ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಪ್ರದೇಶ: ಮದ್ಯ ಸಿಗದೆ ಸ್ಯಾನಿಟೈಸರ್‌ ಕುಡಿದು 10 ಮಂದಿ ಸಾವು

ಅಕ್ಷರ ಗಾತ್ರ

ಹೈದರಾಬಾದ್‌: ಸ್ಯಾನಿಟೈಸರ್‌ ಸೇವಿಸಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಒಟ್ಟು ಹತ್ತುಮಂದಿ ಮೃತ‍ಪಟ್ಟಿದ್ದಾರೆ.

ಮೃತಪಟ್ಟವರೆಲ್ಲರೂ ಕುರಿಚೆಡು ಗ್ರಾಮಕ್ಕೆ ಸೇರಿದವರು. ಸಾವಿಗೀಡಾದವರಲ್ಲಿ ಭಿಕ್ಷುಕರು, ಹಮಾಲಿಗಳು ಸೇರಿದ್ದಾರೆ. ಕೆಲವು ದಿನಗಳಿಂದ ನೀರು ಹಾಗೂ ತಂಪು ಪಾನೀಯಗಳಲ್ಲಿ ಇವರು ಸ್ಯಾನಿಟೈಸರ್‌ ಬೆರೆಸಿ ಕುಡಿಯುತ್ತಿದ್ದರು ಎಂದು ತಿಳಿದುಬಂದಿದೆ.

‘ಸ್ಯಾನಿಟೈಸರ್‌ ಜೊತೆಗೆ ಇತರ ಯಾವುದಾದರೂ ವಿಷಕಾರಿ ದ್ರವ ಬೆರೆಸಿಸೇವಿಸಿದ್ದಾರೆಯೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ’ ಎಂದು ಪ್ರಕಾಶಂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ಧಾರ್ಥ್‌ ಕೌಶಲ್‌ ಶುಕ್ರವಾರ ಹೇಳಿದ್ದಾರೆ.

‘ಕಳೆದ ಹತ್ತು ದಿನಗಳಿಂದ ಇವರೆಲ್ಲಾ ಸ್ಯಾನಿಟೈಸರ್‌ ಸೇವಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಈ ಭಾಗದಲ್ಲಿ ಮಾರಾಟವಾಗಿರುವ ಸ್ಯಾನಿಟೈಸರ್‌ಗಳನ್ನು ಪಡೆದು ಅವುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಕೊರೊನಾ ಪ್ರಕರಣಗಳು ಅಧಿಕವಾಗಿರುವ ಕಾರಣ ಕುರಿಚೆಡುವಿನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಹೀಗಾಗಿ ಕೆಲ ದಿನಗಳಿಂದ ಈ ಭಾಗದಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಸ್ಯಾನಿಟೈಸರ್‌ನಲ್ಲಿ ಮದ್ಯದ ಅಂಶ ಇದೆ ಎಂಬುದನ್ನು ಅರಿತು ಈ ಭಾಗದ ಮದ್ಯವ್ಯಸನಿಗಳೆಲ್ಲಾ ಅವುಗಳನ್ನು ಸೇವಿಸಲು ಶುರುಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಇಬ್ಬರು ಭಿಕ್ಷುಕರು ಇಲ್ಲಿನ ದೇವಸ್ಥಾನದ ಬಳಿ ಗುರುವಾರ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ಪೈಕಿ ಒಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಮತ್ತೊಬ್ಬರು, ದಾರ್ಸಿನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಸುನೀಗಿದರು. ರಮಣಯ್ಯ ಎಂಬುವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ
ದಲ್ಲಿ ಮೃತಪಟ್ಟಿದ್ದಾರೆ’ ಎಂದಿದ್ದಾರೆ.

‘ಇತರ ಏಳು ಮಂದಿ ಶುಕ್ರವಾರ ಬೆಳಿಗ್ಗೆ ಸಾವಿಗೀಡಾಗಿದ್ದಾರೆ. ಇನ್ನೂ ಕೆಲವರನ್ನು ಆಸ್ಪತ್ರೆಯಿಂದ ಕಳುಹಿಸಲಾಗಿದ್ದು ಅವರೆಲ್ಲರಿಗೂ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದೂ ಪೊಲೀಸರು ಹೇಳಿದ್ದಾರೆ.

‘ಕುರಿಚೆಡು ಗ್ರಾಮದಲ್ಲಿ ಸ್ಯಾನಿಟೈಸರ್‌ ಸೇವಿಸಿ ಹತ್ತು ಮಂದಿ ಮೃತರಾಗಿರುವ ಸುದ್ದಿ ತಿಳಿದು ಆಘಾತವಾಯಿತು. ರಾಜ್ಯದಲ್ಲಿ ನಕಲಿ ಮದ್ಯ ಹಾಗೂ ಸ್ಯಾನಿಟೈಸರ್‌ ಸೇವಿಸಿ ಜನರು ಸಾಯುತ್ತಲೇ ಇದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರವು ಮದ್ಯ ತಯಾರಕರ ಮೇಲೆ ಕ್ರಮ ಕೈಗೊಳ್ಳದೆ ಕೈಕಟ್ಟಿ ಕೂತಿದೆ’ ಎಂದು ಟಿಡಿಪಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ರಾಜ್ಯ ಸರ್ಕಾರವು ಮದ್ಯದ ದರವನ್ನು ದುಪ್ಪಟ್ಟು ಮಾಡಿದೆ. ಹೀಗಾಗಿ ಜನರು ಕಳಪೆ ಹಾಗೂ ನಕಲಿ ಮದ್ಯದ ಮೊರೆ ಹೋಗಿದ್ದಾರೆ. ಇದರಿಂದಾಗಿಯೇ ಸಾವು ನೋವುಗಳು ಸಂಭವಿಸುತ್ತಿವೆ’ ಎಂದೂ ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT