ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾಗುತ್ತಿರುವ ಗರಡಿ ಮನೆ

Last Updated 9 ಏಪ್ರಿಲ್ 2019, 10:39 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ನಾಡಕುಸ್ತಿಯ ‘ರಾಜಧಾನಿ’ ಎನಿಸಿದ್ದ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಈ ಕ್ರೀಡೆಯ ಮೇಲಿನ ಮೋಹ ಕಡಿಮೆಯಾಗುತ್ತಿದೆ. ಕುಸ್ತಿ ಎಂದರೆ ಕೇವಲ ದಸರಾ ಕುಸ್ತಿಗೆ ಮಾತ್ರ ಸೀಮಿತವಾಗಿದೆ. ಪೈಲ್ವಾನರನ್ನು ಹುಟ್ಟುಹಾಕಬೇಕಿದ್ದ ಗರಡಿ ಮನೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ಕಟ್ಟುಮಸ್ತಾದ ಪೈಲ್ವಾನರು ಮಣ್ಣಿನ ಅಖಾಡದಲ್ಲಿ ದೂಳೆಬ್ಬಿಸುತ್ತಾ ಕಾದಾಟ ನಡೆಸುತ್ತಿದ್ದರೆ, ನೋಡುಗರು ಚಪ್ಪಾಳೆ ಹಾಗೂ ಶಿಳ್ಳೆಯ ಮೂಲಕ ಅವರನ್ನು ಹುರಿದುಂಬಿಸುತ್ತಿದ್ದರು. ಪೈಲ್ವಾನರು ಪಟ್ಟುಗಳ ಮೇಲೆ ಪಟ್ಟು ಹಾಕಿದಾಗ ಚಪ್ಪಾಳೆಯ ಸದ್ದು ಹೆಚ್ಚುತ್ತಾ ಹೋಗುತ್ತಿತ್ತು. ಪ್ರಬಲ ಪೈಪೋಟಿಯ ಬಳಿಕ ಒಬ್ಬಾತ ಇನ್ನೊಬ್ಬನನ್ನು ಚಿತ್‌ ಮಾಡಿದಾಗಲಂತೂ ಪ್ರೇಕ್ಷಕರಿಗೆ ಮೈಜುಮ್ಮೆನಿಸುವ ಅನುಭವ ಉಂಟಾಗುತ್ತಿತ್ತು...

ಕೆಲ ದಶಕಗಳ ಹಿಂದೆ ಮೈಸೂರಿನಲ್ಲಿ ಅಲ್ಲಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿರುತ್ತಿದ್ದವು. ನಾಡಕುಸ್ತಿಯ ತವರೂರು ಎನಿಸಿದ್ದ ಮೈಸೂರು ಇದೀಗ ಬದಲಾಗಿದೆ. ಪ್ರತಿಯೊಂದು ಹಳ್ಳಿ, ಬಡಾವಣೆಯಲ್ಲಿ ಕಂಡುಬರುತ್ತಿದ್ದ ಗರಡಿ ಮನೆಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ.

ಊರಿನ ಯುವಕರು ಗರಡಿಮನೆಗೆ ಹೋಗಿ ಅಭ್ಯಾಸ ಮಾಡುವುದು ಅಂದಿನ ಕಾಲದಲ್ಲಿ ಸಾಮಾನ್ಯವಾಗಿತ್ತು. ಕಠಿಣ ಪರಿಶ್ರಮದಿಂದ ದೇಹವನ್ನು ಹುರಿಗೊಳಿಸುತ್ತಿದ್ದರು. ಎದುರಾಳಿಗಳನ್ನು ಕ್ಷಣಾರ್ಧದಲ್ಲಿ ಮಣ್ಣು ಮುಕ್ಕಿಸುವ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ಆ ಜಗಜಟ್ಟಿಗಳ ಕಾಳಗವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.

ಮೈಸೂರಿನಲ್ಲಿ ಎಲ್ಲಿ ನೋಡಿದರಲ್ಲಿ ಗರಡಿಮನೆಗಳು ಇದ್ದವು. ಈಶ್ವರರಾಯನ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ, ಗೋಪಾಲಸ್ವಾಮಿ ಗರಡಿ, ಮಹಲಿಂಗೇಶ್ವರ ಮಠದ ಗರಡಿ, ಹತ್ತೂ ಜನರ ಗರಡಿ ಒಳಗೊಂಡಂತೆ ಹಲವಾರು ಗರಡಿಗಳು ಪ್ರಸಿದ್ಧಿ ಪಡೆದಿದ್ದವು. ನೂರಕ್ಕೂ ಹೆಚ್ಚು ಗರಡಿ ಮನೆಗಳು, ಸಾವಿರಕ್ಕೂ ಅಧಿಕ ಪೈಲ್ವಾನರು ಇದ್ದರು. ಈಗ ಗರಡಿ ಮನೆಗಳ ಸಂಖ್ಯೆ ಇಳಿಮುಖವಾದಂತೆ ಪೈಲ್ವಾನರ ಸಂಖ್ಯೆ ಕೂಡಾ ಕಡಿಮೆಯಾಗುತ್ತಿದೆ.

ಗಂಜಾಂ, ಶ್ರೀರಂಗಪಟ್ಟಣ, ನಂಜನಗೂಡು, ಕಳಲೆ, ಪಡುವಾರಹಳ್ಳಿ, ಗಂಧನಹಳ್ಳಿ, ರಮ್ಮನಹಳ್ಳಿ, ಕ್ಯಾತಮಾರನಹಳ್ಳಿ, ಉದ್ಬೂರು, ಬನ್ನೂರು, ಮೆಲ್ಲಹಳ್ಳಿ, ಇಟ್ಟಿಗೆಗೂಡು, ಕೆ.ಜಿ.ಕೊಪ್ಪಲು, ಕುಂಬಾರಕೊಪ್ಪಲು ಪೈಲ್ವಾನರು ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಈಗಲೂ ಇಲ್ಲಿನ ಪೈಲ್ವಾನರು ಅಖಾಡಕ್ಕೆ ಇಳಿಯುತ್ತಾರಾದರೂ, ಹಳೆಯ ವೈಭವ ಕಾಣುತ್ತಿಲ್ಲ.

ನಗರದಲ್ಲಿ ಈಗ ಇರುವ ಗರಡಿಮನೆಗಳ ಸಂಖ್ಯೆ 40 ರಿಂದ 50ಕ್ಕೆ ಬಂದು ನಿಂತಿದೆ. ಅದರಲ್ಲಿ ಎಲ್ಲವೂ ಸಕ್ರಿಯವಾಗಿಲ್ಲ. 20 ರಿಂದ 25 ರಷ್ಟು ಗರಡಿಮನೆಗಳಲ್ಲಿ ಪೈಲ್ವಾನರು ಅಭ್ಯಾಸ ನಡೆಸುತ್ತಿ ದ್ದಾರೆ ಎಂದು ಹಿರಿಯ ಪೈಲ್ವಾನ್‌ ಸಿದ್ದರಾಜು ಹೇಳುತ್ತಾರೆ.

