ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ಸಮಿತಿ: ಅಧ್ಯಕ್ಷರಿಗೇಕೆ ಪರಮಾಧಿಕಾರ?

Last Updated 11 ಫೆಬ್ರುವರಿ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಾರ್ಡ್‌ ಸಮಿತಿ ಸಭೆಗಳಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ಪರಮಾಧಿಕಾರವನ್ನು ಸಮಿತಿಯ ಅಧ್ಯಕ್ಷರಾಗಿರುವ ಪಾಲಿಕೆ ಸದಸ್ಯರಿಗೆ ನೀಡಿರುವುದು ಸರಿಯೇ? ಇಂತಹ ಪರಮಾಧಿಕಾರದ ಅಗತ್ಯ ಇದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆ.

‘ಸಮಿತಿಯ ಅಧ್ಯಕ್ಷರಿಗೆ ಪರಮಾಧಿಕಾರ ನೀಡುವುದೇ ಹಾಸ್ಯಾಸ್ಪದ ವಿಷಯ. ಇದು ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ವಿರುದ್ಧವಾದುದು’ ಎನ್ನುತ್ತಾರೆ ವಾರ್ಡ್‌‌ ಸಮಿತಿಗಳನ್ನು ಬಲಪಡಿಸುವ ಹೋರಾಟದಲ್ಲಿ ಸಕ್ರಿಯರಾಗಿದ್ದ ಮಹಾಲಕ್ಷ್ಮೀ ಪಾರ್ಥಸಾರಥಿ.

‘ಕರ್ನಾಟಕ ಮಹಾನಗರ ಪಾಲಿಕೆಗಳ (ವಾರ್ಡ್‌ ಸಮಿತಿ) ನಿಯಮಗಳ ಕರಡಿನಲ್ಲಿ ಅಧ್ಯಕ್ಷರಿಗೆ ಪರಮಾಧಿಕಾರ ನೀಡುವ ಪ್ರಸ್ತಾವ ಸೇರಿಸಿದಾಗಲೇ ನಾವು ವಿರೋಧಿಸಿದ್ದೆವು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಿದ್ದೆವು. ನಿಯಮವನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವಾಗ ಪರಮಾಧಿಕಾರ ನೀಡುವ ಅಂಶವನ್ನು ಕೈಬಿಡುವುದಾಗಿ ಅವರು ಭರವಸೆಯನ್ನೂ ನೀಡಿದ್ದರು. ಆದರೆ, ಈ ಅಂಶ ನಿಯಮಗಳಲ್ಲಿ ಹಾಗೆಯೇ ಉಳಿದುಕೊಂಡಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ವಾರ್ಡ್‌ನ ಎಲ್ಲ ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಜನರು ಸಕ್ರಿಯವಾಗಿ ಭಾಗವಹಿಸಲು ಅವಕಾಶ ಸಿಗಬೇಕು ಎಂಬುದು ವಾರ್ಡ್‌ ಸಮಿತಿ ರಚನೆ ಹಿಂದಿರುವ ಪ್ರಮುಖ ಆಶಯ. ಅಧ್ಯಕ್ಷರಿಗೆ ಪರಮಾಧಿಕಾರ ನೀಡಿದರೆ ಮೂಲ ಆಶಯಕ್ಕೆ ಧಕ್ಕೆ ಉಂಟಾಗುತ್ತದೆ. ವಾರ್ಡ್‌ ಸಭೆಯಲ್ಲಿ ತೆಗೆದುಕೊಳ್ಳುವ ಬಹುಮತದ ನಿರ್ಧಾರಗಳ ಮಹತ್ವವನ್ನು ಇದು ನಗಣ್ಯಮಾಡುವ ಅಪಾಯವಿದೆ’ ಎಂದು ಅವರು ವಿವರಿಸಿದರು.

ಆದರೆ, ಪಾಲಿಕೆ ಸದಸ್ಯ ಮಂಜುನಾಥ ರಾಜು ಅವರು ಅಧ್ಯಕ್ಷರಿಗೆ ಪರಮಾಧಿಕಾರ ನೀಡಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ.

‘ಸಮಿತಿ ಸಭೆಗಳಲ್ಲಿ ಅಭಿಪ್ರಾಯಭೇದಗಳು ಎದುರಾಗುವ ಸಂದರ್ಭ ಬಂದೇ ಬರುತ್ತದೆ. ಅಧ್ಯಕ್ಷರಿಗೆ ಪರಮಾಧಿಕಾರ ನೀಡಿರುವುದರಿಂದ ಕೆಲವು ಬಿಕ್ಕಟ್ಟಿನ ಸಂದರ್ಭದಲ್ಲಿ ಖಚಿತ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಪರಮಾಧಿಕಾರ ಇದೆ ಎಂಬ ಕಾರಣಕ್ಕೆ ಪಾಲಿಕೆ ಸದಸ್ಯರೂ ದರ್ಪದಿಂದ ವರ್ತಿಸಬಾರದು. ಸದಸ್ಯರೆಲ್ಲರ ಒಮ್ಮತದ ಆಧಾರದಲ್ಲೇ ವಾರ್ಡ್‌ನ ಅಭಿವೃದ್ಧಿಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಬೇಕು. ಈ ಅಧಿಕಾರವನ್ನು ವಿವೇಕಯುತವಾಗಿ ಬಳಸಬೇಕು’ ಎಂದು ಅವರು ಹೇಳಿದರು.

‘ಸಾಕಷ್ಟು ಕಾನೂನು ಹೋರಾಟದ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಕಡ್ಡಾಯವಾಗಿ ವಾರ್ಡ್ ಸಮಿತಿ ಸಭೆ ನಡೆಸಬೇಕು ಎಂದು ಮೇಯರ್‌ ಆದೇಶ ಮಾಡಿದ ಬಳಿಕ ಹಾಗೂ ಈ ಬಗ್ಗೆ ಪಾಲಿಕೆ ಆಯುಕ್ತರು ಸುತ್ತೋಲೆ ಹೊರಡಿಸಿದ ಬಳಿಕ ಶೇ 60ರಷ್ಟು ವಾರ್ಡ್‌ಗಳಲ್ಲಿ ಪ್ರತಿ ತಿಂಗಳು ವಾರ್ಡ್‌ ಸಮಿತಿ ಸಭೆಗಳು ನಡೆಯುತ್ತಿವೆ. ಈ ಹಂತದಲ್ಲಿ ಪಾಲಿಕೆ ಅಧ್ಯಕ್ಷರಿಗೆ ಇರುವ ಪರಮಾಧಿಕಾರವನ್ನು ಕಿತ್ತುಕೊಂಡರೆ ಸಭೆಗಳೇ ನಡೆಯುವುದು ಅನುಮಾನ’ ಎಂದು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ ಅಧ್ಯಕ್ಷ ಡಿ.ಎಸ್‌.ರಾಜಶೇಖರ ಅಭಿಪ್ರಾಯಪಟ್ಟರು.

‘ಸಮಿತಿ ಅಧ್ಯಕ್ಷರಿಗೆ ಪರಮಾಧಿಕಾರ ನೀಡುವ ಅಗತ್ಯ ಇಲ್ಲ ನಿಜ. ಇದನ್ನು ತೆಗೆದು ಹಾಕಬೇಕಾದ ಅಗತ್ಯವೂ ಇದೆ. ಆದರೆ, ಈ ಬಗ್ಗೆ ಒತ್ತಾಯಿಸುವುದಕ್ಕೂ ಮುನ್ನ ನಾವು ಎಲ್ಲ ವಾರ್ಡ್‌ಗಳಲ್ಲೂ ಪ್ರತಿ ತಿಂಗಳೂ ತಪ್ಪದೇ ಸಮಿತಿ ಸಭೆಗಳು ನಡೆಯುವಂತೆ ನೋಡಿಕೊಳ್ಳಬೇಕು. ವಾರ್ಡ್‌ ಸಮಿತಿಗೆ ಪಾಲಿಕೆ ಸದಸ್ಯರು ತಮ್ಮ ಹಿಂಬಾಲಕರನ್ನು ನೇಮಿಸುವ ಪರಿಪಾಠಕ್ಕೆ ಕಡಿವಾಣ ಹಾಕಬೇಕು. ಸದಸ್ಯರ ಆಯ್ಕೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT