ಬುಧವಾರ, ಸೆಪ್ಟೆಂಬರ್ 30, 2020
20 °C

ರಾಮ ಮಂದಿರ ಕುರಿತು ಮನದಾಳ ಹಂಚಿಕೊಂಡ ಅಡ್ವಾಣಿ

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುವ ಮುನ್ನಾ ದಿನವಾದ ಮಂಗಳವಾರ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಅವರು ರಾಮ ಮಂದಿರದ ಕುರಿತ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. 

ರಾಮ ಜನ್ಮ ಭೂಮಿ ಹೋರಾಟದ ಕುರಿತೂ ಅವರು ಇದೇ ವೇಳೆ ಸ್ಮರಿಸಿದ್ದಾರೆ. ರಾಮ ಮಂದಿರ ನಿರ್ಮಾಣವೆಂಬುದು ಐತಿಹಾಸಿಕ ಮಾತ್ರವಲ್ಲದೇ ಭಾವನಾತ್ಮಕ ಎಂದು ಅವರು ಹೇಳಿದ್ದಾರೆ.

‘ಕೆಲವೊಮ್ಮೆ ಪ್ರಮುಖ ಕನಸುಗಳು ಫಲಪ್ರಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದರೆ ಅಂತಿಮವಾಗಿ ಸಾಕಾರಗೊಂಡಾಗ ಕಾಯುವಿಕೆ ಸಾರ್ಥಕವಾಗುತ್ತದೆ. ಅಂತಹ ಒಂದು ಕನಸು, ನನ್ನ ಹೃದಯಕ್ಕೆ ಹತ್ತಿರವಾಗಿದೆ. ರಾಮ ಮಂದಿರಕ್ಕೆ ಪ್ರಧಾನ ಮಂತ್ರಿ ಅಡಿಪಾಯ ಹಾಕುತ್ತಿದ್ದಾರೆ. ಇದು ನನಗೆ ಮಾತ್ರವಲ್ಲದೆ ಎಲ್ಲ ಭಾರತೀಯರಿಗೂ ಐತಿಹಾಸಿಕ ಮತ್ತು ಭಾವನಾತ್ಮಕ ದಿನವಾಗಿದೆ,’ ಎಂದಿದ್ದಾರೆ ಅಡ್ವಾಣಿ. 

‘ರಾಮ ಜನಮಭೂಮಿ ಚಳವಳಿಯ ಸಮಯದಲ್ಲಿ ಅದೃಷ್ಟವು ನನಗೆ ರಾಮರಥ ಯಾತ್ರೆ ರೂಪದಲ್ಲಿ ಪ್ರಮುಖ ಕರ್ತವ್ಯವನ್ನು ನಿರ್ವಹಿಸುವಂತೆ ಮಾಡಿತು. ಸೋಮನಾಥದಿಂದ ಅಯೋಧ್ಯೆಗೆ ವರೆಗೆ ನಡೆದ 1990ರ ಯಾತ್ರೆಯು ಅಸಂಖ್ಯ ಹೋರಾಟಗಾರರ ಆಕಾಂಕ್ಷೆ, ಶಕ್ತಿ ಮತ್ತು ಭಾವನೆಗಳು ವೃದ್ಧಿಸಲು ನೆರವಾಯಿತು,’ ಎಂದು ಅವರು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

‘ಶ್ರೀರಾಮನು ಭಾರತದ ಸಾಂಸ್ಕೃತಿಕ ಮತ್ತು ನಾಗರಿಕ ಪರಂಪರೆಯಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದಾನೆ. ರಾಮನು ಅನುಗ್ರಹ, ಘನತೆ ಮತ್ತು ಅಲಂಕಾರಗಳ ಸಾಕಾರ ಮೂರ್ತಿ. ಈ ದೇವಾಲಯವು ಎಲ್ಲಾ ಭಾರತೀಯರಿಗೆ ಅವರ ಸದ್ಗುಣಗಳನ್ನು ಹೆಚ್ಚಿಸಲು ಪ್ರೇರಕಶಕ್ತಿಯಾಗಲಿದೆ ಎಂಬುದು ನನ್ನ ನಂಬಿಕೆ,’ ಎಂದು ಅಡ್ವಾಣಿ ಹೇಳಿಕೊಂಡಿದ್ದಾರೆ.

‘ರಾಮ್ ಮಂದಿರವು ಭಾರತವನ್ನು ಸದೃಡ, ಸಮೃದ್ಧ, ಶಾಂತಿಯುತ ಮತ್ತು ಸಾಮರಸ್ಯದ ರಾಷ್ಟ್ರವಾಗಿ ಪ್ರತಿನಿಧಿಸುತ್ತದೆ. ನ್ಯಾಯಪರತೆಯ ಈ ದೇಗುಲ ಯಾರನ್ನೂ ಹೊರಗಿಡುವುದಿಲ್ಲ. ಈ ಮೂಲಕ ನಾವು ಉತ್ತಮ ಆಡಳಿತದ ಸಾರಾಂಶವಾದ ರಾಮ ರಾಜ್ಯದಲ್ಲಿ ನಿಜಕ್ಕೂ ತೊಡಗಿಸಿಕೊಳ್ಳಬಹುದು,’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು