ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ಜಾಲ: ಮಂಡಳಿ ಎಂಬ ಬಡಾಯಿ

Last Updated 2 ಫೆಬ್ರುವರಿ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ತಮಗೆ ಬೇಕಾದ ವರನ್ನೂ ಆಯಕಟ್ಟಿನ ಸ್ಥಾನಕ್ಕೆ ನೇಮಿಸುತ್ತಾ, ‘ಸಹಕಾರ’ ನೀಡದ ವರನ್ನು ಕೆಲಸಕ್ಕೆ ಬಾರದ ಹುದ್ದೆಗೆ ಎಸೆಯುತ್ತಲೇ ಬಂದ ಸರ್ಕಾರಗಳು, ‘ವರ್ಗಾವಣೆ ಶಿಕ್ಷೆಯಲ್ಲ’ ಎಂದು ಡಂಗುರ ಸಾರುತ್ತಿವೆ. ಆದರೆ, ವಾಸ್ತವದಲ್ಲಿ ‘ವರ್ಗಾವಣೆ ನಿಯಮ’ ಎಂಬುದು ಬಡಾಯಿ ಅಷ್ಟೇ. ಅಲ್ಲಿ ನೀತಿ, ನಿಯಮ ರಿವಾಜುಗಳಿಲ್ಲ. ಸಚಿವರ, ಶಾಸಕರ ಮೂಗಿನ ನೇರಕ್ಕೆ ತಕ್ಕಂತೆ ವರ್ಗಾವಣೆ ನಡೆಯುತ್ತದೆ. ‘ಗಂಟು’ ಕೊಡದೆ ವರ್ಗಾವಣೆ ಕಡತ ಒಂದಿಂಚೂ ಮುಂದೆ ಹೋಗುವುದಿಲ್ಲ.

ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಕ್ಷೇತ್ರಕ್ಕೆ ಹಾಕಿಸಿಕೊಳ್ಳುವ ಪರಿಪಾಠ ಹಿಂದಿನಿಂದಲೂ ಇದೆ. ಆದರೆ, ಇದೊಂದು ದಂಧೆಯಾಗಿ ಮಾರ್ಪಟ್ಟಿದ್ದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ರಾಜಕಾರಣಿಗಳು ತಮಗೆ ಬೇಕಾದವರನ್ನು ತಮ್ಮ ಕ್ಷೇತ್ರಕ್ಕೆ ಹಾಕಿಸಿಕೊಳ್ಳುವ ಕೆಲಸ ದೊಡ್ಡ ಮಟ್ಟದಲ್ಲಿ ಆಗ ಪ್ರಾರಂಭವಾಯಿತು. ಶಾಸಕರು ಕೊಟ್ಟ ಸೂಚನಾ ಪತ್ರದ (ಮಿನಿಟ್‌) ಆಧಾರದಲ್ಲಿ ಪೊಲೀಸರ ವರ್ಗಾವಣೆ ಶುರುವಾಗಿದ್ದು ಆಗಲೇ.

ವರ್ಗಾವಣೆಯಲ್ಲಿನ ಭ್ರಷ್ಟಾಚಾರ ಪಿಡುಗಿಗೆ ತೊಡೆದುಹಾಕಲು ಎಲ್ಲ ರಾಜ್ಯ ಸರ್ಕಾರಗಳು ಪೊಲೀಸ್‌ ಸಿಬ್ಬಂದಿ ಮಂಡಳಿಯನ್ನು (ಪಿಇಬಿ) ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿತು. ನ್ಯಾಯಾಂಗ ನಿಂದನೆಯ ತೂಗುಗತ್ತಿಯಿಂದ ಪಾರಾಗಲು ರಾಜ್ಯಗಳು ಪೊಲೀಸ್‌ ಸಿಬ್ಬಂದಿ ಮಂಡಳಿಗಳನ್ನು ಸ್ಥಾಪಿಸಿದವು. ಕರ್ನಾಟಕ ಸರ್ಕಾರ 2012ರಲ್ಲಿ ಮಂಡಳಿ ರಚಿಸಿತು.

ಡಿವೈಎಸ್‌ಪಿ ಮತ್ತು ಅವರಿಗಿಂತ ಕೆಳಹಂತದ ಸಿಬ್ಬಂದಿಯ ವರ್ಗಾವಣೆ ಮತ್ತು ಬಡ್ತಿ ಇವುಗಳನ್ನು ನಿರ್ವಹಿಸುವ ಜವಾಬ್ದಾರಿ ಈ ಮಂಡಳಿಯದಾಗಿತ್ತು. ಇಂತಹ ವರ್ಗಾವಣೆಗಳಲ್ಲಿ ಸರ್ಕಾರ ಬದಲಾವಣೆ ತರಬೇಕಾಗಿದ್ದಲ್ಲಿ ಅದು ಕಾರಣಗಳನ್ನು ನೀಡಬೇಕಿತ್ತು. ಎರಡನೆಯದಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಮೇಲಿನ ಹುದ್ದೆಗಳಿಗೂ ವರ್ಗಾವಣೆ ಮತ್ತು ಬಡ್ತಿಗೆ ಸಂಬಂಧಿಸಿದಂತೆ ಶಿಫಾರಸು ಮಾಡುವ ಹೊಣೆ ಸಹ ಈ ಮಂಡಳಿಗಿತ್ತು ಮತ್ತು ಅಂತಹ ಶಿಫಾರಸನ್ನು ಸರ್ಕಾರ ಸಾಮಾನ್ಯವಾಗಿ ಒಪ್ಪಬೇಕು ಎಂಬ ಸೂಚನೆ ಇತ್ತು.

ಸಮಸ್ಯೆಯನ್ನು ಬಗೆಹರಿಸಬೇಕಾದ ಪೊಲೀಸ್‌ ಸಿಬ್ಬಂದಿ ಮಂಡಳಿ, ಅದರ ಬದಲು ಮತ್ತಷ್ಟು ಸುಲಿಗೆಗೆ ಕಾರಣವಾಗುವ ರೀತಿಯಲ್ಲಿ ತಿದ್ದುಪಡಿ ತರಲಾಯಿತು. ‘ಒಬ್ಬ ವ್ಯಕ್ತಿಗೆ ಕನಿಷ್ಠ ಎರಡು ವರ್ಷ ಒಂದೇ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದನ್ನು ರಾಜ್ಯದಲ್ಲಿ ಒಂದು ವರ್ಷಕ್ಕೆ ಸೀಮಿತಗೊಳಿಸಲಾಯಿತು. ಅಂದರೆ, ವರ್ಗಾವಣೆ ದಂಧೆಗೆ ‘ರಾಜಮಾರ್ಗ’ ಸೃಷ್ಟಿಸಲಾಯಿತು.

ದುಡ್ಡಿಲ್ಲದ ಇಲಾಖೆಗಳಲ್ಲಷ್ಟೇ ಕೌನ್ಸೆಲಿಂಗ್ ವ್ಯವಸ್ಥೆ

ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಮಾಡಿದರೆ ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ. ಭ್ರಷ್ಟಾಚಾರ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅದು ಅನುಷ್ಠಾನಕ್ಕೆ ಬಂದಿಲ್ಲ.

ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ ಇಲಾಖೆಗಳಲ್ಲಷ್ಟೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ವ್ಯವಸ್ಥೆ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ವರ್ಗಾವಣೆಗೆ ಮಾತ್ರ ಈ ವ್ಯವಸ್ಥೆ ಇದೆ. ಈ ಸಿಬ್ಬಂದಿಯ ವರ್ಗಾವಣೆಯಿಂದ ಹೆಚ್ಚು ಗಿಟ್ಟುವುದಿಲ್ಲ. ಹೀಗಾಗಿ, ಇಲ್ಲಿ ಮಾತ್ರ ಕೌನ್ಸೆಲಿಂಗ್ ವ್ಯವಸ್ಥೆ ತರಲಾಗಿದೆ ಎಂಬ ಮಾತು ಇದೆ.

‘ಕಿರಿಯ ಎಂಜಿನಿಯರ್‌ ವರ್ಗಾವಣೆಯಾಗಲು ಕನಿಷ್ಠ ₹1.5 ಲಕ್ಷದವರೆಗೆ ಲಂಚ ಕೊಡಬೇಕು. ಮತ್ತೆ ಸಂಪಾದನೆಗೆ ಮಾರ್ಗ ಹುಡುಕಿಕೊಳ್ಳುತ್ತಾರೆ ಅವರು. ಆದರೆ, ಶಿಕ್ಷಕರಿಗೆ ಆ ರೀತಿ ಆಗುವುದಿಲ್ಲ. ಅವರು ವರ್ಗಾವಣೆಗೆ ಸಚಿವರ ಹಾಗೂ ಶಾಸಕರ ಬೆನ್ನು ಹತ್ತುತ್ತಾರೆ ಅಷ್ಟೇ. ಹೆಚ್ಚು ಪೀಡಿಸಿದರೆ ವರ್ಗಾವಣೆಗಾಗಿ ₹25 ಸಾವಿರ ಅಥವಾ ₹50 ಸಾವಿರ ಕೊಡುತ್ತಾರೆ. ಅದು ಸಹ ಜೀವನದಲ್ಲಿ ಒಮ್ಮೆ ಮಾತ್ರ. ಆದರೆ, ಎಂಜಿನಿಯರ್‌ಗಳು ಹಾಗಲ್ಲ. ಪ್ರತಿ ವರ್ಗಕ್ಕೂ ಅವರು ಕೈ ಬಿಸಿ ಮಾಡಲು ಸಿದ್ಧರಿರಬೇಕು’ ಎಂದು ನಿವೃತ್ತ ಎಂಜಿನಿಯರ್‌ ಒಬ್ಬರು ಒಳಗುಟ್ಟು ಬಿಚ್ಚಿಡುತ್ತಾರೆ.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT