ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ನಿಂದ ಬುಡ ಮುಚ್ಚದಿರಿ–ಬೇರು ಕಡಿಯದಿರಿ

ಮರಗಳು ಬುಡಮೇಲಾಗುವುದು ತಡೆಯಬೇಕೇ? ತಜ್ಞರ ಸಲಹೆ ಕೇಳಿ
Last Updated 28 ಮೇ 2019, 19:38 IST
ಅಕ್ಷರ ಗಾತ್ರ

ಬೆಂಗಳೂರು: ಬುಡ ಪೂರ್ತಿ ಕಿತ್ತು ಬಂದು ಉರುಳಿ ಬಿದ್ದ ಮರಗಳು, ಕಳಚಿ ಬಿದ್ದ ಭಾರಿ ಗಾತ್ರದ ಕೊಂಬೆಗಳು, ವಾಲಿಕೊಂಡು ಇಂದೋ ನಾಳೆಯೋ ಬೀಳುವ ಸ್ಥಿತಿಗೆ ತಲುಪಿರುವ ವೃಕ್ಷಗಳು...

ನಗರದಲ್ಲಿ ಕಳೆದ ಮೂರು ದಿನಗಳಿಂದ ಇಂತಹ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ. ಸತತ ಎರಡು ದಿನ ಸುರಿದ ಭಾರಿ ಗಾಳಿ ಮಳೆಗೆ 60ಕ್ಕೂ ಹೆಚ್ಚು ಮರಗಳು ನೆಲಕ್ಕಪ್ಪಳಿಸಿವೆ. 600ಕ್ಕೂ ಹೆಚ್ಚು ಕೊಂಬೆಗಳು ತುಂಡಾಗಿ ಬಿದ್ದಿವೆ.

ಬಿಸಿಲಿನ ಬೇಗೆಯಿಂದ ಬಳಲಿಸಿದ್ದ ನಗರದ ಜನರು ಒಂದೆಡೆ ಮಳೆ ಸುರಿದಿದ್ದಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದರೆ, ಮರ, ಕೊಂಬೆಗಳು ಬಿದ್ದಿರುವುದಕ್ಕೆ ಪಾಲಿಕೆ ಅರಣ್ಯ ಘಟಕದ ಅಧಿಕಾರಿಗಳನ್ನು ದೂರುತ್ತಿದ್ದಾರೆ.

‘ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಹಾಗೂ ಕೊಂಬೆಗಳನ್ನು ತೆರವುಗೊಳಿಸಿದ್ದರೆ ಇಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ’ ಎಂಬುದು ಜನರ ಸಾಮಾನ್ಯ ದೂರು. ಆದರೆ, ಮರಗಳು ಉರುಳುವುದಕ್ಕೆ ತಜ್ಞರು ನೀಡುವ ಕಾರಣಗಳೇ ಬೇರೆ.

‘ಬಿದ್ದಿರುವ 25ಕ್ಕೂ ಹೆಚ್ಚು ಮರಗಳನ್ನು ಗಮನಿಸಿದ್ದೇನೆ. ಅವುಗಳೆಲ್ಲ ಟೊಳ್ಳಾಗಿಯೋ ಅಥವಾ ವಯಸ್ಸಾಗಿ ಬಿದ್ದ ಮರಗಳಲ್ಲ. ಎರಡು ಮೀಟರ್‌ಗೂ ಅಧಿಕ ಸುತ್ತಳತೆ ಹೊಂದಿರುವ ಮರ ಕೂಡಾ ಬುಡಮೇಲಾಗಿ ಬಿದ್ದಿದೆ. ಅದರರ್ಥ, ಅದರ ಬುಡ ಗಟ್ಟಿಯಾಗಿಲ್ಲ’ ಎಂದು ಸಸ್ಯ ವೈದ್ಯ ವಿಜಯ್‌ ನಿಶಾಂತ್‌ ವಿವರಿಸಿದರು.

ಬೇರು ಕಡಿಯದಿರಿ: ‘ನಗರದ ಮರಗಳು ಬೀಳುವುದಕ್ಕೆ ಅನೇಕ ಕಾರಣಗಳಿವೆ. ಒಳಚರಂಡಿ ನಿರ್ಮಿಸುವಾಗ, ಕೊಳವೆ ಮಾರ್ಗಗಳನ್ನು ಅಳವಡಿಸುವಾಗ ಮರಗಳ ಬೇರುಗಳನ್ನು ಕತ್ತರಿಸಲಾಗುತ್ತದೆ. ಅಂತಹ ಮರಗಳ ಬುಡ ದುರ್ಬಲಗೊಳ್ಳುತ್ತವೆ’ ಎಂದರು.

ಸಿಮೆಂಟ್‌ನಿಂದ ಮುಚ್ಚದಿರಿ: ‘ಅನೇಕ ಕಡೆ ಮರದ ಸುತ್ತಲೂ ಕಾಂಕ್ರೀಟ್‌ನಿಂದ ಮುಚ್ಚುತ್ತಾರೆ. ಕಾಂಡಗಳು ಬೆಳೆಯುವುದಕ್ಕೂ ಸ್ಥಳ ಬಿಟ್ಟಿರುವುದಿಲ್ಲ. ಇದರಿಂದ ಅಲ್ಲಿ ಭೂಮಿಗೆ ನೀರು ಹಾಗೂ ಮರಕ್ಕೆ ಅಗತ್ಯವಾದ ಪೋಷಕಾಂಶಗಳು ಇಂಗುವುದಿಲ್ಲ. ನೆಲದ ಮೇಲೆ ವಿಶಾಲವಾಗಿ ಹರಡಿರುವ ಮರದ ಬೇರುಗಳು ಅದಕ್ಕೆ ಅನುಗುಣವಾಗಿ ಬೆಳೆಯುವುದಿಲ್ಲ. ಜೋರಾಗಿ ಗಾಳಿ ಬೀಸಿದಾಗ ಅಂತಹ ಮರಗಳು ಸುಲಭವಾಗಿ ನೆಲಕ್ಕೆ ಉರುಳುತ್ತವೆ’ ಎಂದು ವಿವರಿಸಿದರು.

‘ಕೊಂಬೆಗಳನ್ನು ಬೇಕಾಬಿಟ್ಟಿ ಕತ್ತರಿಸುವುದರಿಂದ ಮರಗಳ ಸಮತೋಲನ ತಪ್ಪುತ್ತದೆ. ರಸ್ತೆಗೆ ಚಾಚಿಕೊಂಡಿರುವ ಕೊಂಬೆಗಳನ್ನು ಕತ್ತರಿಸಿ, ಉಳಿದ ಕಡೆಯ ಕೊಂಬೆಗಳನ್ನು ಹಾಗೆಯೇ ಬಿಟ್ಟಾಗ ಆ ಭಾಗವು ಹೆಚ್ಚು ತೂಕದಿಂದ ಕೂಡಿರುತ್ತದೆ. ಇಂತಹ ಮರಗಳೂ ಗಾಳಿ ಮಳೆಗೆ ಬೀಳುವ ಅಪಾಯ ಜಾಸ್ತಿ’ ಎಂದರು.

‘ಕೊಂಬೆಗಳನ್ನು ಕಡಿದರೆ ಮರದ ಆ ಭಾಗಕ್ಕೆ ಸೊಂಕು ತಗಲುತ್ತದೆ. ಆ ಮರ ಟೊಳ್ಳಾಗುತ್ತದೆ. ಗಾಳಿ ಮಳೆಗೆ ಇಂತಹ ಮರಗಳು ಉರುಳುವ ಸಾಧ್ಯತೆ ಹೆಚ್ಚು’ ಎಂದರು.

ಕೆಲವೊಂದು ಪ್ರಭೇದದ ಸಸ್ಯಗಳನ್ನು ನಗರದಲ್ಲಿ ಬೆಳೆಸುವುದು ಸಮಂಜಸವಲ್ಲ. ವಿಶಾಲವಾಗಿ ಬೆಳೆಯುವ ಮಳೆ ಮರಗಳನ್ನು ಸಣ್ಣ ರಸ್ತೆಗಳ ಬಳಿ ಬೆಳೆಸುವುದು ಸೂಕ್ತವಲ್ಲ ಎನ್ನುತ್ತಾರೆ ತಜ್ಞರು.

‘ನಿರಂತರವಾಗಿರಲಿ ಹಸಿರು ಹೊದಿಕೆ’

‘ಸಾಮಾನ್ಯವಾಗಿ ಮಳೆಗೆ ಉರುಳುವುದು ಒಂಟಿ ಮರಗಳು. ನಿರಂತರವಾಗಿ ಹಸಿರು ಹೊದಿಕೆ ಇದ್ದರೆ, ಅವು ಗಾಳಿಯ ಒತ್ತಡವನ್ನು ತಾಳಿಕೊಳ್ಳುತ್ತವೆ. ಅಂತಹ ಕಡೆ ಕಡಿಮೆ ಹಾನಿ ಸಂಭವಿಸುತ್ತದೆ’ ಎಂದು ವಿಜಯ್‌ ನಿಶಾಂತ್‌ ತಿಳಿಸಿದರು.

‘ನಗರದಲ್ಲಿ ಮೇಲ್ಪದರದಲ್ಲಿ ಚರಂಡಿ, ಕೊಳವೆ ಮಾರ್ಗ ಮತ್ತಿತರ ಮೂಲಸೌಕರ್ಯಗಳು ಇರುತ್ತವೆ. ಇವುಗಳಿಗೆ ಹಾನಿ ತಪ್ಪಿಸಲು, ಆಳದ ಗುಂಡಿ ತೋಡಿ ಗಿಡ ನಾಟಿ ಮಾಡಬೇಕು. ಅಂತಹ ಸಸ್ಯಗಳ ಬೇರು ಆಳದವರೆಗೆ ಇಳಿಯುವುದರಿಂದ ಅವು ಹೆಚ್ಚು ದೃಢವಾಗಿರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT