದ್ದೇವೆ. ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ಅವುಗಳ ಆಜುಬಾಜಿನವರು ಸ್ವಲ್ಪ ಸ್ವಲ್ಪವೇ ಒತ್ತುವರಿ ಮಾಡಿಕೊಂಡು ಅವುಗಳ ಗಾತ್ರವನ್ನು ಕುಗ್ಗಿಸಿರುವುದನ್ನೂ ಕಂಡಿದ್ದೇವೆ. ಆದರೆ ರಸ್ತೆಯೊಂದು ದಿನೇ ದಿನೇ ತಾನಾಗಿಯೇ ಅಗಲ ಆಗುತ್ತಿರುವುದು ಗೊತ್ತಿದೆಯಾ?

ಇಂತಹ ರಸ್ತೆಯನ್ನು ನೋಡಲು ನೀವು ವಾರ್ಡ್‌ ನಂ. 11ರಲ್ಲಿರುವ ಸಿಂಗಾಪುರ ಕೆರೆಯವರೆಗೆ ಬರಬೇಕು. ಕೆರೆಯ ಮಧ್ಯದಲ್ಲೇ ಅನಧಿಕೃತವಾಗಿ ನಿರ್ಮಾಣವಾಗಿರುವ ಈ ರಸ್ತೆ ದಿನಗಳು ಕಳೆದಂತೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಲೇ ಇದೆ.

ಅದು ಅಗಲವಾಗುತ್ತಿರುವುದು ಸಣ್ಣ ಪ್ರಮಾಣದಲ್ಲಲ್ಲ. ಕೆಲವು ದಿನ ಅದು ಒಮ್ಮೆಗೆ ಐದಾರು ಅಡಿ ಅಗಲವಾಗಿದ್ದಿದೆ. ಇನ್ನೂ ಕೆಲ ದಿನಗಳಲ್ಲಿ ಅದು 10ರಿಂದ 15 ಅಡಿಗಳಷ್ಟೂ ಅಗಲವಾಗಿದ್ದೂ ಇದೆ. ಈ ರಸ್ತೆಯೀಗ ಎರಡೂ ಬದಿಯಲ್ಲಿ ವಿಸ್ತಾರಗೊಂಡಿದ್ದು 90 ಅಡಿಗೂ ಹೆಚ್ಚು ವಿಸ್ತಾರವಾಗಿದೆ!

ಇಲ್ಲಿ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳೇನು ರಸ್ತೆ ವಿಸ್ತರಣಾ ಕಾಮಗಾರಿ ನಡೆಸುತ್ತಿಲ್ಲ. ಸರ್ಕಾರ ಭೂ ಸ್ವಾಧೀನವನ್ನೂ ಕೈಗೊಂಡಿಲ್ಲ. ಆದರೂ ರಸ್ತೆ ಅಗಲಗೊಳ್ಳುತ್ತಲೇ ಸಾಗಿದೆ! ಹಾಗಾದರೆ ಏನಿದರ ಮರ್ಮ?

 ‘ಇದೊಂದು ಅನಧಿಕೃತ ರಸ್ತೆ, ಇದನ್ನು ಯಾರು ನಿರ್ಮಿಸಿದ್ದು ಎಂಬುದೇ ಗೊತ್ತಿಲ್ಲ’ ಎನ್ನುತ್ತಾರೆ ಸಿಂಗಾಪುರದ ಮೂಲ ನಿವಾಸಿಗಳು.

ಕೆರೆಯ ಮಧ್ಯದಲ್ಲಿರುವ ಈ ರಸ್ತೆಯ ಆಜುಬಾಜಿನಲ್ಲಿ (ಕೆರೆಯಂಗಳದಲ್ಲಿ) ಟ್ರ್ಯಾಕ್ಟರ್‌, ಲಾರಿಗಳ ಮೂಲಕ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇನ್ನೊಂದೆಡೆ ಜೆಸಿಬಿಯಿಂದ ಅದನ್ನು ಸಮ ಮಾಡಿ ರಸ್ತೆಯನ್ನು ವಿಸ್ತರಿಸಲಾಗುತ್ತಿದೆ. ಜತೆಗೆ ಕೆರೆಯನ್ನು ಮುಚ್ಚಿ ಹಾಕಲಾಗುತ್ತಿದೆ.

ಸಿಂಗಾಪುರದ ಸರ್ವೆ ನಂ 93ರಲ್ಲಿ 21 ಎಕರೆ 7 ಗುಂಟೆ ಪ್ರದೇಶದಲ್ಲಿ ಈ ಕೆರೆ ಇದೆ. ಅದಕ್ಕೆ ಸಂಪರ್ಕಿಸುವ ರಾಜಕಾಲುವೆಗಳ ಕುರುಹೂ ಇಲ್ಲವಾಗಿದ್ದು, ನೀರು ಹರಿದು ಬರಲು ಜಾಗವೇ ಇಲ್ಲದಂತಾಗಿದೆ.

ಶಾಸನವನ್ನೂ ಮುಚ್ಚಿದರು: ಇದೇ ಕೆರೆಯಲ್ಲಿನ ಬಂಡೆಯೊಂದರಲ್ಲಿ ಬರೆಯಲಾಗಿದ್ದ ಶಾಸನವನ್ನು ಈ ಗ್ರಾಮಸ್ಥರು ಮತ್ತು ಇತಿಹಾಸಕಾರರು ಆರು, ಏಳು ತಿಂಗಳ ಹಿಂದೆಯಷ್ಟೇ ಪತ್ತೆ ಹಚ್ಚಿದ್ದರು. ಅದರಲ್ಲಿನ ಲಿಪಿ 500 ವರ್ಷಗಳ ಹಿಂದಿನದೆಂದು ಲಿಪಿಕಾರರು ಅಭಿಪ್ರಾಯಪಟ್ಟಿದ್ದರು. ಅಲ್ಲದೆ, ಕೆರೆಯ ದಂಡೆಯ ಮೇಲೆ 16ನೇ ಶತಮಾನಕ್ಕೆ ಸೇರಿದ ಮತ್ತೊಂದು ಶಾಸನ ಇತ್ತು. ಅದನ್ನು ಪಕ್ಕದ ತೋಟದ ಮಾಲೀಕರು ಸಂರಕ್ಷಿಸಿದ್ದಾರೆ.

ಲಿಪಿಕಾರರ ನೆರವಿನಿಂದ ಈ ಶಾಸನ ಓದಲಾಗಿ, ‘ನಲ್ಲಪ್ಪ ನಾಯಕ ಎಂಬ ವ್ಯಕ್ತಿಯು ಸಿಂಗಾಪುರ ಗ್ರಾಮವನ್ನು ಪಾಲಿಸಿದ ಸಿಂಗಪ್ಪ ನಾಯಕರು ಮತ್ತು ಬೆಟ್ಟೆಯ ರಾಯರಿಗೆ ಧರ್ಮವಾಗಬೇಕೆಂದು ದಾನ ನೀಡಿದ 1528ರ ದಾನ ಶಾಸನವದು’ ಎಂಬುದು ತಿಳಿಯಿತು ಎಂದು ಹೇಳುತ್ತಾರೆ ಗ್ರಾಮದ ನಿವಾಸಿ ಎಚ್‌. ಮೋಹನ್‌.

‘ಕೆರೆಯ ಬಂಡೆಯ ಮೇಲಿದ್ದ ನಮ್ಮೂರಿನ ಶಾಸನವೂ ಮುಚ್ಚಿ ಹೋಗಿದೆ. ಇದು ಇತಿಹಾಸಕ್ಕೆ ಮಾಡಿದ ಅಪಚಾರ. ಇಲ್ಲಿಗೆ ಸಮೀಪದಲ್ಲಿರುವ ಕೆಲ ಅಪಾರ್ಟ್‌ಮೆಂಟ್‌ಗಳಿಗೆ ಮತ್ತು ಹೊಸದಾಗಿ ನಿರ್ಮಾಣವಾಗುವ ಕೆಲ ಅಪಾರ್ಟ್‌ಮೆಂಟ್‌ಗಳಿಗೆ ಸಂಪರ್ಕ ರಸ್ತೆಯನ್ನಾಗಿ ಬಳಸುವ ಸಲುವಾಗಿ ಕೆರೆಯಂಗಳದಲ್ಲಿ  ರಸ್ತೆ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕಾಣೆಯಾಗುತ್ತಿರುವ ಕಾಲುವೆಗಳು: ಸಮೀಪದಲ್ಲಿಯೇ ಕುರಿ ಮೇಯಿಸುವ ಈ ಊರಿನ ನಿವಾಸಿಗಳಾದ ಲಿಂಗಪ್ಪ (70), ವೀರಪ್ಪ (64) , ‘ನಮ್ಮೂರಿನಲ್ಲಿ ಎರಡು ಕೆರೆಗಳಿದ್ದವು. ಅವುಗಳಲ್ಲಿನ ನೀರಿನಿಂದಲೇ ಈ ಭಾಗದಲ್ಲಿ ಉಳುಮೆ ನಡೆಯುತ್ತಿತ್ತು. ಹತ್ತಾರು ವರ್ಷಗಳಿಂದೀಚೆಗೆ ಕೆರೆಗಳ ನಡುವೆಯೇ ಅಲ್ಲಲ್ಲಿ ರಸ್ತೆಗಳು ಬಂದುಬಿಟ್ಟಿವೆ. ಮೋಟಾರು ವಾಹನಗಳು ಕೆರೆಯಂಗಳದಲ್ಲಿಯೇ ಓಡಾಡುತ್ತವೆ. ಕೆರೆಯನ್ನು ಅಲ್ಲಲ್ಲಿ ರಸ್ತೆಗಳು ವಿಭಜಿಸಿರುವುದರಿಂದ ಕೆರೆ ಪ್ರದೇಶವೂ ಛಿದ್ರ ಛಿದ್ರವಾಗಿದೆ. ರಾಜಕಾಲುವೆ, ಕೋಡಿ ಪ್ರದೇಶಗಳೂ ಕಾಣೆಯಾಗಿವೆ’ ಎಂದು ಹೇಳುತ್ತಾರೆ.

ರಾಜಕಾಲುವೆಯೂ ಒತ್ತುವರಿ

ಸಿಂಗಾಪುರದ ಸರ್ವೆ ನಂ 102ರಲ್ಲಿರುವ ಕೆರೆಯ (66 ಎಕರೆ, 18 ಗುಂಟೆ) ರಾಜಕಾಲುವೆಯು ಸಿಂಗಾಪುರದ ಮತ್ತೊಂದು ಕೆರೆ (ಸರ್ವೆ ನಂ 93ರಲ್ಲಿನ 21 ಎಕರೆ, 7 ಗುಂಟೆ) ಸೇರುತ್ತದೆ. ಇದನ್ನು ಅನಧಿಕೃತವಾಗಿ ಮುಚ್ಚಲಾಗಿದೆ. ಅಲ್ಲದೆ ಇಲ್ಲಿ ಬಿಬಿಎಂಪಿ ಡಾಂಬರು ರಸ್ತೆ ನಿರ್ಮಿಸಲು ಮುಂದಾಗಿದೆ. ಮುಂದೆ ಕೆರೆ ತುಂಬಿದಲ್ಲಿ ಭಾರಿ ಅನಾಹುತವಾಗುವ ಸಂಭವವಿರುತ್ತದೆ. ಹಾಗಾಗಿ ಮೊದಲು ರಾಜಕಾಲುವೆಯನ್ನು ಮರು ನಿರ್ಮಿಸಬೇಕು ಎಂಬುದು ಸಿಂಗಾಪುರದ ನಿವಾಸಿಗಳ ಒತ್ತಾಯ.

ಪಾಲಿಕೆ ಮಾಡುತ್ತಿಲ್ಲ

ಕೆರೆ ಮಧ್ಯದಲ್ಲಿ ಇರುವ ರಸ್ತೆ ಯಾವಾಗ ನಿರ್ಮಾಣವಾಯಿತು ಎಂಬುದರ ಮಾಹಿತಿ ನನ್ನ ಬಳಿ ಇಲ್ಲ. ಆದರೆ ಆ ರಸ್ತೆಯನ್ನು ಬಿಬಿಎಂಪಿಯಂತೂ ಈಗ ಅಭಿವೃದ್ದಿಪಡಿಸುತ್ತಿಲ್ಲ. ಬೇರೆ ಯಾರು ಕೆಲಸ ಮಾಡುತ್ತಿದ್ದಾರೊ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

-ವಿ.ವಿ. ಪಾರ್ತಿಬರಾಜನ್‌, ಬಿಬಿಎಂಪಿ ಸದಸ್ಯ

ಸಿಬ್ಬಂದಿ ಕೊರತೆ

ಸಿಂಗಾಪುರದ ಸರ್ವೆ ನಂ 93ರಲ್ಲಿನ ಕೆರೆಯಲ್ಲಿ ತ್ಯಾಜ್ಯ ಸುರಿದು ರಸ್ತೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಮಾಹಿತಿ ನಮಗೂ ಸಿಕ್ಕಿದೆ. ನಮ್ಮಲ್ಲಿ ಸಿಬ್ಬಂದಿ ಕೊರತೆಯ ಕಾರಣ ತುರ್ತು ಕ್ರಮ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದೇವೆ. 

 -ರವಿ, ಕಾರ್ಯನಿರ್ವಾಹಕ ಎಂಜಿನಿಯರ್‌, ಕೆರೆಗಳ ವಿಭಾಗ, ಬಿಬಿಎಂಪಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !