ಭಾನುವಾರ, ಆಗಸ್ಟ್ 25, 2019
20 °C
ತುಂಗಭದ್ರಾ ಅಣೆಕಟ್ಟು ಒಡೆದಿದೆ ಎಂಬ ವದಂತಿ: ಗುಡ್ಡ ಏರಿ ಕುಳಿತ ಜನರು

‘ಸ್ಲೂಸ್‌ ಗೇಟ್‌’ ಮುರಿದು ಪಂಪಾವನ ಜಲಾವೃತ

Published:
Updated:
Prajavani

ಕೊಪ್ಪಳ: ಸಮೀಪದ ಮುನಿರಾಬಾದ್‌ನ ತುಂಗಭದ್ರಾ ಅಣೆಕಟ್ಟೆಯ ತಳಮಟ್ಟದ ಕಾಲುವೆ ಗೇಟ್ (sluice gate) ಮುರಿದು 300 ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಜಲಾಶಯದ ಎದುರಿನ ಪಂಪಾವನಕ್ಕೆ ನುಗ್ಗಿತು. ಇದರಿಂದ ಮುನಿರಾಬಾದ್ ಗ್ರಾಮಸ್ಥರು ಭಯಭೀತರಾಗಿ, ಸಮೀಪದ ಗುಡ್ಡದ ಮೇಲ್ಭಾಗಕ್ಕೆ ಓಡಿ ಹೋದರು. 

ಈ ಕಾಲುವೆ 13 ಕಿ.ಮೀ ಉದ್ದ ಇದ್ದು, 50 ಕ್ಯುಸೆಕ್ ನೀರು ಹರಿಯುವ ಸಾಮರ್ಥ್ಯವಿದೆ. ನಾಲ್ಕು ಗ್ರಾಮಗಳಿಗೆ ನೀರಾವರಿ ಉದ್ದೇಶಕ್ಕೆ ನೀರು ಪೂರೈಸಲಾಗುತ್ತದೆ.

‘ಅಣೆಕಟ್ಟು ಬಿರುಕುಬಿಟ್ಟಿದ್ದು, ಒಡೆಯುವ ಹಂತದಲ್ಲಿ ಇದೆ’ ಎಂದು ಸುಳ್ಳು ಸುದ್ದಿ ಹಬ್ಬಿದ್ದರಿಂದ ಜನರು ಮತ್ತಷ್ಟು ಭಯಗೊಂಡರು. ತಕ್ಷಣ ಪೊಲೀಸರು ಗ್ರಾಮದಲ್ಲಿ ಧ್ವನಿವರ್ಧಕಗಳ ಮೂಲಕ 'ಯಾವುದೇ ಅಪಾಯವಿಲ್ಲ. ಶೀಘ್ರ ದುರಸ್ತಿ ಮಾಡಲಾಗುವುದು. ಮನೆಗಳತ್ತ ತೆರಳಿ' ಎಂದು ಮನವಿ ಮಾಡಿದರು. ‘ಜಲಾಶಯದ ಒಳಭಾಗದಲ್ಲಿಯೇ ಕಬ್ಬಿಣದ ಗೇಟ್  ಇದ್ದು, 50 ವರ್ಷಗಳಿಂದ ಬದಲಾಯಿಸಿಲ್ಲ. ನಿರ್ವಹಣೆಯ ಲೋಪದಿಂದ ಹೀಗಾಗಿದೆ’ ಎಂದು ಸ್ಥಳೀಯರು ಮತ್ತು ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

( ತುಂಗಭದ್ರಾ ಅಣೆಕಟ್ಟೆ ಒಡೆಯಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಮುನಿರಾಬಾದ್‌ನಲ್ಲಿ ಅಣೆಕಟ್ಟೆಗೆ ಹೊಂದಿಕೊಂಡಿರುವ ಬೆಟ್ಟದಲ್ಲಿರುವ ಪ್ರವಾಸಿ ಮಂದಿರ ‘ಕೈಲಾಸ’ದ ಪಕ್ಕದಲ್ಲಿನ ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದಿದ್ದ ನಿವಾಸಿಗಳಲ್ಲಿ ಹಸುಗೂಸು ಮತ್ತು ಬಾಣಂತಿಯೂ ಇದ್ದಾರೆ )

‘ಬೆಳಗಾವಿಯ ಮುಳುಗು ತಜ್ಞರ ತಂಡದ ನೆರವಿನಿಂದ ಗೇಟ್ ಜೋಡಿಸಲಾಗುತ್ತಿದೆ. ದುರಸ್ತಿ ಕಾರ್ಯ ಶೀಘ್ರ ಮುಗಿಯಲಿದ್ದು, ಯಾವುದೇ ಆತಂಕ ಇಲ್ಲ’ ಎಂದು ಸ್ಥಳದಲ್ಲಿ ಬೀಡುಬಿಟ್ಟಿರುವ ಅಣೆಕಟ್ಟೆ ವಿಭಾಗದ ಮುಖ್ಯ ಎಂಜಿನಿಯರ್ ಮಂಜಪ್ಪ ತಿಳಿಸಿದರು.

ಕಾಲುವೆ ಒಡೆದರು: ಈ ಕಾಲುವೆ  ಮುನಿರಾಬಾದ್ ಗ್ರಾಮದಲ್ಲಿಯೇ ಹಾದು ಹೋಗಿದೆ. ಕಾಲುವೆಯಲ್ಲಿನ ನೀರು ಉಕ್ಕಿ ಹರಿಯುವ ಹಂತಕ್ಕೆ ತಲುಪಿತ್ತು. ಮನೆಗಳು ಜಲಾವೃತವಾಗುವುದನ್ನು ತಪ್ಪಿಸಲು ಗ್ರಾಮದ ಅಂಬೇಡ್ಕರ್ ಕಾಲೊನಿಯಲ್ಲಿ ಕಾಲುವೆ ಒಡೆದು ಹಳ್ಳದ ಮೂಲಕ ಮತ್ತೆ ನದಿಗೆ ನೀರು ಹೋಗುವಂತೆ ವ್ಯವಸ್ಥೆ ಮಾಡಲಾಯಿತು. 

ವಿರೂಪಾಪುರಗಡ್ಡೆಯಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಹೋಗಿದ್ದ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಅವಳಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಸುದ್ದಿ ತಿಳಿಯುತ್ತಿದ್ದಂತೆಯೇ ದೌಡಾಯಿಸಿದರು.

‘ಸಣ್ಣ ಪ್ರಮಾಣದ ಸೋರಿಕೆಯಾಗಿದ್ದು, ಶೀಘ್ರ ದುರಸ್ತಿ ಮಾಡಲಾಗುವುದು. ಯಾವುದೇ ಗ್ರಾಮಕ್ಕೂ ನೀರು ನುಗ್ಗುವುದಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಶಿವಪುರ, ಹಿಟ್ನಾಳ, ಮುನಿರಾಬಾದ್ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು.

ಸ್ಲೂಸ್‌ ಗೇಟ್‌ ಎಂದರೆನು?

‘ಜಲಾಶಯಗಳ ತಳದಲ್ಲಿ ಸಂಗ್ರಹಗೊಳ್ಳುವ ಹೂಳನ್ನು ಹೊರಹಾಕಲು ‘ಸ್ಲೂಸ್‌ ಗೇಟ್‌’ ನಿರ್ಮಿಸಲಾಗಿರುತ್ತದೆ. ಜಲಾಶಯಗಳ ತಳ ಭಾಗದಲ್ಲಿರುವ ಹೂಳನ್ನು ತಿರುವಿಸಿ ರಾಡಿ ನೀರನ್ನು ಹೊರಹಾಕುವ ಕೆಲಸವನ್ನು ‘ಸ್ಲೂಸ್‌ ಗೇಟ್‌’ ಮಾಡುತ್ತದೆ. ಕ್ರಸ್ಟ್‌ ಗೇಟ್‌ಗಳಿಗಿಂತ ಕೆಳಮಟ್ಟದಲ್ಲಿ ಇವುಗಳನ್ನು ಅಳವಡಿಸಲಾಗಿರುತ್ತದೆ’ ಎನ್ನುತ್ತಾರೆ ನೀರಾವರಿ ಪರಿಣತರು.

Post Comments (+)