ಶುಕ್ರವಾರ, ಏಪ್ರಿಲ್ 16, 2021
21 °C

ಗ್ರಂಥಾಲಯಗಳ ಪುಸ್ತಕ ಖರೀದಿಯಲ್ಲಿ ಅಕ್ರಮ ಆರೋಪ | ಶಾಸಕ ಶಿವನಗೌಡ ನಾಯಕ್ ಖುಲಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗ್ರಂಥಾಲಯಗಳ ಪುಸ್ತಕ ಖರೀದಿಯಲ್ಲಿ ಅಕ್ರಮ ನಡೆದಿದ್ದು, ₹ 58 ಲಕ್ಷ ದುರುಪಯೋಗವಾಗಿದೆ’ ಎಂಬ ಆರೋಪದಿಂದ ದೇವದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ್ ಖುಲಾಸೆಗೊಂಡಿದ್ದಾರೆ.

ಈ ಕುರಿತಂತೆ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಖಾಸಗಿ ದೂರನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ವಜಾಗೊಳಿಸಿದ್ದಾರೆ.

ವಿಚಾರಣೆ ವೇಳೆ ಶಿವನಗೌಡ ನಾಯಕ ಪರ ವಕೀಲ ವಿ.ಕೆ.ಪಾಟೀಲ ಅವರು, ‘ಎಲ್ಲ ಪುಸ್ತಕಗಳನ್ನು ಸರ್ಕಾರಿ ಆದೇಶದ ಅನುಸಾರವೇ ಖರೀದಿ ಮಾಡಲಾಗಿದೆ. ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯಲ್ಲಿ ಅಪರಾ ತಪರಾ ಆಗಿದೆ ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಶಿವನಗೌಡ ಅವರು ಸಚಿವರಾಗುವುದಕ್ಕೂ ಮುನ್ನವೇ ಪುಸ್ತಕ ಆಯ್ಕೆ ಸಮಿತಿ ಇವುಗಳ ಖರೀದಿಗೆ ಶಿಫಾರಸು ಮಾಡಿತ್ತು. ಹೀಗಾಗಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ವಾದ ಮಂಡಿಸಿದ್ದರು.

ಈ ವಾದಾಂಶ ಮಾನ್ಯ ಮಾಡಿರುವ ನ್ಯಾಯಾಧೀಶರು, ‘ದೂರನ್ನು ಪುಷ್ಟೀಕರಿಸುವಂತಹ ಆಧಾರಗಳಿಲ್ಲ’ ಎಂಬ ಅಭಿಪ್ರಾಯದೊಂದಿಗೆ ದೂರು ವಜಾಗೊಳಿಸಿ ಆದೇಶಿಸಿದ್ದಾರೆ.

ಪುಸ್ತಕಗಳು

‘ಶಿವಕೃಪೆ ಶರಣ ಪಥ’, ‘ಇತಿಹಾಸ ಮಂಥನ’, ‘ಇತಿಹಾಸ ಇಂಚರ’, ‘ಸ್ವರ್ಣಪ್ರಭೆ’, ‘ಕಸಬಾ ಲಿಂಗಸೂರಿನ ಆದಿ ದೈವ ಶ್ರೀ ಕುಪ್ಪಿಭೀಮ’, ‘ವಾಲ್ಮೀಕಿ ಮಂದಾರ’, ‘ವಾಲ್ಮೀಕಿ ಸಮುದಾಯ ಮತ್ತು ಚರಿತ್ರೆ’, ‘ಏಕಲವ್ಯ’, ’ರಾಜಭಕ್ತಿ ಮತ್ತು ಇತರೆ ನಾಟಕಗಳು’,
‘ಕರ್ನಾಟಕ ನಾಯಕ ಅರಸು ಮನೆತನಗಳ ಸಾಂಸ್ಕೃತಿಕ ಆಚರಣೆಗಳು’ ಎಂಬ ಹೆಸರಿನ ಪುಸ್ತಕಗಳನ್ನು ‘ನಿಯಮ ಮೀರಿ ಖರೀದಿಸಿ ರಾಜ್ಯದ 5,733 ಗ್ರಂಥಾಲಯಗಳಿಗೆ ವಿತರಿಸಲಾಗಿದೆ’ ಎಂದು ಆರೋಪಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.