‘ಕುಸ್ತಿಯ ವೈಭವ ಈಗ ಕಡಿಮೆ ಆಗುತ್ತಿದೆ. ಮಣ್ಣಿನ ಅಖಾಡದಲ್ಲಿನ ಆ ಪೈಪೋಟಿಯ ಗತ್ತು ಈಗ ಕಾಣಲು ಸಿಗುತ್ತಿಲ್ಲ. ಗರಡಿಮನೆಗಳ ಸ್ಥಾನದಲ್ಲಿ ಜಿಮ್‌ಗಳು ತಲೆಎತ್ತಿವೆ. ಯುವಕರು ಏರೋಬಿಕ್ಸ್‌, ಸಿಕ್ಸ್‌ಪ್ಯಾಕ್‌ನ ಹಿಂದೆ ಬಿದ್ದಿದ್ದಾರೆ. ಮಣ್ಣಿನ ಅಖಾಡದ ಮೇಲಿನ ಪ್ರೀತಿಯ ಸೆಳೆತ ನಿಧಾನವಾಗಿ ಮಾಸುತ್ತಿದೆ. ಆ ವೈಭೋಗ, ಸಂಪ್ರದಾಯ ನಿಧಾನ ವಾಗಿ ಕಣ್ಮರೆಯಾಗುತ್ತಿದೆ ಎನ್ನುತ್ತಾರೆ.

ಮೈಸೂರು ನಗರದಲ್ಲಿ ಈ ಹಿಂದೆ ವಾರಕ್ಕೊಮ್ಮೆ ಕುಸ್ತಿ ಪಂದ್ಯಗಳು ನಡೆಯುತ್ತಿದ್ದವು. ಈಗ ದಸರಾ ಉತ್ಸವಕ್ಕಷ್ಟೇ ಸೀಮಿತವಾಗಿದೆ. ದಸರಾ ಬಿಟ್ಟರೆ ಯಾವುದೇ ಮಹತ್ವದ ಕುಸ್ತಿ ಪಂದ್ಯಗಳು ಇರುವುದಿಲ್ಲ.

ತಮ್ಮ ಪ್ರತಿಭೆ ತೋರಿಸಲು ಅವಕಾಶ ಲಭಿಸದೇ ಇರುವುದರಿಂದ ಪೈಲ್ವಾನರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ದಸರಾ ನಾಡಕುಸ್ತಿ ಕೂಡಾ ಹಳೆಯ ವೈಭವ ಕಳೆದುಕೊಳ್ಳುತ್ತಿದೆ. ಹಿಂದೆಲ್ಲಾ ಜೋಡಿ ಕಟ್ಟುವ ಕಾರ್ಯದ ವೇಳೆ ಕುಸ್ತಿ ಪ್ರಾಧಿಕಾರದ ಇಡೀ ಆವರಣವೇ ಭರ್ತಿಯಾಗುತಿತ್ತು. ಆದರೆ ಆ ಉತ್ಸಾಹ ಈಗ ಇಲ್ಲ.

ಮೈಸೂರಿನಲ್ಲಿ ನಡೆಯುವ ಕುಸ್ತಿ ಪಂದ್ಯಾಟ ವೀಕ್ಷಿಸಲು ಸುತ್ತಮುತ್ತಲಿನ ಊರುಗಳಿಂದ ಕುಸ್ತಿಪ್ರಿಯರು ಬರುತ್ತಿದ್ದರು. ಕಾದಾಟ ಆರಂಭಕ್ಕೆ ತುಂಬಾ ಮೊದಲೇ ಅಖಾಡದ ಬಳಿ ಹಾಜರಾಗುತ್ತಿದ್ದರು. ಈಗ ಪ್ರೇಕ್ಷಕರೂ ಆಸಕ್ತಿ ಕಳೆದುಕೊಂಡಿದ್ದಾರೆ.

ಪೈಲ್ವಾನರು ಗರಡಿಮನೆಗಳಲ್ಲಿ ಕಲ್ಲುಗುಂಡು, ಬಳೆ, ಗದೆ ಮುಂತಾದ ಪರಿಕರಗಳನ್ನು ಬಳಸಿಕೊಂಡು ದೈಹಿಕ ಕಸರತ್ತು ನಡೆಸುತ್ತಿದ್ದರು. ಇದೀಗ ಗರಡಿ ಮನೆಗಳ ಸ್ಥಾನಗಳನ್ನು ಜಿಮ್‌, ಫಿಟ್‌ನೆಸ್‌ ಸೆಂಟರ್‌ಗಳು ಆಕ್ರಮಿಸಿಕೊಂಡಿವೆ. ನಗರದ ಬಹುತೇಕ ಎಲ್ಲ ಭಾಗಗಳಲ್ಲೂ ಅತ್ಯಾಧುನಿಕ ಜಿಮ್‌ಗಳು ಆರಂಭವಾಗಿವೆ. ಕಲ್ಲುಗುಂಡು, ಗದೆಯ ಸ್ಥಾನದಲ್ಲಿ ಅಬ್ಡಾಮಿನಲ್‌ ಬೆಂಚ್, ಡಂಬ್‌ಬೆಲ್ಸ್, ಬಾರ್‌ಬೆಲ್ಸ್, ಮೆಡಿಸಿನಲ್‌ ಬಾಲ್, ಬ್ಯಾಲೆನ್ಸ್‌ ಬಾಲ್ ಮುಂತಾದ ಪರಿಕರಗಳು ಕಾಣಿಸಿಕೊಂಡಿವೆ.

ಹಿಂದೆ ದೇಹ ಹುರಿಗೊಳಿಸಲು ಗರಡಿ ಮನೆಗಳತ್ತ ಹೆಜ್ಜೆಹಾಕುತ್ತಿದ್ದ ಹಲವರ ಮಕ್ಕಳು, ಮೊಮ್ಮಕ್ಕಳು ಕೂಡಾ ಜಿಮ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆಧುನಿಕ ಜೀವನದ ಜಂಜಾಟದಲ್ಲಿ ಗರಡಿ ಮನೆಗಳತ್ತ ಹೋಗಲು ಸಮಯವೂ ಇಲ್ಲದಾಗಿದೆ.

ರಾಜರ ಕಾಲದಲ್ಲಿ ಈ ನಾಡಿನ ಪ್ರಮುಖ ಕ್ರೀಡೆಯಾಗಿದ್ದ ಕುಸ್ತಿ ನಿಧಾನವಾಗಿ ಹಳೆಯ ಗತ್ತು, ಗೌರವ ಕಳೆದುಕೊಳ್ಳುತ್ತಿದೆ.

ಯುವ ತಲೆಮಾರಿನವರಿಗೆ ಶಿಸ್ತು, ಶ್ರದ್ಧೆಯ ಜತೆಗೆ ಆರೋಗ್ಯವನ್ನೂ ದಯಪಾಲಿಸಿದ್ದ ಗರಡಿ ಮನೆಗಳು ಮರೆಯಾಗುತ್ತಿವೆ. ಈಗಿನ ಕಾಲದ ಮಂದಿಗೆ ಗರಡಿಮನೆಗಳ ಪರಿಚಯವೇ ಇಲ್ಲದಾಗಿದೆ.

ಗರಡಿ ಮನೆಗಳು ಹಾಗೂ ಕುಸ್ತಿ ಕ್ರೀಡೆಯನ್ನು ಮುಂದಿನ ತಲೆಮಾರಿನ ಜನರಿಗೆ ಕೊಂಡೊಯ್ಯವ ನಿಟ್ಟಿನಲ್ಲಿ ಬೆರಳೆಣಿಕೆಯಷ್ಟು ಮಂದಿ ಶ್ರಮವಹಿಸುತ್ತಿದ್ದಾರೆ. ಅವರಿಗೆ ಸರ್ಕಾರ ಹಾಗೂ ಸಂಘಸಂಸ್ಥೆಗಳ ಬೆಂಬಲ ಬೇಕಿದೆ. ಇಲ್ಲದಿದ್ದರೆ ಗರಡಿಮನೆಗಳು ಪೂರ್ಣವಾಗಿ ಇತಿಹಾಸದ ಪುಟಗಳನ್ನು ಸೇರುವುದರಲ್ಲಿ ಅಚ್ಚರಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT